ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ತಂದ ಮಾಂಸದ ಬ್ಯಾಗನ್ನಲ್ಲಿ ನಾಯಿ ಮಾಂಸ ಕಲಬೆರಕೆ ಆಗಿದೆ ಎಂದು ವಿವಾದ ಉಂಟಾದ ಬೆನ್ನಲ್ಲೇ, ಗೃಹ ಸಚಿವ ಪರಮೇಶ್ವರ್, ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ ಎಂದು ವರದಿ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದಾವಣಿಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಹೋಗಿ ನಾಯಿ ಮಾಂಸ ತರಿಸುತ್ತಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದ್ದಾರೆ. ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ ಎಂದು ವರದಿ ಬಂದಿದೆ ಎಂದು ಅವರು ಹೇಳಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಮಾಂಸದ ವ್ಯಾಪಾರಿ ರಾಜಸ್ಥಾನದಿಂದ ಪ್ರತಿ ವಾರಕ್ಕೆ, 15 ದಿನಗಳಿಗೊಮ್ಮೆ ಅಥವಾ ಬೇಕಾದ ಸಂದರ್ಭದಲ್ಲಿ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಅನಾವಶ್ಯಕವಾಗಿ ಏನೇನೂ ದುರುದ್ದೇಶ ಇಟ್ಟುಕೊಂಡು ಗಲಾಟೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜುಲೈ 26ರಂದು ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಬಂದ ಕುರಿ ಮಾಂಸವನ್ನು ನಾಯಿ ಮಾಂಸ ಎಂದು ರೌಡಿ ಶೀಟರ್ ಪುನೀತ್ ಕರೆಹಳ್ಳಿ ಅಂಡ್ ಗ್ಯಾಂಗ್ ದಾಳಿ ನಡೆಸಿ ಗಲಾಟೆ ಮಾಡಿದ್ದಾರೆ. ಸ್ಥಳಕ್ಕೆ ಮಾಂಸ ತರಿಸಿದ ಮಾಲೀಕ ರಜಾಕ್ ಕೂಡ ಬಂದಿದ್ದು ತೀರ್ವ ವಾಗ್ವಾದವೇ ನಡೆದಿದೆ. ನಂತರ ಪೊಲೀಸರು ಮಾಂಸವನ್ನು ಆರೋಗ್ಯ ಇಲಾಖೆಗೆ ಪರೀಕ್ಷೆಗೆ ಒಳಪಡಿಸಿ ಗಲಾಟೆ ಮಾಡಿದ ಮತ್ತು ಪೊಲೀಸ್ ವಿಚಾರಣೆಗೆ ತೊಡಕು ಮಾಡಿದ್ದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ.