ಬೆಂಗಳೂರು: ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಶವಗಳಿಗೆ ವೆಚ್ಚ ಮಾಡಲಾದ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮ ಪಂಚಾಯಿತಿ ತಿಳಿಸಿದೆ. ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಳಲಾದ ಮಾಹಿತಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಈ ಉತ್ತರ ನೀಡಿರುವುದನ್ನು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ 70 ಕಿಮೀ ದೂರದ ದೇರಳಕಟ್ಟೆ ಎಂಬಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆ ಇದೆ.
ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಪ್ರಭಾಕರ ನಾಯ್ಕ ಎಂಬುವರು ಆರ್ ಟಿಐ ಅಡಿಯಲ್ಲಿ ಈ ಮಾಹಿತಿ ಕೇಳಿದ್ದರು. ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2000 ರಿಂದ 2025 ರವರೆಗೆ ಅನಾಥ ಶವಗಳ ಮರಣೋತ್ತರ ಪರೀಕ್ಷೆಯನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆಸಿ ಶವಗಳ ವಾರಸುದಾರರ ಪತ್ತೆ ಹಚ್ಚುವ ಸಮಯದಲ್ಲಿ ಶವಗಳನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲು ಖರ್ಚು ಮಾಡಿದ ಒಟ್ಟು ಮೊತ್ತದ ವಿವರ ಹಾಗೂ ಪಾವತಿ ಮಾಡಿದ ರಶೀದಿಯ ನಕಲು ಪ್ರತಿಯನ್ನು ಒದಗಿಸುವಂತೆ ಅರ್ಜಿ ಸಲ್ಲಿಸಿದ್ದರು. ಸದರಿ ಮಾಹಿತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಈ ಕಛೇರಿಯಲ್ಲಿ ಲಭ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಈ ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮ ಪಂಚಾಯಿತಿಯು ತನ್ನ ವ್ಯಾಪ್ತಿಯಲ್ಲಿ ಪತ್ತೆಯಾದ ಶವಗಳ ಮರಣೋತ್ತರ ಪರೀಕ್ಷೆಗೆ ಶವಗಳನ್ನು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಶವ ಪರೀಕ್ಷೆಯ ನಂತರ ವಾರಸುದಾರರಿಲ್ಲದ ಶವಗಳನ್ನು 3 ರಿಂದ 41 ದಿನಗಳವರೆಗೆ ಶೈತ್ಯಗಾರದಲ್ಲಿ ಸಂರಕ್ಷಿಸಲಾಗುತ್ತಿತ್ತು. ಇದರ ಖರ್ಚು ವೆಚ್ಚದ ಮಾಹಿತಿಯನ್ನು ಆರ ಟಿಐ ಮೂಲಕ ಕೇಳಿದಾಗ ಸದರಿ ಮಾಹಿತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಈ ಕಛೇರಿಯಲ್ಲಿ ಲಭ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ನೀಡಿದ್ದಾರೆ.
ಇಂತಹ ಮಹತ್ವದ ದಾಖಲೆಗಳು ಇಲ್ಲ ಎನ್ನುವುದು ಗ್ರಾಮ ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಒಂದು ವೇಳೆ ಕೆ ಎಸ್ ಹೆಗ್ಡೆ ಆಸ್ಪತ್ರೆಯು ಉಚಿತ ಸೇವೆಯನ್ನು ಒದಗಿಸಿದ್ದರೂ ಸಂಬಂಧಪಟ್ಟ ದಾಖಲೆಗಳನ್ನು ರಕ್ಷಿಸುವುದು ಅಧಿಕಾರಿಗಳ ಜವಬ್ದಾರಿಯಾಗಿರುತ್ತದೆ. ಇದೀಗ ದಾಖಲೆಗಳು ಇಲ್ಲ ಎನ್ನುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈ ಲೋಪವನ್ನು ಕುರಿತೂ ತನಿಖೆ ನಡೆಸಿದರೆ ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆಗಳಿರುತ್ತವೆ.

