ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿಭಿನ್ನ ಮನೋಧರ್ಮದ, ಅನನ್ಯ ಚಿಂತನೆಯ, ಅಗಾಧ ಜೀವನ ಪ್ರೀತಿಯ ಲೇಖಕಿ ಲಲಿತಾ ರೈ ಯವರು (1928-1925) ನಿಧನರಾಗಿದ್ದಾರೆ. ಅವರೊಂದಿಗೆ ಆಪ್ತ ಒಡನಾಟವಿದ್ದ ಲೇಖಕಿ ಜ್ಯೋತಿ ಚೇಳೈರು ಅಗಲಿದ ಹಿರಿಯ ಲೇಖಕಿಗೆ ನುಡಿ ನಮನ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ತಲೆಮಾರಿನ ಲೇಖಕಿಯರಲ್ಲಿ ಪ್ರಮುಖರೆನಿಸಿರುವ ಲಲಿತಾ ರೈಯವರು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಶಿಕ್ಷಣವನ್ನು ಪಡೆದು ಸಾಮಾಜಿಕ ಎಚ್ಚರದ ಚಿಂತನೆಯನ್ನು ಬೆಳೆಸಿಕೊಂಡವರು. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿ ಜನಿಸಿ, ಅಗರ್ಭ ಶ್ರೀಮಂತ ಕುಟುಂಬದ ಮನೆಯಲ್ಲಿ ಒಬ್ಬಳೇ ಮಗಳಾಗಿ ಬಾಲ್ಯ ಕಳೆದವರು. ತಂದೆ ತಾಯಿಗಳ ಪ್ರೀತಿಯಿಂದ ಹೊರ ಪ್ರಪಂಚಕ್ಕೆ ಅಕ್ಷರದ ಲೋಕದ ಮೂಲಕ ತೆರೆದು ಕೊಂಡವರು. ಶಾಲಾ ಶಿಕ್ಷಣ, ಸಮಕಾಲೀನ ಕೃತಿಗಳು ಹಾಗೂ ಪತ್ರಿಕೆಗಳ ಓದು ಬರಹ ಇದೆಲ್ಲ ಸಾಧ್ಯವಾದುದರಿಂದ ಸ್ವತಂತ್ರ ಅಭಿಪ್ರಾಯದ ವಿಚಾರಶಕ್ತಿಯು ಅವರಲ್ಲಿ ಹುಟ್ಟಲು ಕಾರಣವಾಗಿತ್ತು. ಪರಿಣಾಮ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಚಟುವಟಿಕೆಗಳಲ್ಲಿಯೂ ಹದಿಹರೆಯದ ದಿನಗಳಲ್ಲಿ ಪಾಲು ಪಡೆದಿದ್ದರು.
ದಿನಾಂಕ 22-8-1928ರಲ್ಲಿ ಜನಿಸಿದ ಲಲಿತಾ ರೈಯವರು ಬೆಸೆಂಟ್ ನ್ಯಾಷನಲ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್, ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿಯನ್ನು, ಸೈಂಟ್ ಆನ್ಸ್ ಕಾಲೇಜು ಮಂಗಳೂರಿನಲ್ಲಿ ಬಿಎಡ್ ಪದವಿಯನ್ನು ಪಡೆದು ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದವರು. ಪುತ್ತೂರಿನ ರಘುರಾಮ ರೈ ಅವರನ್ನು ವಿವಾಹಿತರಾಗಿ ದಾಂಪತ್ಯದ ಬದುಕಿನಲ್ಲಿ ನಾಲ್ಕು ಮಕ್ಕಳನ್ನು ಪಡೆದರು. ಸಾಂಸಾರಿಕ ಬದುಕಿನ ಸಂಘರ್ಷಗಳ ಮಧ್ಯೆ ಅದನ್ನು ದಾಟಿ ನಂತರದಲ್ಲಿ ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸಿ ಶಿಕ್ಷಕ ತರಬೇತಿಯನ್ನು ಪೂರ್ಣಗೊಳಿಸಿ ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಅವರ ಸ್ವತಂತ್ರ ನಿರ್ಧಾರದಿಂದ ವ್ಯಾಪಾರಸ್ಥ ಮನೆತನದ ತಂದೆ ತಾಯಿ ಭೂಮಾಲಿಕ ಕುಟುಂಬದ ಗಂಡ ಎರಡು ಕುಟುಂಬಗಳ ಒಡನಾಟದಲ್ಲಿ ತನ್ನ ಅಸ್ತಿತ್ವದ ಪ್ರಶ್ನೆಯನ್ನು ಎತ್ತಿಕೊಂಡು ಬಾಳಿದವರು ಲಲಿತಾ ರೈ ಯವರು. ನವ ಭಾರತ ಪತ್ರಿಕೆಗೆ ಕಚೇರಿ ಕೆಲಸ ಮಾಡುತ್ತಾ ಸಂಪಾದಕರಾದ ನಿರಂಜನರ ಪರಿಚಯವಾಗಿ ಅವರ ಪ್ರೋತ್ಸಾಹದಿಂದ ಸೃಜನಶೀಲ ಬರವಣಿಗೆಯನ್ನು ನಡೆಸಿದರು. ಅವರ ʼಚಿತ್ತಗಾಂಗಿನ ಕ್ರಾಂತಿವೀರರು’ ಕಲ್ಕತ್ತಾದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಕಥೆಗಳನ್ನು ಒಳಗೊಂಡಿದೆ. ಆ ಕಾಲದ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಪಾಲು ಪಡೆದು ಕ್ರಾಂತಿಕಾರಿಯಾಗಿ ಗುರುತಿಸಿಕೊಂಡವರು.

