ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧ್ಯಕ್ಷ ಕಿಮ್ ಜೊಂಗ್ ಉನ್ ನೇತೃತ್ವದ ಆಡಳಿತಾರೂಢ ವರ್ಕರ್ಸ್ ಪಾರ್ಟಿ ಅಭೂತಪೂರ್ವ ಯಶಸ್ಸು ದಾಖಲಿಸಿದೆ. ಶೇಕಡಾ 99.93 ರಷ್ಟು ಮತದಾರರು ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಕಿಮ್ ಆಡಳಿತಕ್ಕೆ ಭಾರಿ ಬೆಂಬಲ ಸೂಚಿಸಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇಕಡಾ 99.97 ರಷ್ಟಿದ್ದು, ಕೇವಲ 0.07 ರಷ್ಟು ಮತಗಳು ಮಾತ್ರ ಸರ್ಕಾರದ ವಿರುದ್ಧವಾಗಿ ಚಲಾವಣೆಯಾಗಿವೆ ಎಂದು ತಿಳಿದುಬಂದಿದೆ. ಉತ್ತರ ಕೊರಿಯಾದ ಇತಿಹಾಸದಲ್ಲಿ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಲು ಅವಕಾಶ ನೀಡಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದ್ದರೂ, ಅಂತಿಮವಾಗಿ ಕಿಮ್ ಜೊಂಗ್ ಉನ್ ಅವರ ಪೂರ್ಣ ಅಧಿಕಾರ ಮತ್ತೊಮ್ಮೆ ಸಾಬೀತಾಗಿದೆ.

ಆದರೆ ವಾಸ್ತವ ಸಂಗತಿಗಳೇನು?
ಉತ್ತರ ಕೊರಿಯಾದಲ್ಲಿ ಬಹು ಪಕ್ಷ ಪದ್ಧತಿ ಇದೆ, ಅದು ಹೆಸರಿಗೆ ಮಾತ್ರ. ಕಿಮ್ ಜೊಂಗ್ ಉನ್ನ ವರ್ಕರ್ಸ್ ಪಾರ್ಟಿ ಹೊರತುಪಡಿಸಿ ಇನ್ನೂ ಎರಡು ಪಾರ್ಟಿಗಳಿವೆ ಕೊರಿಯನ್ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಮತ್ತು ಚೊಂಡೊಯಿಸ್ಟ್ ಚೊಂಗು ಪಾರ್ಟಿ . ಈ ಎರಡು ಪಾರ್ಟಿಗಳು ಕೂಡ ಮೈನರ್ ಪಾರ್ಟಿಗಳು. ಆಶ್ಚರ್ಯ ಅಂದರೆ ಈ ಎರಡು ಪಾರ್ಟಿಗಳು ವಿಪಕ್ಷಗಳಲ್ಲ ಇವರು ಕೂಡ ಆಡಳಿತ ಪಕ್ಷಗಳ ಜೊತೆಯಲ್ಲಿ ಸೆರಿಕೊಂಡೇ ಕೆಲಸ ಮಾಡುತ್ತಾರೆ. ಇವರೆಲ್ಲರೂ ಸೇರಿ ವರ್ಕರ್ಸ್ ಪಾರ್ಟಿಗೆ ಅಭ್ಯರ್ಥಿಗಳನ್ನು ನಿಲ್ಲಿಸುತ್ತಾರೆ. ಅಲ್ಲಿನ ಅಭ್ಯರ್ಥಿಗಳು ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಾರೆ, ಅಂದರೆ ಅವರ ವಿರುದ್ಧ ಬೇರೆ ಅಭ್ಯರ್ಥಿಗಳು ಇರುವುದಿಲ್ಲ. ಜನರು ಆ ಅಭ್ಯರ್ಥಿ ಇಷ್ಟ ಇದ್ದರೆ ಅವರಿಗೆ ವೋಟ್ ಹಾಕಬಹುದು ಅಥವಾ ಅಭ್ಯರ್ಥಿಯ ವಿರುದ್ಧವಾಗಿ ವೋಟ್ ಮಾಡಬಹುದು . ಆದರೆ ಅದನ್ನು ಕೂಡ ಅಲ್ಲಿನ ಅಧಿಕಾರಿಗಳು ಗಮನಿಸುತ್ತಾರೆ. ಹಾಗಾಗಿ ಜನರಿಗೆ ಇಷ್ಟ ಇರಲಿ ಇಲ್ಲದಿರಲಿ , ಸರ್ಕಾರದ ಕೆಂಗಣ್ಣಿಗೆ ಗುರಿ ಆಗುವುದು ಬೇಡ ಎಂದು ಜನ ಕಿಮ್ ಜೊಂಗ್ ಉನ್ ಪಕ್ಷದ ಅಭ್ಯರ್ಥಿಗಳಿಗೆ ವೋಟ್ ಹಾಕುತ್ತಾರೆ. ಇನ್ನು ವೋಟ್ ಮಾಡದೆ ಮನೆಯಲ್ಲಿ ಉಳಿದರೂ ಕೂಡ ಅದು ಕಿಮ್ ಜೊಂಗ್ ಉನ್ ವಿರುದ್ಧ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿ ಎಲ್ಲರೂ ಕಡ್ಡಾಯವಾಗಿ ವೋಟ್ ಮಾಡುತ್ತಾರೆ.

