ಬೆಂಗಳೂರು: ಬರಪರಿಹಾರದ ವಿಷಯದಲ್ಲಿ ಸುಳ್ಳು ಹೇಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಜನತೆಯೆ ಮುಂದೆ ಕ್ಷಮೆ ಕೋರಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಬರಪರಿಹಾರ ನೀಡಿದೇ ಇರುವುದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಕ್ಕೆ ಕೆಂಡಾಮಂಡಲರಾದ ಪರಮೇಶ್ವರ್ ಬರಪರಿಹಾರಕ್ಕೆ ಸಂಬಂಧಿಸಿದಂತೆ ಆಗಿರುವ ಎಲ್ಲ ಘಟನಾವಳಿಗಳನ್ನು ಬಿಡಿಸಿಟ್ಟು, ಸುಳ್ಳು ಹೇಳಿದ್ದಕ್ಕೆ ಅವರು ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬರಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದಾರೆ. 18 ಸಾವಿರ ಕೋಟಿ ರುಪಾಯಿಗಳನ್ನು ಕೊಡಿ ಎಂದು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದೆವು. ಅದಾದ ನಂತರ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ಅಧ್ಯಯನ ನಡೆಸಿ ವರದಿಯನ್ನೂ ಕೊಟ್ಟಿದೆ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಪ್ರಧಾನಿ ಹಾಗು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಡಿ.23ರ ನಂತರ ಸಭೆ ಕರೆದು ನಂತರ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು.
ಡಿ.23 ಆಗಿ ಎಷ್ಟು ದಿನಗಳು ಕಳೆದವು? ಆಗೇನು ಚುನಾವಣೆ ಘೋಷಣೆಯಾಗಿತ್ತೇ? ಅಧಿಕಾರಿಗಳ ತಂಡ ವರದಿ ನೀಡಿದ ನಂತರ ಒಂದು ತಿಂಗಳ ಒಳಗೆ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಆದರೆ ನಾಲ್ಕು ತಿಂಗಳಾದರೂ ಅವರು ಏನೂ ಮಾಡಲಿಲ್ಲ. ಈಗ ಚುನಾವಣಾ ಆಯೋಗದ ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಿರ್ಮಲಾ ಸೀತಾರಾಮನ್ ಅವರು ಮೊದಲು ನಾವು ಕೊಡುವುದೆಲ್ಲ ಕೊಟ್ಟಿದ್ದೇವೆ, ಏನೂ ಬಾಕಿ ಉಳಿಸಿಕೊಂಡಿಲ್ಲ ಎಂದಿದ್ದರು. ಈಗ ರಾಜ್ಯ ಸರ್ಕಾರ ಪ್ರಸ್ತಾವನೆ ತಡವಾಗಿ ಕಳಿಸಿದ್ದರಿಂದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಪರೋಕ್ಷವಾಗಿ ಅವರು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ನಿರ್ಮಲಾ ಸೀತಾರಾಮನ್ ಅವರು ಕೂಡಲೇ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು. ಕೂಡಲೇ ಬರಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ಬರಪರಿಹಾರದ ಹಣ ಕೊಡುವುದಕ್ಕೆ ಅಡ್ಡಿ ಬರುವುದಿಲ್ಲ. ಜನರಿಗೆ ಕುಡಿಯೋ ನೀರು ಕೊಡಬೇಡಿ, ರಾಸುಗಳಿಗೆ ಮೇವು ಕೊಡಬೇಡಿ ಎಂದು ಆಯೋಗ ಹೇಳುವುದಿಲ್ಲ. ಎನ್ ಡಿ ಆರ್ ಎಫ್ ಮೂಲಕ ಕೊಡಬೇಕಾದ ಹಣವನ್ನು ಈಗಲಾದರೂ ಕೊಡಲಿ ಎಂದು ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಅಂಥವರಿಗೆ ಏನೂ ಹೇಳು ಆಗುವುದಿಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿಯಬಹುದು ಎಂದು ಅವರು ಕನಸು ಕಾಣುತ್ತಿದ್ದಾರೆ. ಅದು ಸಾಧ್ಯವಿಲ್ಲದ ಮಾತು. ಇನ್ನೂ ನಾಲ್ಕೂವರೆ ವರ್ಷ ಕಾಂಗ್ರೆಸ್ ಸರ್ಕಾರವೇ ಇರುತ್ತದೆ. ಈ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆಲ್ಲುತ್ತೇವೆ. ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.