ವಿಪರ್ಯಾಸವೆಂದರೆ ವಿವಾಹಿತರಾದ ನಂತರ ಯಾವುದೇ ಬರಹವನ್ನು ಬರೆಯದೆ ಸಾರ್ವಜನಿಕ ಬದುಕಿನಿಂದಲೇ ದೂರ ಉಳಿದರು. ಪರಿಣಾಮ ಮಾನಸಿಕ ಖಿನ್ನತೆಗೆ ಜಾರಿ ಅದರಿಂದ ಹೊರಬರಲಾರದೆ ಮತ್ತೆ ಸಾಮಾಜಿಕ ಬದುಕಿನ ಕಡೆಗೆ ಮುಖ ಮಾಡಿದರು. ಪರಿಣಾಮವಾಗಿ ಸಮಾಜ ಸೇವೆ, ಸಾಮಾಜಿಕ ಸಂಘಟನೆಗಳ ಸದಸ್ಯತ್ವದ ಮೂಲಕ ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಮಂಗಳೂರಿನ ಭಗಿನಿ ಸಮಾಜ, ಮಹಿಳಾ ಸಭಾ ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘದಲ್ಲಿ ಸದಸ್ಯರಾಗಿದ್ದು, ಅನಾಥಾಶ್ರಮವೊಂದರ ಪೋಷಕರಾಗಿಯೂ ಕಾರ್ಯ ನಿರ್ವಹಿಸಿದರು. ನಿರ್ಗತಿಕರ- ಬಡವರ ಸೇವೆಯನ್ನು ಮಾಡಿ ಸಮಾಜದಲ್ಲಿ ಗುರುತಿಸಿಕೊಂಡರು.
ತನ್ನ ಯೌವನದ ದಿನಗಳಲ್ಲಿ ಪ್ರಗತಿಶೀಲ ಚಳುವಳಿ ಉನ್ನತವಾಗಿದ್ದ ಸಂದರ್ಭದಲ್ಲಿ ತಮ್ಮ ಬರಹಗಳನ್ನು ಆರಂಭಿಸಿದ ಲೇಖಕಿ ವಿವಾಹ ಸಂಸ್ಥೆಯೊಳಗೆ ದಾಖಲಾದ ನಂತರ ಸಾಂಸಾರಿಕ ಜಂಜಾಟದಲ್ಲಿ ತಮ್ಮ ಬರವಣಿಗೆಯನ್ನು ಸ್ಥಗಿತ ಗೊಳಿಸಿದರು. ಹಲವಾರು ವರ್ಷಗಳ ಕಾಲ ಅವರು ಲೇಖನಿಯನ್ನು ಕೈಗೆತ್ತಿಕೊಳ್ಳಲಿಲ್ಲ. ಮಕ್ಕಳ ಪೋಷಣೆ ಮತ್ತು ಕುಟುಂಬ ನಿರ್ವಹಣೆಗಾಗಿ ಅವರು ಹೆಣಗಾಡುವ ಅನಿವಾರ್ಯತೆ ಒದಗಿತು.
