ಮುಡಾ ಹಗರಣದಲ್ಲಿ ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟ ಆರೋಪಿಸಿ ಎರಡು ಪಕ್ಷಗಳ ನಡೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾಗಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇತ್ತಿಚೇಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಖುರ್ಚಿ ಆಸೆಗಾಗಿ ಜನಪರ ಇರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ೧೫ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಸೇರಿದಂತೆ ೪೦ ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಹಲವು ಮಹತ್ವದ ಅಧಿಕಾರದ ಹುದ್ದೆಯಲ್ಲಿ ಇದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯರವರ ವರ್ಚಸ್ಸಿಗೆ ಮಸಿ ಬಳಿದು ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಕುತಂತ್ರಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯಪಾಲರ ಮುಖಾಂತರ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ ಎಂಧು ಆರೋಪಿಸಿದೆ.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರಾದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಜೊತೆಗೆ ಬಿಜೆಪಿಯ ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಲ್. ಸಂತೋಷ್ ಮತ್ತಿತರರು ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿರುವುದರ ಹಿಂದೆ ಹಲವು ಕಾರಣಗಳಿವೆ. ಸಿದ್ದರಾಮಯ್ಯರವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿಂದುಳಿದ ವರ್ಗಗಳ ನಾಯಕತ್ವವನ್ನು ಕೊನೆಗಾಣಿಸಬಹುದು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಶಾಶ್ವತವಾಗಿ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರ ಇಡಬಹುದು ಮತ್ತು ಸಿದ್ದರಾಮಯ್ಯರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಕಲ ಹಿಂದುಳಿದ ವರ್ಗಗಳು ಅಧಿಕಾರ ನಡೆಸಲು ಅಸಮರ್ಥ ಎಂದು ಬಿಂಬಿಸಬಹುದು ಎನ್ನುವ ಹುನ್ನಾರದಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿರುವ ದೇಶದ ಏಕೈಕ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ಇವರಿಗೆ ಅರ್ಥವಾಗಬೇಕು. ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ಮತ್ತಿತರರ ವಿರುದ್ಧ ಇಂತಹುದೇ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯಗಳು ಜಾಗೃತವಾಗಿವೆ. ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯರವರು ಸದಾ ಬಡವರು, ಮಹಿಳೆಯರು, ರೈತರು ಮತ್ತು ಕಾರ್ಮಿಕರ ಪರ ಇರುವಂತೆ ಈ ವರ್ಗಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯಂತೆ ನಿಂತಿವೆ ಎಂಬುದು ಕಳೆದ ಚುನಾವಣೆಯಲ್ಲಿ ಗೊತ್ತಾಗಿದೆ ಎಂದಿದ್ದಾರೆ.
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು ಹಾಗೂ ಕೇಂದ್ರ ಸರ್ಕಾರ ಬಹುಮತದ ಕೊರತೆಯಿಂದ ಅತಾಶವಾಗಿದ್ದು, ಬಿ.ಜೆ.ಪಿ ಯೇತರ ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ದ ಪಿತೂರಿ ಮಾಡುತ್ತಿರುವುದು ಹೊಸದೇನು ಅಲ್ಲ ಎಂಬುದು ಇಡೀ ದೇಶಕ್ಕೆ ತಿಳಿದಿರುವ ವಿಷಯ. ಕೇಂದ್ರದ ನಾಯಕರುಗಳ ಬೆಂಬಲದಿಂದ ನಮ್ಮ ರಾಜ್ಯದ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ನಾಯಕರು ಈ ಮಟ್ಟದ ಕೊಳಕು ರಾಜಕೀಯಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಹಿಂದುಳಿದ ದಲಿತ ಅಲ್ಪಸಂಖ್ಯಾತ ಶೋಷಿತರ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವ ಅನಿವಾರ್ಯತೆ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಿ, ಸಿದ್ದರಾಮಯ್ಯರವರನ್ನು ದುರ್ಬಲ ಗೊಳಿಸುವ ಕುತಂತ್ರವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿ ಹಳ್ಳಿಗಳಲ್ಲೂ ಶೋಷಿತರು ಬಿಜೆಪಿ-ಜೆಡಿಎಸ್ ನಾಯಕರುಗಳು ಮತ್ತು ಕೇಂದ್ರ ಸಕಾರದ ವಿರುದ್ದ ದಂಗೆ ಎಳಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ-ಜೆಡಿಎಸ್ ನಾಯಕರುಗಳಿಗೆ ತಮ್ಮ ಮೂಲಕ ಎಚ್ಚರಿಕೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸದಸ್ಯರು ಸಹಿ ಹಾಕಿದ್ದು, ಅವರ ವಿವರ ಇಲ್ಲಿದೆ.
(ಕೆ.ಎಂ ರಾಮಚಂದ್ರಪ್ಪ)
ಪ್ರಧಾನ ಸಂಚಾಲಕರು
(ಮಾವಳ್ಳಿ ಶಂಕರ್)
ಸಂಚಾಲಕರು
(ಅನಂತನಾಯ್ಕ.ಎನ್)
ಸಂಚಾಲಕರು
(ಎಣ್ಣೆಗೆರೆ ಆರ್. ವೆಂಕಟರಾಮಯ್ಯ)
ಸಂಚಾಲಕರು
(ಬಿ.ಟಿ ಲಲಿತಾನಾಯಕ್)
ಸದಸ್ಯರು
(ಜಿ.ಡಿ ಗೋಪಾಲ್)
ಸದಸ್ಯರು
(ಎಂ.ಈರಣ್ಣ)
ಅಧ್ಯಕ್ಷರು.
ಕರ್ನಾಟಕ ಪ್ರದೇಶ ಕುರುಬರ ಸಂಘ
(ಎಂ.ವಿ. ಸೋಮಶೇಖರ್)
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರದೇಶ ಕುರುಬರ ಸಂಘ
(ಕೆ.ಎಂ ಕೃಷ್ಣಮೂರ್ತಿ)
ಖಜಾಂಚಿ
ಕರ್ನಾಟಕ ಪ್ರದೇಶ ಕುರುಬರ ಸಂಘ
(ಸಿ. ನಂಜಪ್ಪ)
ಸದಸ್ಯರು
(ಕೆ. ವೆಂಕಟಸುಬ್ಬರಾಜು)
ಸದಸ್ಯರು
(ಆದರ್ಶ ಯಲ್ಲಪ್ಪ)
ಸದಸ್ಯರು