Saturday, July 27, 2024

ಇಂದು ಕರವೇ ನಾರಾಯಣಗೌಡರ ಬಿಡುಗಡೆ ಆಗಲಿದೆಯೇ?

Most read

ಕನ್ನಡದಲ್ಲಿ ನಾಮಫಲಕ ಅಭಿಯಾನ ಕೈಗೊಂಡು, ಬೆಂಗಳೂರಿನಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ ಹಾಗು ಇತರ ಮೂವತ್ತು ಕರವೇ ಮುಖಂಡರಿಗೆ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಕೋರ್ಟ್ ಜಾಮೀನು ನೀಡಿದೆ.

ಶನಿವಾರವೇ ಎಲ್ಲ ಮುಖಂಡರು ಬಿಡುಗಡೆಯಾಗಬೇಕಿದ್ದರೂ, ಶೂರಿಟಿ ಇತ್ಯಾದಿ ಕಾನೂನು ಪ್ರಕ್ರಿಯೆಗಳು ಮುಗಿಯದ ಕಾರಣ ಸೋಮವಾರ (ಇಂದು) ಬಿಡುಗಡೆಯಾಗಲಿದ್ದಾರೆ ಎಂದು ಕರವೇ ಪರ ವಕೀಲರಾದ ಕುಮಾರ್ ತಿಳಿಸಿದ್ದರು. ಆದರೆ ಇಂದೂ ಸಹ ಗೌಡರ ಬಿಡುಗಡೆಯಾಗುವುದು ಖಚಿತವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕನ್ನಡ ಚಳವಳಿಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಟಿ.ಎ.ನಾರಾಯಣಗೌಡರ ಮೇಲೆ ಹಲವಾರು ಚಳವಳಿಗಳ ಸಂದರ್ಭದಲ್ಲಿ ಪೊಲೀಸರು ಮೊಕದ್ದಮೆಗಳನ್ನು ದಾಖಲಿಸಿದ್ದು, ಅವುಗಳಲ್ಲಿ ಎರಡು ಪ್ರಕರಣಗಳಲ್ಲಿ ಬಾಡಿ ವಾರಂಟ್ ಆಗಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ಈ ಪ್ರಕರಣಗಳಲ್ಲಿ ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಈ ಕುರಿತು ಸ್ವತಃ ಹಲವು ಮುಖಂಡರು ಅನುಮಾನ ವ್ಯಕ್ತಪಡಿಸುತ್ತಿದ್ದು, ಕರವೇ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ನಿತೀಶ್ ಮನುಗೌಡ ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಾಳೆ ಕರವೇ ನಾರಾಯಣಗೌಡರವರನ್ನು ಪುನಃ ಬಂಧಿಸಲು ಹುನ್ನಾರ .. ಬೆಳಿಗ್ಗೆ 6 ರಿಂದ ರಾತ್ರಿ 11 ಗಂಟ್ಟೆವರೆಗೆ ಪರಪ್ಪನ ಅಗ್ರಹಾರದ ಸುತ್ತಮುತ್ತಲು ಸೆಕ್ಷನ್ 144 ಜಾರಿ, ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸರ್ಪಗಾವಲು..

https://m.facebook.com/story.php?story_fbid=pfbid02XbBcmB1RduHkkr2b1nzdaV1a3GZLnGtp64mXtJRqGkp7sv8zjjPDocLHP6H8wqXbl&id=100000365994913&mibextid=ZbWKwL

ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ತಿರುವಳ್ಳುವರ್ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಐನೂರಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಬಂಧಿಸಿಡಲಾಗಿತ್ತು. ಎಲ್ಲರಿಗೂ ಜಾಮೀನು ಮಂಜೂರಾದರೂ ನಾರಾಯಣಗೌಡರನ್ನು ಒಂದಾದ ಮೇಲೊಂದರಂತೆ ಬಾಡಿ ವಾರಂಟ್ ತಂದು ಮತ್ತೆ ಮತ್ತೆ ಬಂಧಿಸಲಾಗಿತ್ತು. ಈಗಲೂ ಸಹ ಬೆಂಗಳೂರು ಪೊಲೀಸರು ಅದೇ ರೀತಿ ಮಾಡುವರೇ ಎಂಬ ಪ್ರಶ್ನೆ ಎದ್ದಿದೆ‌.

ಇಂದು ಮಧ್ಯಾಹ್ನದ ನಂತರ ಪರಪ್ಪನ ಅಗ್ರಹಾರ ಕಾರಾಗೃಹದ ಬಳಿ ನೂರಾರು ಕರವೇ ಕಾರ್ಯಕರ್ತರು ತಮ್ಮ ನಾಯಕನನ್ನು ಸ್ವಾಗತಿಸುವ ನಿಟ್ಟಿನಲ್ಲಿ ನೆರೆಯುವ ಸಾಧ್ಯತೆ ಇದೆ. ಈಗಾಗಲೇ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮತ್ತೊಂದು ಹಂತದ ಸಂಘರ್ಷ ನಡೆಯುವ ಸಾಧ್ಯತೆ ಇದೆ.

ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬೆಂಗಳೂರಿನ ಹಲವಾರು ಭಾಗಗಳಲ್ಲಿ ನಡೆಸಿದ ಕನ್ನಡ ನಾಮಫಲಕ ಅಭಿಯಾನದ ಸಂದರ್ಭದಲ್ಲಿ ಕನ್ನಡವಿಲ್ಲದ ಸಾವಿರಾರು ನಾಮಫಲಕಗಳನ್ನು, ಜಾಹೀರಾತು ಫಲಕಗಳನ್ನು ಕಿತ್ತೆಸೆದಿದ್ದರು. ಘಟನೆಯ ನಂತರ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಉದ್ಯಮ, ಅಂಗಡಿ ಮುಂಗಟ್ಟುಗಳ ಮುಂದೆ ಶೇ.60 ರಷ್ಟು ಕನ್ನಡದ ನಾಮಫಲಕಗಳು ಇರಬೇಕು ಮತ್ತು ಕನ್ನಡವೇ ಮೊದಲಿರಬೇಕು ಎಂಬ ಸುಗ್ರೀವಾಜ್ಞೆ ಹೊರಡಿಸಿತ್ತು.

ಕರವೇ ಮುಖಂಡರು ಕಾರ್ಯಕರ್ತರ ಮೇಲೆ ಚಿಕ್ಕಜಾಲ, ಕಬ್ಬನ್ ಪಾರ್ಕ್, ಆಡುಗೋಡಿ, ಕಾಟನ್ ಪೇಟೆ ಇತ್ಯಾದಿ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

ಚಿಕ್ಕಜಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರೂ ಸೇರಿದಂತೆ ಹಲವರ ಮೇಲೆ ದಾಖಲಿಸಲಾಗಿದ್ದ ಪ್ರಕರಣ ಸಂಬಂಧ ದೇವನಹಳ್ಳಿ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಸಂಬಂಧ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಕಳೆದ ಶನಿವಾರ ಜಾಮೀನು ಮಂಜೂರು ಮಾಡಿತ್ತು.

ಜಾಮೀನು ಮಂಜೂರಾದರೂ ತಮ್ಮ ನಾಯಕನ ಬಿಡುಗಡೆ ಆಗದೇ ಇರುವುದು ಸಾವಿರಾರು ಕರವೇ ಕಾರ್ಯಕರ್ತರ ಕಳವಳಕ್ಕೆ ಕಾರಣವಾಗಿದೆ.

More articles

Latest article