ಯಾವುದೇ ರೀತಿಯ ಬರವಣಿಗೆಗಳನ್ನು ಮಾಡದೆ ಅಜ್ಞಾತವಾಗಿ ಉಳಿದಿದ್ದ ಲಲಿತಾ ರೈ ಯವರನ್ನು ಮರಳಿ ಅನ್ವೇಷಿಸಿ ಪರಿಚಯಿಸಿದ್ದು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸದಸ್ಯರಾದ ಬಿ.ಎಂ. ರೋಹಿಣಿಯವರು. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು ಎನ್ನುವ ಕೃತಿಯೊಂದು ಮನೋರಮ ಎಮ್ ಭಟ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳಿಸುವ ಸಂದರ್ಭ ಈ ಅಜ್ಞಾತ ಲೇಖಕಿಯನ್ನು ಹುಡುಕಾಟ ನಡೆಸಿದರು. ಯಾರು ಈ ಲಲಿತಾ? ಎಂಬ ಕುತೂಹಲದಿಂದ ಹುಡುಕಿ ಅವರ ಪರಿಚಯದ ವಿವರವಿರುವ ವ್ಯಕ್ತಿ ಚಿತ್ರ ಕೃತಿಯೊಂದನ್ನು ಪ್ರಕಟಗೊಳಿಸಿದರು. ಆರಂಭದ ದಿನಗಳಲ್ಲಿ ಬರೆದ ಲೇಖನ, ಕಥೆಗಳು ಯಾವುದು ಉಳಿದಿರಲಿಲ್ಲ. ಪ್ರಕಟಗೊಂಡ ಕೆಲವು ಬರಹಗಳು ಮಾತ್ರ ಹಳೆಯ ಪತ್ರಿಕೆಗಳ ಸಂಚಿಕೆಗಳಲ್ಲಿ ಲಭ್ಯವಾಗಿತ್ತು.
ಸುದೀರ್ಘ ಮೌನದ ನಂತರ ಮತ್ತೆ ಬರವಣಿಗೆಯನ್ನು ಆರಂಭಿಸಿದವರು ಲಲಿತಾ ರೈಯವರು. ಆ ನಂತರದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಬರಹಗಳನ್ನು ಬರೆದರು. ‘ಚಿತ್ತಗಾಂಗಿನ ಕ್ರಾಂತಿ ವೀರರುʼ ʼಮತ್ತೆ ಬೆಳಗಿತು ಸೊಡರು’ ‘ಇಂಟರ್ನೆಟ್ ಒಳಗೆ ಮತ್ತು ಇತರ ಕಥೆಗಳು’ ಗ್ರಹಣ ಕಳೆಯಿತುʼ ಕನ್ನಡದಲ್ಲಿ ಪ್ರಕಟಗೊಂಡ ಕೃತಿಗಳಾದರೆ ʼಕುಲೆ ಪತ್ತುನಾ ಕಡಲುರ್ಕರುನಾʼ ತುಳು ಕಥಾ ಸಂಕಲನ, ‘ದೇಸಾಂತರʼ ಮತ್ತು ‘ಬೋಂಟೆ ದೇರ್ಂಡ್ ‘ಎನ್ನುವ ಎರಡು ತುಳು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಎಲ್ಲಾ ಬರಹಗಳನ್ನು ಲೋಕಾಂತಕ್ಕೆ ಪರಿಚಯಿಸಿದವರು ವಾಮನ ನಂದಾವರ ಮತ್ತು ಚಂದ್ರಕಲಾ ನಂದಾವರ ದಂಪತಿಗಳು. ಹೇಮಾಂಶು ಪ್ರಕಾಶನ ಅವರ ಎಲ್ಲಾ ಕೃತಿಗಳನ್ನು ಪ್ರಕಟಗೊಳಿಸಿ ಸಾಹಿತ್ಯ ಲೋಕದಲ್ಲಿ ಅವರಿಗೆ ನ್ಯಾಯ ಸಲ್ಲಿಸಿತು.
ಇವರು ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಬೆಂಗಳೂರು ಲೇಖಕಿಯರ ಸಂಘದ ಪ್ರಶಸ್ತಿ, ಎಸ್.ಯು ಪಣಿಯಾಡಿ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ದಕ್ಷಿಣ ಕನ್ನಡ ಪ್ರಾದೇಶಿಕ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಅಲ್ಲದೆ ಸುವರ್ಣ ಕರ್ನಾಟಕದ ಹಿರಿಯ ಲೇಖಕಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಗಳನ್ನು ಪಡೆದಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿರುವ ಲಲಿತಾ ರೈ ಯವರು ವಿಭಿನ್ನ ಮನೋಧರ್ಮದ ಅನನ್ಯ ಚಿಂತನೆಯ ಲೇಖಕಿ.
