ಅಹಮದಾಬಾದ್: ಯಾರು ಪಕ್ಷದ ಕೆಲಸದಲ್ಲಿ ಸಹಾಯ ಮಾಡಲು ಆಸಕ್ತಿ ಇಲ್ಲದವರು ವಿಶ್ರಾಂತಿ ಪಡೆಯಬಹುದು, ಯಾರು ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲವೋ ಅವರು ನಿವೃತ್ತಿ ಪಡೆಯಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರ ಅತ್ಯಂತ ಪಾತ್ರ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಎಐಸಿಸಿ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಧ್ಯಕ್ಷರ ನೇಮಕವನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಒಂದು ವರ್ಷದೊಳಗೆ ಬೂತ್ ಸಮಿತಿ, ಮಂಡಲ ಸಮಿತಿ, ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಬೇಕು. ದೇಶದ ಎಲ್ಲಾ ಜಿಲ್ಲಾಧ್ಯಕ್ಷರೊಂದಿಗೆ ಮೂರು ಹಂತದ ಸಭೆ ನಡೆಸಿದ್ದೇವೆ. ಈ ಸಂದರ್ಭದಲ್ಲಿ ನಾನು ಮತ್ತು ರಾಹುಲ್ ಗಾಂಧಿ, ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದುಕೊಂಡಿದ್ದೇವೆ. ಭವಿಷ್ಯದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.
ಇಂದು ಮತ್ತೆ ನಾವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹೋರಾಟದಲ್ಲಿ ನಮ್ಮ ಶತ್ರುಗಳು ಮತ್ತೆ ಅನ್ಯಾಯ, ಅಸಮಾನತೆ, ತಾರತಮ್ಯ, ಬಡತನ ಮತ್ತು ಕೋಮುವಾದಕ್ಕೆ ಒತ್ತು ನೀಡುತ್ತಿದ್ದಾರೆ. ಹಿಂದೆ ವಿದೇಶಿಯರು ಈ ಕೆಲಸವನ್ನು ಮಾಡುತ್ತಿದ್ದರು, ಈಗ ನಮ್ಮದೇ ಸರ್ಕಾರ ಮಾಡುತ್ತಿದೆ ಎಂದು ಹೆಸರು ಹೇಳದೆ ಪ್ರಧಾನಿ ಮೋದಿ ಸರ್ಕಾರವನ್ನ ಟೀಕಿಸಿದರು