1992 ರ ಆನಂತರ ಕರಾವಳಿಯಲ್ಲಿ ಕಾಣಿಸಿಕೊಂಡ ಕೋಮುವಾದಕ್ಕೆ ಬಲಿಯಾಗದೇ ಉಳಿದದ್ದು ಸಹಜವೇ ಆಗಿದೆ. ಅವರಿಗೆ ಶ್ರೀರಾಮ ಗೊತ್ತಿದ್ದ ಹಾಗೆ ಪಾಡ್ದನ ಹೇಳುವ ರಾಮಕ್ಕ ಮುಗ್ಗೇರ್ತಿಯೂ ಗೊತ್ತಿದ್ದರು. ಅದು ನಮಗೀಗ ಆದರ್ಶ ಆಗಬೇಕು…. ಇದು ನಿನ್ನೆ ಶಾಶ್ವತವಾಗಿ ಚಿರನಿದ್ರೆಗೆ ಜಾರಿದ ಖ್ಯಾತ ಸಾಹಿತಿ ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ಅವರ ಪ್ರೀತಿಯ ಶಿಷ್ಯ ಪುರುಷೋತ್ತಮ ಬಿಳಿಮಲೆಯವರು ಕನ್ನಡ ಪ್ಲಾನೆಟ್ ಗೆ ಬರೆದ ವಿಶೇಷ ನುಡಿನಮನ.
ನುಡಿನಮನ
ಮಂಗಳೂರಿನ ಸಮೀಪದ ಕೋಟೆಕಾರಿನಲ್ಲಿ 1935 ಸಪ್ಟಂಬರ 27ರಂದು ಹುಟ್ಟಿದ ಅಮೃತ ಸೋಮೇಶ್ವರರು ಜನವರಿ 6 ,2024ರಂದು ತೀರಿಕೊಂಡಾಗ ಅವರಿಗೆ 88 ವರ್ಷ. ತುಂಬು ಜೀವನ ನಡೆಸಿದ್ದ ಅವರು ಈಗ ನಮ್ಮ ನಡುವೆ ಭೌತಿಕವಾಗಿ ಇಲ್ಲ. ಈ ನಿರ್ವಾತವನ್ನು ತುಂಬಿ ಕೊಡುವವರೂ ಸದ್ಯಕ್ಕೆ ನಮ್ಮ ನಡುವೆ ಯಾರೂ ಕಾಣುತ್ತಿಲ್ಲ. ಡಾ. ಶಿವರಾಮ ಕಾರಂತರು ತೀರಿಕೊಂಡಾಗ ನಾವೆಲ್ಲ ʼ ಅಮೃತರು ಇದ್ದಾರೆʼ ಅಂತ ಸಮಾಧಾನ ಮಾಡಿಕೊಂಡೆವು. ಈಗ ಅಮೃತರು ತೀರಿಕೊಂಡಾಗ ಹಾಗೆ ಹೇಳಲು ಯಾರೂ ಕಾಣುತ್ತಿಲ್ಲ.
ಹೀಗೆ ಅನ್ನಿಸಲು ಮುಖ್ಯವಾದ ಕಾರಣ ಎಂದರೆ ಕಾರಂತರು ಮತ್ತು ಅಮೃತರು ಅನುಸರಿಸಿದ ಬದುಕಿನ ಮಾರ್ಗ. ಅವರಿಬ್ಬರ ಕಾರ್ಯಕ್ಷೇತ್ರಗಳು ಬಹಳ ವಿಶಾಲವಾಗಿದ್ದುವು. ಸಾಹಿತ್ಯ, ಜಾನಪದ, ಯಕ್ಷಗಾನ, ಮತ್ತಿತರ ಚಟುವಟಿಕೆಗಳನ್ನು ಅವರಿಬ್ಬರೂ ಕೊನೆಯವರೆಗೆ ಬಿಟ್ಟುಕೊಟ್ಟಿರಲಿಲ್ಲ. ಕಡಲಿನ ಆಳ, ವಿಸ್ತಾರಗಳ ಜೊತೆಗೆ ಪಶ್ಚಿಮ ಘಟ್ಟಗಳ ಎತ್ತರವೂ ಗೊತ್ತಿದ್ದ ಧೀಮಂತರು ಅವರಿಬ್ಬರು.
ಕೋಟೆಕಾರಿನ ಅಡ್ಕ ಪರಿಸರದಲ್ಲಿ ಹುಟ್ಟಿ ಬೆಳೆದ ಅಮೃತರು ಅಲ್ಲಿನ ಆನಂದಾಶ್ರಮ ಶಾಲೆಯಲ್ಲಿ ಓದಿ, ಮುಂದೆ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣ ಭಟ್ಟ, ಅಮ್ಮೆಂಬಳ ಶಂಕರನಾರಾಯಣ ನಾವಡ, ಮುಳಿಯ ತಿಮ್ಮಪ್ಪಯ್ಯ, ಶಿವರಾಮ ಕಾರಂತ, ಬಿ ಎಂ ಇದಿನಬ್ಬ, ಕು ಶಿ ಹರಿದಾಸ ಭಟ್ಟ, ಕಯ್ಯಾರ ಕಿಞ್ಞಣ್ಣ ರೈ ಮತ್ತಿತರ ವಿದ್ವಾಂಸರ ನಡುವೆ ಓಡಾಡಿ ತಮ್ಮ ಸಾಹಿತ್ಯಿಕ ಸಂವೇದನೆಯನ್ನು ನವಿರಾಗಿ ಬೆಳೆಸಿಕೊಂಡ ಅವರು ವೆಂಕಟರಾಜ ಪುಣಿಂಚಿತ್ತಾಯ, ಕೆದಂಬಾಡಿ ಜತ್ತಪ್ಪ ರೈ, ಮಂದಾರ ಕೇಶವ ಭಟ್ , ಶೇಖರ ಇಡ್ಯ , ಬಿ ಎ ವಿವೇಕ ರೈ, ಚಿನ್ನಪ್ಪ ಗೌಡ, ಪೀಟರ್ ಕ್ಲಾಸ್, ವಾಮನ ನಂದಾವರ ಮೊದಲಾದವರೊಡನೆ ಯಾವುದೇ ಸಂಕೋಚವಿಲ್ಲದೆ ಸಂವಾದಿಸುತ್ತಾ ತನ್ನ ತುಳು ಗ್ರಹಿಕೆಗಳನ್ನು ವಿಸ್ತರಿಸಿಕೊಂಡರು. ವಿದ್ವಾನ್ ಶಂಕರನಾರಾಯಣ ಸಾಮಗ, ಶೇಣಿ ಗೋಪಾಕೃಷ್ಣ ಭಟ್, ಕೋಟೆಕಾರ್ ಬಾಬು ರೈ, ವಿದ್ವಾನ್ ರಾಮಚಂದ್ರ ಉಚ್ಚಿಲ, ಮುಳಿಯ ಮಹಾಬಲ ಭಟ್. ಡಾ. ಪ್ರಭಾಕರ ಜೋಷಿ, ರಾಘವನ್ ನಂಬಿಯಾರ್ , ಮಾರ್ಥಾ ಆಷ್ಟನ್, ಅಗರಿ ಮತ್ತು ಕಡತೋಕ ಭಾಗವತರೇ ಮೊದಲಾದವರೊಡನೆ ನಿರಂತರವಾಗಿ ಚರ್ಚಿಸುತ್ತಾ ಯಕ್ಷಗಾನದ ದೊಡ್ಡ ವಿದ್ವಾಂಸನಾಗಿಯೂ ಪ್ರಸಂಗಕರ್ತನಾಗಿಯೂ ಬೆಳೆದರು. ಈ ಎಲ್ಲಾ ಕೆಲಸಗಳೊಡನೆ ಅವರು ಭೂತಾರಾಧನೆ, ಭಗವತೀ ಆರಾಧನೆ, ಕಥಕ್ಕಳಿ, ತಾಳಮದ್ದಳೆ ಇತ್ಯಾದಿಗಳಿಗೆ ಹೋಗದೇ ಇರುತ್ತಿರಲಿಲ್ಲ. ಶಾಲೆಗಳ ವಾರ್ಷಿಕೋತ್ಸವದಿಂದ ತೊಡಗಿ, ಅಂತಾರಾಷ್ಟ್ರೀಯ ವಿಚಾರ ಸಂಕಿರಣದವರೆಗೆ ಅವರ ಭಾಷಣಗಳ ವ್ಯಾಪ್ತಿ. ಆರಂಭದಲ್ಲಿ ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನಲ್ಲಿ, ಆನಂತರ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಕಲಿಸಿದ ಅಮೃತರು 1967 ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕೆಲಸ ಮಾಡಿ, 1993 ರಲ್ಲಿ ನಿವೃತ್ತರಾದರು. ನಿವೃತ್ತಿಯ ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿದ್ದರು. ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ತುಳು, ಯಕ್ಷಗಾನಗಳ ಕುರಿತು ಮಾರ್ಗದರ್ಶನ ಪಡೆದವರ ಲೆಕ್ಕ ಇಟ್ಟವರಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಅವರಿಗೆ ಊರೆಲ್ಲ ಶಿಷ್ಯರೇ ಅಥವಾ ಊರಿಗೆಲ್ಲಾ ಅವರು ಗುರುಗಳು.