ಇವರು ದಿನಾಂಕ 11.10.2025ರಂದು ತನ್ನ 98ನೇ ವಯಸ್ಸಿನಲ್ಲಿ ನಮ್ಮನ್ನಗಲಿದರು. ಅವರ ದಿವ್ಯ ಚೇತನಕ್ಕೆ, ಹಿರಿತನಕ್ಕೆ, ಅಗಾಧವಾದ ಜೀವನ ಪ್ರೀತಿಗೆ ಶರಣು. ತನ್ನ 95 ನೆಯ ವಯಸ್ಸಿನಲ್ಲೂ ಓದುವುದನ್ನು ಬದುಕಿನ ಭಾಗವಾಗಿಸಿಕೊಂಡಿದ್ದ ಅವರ ಬಳಿ ಯಾವಾಗಲೂ ಓದುವ ಎರಡು ಪುಸ್ತಕಗಳಾದರೂ ಇರುತ್ತಿದ್ದವು. ಓಡಾಡುವುದು ಕಷ್ಟವಾದರೂ ಓದು ಕುಂಠಿತವಾಗಿರಲಿಲ್ಲ. ವರ್ತಮಾನದ ಸಂಗತಿಗಳಿಗೆ ಸ್ಪಂದಿಸುತ್ತಾ ಅದು ಹರಟೆಯ ವಸ್ತುವಾಗುತ್ತಾ ತನ್ನ ಅನುಭವಗಳನ್ನು ಸೇರಿಸುತ್ತಿದ್ದರು. ಅವರ ಸ್ಮರಣಶಕ್ತಿ ಅಪಾರ. ತಮ್ಮ ಇಂಗ್ಲಿಷ್, ಕನ್ನಡ, ತುಳು ಭಾಷೆಯ ಪ್ರಬುದ್ಧತೆಯಿಂದ ಅನುವಾದಗಳನ್ನು ಮಾಡಬೇಕು ಎಂಬ ಇಚ್ಛೆಯೂ ಅವರಲ್ಲಿ ಇತ್ತು. ಹಿರಿಯ ಲೇಖಕಿ ತನ್ನ ಸಾಮಾಜಿಕ ಚಿಂತನೆ ವೈಚಾರಿಕ ನೆಲೆಗಟ್ಟು ವಿಭಿನ್ನ ವಸ್ತುಗಳ ಬರಹಕ್ಕೆ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು ಕೃತಿ ರಚಿಸಿದ್ದಾರೆ. ಬೇಟೆಯ ವಿವರಗಳ ಬಗೆಗೆ ಹೆಣ್ಣುಮಗಳೊಬ್ಬಳು ವಿವರಣಾತ್ಮಕವಾಗಿ ಬರೆದ ಬೋಂಟೆ ದೇರ್ಂಡ್ ಬಹು ವಿಶಿಷ್ಟವಾದದ್ದು. ಅವರ ಬರಹಗಳಲ್ಲಿ ಕಾಮ ಮತ್ತು ಹಿಂಸೆ ಮತ್ತೆ ಮತ್ತೆ ಚರ್ಚೆಗೆ ಒಳಗಾಗುವ ವಸ್ತು . ಇದನ್ನು ದಾಟಿ ನಿಲ್ಲುವ ಅಧಮ್ಯ ಜೀವನ ಪ್ರೀತಿ ಮತ್ತು ಇಚ್ಛಾ ಶಕ್ತಿಯನ್ನು ಹೊಂದಿದ ಸ್ತ್ರೀ ಪಾತ್ರಗಳು ಇವರಿಂದ ನಿರೂಪಣೆಗೊಂಡಿವೆ. ಅಸಹಾಯಕತೆಯಿಂದ ಕಂಗಾಲಾಗಿರುವ ಹೆಣ್ಣು ಮಕ್ಕಳಿಗಿಂತ ಅದನ್ನು ಮೀರುವ ಸ್ತ್ರೀಯರೇ ಅವರ ಬರಹಗಳಲ್ಲಿ ಇದ್ದಾರೆ.
ವೈಯಕ್ತಿಕವಾಗಿ ಸಾತ್ವಿಕ ಆಹಾರವನ್ನು ಸ್ವೀಕರಿಸುತ್ತಿದ್ದ ಅವರು ಅಲಂಕಾರ ಪ್ರಿಯೆಯೂ ಹೌದು. ಇಳಿವಯಸ್ಸಿನಲ್ಲೂ ಕರಾವಳಿಯ ಲೇಖಕಿಯರ ಸಂಘಕ್ಕೆ ಉತ್ಸಾಹದಿಂದ ಆಗಮಿಸುತ್ತಿದ್ದ ಅವರು ದತ್ತಿನಿಧಿ ಯೊಂದನ್ನು ಇಟ್ಟಿದ್ದಾರೆ. ಗ್ರಂಥಾಲಯಕ್ಕೆ ಒಂದಷ್ಟು ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ. ಅವರ ಒಡನಾಟದಲ್ಲಿ ಹರಟಿದ ಹಂಚಿಕೊಂಡ ಹಲವು ನೆನಪುಗಳು ಅಮರ ಮಧುರ. ಅವರಿಗೆ ಮನದಾಳದ ನುಡಿನಮನಗಳು
ಡಾ. ಜ್ಯೋತಿ ಚೇಳೈರು
ಕನ್ನಡ, ತುಳು ಸಾಹಿತಿ
ಇದನ್ನೂ ಓದಿ-http://“ಋತು ಚಕ್ರ ನೀತಿ – 2025” ನಿಜಕ್ಕೂ ಶ್ಲಾಘನೀಯ https://kannadaplanet.com/menstrual-leave-policy-2025-is-commendable/

