ಮಂಗಳೂರು, ಸೆ.14: ಸಂವಿಧಾನದ ಮೂಲ ರಚನೆಯು ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾಜವಾದ, ಭ್ರಾತ್ವತ್ವ, ಒಕ್ಕೂಟ ವ್ಯವಸ್ಥೆ ಯಂತಹ ಮೂಲಭೂತ ಅಂಶಗಳನ್ನು ಒಳಗೊಂಡಿದೆ. ಸಂವಿಧಾನದ ಮೂಲ ರಚನೆಯನ್ನು ಸಂಸತ್ತು ಅಥವಾ ಬೇರೆ ಯಾವುದೇ ಅಂಗವು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಕೇಶವಾನಂದ ಭಾರತಿ ತೀರ್ಪು ಮೂಲ ರಚನೆ ಸಿದ್ಧಾಂತವನ್ನು ಮೊದಲಿಗೆ ಪರಿಚಯಿಸಿತು. ಇದು ಜಾತ್ಯತೀತತೆ ಮತ್ತು ಒಕ್ಕೂಟವಾದದಂತಹ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲ ಮೌಲ್ಯಗಳ ಮೇಲೆ ಪರಿಣಾಮ ಬೀರುವ ತೀವ್ರ ತಿದ್ದುಪಡಿಗಳನ್ನು ಮಾಡುವ ಸಂಸತ್ತಿನ ಅಧಿಕಾರವನ್ನು ಸೀಮಿತಗೊಳಿಸಿತು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ರವಿವಾರ ಎಂ.ಎಸ್. ಕೃಷ್ಣ ಮೆಮೋರಿಯಲ್ ಟ್ರಸ್ಟ್, ಸಮದರ್ಶಿ ವೇದಿಕೆ ಹಾಗೂ ಹೊಸತು ಪತ್ರಿಕೆಯ ಸಹಭಾಗಿತ್ವದಲ್ಲಿ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ `ಭಾರತದ ಸನ್ನಿವೇಶದಲ್ಲಿ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕತೆಗಳ ಸಮತೋಲನ’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಸಾಂವಿಧಾನಿಕ ನೈತಿಕತೆಯನ್ನು ವಿರೋಧಿಸುವ ಶಕ್ತಿಗಳು ಕಳೆದ ಎರಡು ಮೂರು ದಶಕಗಳಿಂದ ಪ್ರಬಲವಾಗಿವೆ. ಇವುಗಳು ಧಾರ್ಮಿಕ ಹಾಗೂ ಸಾಮಾಜಿಕ ನೈತಿಕತೆಯ ಹೆಸರಿನಲ್ಲಿ ಸಾಮಾಜಿಕ ಪಿಡುಗುಗಳನ್ನು ಹುಟ್ಟುಹಾಕುತ್ತಿವೆ. ಸಾಂವಿಧಾನಿಕ ಮೌಲ್ಯಗಳು ಅತ್ಯುನ್ನತವಾಗಿದ್ದು, ನಮ್ಮ ಕಣ್ಣೆದುರು ಕಾಣುವ ಸಾಮಾಜಿಕ ಪಿಡುಗುಗಳನ್ನು ಈ ಸಾಂವಿಧಾನಿಕ ಮೌಲ್ಯಗಳ ಮೂಲಕ ಎದುರಿಸಬೇಕು. ಈ ಬಗ್ಗೆ ಮೌನ ವಹಿಸುವುದೆಂದರೆ ನಾವು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಅಪಚಾರ ಎಸಗಿದಂತೆ ಎಂದವರು ಹೇಳಿದರು.
ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಚಳವಳಿಯ ಆಶಯ ಬ್ರಿಟಿಷರನ್ನು ದೇಶದಿಂದ ಹೊರ ಹಾಕುವುದು ಮಾತ್ರವಾಗಿರಲಿಲ್ಲ. ಬದಲಾಗಿ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆ, ಮತೀಯವಾದ, ಅಸ್ಪೃಶ್ಯತೆ, ದಬ್ಬಾಳಿಕೆ, ಅಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೂಡಾ ತೊಲಗಿಸುವುದಾಗಿತ್ತು. ಆದರೆ ಸಂವಿಧಾನ ರಚನೆಯ 75 ವರ್ಷಗಳ ಬಳಿಕವೂ ಇದನ್ನೆಲ್ಲಾ ನಾವು ತೊಡೆದು ಹಾಕಿದ್ದೇವೆಂದು ಹೇಳಲು ಸಾಧ್ಯವೇ ಎಂದವರು ಪ್ರಶ್ನಿಸಿದರು. ಸತಿಸಹಗಮನ ಪದ್ಧತಿಯನ್ನು 1829 ರಲ್ಲೇ ನಿಷೇಧಿಸಲಾಗಿತ್ತು. ಆದರೆ 1987 ರಲ್ಲಿ ರೂಪ್ ಕನ್ವರ್ ಳನ್ನು ಬಲಾತ್ಕಾರದಿಂದ ಸತಿ ಯಾಗಿಸಿ ಅದನ್ನು ವೈಭವೀಕರಿಸಿದಾಗ ಸತಿ ವೈಭವೀಕರಣದ ನಿಷೇಧವನ್ನೂ ಕಾಯ್ದೆಗೆ ಸೇರಿಸಲಾಯಿತಾದರೂ ಈಗ ರೂಪ್ ಕನ್ವರ್ ಳ ದೊಡ್ಡ ದೊಡ್ಡ ಭಾವಚಿತ್ರಗಳನ್ನು ಪ್ರದರ್ಶಿಸಿ ಸತಿ ಮಾತೆ ಎಂದು ವೈಭವೀಕರಿಸಲಾಗುತ್ತಿದೆ. ರಾಜಸ್ತಾನ, ಮಧ್ಯಪ್ರದೇಶ, ಗುಜರಾತ್‍ಗಳಲ್ಲಿ `ಸತಿ ಮಾತೆ’ಯರಿಗೆ ಐದು ಕಿ.ಮೀ.ಗೊಂದರಂತೆ ದೇವಾಲಯಗಳನ್ನು ನಿರ್ಮಿಸಿ, ಸೆ. 2 ರಂದು ಪೂಜಿಸಿ ವೈಭವೀಕರಿಸಲಾಗುತ್ತದೆ. ಹಿಂದೆಲ್ಲಾ ಬೆರಳೆಣಿಕೆಯ ಜನರು ಅಂತಹ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರೆ ಇಂದು ಆ ಸಂಖ್ಯೆ ಸಾವಿರಕ್ಕೇರುತ್ತಿದೆ. ರಾಜಸ್ತಾನದ ಜೋಧ್‍ಪುರದಲ್ಲಿ ಮೋಟಾರು ಸೈಕಲೊಂದನ್ನು ಪೂಜಿಸುವ ಕಾರ್ಯವೂ ನಡೆದಿದೆ. ಎಲ್ಲರನ್ನು ಒಳಗೊಂಡ, ಎಲ್ಲರ ಹಿತ ಕಾಯುವ ಸಾಂವಿಧಾನಿಕ ನೈತಿಕತೆಯನ್ನು ಬಲಪಡಿಸುವ ಬದಲು ಪ್ರಸಕ್ತ ಇಂತಹ ಮೌಢ್ಯಗಳನ್ನು ಸಂಪ್ರದಾಯ, ಸಂಸ್ಕೃತಿ, ಹಾಗೂ ಸಾಮಾಜಿಕ ನೈತಿಕತೆಯ ಹೆಸರು ನೀಡಿ ವೈಭವೀಕರಿಸಲಾಗುತ್ತಿದೆ. ಇವೆಲ್ಲವುಗಳಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತಿದೆ..
ಶಬ್ದ ಹಾಗೂ ವಾಯು ಮಾಲಿನ್ಯಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಗದ್ದಲದ ಶಬ್ದವನ್ನು 10 ಗಂಟೆಗೆ ಸೀಮಿತಗೊಳಿಸಿ ಆದೇಶ ನೀಡಿತ್ತು. ಆದರೆ ಸಾಮಾಜಿಕ ನೈತಿಕತೆಯ ನೆಲೆಯಲ್ಲಿ, ಸಲ್ಲಿಸಲಾದ ಮೇಲ್ಮನವಿಗೆ ಸುಪ್ರೀಂ ಕೋರ್ಟ್ ಕೂಡಾ 12 ಗಂಟೆಯವರೆಗೆ ಆದೇಶ ವಿಸ್ತರಿಸಿ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯಾಧಿಕಾರಿಗೆ ವಹಿಸಿದ ಪರಿಣಾಮವನ್ನು ನಾವು ಇಂದು ಎದುರಿಸುತ್ತಿದ್ದೇವೆ. ನ್ಯಾಯಾಲಯ ಹಾಗೂ ನ್ಯಾಯಾಧೀಶರೂ ಕೂಡಾ ವ್ಯವಸ್ಥೆಯ ಭಾಗವಾಗಿರುವ ಕಾರಣ ಅವರಿಗೂ ಕೆಲವೊಂದು ಮಿತಿಗಳಿವೆ. ಸಾಂವಿಧಾನಿಕ ಮೌಲ್ಯಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ರಕ್ಷಿಸುವ ಜವಾಬ್ಧಾರಿ ನಮಗಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಆದಿಯಾಗಿ ನ್ಯಾಯಾಯಲಯಗಳಲ್ಲಿ ನ್ಯಾಯಾಧೀಶರು ನೀಡುವ ಆದೇಶಗಳನ್ನು ಕಾನೂನುಬದ್ಧವಾಗಿ ಪ್ರಶ್ನಿಸಬಾರದೆಂದೇನಿಲ್ಲ.ಹೀಗೆ ಮಾಡುವುದು ನ್ಯಾಯಾಲಯ ನಿಂದನೆಯಾಗದು ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಇರುವವರಿಂದ ಇದರ ಬಗ್ಗೆ ಧ್ವನಿ ಎತ್ತುವ, ಹೋರಾಟ ಮಾಡುವ, ಸಾಂವಿಧಾನಿಕ ಮೌಲ್ಯಗಳ ಪರ ವಹಿಸುವ ಕೆಲಸಗಳು ಕ್ಷೀಣಿಸುತ್ತಿವೆ. ಸಾಮಾಜಿಕ ಪಿಡುಗುಗಳ ವಿರುದ್ಧ ಸಶಕ್ತ ಹೋರಾಟಗಳನ್ನು ಸಂಘಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಅವರು ಕರೆ ನೀಡಿದರು.
ಹೊಸತು ಪತ್ರಿಕೆಯ ಸಂಪಾದಕ ಸಿದ್ಧನಗೌಡ ಪಾಟೀಲ್ ಸೇರಿದಂತೆ ಹಿರಿಯ ಸಾಹಿತಿಗಳು, ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶಕರಾದ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.