ನಿದ್ದೆಗೆಡಿಸುವ ಆಗಸದ ಅತಿಥಿಗಳು

Most read

ಉಲ್ಕೆಗಳು ಮನುಷ್ಯರನ್ನು ನೇರ ತಟ್ಟಿದ ಉದಾಹರಣೆಗಳು ಕಡಿಮೆಯಿದ್ದರು ನಮ್ಮ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿವೆ.  ಜನರ ಸಾಮಾನ್ಯ ಆಡುನುಡಿಯಲ್ಲಿ ‘ಬೀಳುವ ನಕ್ಷತ್ರ’ ಎಂಬ ವಿವರಣೆ ಪಡೆದಿರುವ ಉಲ್ಕೆಗಳ ಅಧ್ಯಯನ ಖಗೋಳ ವಿಜ್ಞಾನದ ಸ್ವಾರಸ್ಯಕರ ವಿಷಯಗಳಲ್ಲೊಂದು. ನನಗೂ ಒಮ್ಮೆಯಾದರೂ ಬಿಸಿಬಿಸಿ ಉಲ್ಕೆಕಲ್ಲು ನನ್ನೆದುರು ಬೀಳುವಂತಹ ಗಳಿಗೆಗೆ ಮುಖಾಮುಖಿಯಾಗಬೇಕು ಎಂಬ ಮಹತ್ತರ ಆಸೆಯಿದೆ – ಕೆ.ಎಸ್.ರವಿಕುಮಾರ್, ವಿಜ್ಞಾನ ಲೇಖಕರು.

ನಾವು ನಮ್ಮ ಹಾಸಿಗೆಯಲ್ಲಾದರೂ ಸುರಕ್ಷಿತ ಅಂತ ಭಾವಿಸಿದ್ದರೆ ಅದು ಹಾಗಿರಬೇಕಿಲ್ಲ’ ರೂತ್ ಹ್ಯಾಮಿಲ್ಟನ್

2021ರ ಅಕ್ಟೋಬರ್ ತಿಂಗಳ 3ನೇ ತಾರೀಕು. ಜಾಗ ಕೆನಡಾದ ಬ್ರಿಟಿಷ್ ಕೊಲಂಬಿಯಾ ರಾಜ್ಯದ ರಾಕಿ ಪರ್ವತಗಳ ನಡುವಿನ ಗೋಲ್ಡನ್ ಎಂಬ ಹಳ್ಳಿ. 66ರ ಅಜ್ಜಿ ರೂತ್ ಹ್ಯಾಮಿಲ್ಟನ್ ಸುಖ ನಿದ್ದೆಯಲ್ಲಿದ್ದರು. ನೀರವ ಇರುಳು. ಅವರದು ‘ಸವಿಗನಸು’ ಕಾಣುವ ವಯಸ್ಸಲ್ಲವಾದರೂ ಗೊರಕೆಗೇನೂ ಅಡ್ಡಿಯಿರಲಿಲ್ಲ. ನಡುರಾತ್ರಿ ಸಮೀಪಿಸುತ್ತಿತ್ತು. ಒಮ್ಮೆಲೆ ಏನೋ ಬಿದ್ದು ಸಿಡಿದ ಸದ್ದು. ರೂತ್ ನಂಬಲಸಾಧ್ಯವಾದ, ಅಂದಾಜಿಗೂ ನಿಲುಕದ ಅಂಜಿಕೆಯಲ್ಲಿ ದಿಗ್ಗನೆದ್ದು ಕುಳಿತರು. ಸದ್ದಿಗೆ ಎಚ್ಚರಗೊಂಡ ಅವರ ನಾಯಿ ಟೋಬಿ ಎದೆನಡುಗಿಸುವಂತೆ ವಿಕಾರವಾಗಿ ಬೊಗಳುತ್ತಿತ್ತು. ನೋಡಿದರೆ ಪಕ್ಕದಲ್ಲಿ ಎರಡು ದಿಂಬುಗಳ ನಡುವೆ ಸಾಧಾರಣ ಕರಬೂಜ ಹಣ್ಣಿನ ಗಾತ್ರದ ಒಂದು ಕಪ್ಪು ಕಲ್ಲಿನಂತಹುದು ಏನೋ ಬಿದ್ದಿತ್ತು. ಅದು ಕೆಲವೇ ಇಂಚು ಪಕ್ಕಕ್ಕೆ ಸರಿದು ಬಿದ್ದಿದ್ದರೆ ರೂತ್ ಅವರ ಬುರುಡೆ ಚುಕ್ಕಾಚೂರಾಗಬಹುದಿತ್ತು. ಓಹ್, ಸ್ವಲ್ಪದರಲ್ಲೆ……….! ತಲೆಯೆತ್ತಿ ನೋಡಿದರೆ ಛಾವಣಿಯಲ್ಲಿ ದೊಡ್ಡ ಕಂಡಿ ಕಂಡಿತು. ಕಂಡಿಯಾಚೆಗೆ ಪಳಪಳ ಎನ್ನುವ ಚುಕ್ಕಿಗಳು. ಆ ಕಂಡಿಗೆ ಕಾರಣವಾದ ವಸ್ತು ನಿಜಕ್ಕೂ ಒಂದು ಉಲ್ಕೆಯಕಲ್ಲು. ಅದರ ಬಗ್ಗೆ ಮಾಹಿತಿ ಇಲ್ಲದ ರೂತ್ ಬಹಳ ಹೊತ್ತು ನಡುಗುತ್ತ ನಂತರ ಸಾವರಿಸಿಕೊಂಡು ಪೊಲೀಸರಿಗೆ ಫೋನು ಮಾಡಿದರು. ಆಕೆ ಇಷ್ಟುಕಾಲದ ತನ್ನ ಬದುಕಿನಲ್ಲಿ ಯಾವಾಗಲೂ ಆಪಾಟಿ ಹೆದರಿರಲಿಲ್ಲ, ತಾನು ಬಿರುಗಾಳಿಗೆ ಸಿಕ್ಕ ಎಲೆಯ ತರ ನಡುಗುತ್ತಿದ್ದೆ ಎಂದು ನಂತರ ಮಾಧ್ಯಮಗಳಿಗೆ ಆಕೆ ತಿಳಿಸಿದರು.

ಉಲ್ಕೆ ಕಲ್ಲಿನೊಂದಿಗೆ ರೂತ್

ಪೊಲೀಸರು ಬಂದರು, ಪ್ರಾಥಮಿಕ ತನಿಖೆ ಮಾಡಿದರು. ಚಾವಣಿಯಲ್ಲಾದ ಕಂಡಿಯ ಗಾತ್ರ ನೋಡಿದರೆ ಬಹಳ ಬಹಳ ಬಹಳ ಎತ್ತರದಿಂದ ಬಹಳ ಬಹಳ ಬಹಳ ಒತ್ತರದಲ್ಲಿ ಬಿದ್ದದ್ದೇ ಆಗಿರಬೇಕು ಆ ಕಲ್ಲು ಅಂತ ತೀರ್ಮಾನಿಸಿದರು. ಮನುಷ್ಯರು ಎಸೆದರೆ ಆ ಪ್ರಮಾಣದಲ್ಲಿ ಕಲ್ಲೊಂದು ಗಟ್ಟಿ ಛಾವಣಿಯಲ್ಲಿ ಕಂಡಿ ಮಾಡುವುದು ಸಾಧ್ಯವಿರಲಿಲ್ಲ. ಕಲ್ಲನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅದು ಅಂತರಿಕ್ಷದಿಂದ ಬಂದು ಬಿದ್ದ ಉಲ್ಕೆಕಲ್ಲು ಅಂತ ಖಚಿತವಾಯಿತು. ಅದರ ವಯಸ್ಸು 440-450 ಕೋಟಿ ವರ್ಷಗಳು ಅಂತಲೂ ತಿಳಿಯಿತು. ಅಂದರೆ ನಮ್ಮ ಸೌರಸಂಸಾರ ರೂಪುಗೊಳ್ಳುತ್ತಿದ್ದ ಆರಂಭದ ಕಾಲಘಟ್ಟದಲ್ಲಿ ಇದ್ದ ಕಲ್ಲು ಅದು. ಅದರ ಗೋಚರ ಗಾತ್ರಕ್ಕೆ ಹೋಲಿಸಿದರೆ ಅದು ವಿಪರೀತ ಭಾರವಿತ್ತು. ಕಬ್ಬಿಣ ಮತ್ತು ನಿಕ್ಕಲ್‍ಗಳ ಮಿಶ್ರಣ ಅದು. ಭೂಮಿಯ ಮೇಲೂ ಈ ಮಿಶ್ರಣದ ಕಲ್ಲುಗಳು ದೊರೆಯುತ್ತವೆ. ಆದರೆ ಇಷ್ಟೊಂದು ಭಾರವಿರುವುದಿಲ್ಲ. ಹೀಗಾಗಿ ಆ ಉಲ್ಕೆಕಲ್ಲು ಜಗದ ವಿಜ್ಞಾನಿಗಳ ಗಮನ ಸೆಳೆಯಿತು. ಅದರ ಅಧ್ಯಯನದಿಂದ ಸೌರವ್ಯೂಹದ ಮೂಲ ರಚನೆ ತಿಳಿಯಲು ಮುಂದೆ ಸಹಾಯವಾಗಬಹುದಾಗಿದೆ.

