Wednesday, May 22, 2024

ಜಾಮೀನು ಸಿಕ್ಕರು ಬಿಡುಗಡೆಯಾಗದ ಕರವೇ ಅಧ್ಯಕ್ಷ ನಾರಾಯಣಗೌಡ : ನಿರಾಸೆಗೊಂಡ ಕಾರ್ಯಕರ್ತರು!

Most read

ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರಿಗೆ ಇಂದು ಜಾಮೀನು ದೊರಕಿದರೂ ಬಿಡುಗಡೆ ಭಾಗ್ಯ ಮಾತ್ರ ಇಲ್ಲದಂತಾಗಿದೆ.

ಡಿಸೆಂಬರ್‌ 27ರಂದು (ಬುಧವಾರ) ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ನಡೆಸಲಾದ ಚಳವಳಿಗೆ ಸಂಬಂಧಿಸಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದರು.

ನಂತರ ಜಾಮೀನು ಕೋರಿ ನಾರಾಯಣ ಗೌಡ ಅವರು ಜನವರಿ 2ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್, ತೀರ್ಪುನ್ನು ಜನವರಿ 6ಕ್ಕೆ ಕಾಯ್ದಿರಿಸಿತ್ತು.

ಇಂದು ಜಾಮೀನು ಬಗ್ಗೆ ಆದೇಶ ಪ್ರಕಟಿಸಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 29 ಕಾರ್ಯಕರ್ತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿದೆ. ಆದರೆ ಇವತ್ತು ಶನಿವಾರ ಆಗಿದ್ದು ಕಾನೂನು ಪ್ರಕ್ರಿಯೆ ಸಂಪೂರ್ಣ ಮುಗಿದಿಲ್ಲ. ನಾಳೆ ಭಾನುವಾರ ಆಗಿದ್ದು ಯಾವುದೇ ಸರ್ಕಾರಿ ಪ್ರಕ್ರಿಯೆ ನಡೆಯದ ಕಾರಣ ನಾರಾಯಣಗೌಡ ಹಾಗೂ ಇನ್ನಿತರೆ ಕಾರ್ಯಕರ್ತರ ಬಿಡುಗಡೆ ಇನ್ನೊಂದು ದಿನ ತಡವಾಗಲಿದೆ.

ಪ್ರಸ್ತುತ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಕರವೇಯ 29 ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೋಮವಾರ ಬೆಳಿಗ್ಗೆ ಅಥವಾ ಮಧ್ಯಾಹ್ನ ಹೊತ್ತಿಗೆ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಮಣಿದು, ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡವೇ ಇರಬೇಕು ಎಂದು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಸ್ಮರಿಸಿಕೊಳ್ಳಬಹುದು.

ನಾರಾಯಣಗೌಡರು ಹಾಗೂ ಕಾರ್ಯಕರ್ತರ ಬಿಡುಗಡೆಗೆ ಕಾಯುತ್ತಿದ್ದ ಸಾವಿರಾರು ಕರವೇ ಕಾರ್ಯಕರ್ತರಿಗೆ ನಿರಾಶೆ ಮೂಡಿದೆ.

ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ಕನ್ನಡವನ್ನು ಮೊದಲಿನಿಂದಲೂ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಕಾರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಡಿಸೆಂಬರ್ 27 ರಂದು ನಡೆಸಿದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಸಾವಿರಾರು ಇಂಗ್ಲಿಷ್ ಬೋರ್ಡ್ , ಜಾಹೀರಾತು ಫಲಕಗಳನ್ನು ಕಿತ್ತೆಸೆಯಲಾಗಿತ್ತು.

ಕರವೇ ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (IPC 353) ರಡಿ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ. ನಾರಾಯಣ ಗೌಡರ ಜತೆ 29 ಮಂದಿಯನ್ನು ಜೈಲಿಗೆ ಹಾಕಲಾಗಿತ್ತು.

ಪ್ರತಿಭಟನೆ ವೇಳೆ‌ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪ ದಾಖಲಾಗಿದೆ. ನಾರಾಯಣ ಗೌಡ ಸೇರಿ 6 ಮಂದಿ ವಿರುದ್ದ ಪಿಎಸ್ ಐ ಲಿತೀನ್ ದೂರಿನನ್ವಯ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಈಗ ಈ ಎಲ್ಲಾ ಪ್ರಕರಣಗಳ ಆಲಿಸಿ ಕೋರ್ಟ್ ಜಾಮೀನಿನ ಮೇಲೆ ಕರವೇ ಅಧ್ಯಕ್ಷರಾದ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಬಿಡುಗಡೆಗೆ ಜಾಮೀನು ನೀಡಿದ್ದು, ಕಾನೂನು ಪ್ರಕ್ರಿಯೆ ಮುಗಿದ ನಂತರ ಸೋಮವಾರ ಬಿಡುಗಡೆ ಮಾಡಲಾಗುತ್ತೆ.

More articles

Latest article