ನಿಜವಾದ ಅರ್ಥದಲ್ಲಿ ಅವರು ಶ್ರೇಷ್ಠ ಗುರುಗಳೇ ಹೌದು. ಕಲಿಯುವವರು ಇದಿರಿಗಿದ್ದರೆ ಅವರು ಬಹಳ ಉತ್ಸಾಹದಿಂದ ಕನ್ನಡ ಸಾಹಿತ್ಯ, ತುಳು ಪಾಡ್ದನ, ಯಕ್ಷಗಾನ, ಹರಿಕತೆ, ನಾಟಕ, ಪ್ರೇಮ, ಕಡಲು, ಮೀನು, ಭಗವತಿಗಳು, ಚಾಮುಂಡಿ, ಬಪ್ಪ ಬ್ಯಾರಿ, ಜಾತಿ ಶೋಷಣೆ, ಕೋಮುವಾದ- ಹೀಗೆ ಎಲ್ಲದರ ಬಗ್ಗೆಯೂ ಅತ್ಯಂತ ಮೃದುವಾಗಿ ಆದರೆ ತಳಸ್ಪರ್ಶಿಯಾಗಿ ಹೇಳುತ್ತಿದ್ದರು. ಬಡ ವಿದ್ಯಾರ್ಥಿಗಳನೇಕರಿಗೆ ಅವರು ಆರ್ಥಿಕ ಸಹಾಯ ಮಾಡಿದ್ದುಂಟು. ವಿದ್ಯಾರ್ಥಿಗಳನ್ನು ಮನೆಗೆ ಕರೆದು, ಅವರಿಗೆ ಊಟ ಹಾಕಿ, ಯಕ್ಷಗಾನವೋ, ಭೂತವೋ ಕಡಲೋ ತೋರಿಸುವುದೆಂದರೆ ಅವರಿಗೆ ಇನ್ನಿಲ್ಲದ ಖುಷಿ. ತರಗತಿಯ ಒಳಗೆ ಸಾಹಿತ್ಯದ ಪಠ್ಯಗಳನ್ನು ಬಗೆದು ತೋರಿಸುತ್ತಿದ್ದ ಅವರು ಹೊರಗಡೆಗೆ ಜಾನಪದದ ಬಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಭಿನ್ನ ಮುಖಗಳ ದರ್ಶನವಾಗುತ್ತಿತ್ತು. ನಾವೆಲ್ಲಾ ತುಳುನಾಡಿನ ನಿವಾಸಿಗಳೇ ಆಗಿದ್ದರೂ ನಮ್ಮ ಕಣ್ಣಿಗೆ ಬೀಳದ ಅನೇಕ ಸಂಗತಿಗಳನ್ನು ಅವರು ಆಗಾಗ ನಮಗೆ ತೆರೆದು ತೋರಿಸುತ್ತಲೇ ಇದ್ದರು.