ರೂತ್ ಉಲ್ಕೆಕಲ್ಲನ್ನು ಅಧ್ಯಯನಕ್ಕೆ ಕಡ ಕೊಟ್ಟರು. ಸಂಶೋಧನೆಯ ನಂತರ ತನಗೇ ವಾಪಾಸು ಕೊಡಬೇಕೆಂದು ಕೋರಿಕೊಂಡರು. ತಾನು ಬದುಕಿರುವ ತನಕ ಅದು ತನ್ನ ಬಳಿ ಇರಬೇಕು ಎಂಬುದು ಅವರ ಆಸೆ. ಮೊಮ್ಮಕ್ಕಳಿಗೆ ತೋರಿಸಲು ಒಂದು ವಿಸ್ಮಯಕಾರಿ ವಸ್ತು ಅದು ಎಂಬುದು ಅವರ ಅನಿಸಿಕೆ. ಕೆನಡಾದ ಕಾನೂನಿನ ಪ್ರಕಾರ ಉಲ್ಕೆಕಲ್ಲುಗಳು ಮೊದಲು ಕಂಡವರಿಗೇ ಸೇರುತ್ತವೆ. ಹೇಗೋ ಒಂದು ಉಲ್ಕೆಕಲ್ಲಿನ ಕಾರಣಕ್ಕೆ ರೂತ್ ಹ್ಯಾಮಿಲ್ಟನ್ ಖಗೋಳವಿಜ್ಞಾನದಲ್ಲಿ ಒಂದು ಜಾಗ ಕಂಡುಕೊಂಡಿದ್ದಾರೆ.

ಹಾಡ್ಜಸ್ ಉಲ್ಕೆಕಲ್ಲು                                       

ಮೆಕ್ದೊನಾಹ್ ಉಲ್ಕೆಕಲ್ಲು

1954ರ ನವೆಂಬರ್ 30ರಂದು ಅಮೆರಿಕಾದ ಅಲಬಾಮ ರಾಜ್ಯದ ಸಿಲಕಾಗ ಎಂಬಲ್ಲಿ ತನ್ನ ಫಾರ್ಮ್‍ಹೌಸಿನಲ್ಲಿ ಆನ್ ಎಲಿಜಬೆತ್ ಫಾಲರ್ ಹಾಡ್ಜಸ್ ಎಂಬಾಕೆ ಮಧ್ಯಾಹ್ನ 12.46ರಲ್ಲಿ ಸೋಫಾದಲ್ಲಿ ಕುಳಿತಂತೆ ಒಂದು ಸವಿನಿದ್ದೆಗೆ ಜಾರಿದ್ದಳು. ಆಗ ‘ಕಾಂಡ್ರೈಟ್’ ಪಂಗಡಕ್ಕೆ ಸೇರಿದ 5.5 ಕಿ.ಗ್ರಾಂ. ತೂಕದ ಉಲ್ಕೆಕಲ್ಲೊಂದು ಬಿತ್ತು. ಆ ಉಲ್ಕೆಕಲ್ಲು ಮಾಡಿಗೆ ದೊಡ್ಡ ಸದ್ದಿನೊಂದಿಗೆ ಅಪ್ಪಳಿಸಿ ಕಂಡಿ ಮಾಡಿಕೊಂಡು ಗಡುಸುಮರದ ಆವರಣವಿದ್ದ ದೊಡ್ಡ ರೇಡಿಯೊ ಮೇಲೆ ಬಿದ್ದಾಗ ಪುಟಿದು ಹಾರಿದ ಅದರ ಚೂರುಗಳು ಹಾಡ್ಜಸ್‍ಳ ದೇಹದ ಒಂದು ಬದಿಗೆ ಬಡಿದು, ಚುಚ್ಚಿ ಗಂಭೀರ ಗಾಯಗಳನ್ನೆ ಮಾಡಿದವು. ಆ ಉಲ್ಕೆಕಲ್ಲನ್ನು ‘ಸಿಲಕಾಗ ಉಲ್ಕೆಕಲ್ಲು’ ಮತ್ತು ಗಾಯಗೊಂಡ ಹಾಡ್ಜಸ್ ನೆನಪಿನಲ್ಲಿ ‘ಹಾಡ್ಜಸ್ ಉಲ್ಕೆಕಲ್ಲು’ ಎಂಬ ಎರಡು ಹೆಸರಿನಿಂದಲೂ ಗುರುತಿಸುತ್ತಾರೆ. ಕಾಂಡ್ರೈಟ್ ಉಲ್ಕೆಕಲ್ಲುಗಳು ಲೋಹಾಂಶ ