ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಮತ್ತೆ ಕರ್ನಾಟಕಕ್ಕೆ ಅನ್ಯಾಯವೆಸಗಲಾಗಿದೆ. ಕರ್ನಾಟಕದ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಲ್ಲಿ ವಿಪತ್ತು ಪರಿಹಾರ ನಿಧಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿಲ್ಲ. ನೀರಾವರಿ ಯೋಜನೆಗಳ ಅನುಷ್ಠಾನದ ನಿರೀಕ್ಷೆ ಹುಸಿ ಆಗಿದೆ. ಕಲ್ಯಾಣ ಕರ್ನಾಟಕಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಕೊಟ್ಟಿಲ್ಲ. ಭದ್ರಾ ಮೇಲ್ಡಂಡೆ, ಮಹದಾಯಿ, ಮೇಕೆದಾಟು ಪ್ರಸ್ತಾಪಿಸಿಲ್ಲ. ಬಜೆಟ್ ನಿಂದ ರೈತರಿಗೂ ಏನೂ ಪ್ರಯೋಜನ ಆಗಿಲ್ಲ. ರೈತರು, ಬಡವರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಚೊಂಬು ಕೊಟ್ಟಿದ್ದಾರೆ. ಆಂಧ್ರ, ಬಿಹಾರಕ್ಕೆ ವಿಶೇಷ ಅನುದಾನ ಕೊಟ್ಟಿರುವುದು ಬಿಟ್ಟರೆ, ಬೇರೆ ರಾಜ್ಯಗಳಿಗೆ ವಿಶೇಷ ಅನುದಾನ ಏನೂ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ಮೋದಿ ಸರ್ಕಾರ ಉಳಿಯು ಜೆಡಿಯು, ಟಿಡಿಪಿ ಬೆಂಬಲ ಬೇಕು. ಹೀಗಾಗಿ ಬಿಹಾರ, ಆಂಧ್ರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಾವು ಕೆಲವು ಮನವಿಗಳನ್ನು ಮಾಡಿದ್ದೆವು. 15 ನೇ ಹಣಕಾಸು ಆಯೋಗದಲ್ಲಿ ಹೆಚ್ಚು ಅನುದಾನಕ್ಕೆ ಮನವಿ ಮಾಡಿದ್ದೆವು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲ ಅವರು ಕರ್ನಾಟಕಕ್ಕೆ ಅನ್ಯಾಯವೆಸಗಿದ್ದಾರೆ ಎಂದರು.
ನಿರ್ಮಲಾ ಸೀತಾರಾಮನ್ ರಿಂದ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ನಿರ್ಮಲಾ ಸೀತಾರಾಮನ್ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ನಿರಾಶೆ ವ್ಯಕ್ತಪಡಿಸಿದ್ದಾರೆ.
48.21 ಲಕ್ಷ ಕೋಟಿ ಗಾತ್ರದ ಕೇಂದ್ರದ ಬಜೆಟ್ ಮಂಡಿಸಲಾಗಿದೆ. ಆದರೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದು ರೀತಿ ಚೊಂಬು ಕೊಟ್ಟಿದ್ದಾರೆ. ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ರಾಜ್ಯದ ಹೆಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ , ಶೋಭಾ ಸಚಿವರಾಗಿದ್ದಾರೆ. ನಿರ್ಮಲಾ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಕರ್ನಾಟಕಕ್ಕೆ ಯಾವುದೇ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ಅವರು ಹೇಳಿದರು.
ಭದ್ರಾ ಮೇಲ್ಡಂಡೆ ಯೋಜನೆ , ಕೃಷ್ಣಾ ಮೇಲ್ಡಂಡೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಇಲ್ಲಿವೆ:
ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ
.ಪ್ರಧಾನ ಮಂತ್ರಿಗಳ ಕುರ್ಚಿ ಉಳಿಸೋಕೆ ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ ಕೊಟ್ಟಿದ್ದಾರೆ.
ಕರ್ನಾಟಕದಿಂದ ಆರಿಸಿ ಹೋಗಿರುವ ನಿರ್ಮಲಾ ಸೀತರಾಮನ್ ರಾಜ್ಯದ ನಿರೀಕ್ಷೆ ಸುಳ್ಳು ಮಾಡಿ ಅನ್ಯಾಯ ಎಸಗಿದ್ದಾರೆ
ರಾಜ್ಯದಿಂದ ನಾವು ಇಟ್ಟ ಬೇಡಿಕೆಗಳು, ಅವರೇ ಕೊಟ್ಟ ಭರವಸೆಗಳು ಎರಡನ್ನೂ ಈಡೇರಿಸಿಲ್ಲ
ಕಲ್ಯಾಣ ಕರ್ನಾಟಕಕ್ಕೆ ನಾವು 5000 ಕೋಟಿ ಕೊಟ್ಡಿದ್ದೇವೆ. ಇದಕ್ಕೆ ಹೊಂದಾಣಿಕೆ ಅನುದಾನ ಕೇಳಿದ್ದೆವು. ಇದನ್ನೂ ಕೊಡಲಿಲ್ಲ.
ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ MSP ಗೆ ಕಾಯ್ದೆ ಮಾಡಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದರು. ಈ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೇ ಎತ್ತಿಲ್ಲ.
ಶಿಕ್ಷಣಕ್ಕೆ ಫೆಬ್ರವರಿ ಬಜೆಟ್ ನಲ್ಲಿ 1.21 ಲಕ್ಷ ಕೋಟಿ ಕೊಟ್ಟು ಈಗ ಇದನ್ನು 1.25 ಮಾಡಿದ್ದಾರೆ ಅಷ್ಟೆ.
ಐಟಿ ಮತ್ತು ಸಂವಹನ ಕ್ಷೇತ್ರಕ್ಕೆ ಫೆಬ್ರವರಿಯಲ್ಲಿ 1.37 ಲಕ್ಷ ಕೋಟಿ ಇತ್ತು. ಈಗ ಇದನ್ನು 1.16 ಲಕ್ಷ ಕೋಟಿಗೆ ಇಳಿಸಿದ್ದಾರೆ.
ಐದು ಜನ ಕೇಂದ್ರ ಸಚಿವರು ರಾಜ್ಯದವರು. ಈ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ.
ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಫೆಬ್ರವರಿಗಿಂತ ಗಣನೀಯವಾಗಿ ಅನುದಾನಗಳನ್ನು ಕಡಿತಗೊಳಿಸಿದ್ದಾರೆ.
ಫೆರಿಫೆರಲ್ ರಿಂಗ್ ರಸ್ತೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತರಾಮನ್ ಅವರು ತಾವೇ ಈ ಹಿಂದೆ ಘೋಷಿಸಿದ್ದ ಅನುದಾನವನ್ನೂ ನೀಡಿಲ್ಲ.
SC/ST ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹ
.
ಮೋದಿ ಸರ್ಕಾರ ಮತ್ತು ಈ ಸರ್ಕಾರದ ಬಜೆಟ್ ಮೇಲೆ ಯಾವ ಭರವಸೆಗಳೂ ಇಲ್ಲ. ಹಿಂದನ ಬಜೆಟ್ ನಲ್ಲಿ ಅವರೇ ಘೋಷಿಸಿದ್ದನ್ನೇ ಇವತ್ತಿನವರೆಗೂ ಜಾರಿ ಮಾಡಿಯೇ ಇಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ.
ಬಜೆಟ್ ಪೂರ್ವ ಸಭೆಗೆ ನಿರ್ಮಲಾ ಸೀತರಾಮನ್ ಅವರು ನಮಗೂ ಆಹ್ವಾನಿಸಿದ್ದರು. ಈಗ ನೋಡಿದ್ರೆ ಯಾವ ಸಾರ್ಥಕತೆಗೆ ಕರೆದದ್ದು ಅನ್ನಿಸುತ್ತಿದೆ.
ದಕ್ಷಿಣ ಭಾರತದಲ್ಲಿ ಆಂದ್ರ ಹೊರತುಪಡಿಸಿ ಉಳಿದ ಯಾವ ರಾಜ್ಯಗಳಿಗೂ ಏನೂ ಸಿಕ್ಕಿಲ್ಲ.