ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

Most read

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಬಣ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿವೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ತಿಳಿಸಿದ್ದಾರೆ. ಜಗದೀಪ್ ಧನಖರ್ ಸದನದ ಕಲಾಪಗಳನ್ನು ಪಕ್ಷಪಾತದ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಂಡಿಯಾ ಬಣದ ಪಕ್ಷಗಳಿಗೆ ಇದು ಅತ್ಯಂತ ನೋವಿನ ನಿರ್ಧಾರವಾಗಿದೆ. ಆದರೆ ಸಂಸದೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾವು ಈ ಕ್ರಮವನ್ನು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಈ ಪ್ರಸ್ತಾವನೆಯನ್ನು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ-ಎಂ, ಜೆಎಂಎಂ, ಎಎಪಿ ಮತ್ತು ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳ ಸುಮಾರು 61 ಸಂಸದರು ಈ ಪ್ರಸ್ತಾಪಕ್ಕೆ ಸಹಿ ಹಾಕಿದ್ದಾರೆ. ರಾಜ್ಯಸಭಾ ಅಧ್ಯಕ್ಷರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯನ್ನು ಅಂಗೀಕರಿಸಲು ಅಗತ್ಯವಿರುವ ಕನಿಷ್ಠ ಸಂಖ್ಯೆ 50 ಆಗಿರುತ್ತದೆ. ಎನ್‌ಡಿಎ ಮತ್ತು ಇಂಡಿಯಾ ಬಣವು ಸದನದ ಕಾರ್ಯನಿರ್ವಹಣೆಗೆ ಅವಕಾಶ ನೀಡಲಿಲ್ಲ ಎಂದು ಪರಸ್ಪರ ಆರೋಪ ಮಾಡುತ್ತಲೇ ಬಂದಿವೆ.

ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಒತ್ತಾಯಿಸಿ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದರು. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಅವರ ವ್ಯಂಗ್ಯಚಿತ್ರಗಳನ್ನು ಹಿಡಿದುಕೊಂಡು “ಮೋದಿ ಅದಾನಿ ಭಾಯಿ ಭಾಯಿ” ಎಂಬ ಘೋಷಣೆಗಳನ್ನು ಪ್ರದರ್ಶಿಸಿದರು.

ಆಡಳಿತ ಪಕ್ಷವು ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡದಿರುವುದು ದೇಶದ ದೌರ್ಭಾಗ್ಯ. ಸಮಸ್ಯೆಗಳನ್ನು ಚರ್ಚಿಸಲು ಸಂಸತ್ತನ್ನು ಕರೆಯಲಾಗಿದೆ. ಆಡಳಿತ ಪಕ್ಷವು ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ.

More articles

Latest article