Saturday, July 27, 2024

ಬಿಲ್ಕಿಸ್‌ ಬಾನೊ ಪ್ರಕರಣ ; ಗುಜರಾತ್‌ ಆದೇಶ ರದ್ದುಗೊಳಿಸಿದ ಸುಪ್ರೀಂ: 11 ಅಪರಾಧಿಗಳಿಗೆ ಜೈಲೇ ಗತಿ!

Most read

2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳಿಗೆ ವಿನಾಯಿತಿ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಗುಜರಾತ್‌ನಲ್ಲಿ ನಡೆದ ಗುಜರಾತ್‌ ಹತ್ಯಾಕಾಂಡದ ವೇಳೆ ಬಿಲ್ಕಿಸ್‌ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿರುವ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಅತ್ಯಾಚಾರ ಎಸಗಿದ 11 ಅಪರಾಧಿಗಳ (Bilkis Bano Convicts) ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ (Supreme Court) ಸೋಮವಾರ (ಜನವರಿ 8) ರದ್ದುಗೊಳಿಸಿದೆ.

ಆರೋಪ ಸಾಬೀತಾಗಿ 11 ಅಪರಾಧಿಗಳು 15ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಗುಜರಾತ್ ಸರ್ಕಾರ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ 2022ರ ಆಗಸ್ಟ್ 15ರಂದು ಅವರೆಲ್ಲರೂ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.

ಸನ್ನಡತೆ ಆಧಾರದ ಮೇಲೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್‌ ಸರ್ಕಾರದ ಆದೇಶ ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು.

ಈಗ ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ. ‘ಅತ್ಯಾಚಾರದ ಅಪರಾಧಿಗಳಿಗೆ ಕ್ಷಮಾದಾನ ನೀಡುವ ವಿಧಾನದಲ್ಲಿ ಗುಜರಾತ್‌ ಸರ್ಕಾರ ಸಮರ್ಪಕವಾಗಿ ನಿಯಮ ಪಾಲಿಸಿಲ್ಲ. ಬಿಲ್ಕಿಸ್‌ ಬಾನೊ ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಅರ್ಹವಾಗಿದೆ. ಹಾಗಾಗಿ, ಗುಜರಾತ್‌ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.

2022ರ ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡಿತು. ಅಪರಾಧಿಗಳ ಬಿಡುಗಡೆ ವೇಳೆ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿತ್ತು. ಅಪರಾಧಿಗಳ ಜತೆಗೆ ಬಿಜೆಪಿ ಸಂಸದರು, ಶಾಸಕರು, ವೇದಿಕೆಯನ್ನು ಹಂಚಿಕೊಂಡಿದ್ದರು.

More articles

Latest article