ಅಮೃತರು ಮೃದು ಭಾಷೆಯ ಮಾತುಗಾರ. ಅವರು ಧ್ವನಿ ಎತ್ತರಿಸಿ ಮಾತಾಡಿದ್ದು ನಾನು ಕಂಡೇ ಇಲ್ಲ. ಅವರ ಈ ಗುಣ ಚೆನ್ನಾಗಿ ಒಗ್ಗುವುದು ಕವಿತೆಗೆ. ಹೀಗಾಗಿ ಅಮೃತರ ಮೊದಲ ಪುಸ್ತಕ ʼವನಮಾಲೆʼ ಒಂದು ಕವನ ಸಂಕಲನ. ಮುಂದೆ ಅವರು ಭ್ರಮಣ ಕರೆಗಾಳಿ ಮತ್ತು ಉಪ್ಪು ಗಾಳಿ ಹೆಸರಿನ ಮೂರು ಕವನ ಸಂಕಲನಗಳನ್ನು ಹೊರ ತಂದರು. ನವೋದಯ ಶೈಲಿಯ ಅವರ ಕವನಗಳಲ್ಲಿಯ ಭಾವುಕತೆ, ಲಯಗಾರಿಕೆ ಮತ್ತು ಮೃದುತನ ಮುಂದೆ ನೂರಾರು ಧ್ವನಿಸುರುಳಿಗಳಲ್ಲಿ ಕಾಣಿಸಿಕೊಂಡಿತು. ಕೋಟಿ ಚೆನ್ನಯ ಸಿನೇಮಾಕ್ಕೆ ಬರೆದ ಅವರ ಹಾಡುಗಳು ಜನಪದ ಹಾಡುಗಳಾಗಿ ತುಳುನಾಡಿನ ಎಲ್ಲೆಡೆಯೂ ಓಡಾಡಿತು. ಅವರದೇ ಪದ್ಯವನ್ನು ಅವರಿಗೇ ಕೇಳಿಸಿ, ʼ ಇದು ಯಾರು ಬರೆದದ್ದು ಸಾರ್ʼ ಎಂದು ಕೇಳಿದವರ ಕತೆಯನ್ನು ಅಮೃತರ ಬಾಯಲ್ಲಿಯೇ ಕೇಳಬೇಕು. ಎಲೆಗಿಳಿ, ರುದ್ರಶಿಲೆ ಸಾಕ್ಷಿ , ಕೆಂಪು ನೆನಪು , ಮಾನವತೆ ಗೆದ್ದಾಗ, ಅವರ ಕಥಾ ಸಂಕಲನಗಳು. ʼತೀರದ ತೆರೆʼ ಅವರ ಹೆಚ್ಚು ಚರ್ಚಿತವಾಗಬೇಕಾಗಿದ್ದ ಒಳ್ಳೆಯ ಕಾದಂಬರಿ. ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನ ಸಂಪುಟ, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಅವರ ಇತರ ಮಹತ್ವದ ಕೃತಿಗಳು. ಅವರು ಬರೆದ ಗೋಂದೋಳು, ಮತ್ತು ರಾಯರಾವುತೆ ತುಳು ನಾಟಕಗಳೂ ಬಹಳ ಜನಪ್ರಿಯವಾಗಿವೆ.
ಅಮೃತರ ಒಟ್ಟು ಕೊಡುಗೆಗಳನ್ನು ನಾವು ತಣ್ಣಗೆ ಕುಳಿತು ಇನ್ನೊಮ್ಮೆ ಚರ್ಚಿಸಬೇಕು. ಸ್ವಾತಂತ್ರೋತ್ತರ ತುಳುನಾಡನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಕಡೆಗೆ ಕರೆದೊಯ್ದ ಮಹನೀಯರಲ್ಲಿ ಅಮೃತರು ಪ್ರಮುಖರು. 1970 ರ ದಶಕದ ಕೊನೆಯಲ್ಲಿ ತುಳು ಯಕ್ಷಗಾನಗಳು ಹುಟ್ಟಿಕೊಂಡಾಗ ಅವರು ತುಳು ಯಕ್ಷಗಾನದ ಪರವಾಗಿ ನಿಂತರು. ಇದಕ್ಕಾಗಿ ಅನೇಕರೊಡನೆ ಜಗಳವೂ ಆಡಿದರು. ಈಗ ಅವೆಲ್ಲ ಕಳೆದು ಎಷ್ಟೋ ವರ್ಷಗಳಾದ ಮೇಲೆ ಯೋಚಿಸಿದಾಗ ಅಮೃತರು ಕಾಲಕ್ಕಿಂತ ಬಹಳ ಮುಂದೆ ಇದ್ದರು ಅಂತನ್ನಿಸುತ್ತಿದೆ. ಇದರ ಜೊತೆಗೆ ಅದೇ ಕಾಲಕ್ಕೆ ಪತನಮುಖಿಯಾಗಿದ್ದ ಪಾರಂಪರಿಕ ಯಕ್ಷಗಾನಕ್ಕೆ ಹೊಸ ಪ್ರಸಂಗಗಳ ಮೂಲಕ ಅವರು ಮರು ಜೀವ ನೀಡಿದರು. 1980-90ರ ದಶಕದಲ್ಲಿ ಅವರು ಧರ್ಮಸ್ಥಳ ಮೇಳಕ್ಕೆ ಬರೆದ ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಮಹಾಶೂರ ಭೌಮಾಸುರ, ಮಹಾಕಲಿ ಮಗಧೇಂದ್ರ, ತ್ರಿಪುರ ಮಥನ, ಗಂಗಾವತರಣ, ವಂಶವಾಹಿನಿ, ಮೊದಲಾದ ಅತ್ಯಧ್ಭುತ ಪ್ರಸಂಗಗಳು ಪುರಾಣದ ಚೌಕಟ್ಟಿನಲ್ಲಿ ಪ್ರೇಕ್ಷಕರಿಗೆ ಅತ್ಯಾಧುನಿಕವಾದ ಅನುಭವಗಳನ್ನು ನೀಡಿದ್ದವು. ಗಿರೀಶ್ ಕಾರ್ನಾಡರ ನಾಟಕಗಳು ನೀಡುತ್ತಿದ್ದ ರೋಮಾಂಚನವನ್ನು ಕರ್ಣ, ಅಶ್ವಿನಿ ದೇವತೆಗಳು, ಚಾರ್ವಾಕ, ಭೌಮಾಸುರ, ಭಗೀರಥ, ಮಗಧ ಮೊದಲಾದ ಪಾತ್ರಗಳೂ ನೀಡುತ್ತಿದ್ದುವೆಂಬುದು ಸಣ್ಣ ಸಂಗತಿಯೇನಲ್ಲ.
ಇಂಥ ಹಿನ್ನೆಲೆಯ ಅಮೃತರು 1992 ರ ಆನಂತರ ಕರಾವಳಿಯಲ್ಲಿ ಕಾಣಿಸಿಕೊಂಡ ಕೋಮುವಾದಕ್ಕೆ ಬಲಿಯಾಗದೇ ಉಳಿದದ್ದು ಸಹಜವೇ ಆಗಿದೆ. ಅವರಿಗೆ ಶ್ರೀರಾಮ ಗೊತ್ತಿದ್ದ ಹಾಗೆ ಪಾಡ್ದನ ಹೇಳುವ ರಾಮಕ್ಕ ಮುಗ್ಗೇರ್ತಿಯೂ ಗೊತ್ತಿದ್ದರು. ಅದು ನಮಗೀಗ ಆದರ್ಶ ಆಗಬೇಕು.
ಪುರುಷೋತ್ತಮ ಬಿಳಿಮಲೆ
ನಿವೃತ್ತ ಪ್ರಾಧ್ಯಾಪಕರು, ಜೆಎನ್ ಯು
ಇದನ್ನೂ ಓದಿ- ನುಡಿನಮನ |ಅಸ್ತಂಗತವಾದ ಕರಾವಳಿಯ ಇನ್ನೊಂದು ಸಾಕ್ಷಿಪ್ರಜ್ಞೆ ʼಅಮೃತ ಸೋಮೇಶ್ವರʼ