ಅಧಿವೇಶನಕ್ಕೆ ಹಾಜರಾಗದ ಮಾಜಿ ಸಿಎಂ ಕೆಸಿಆರ್ ವೇತನ ಹಿಂಪಡೆಯಲು ಕಾಂಗ್ರೆಸ್ ಆಗ್ರಹ

Most read

ಹೈದರಾಬಾದ್‌: ವಿಧಾನಸಭೆ ಅಧಿವೇಶನಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ವಿರೋಧ ಪಕ್ಷದ ನಾಯಕ ಕೆ.ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರ ವೇತನವನ್ನು ಹಿಂಪಡೆಯುವಂತೆ ವಿಧಾನಸಭಾಧ್ಯಕ್ಷ ಜಿ.ಪ್ರಸಾದ್‌ ಕುಮಾರ್ ಅವರನ್ನು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

ಹೈದರಾಬಾದ್‌ ನಲ್ಲಿ ಕಾಂಗ್ರೆಸ್‌ ಪಕ್ಷದ ಪಾಲಿಕೆ ಸದಸ್ಯರಾಗಿರುವ ದರಿಪಲ್ಲಿ ರಾಜಶೇಖರ್‌ ರೆಡ್ಡಿ ಹಾಗೂ ಇತರ ನಾಯಕರು ವೇತನ ವಾಪಸ್‌ಗೆ ಸಂಬಂಧಿಸಿದಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ. ತೆಲಂಗಾಣ ವಿಧಾನಸಭೆಯಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದೆ.

ವಿರೋಧ ಪಕ್ಷದ ನಾಯಕ ಸೇರಿದಂತೆ ಚುನಾಯಿತ ಜನ ಪ್ರನಿಧಿಗಳು ರಾಜ್ಯದ ಅಭಿವೃದ್ಧಿಗೆ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಭರವಸೆಯಿಂದ ಅವರ ವೇತನಕ್ಕೆ ತೆರಿಗೆದಾರರು ಕೊಡುಗೆ ನೀಡುತ್ತಾರೆ. ಆದರೆ ಕೆ. ಚಂದ್ರಶೇಖರ್‌ ರಾವ್‌ ಅವರು ವಿಧಾನಸಭೆ ಅಧಿವೇಶನಗಳಿಗೆ ನಿರಂತರವಾಗಿ ಗೈರಾಗುತ್ತಿದ್ದಾರೆ. ಅವರು, ವಿರೋಧ ಪಕ್ಷದ ನಾಯಕನ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕನ ಕರ್ತವ್ಯ ನಿಭಾಯಿಸುವವರೆಗೆ ಕೆ.ಚಂದ್ರಶೇಖರ್‌ ರಾವ್ ಅವರಿಗೆ ವೇತನ ಪಾವತಿಸುವುದನ್ನು ಪುನರ್‌ ಪರಿಶೀಲನೆ ನಡೆಸಬೇಕು ಎಂದೂ ಒತ್ತಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೆಸಿಆರ್‌ ಅವರು, 2023ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ವಿಧಾನಸಭೆ ಅಧಿವೇಶನಗಳಿಗೆ ಹಾಜರಾಗುತ್ತಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಹಾಗೂ ಇತರ ಕಾಂಗ್ರೆಸ್ ನಾಯಕರು ಆಗಾಗ್ಗೆ ಟೀಕಾ ಪ್ರಹಾರ ನಡೆಸುತ್ತಲೇ ಬಂದಿದ್ದಾರೆ.

More articles

Latest article