ದೇಶದಲ್ಲಿ ಪ್ರಾರ್ಥನಾ ಸ್ಥಳಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

Most read

ನವದೆಹಲಿ: ಮುಂದಿನ ಆದೇಶದವರೆಗೆ ದೇಶದಲ್ಲಿ ಪ್ರಾರ್ಥನಾ ಸ್ಥಳಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ವಿಶೇಷ ಪೀಠ ಈ ಮಧ್ಯಂತರ ಆದೇಶ ಪ್ರಕಟಿಸಿದೆ.

ವಿಚಾರಣೆ ಹಂತದಲ್ಲಿರುವ ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ, ಸಂಭಾಲ್ ಜಾಮಾ ಮಸೀದಿ ಇತ್ಯಾದಿ ಮೊಕದ್ದಮೆಗಳಲ್ಲಿ ನ್ಯಾಯಾಲಯಗಳು ಸಮೀಕ್ಷೆಯ ಆದೇಶಗಳನ್ನು ಒಳಗೊಂಡಂತೆ, ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡಬಾರದು ಎಂದೂ ಸೂಚಿಸಿದೆ.

ಪೂಜಾ ಸ್ಥಳಗಳ ಕಾಯಿದೆ 1947ರ ಆಗಸ್ಟ್ 15ಕ್ಕಿಂತ ಮೊದಲಿನ ಧಾರ್ಮಿಕ ಸ್ಥಳಗಳನ್ನು ಬದಲಾಯಿಸುವಂತಿಲ್ಲ, ಆ ಪೂಜಾ ಸ್ಥಳಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಇದು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾದ್ದರಿಂದ ಈ ಕಾಯಿದೆ ಏಕಪಕ್ಷೀಯವಾಗಿದೆ ಎಂದು ಬಿಜೆಪಿ ನಾಯಕರಾದ ಅಶ್ವಿನಿ ಉಪಾಧ್ಯಾಯ, ಸುಬ್ರಹ್ಮಣ್ಯಸ್ವಾಮಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ.

ಧಾರ್ಮಿಕ ಮುಖಂಡರು, ರಾಜಕಾರಣಿಗಳು ಮತ್ತು ವಕೀಲರು ಸೇರಿದಂತೆ ಅರ್ಜಿದಾರರು ಈ ಕಾಯಿದೆಯು ಹಿಂದೂಗಳು, ಜೈನರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಬೌದ್ಧರು ಮತ್ತು ಸಿಖ್ಖರು ತಮ್ಮ ಆರಾಧನಾ ಸ್ಥಳಗಳನ್ನು ಮರುಸ್ಥಾಪಿಸಲು ಮತ್ತು ನಿರ್ವಹಿಸಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

More articles

Latest article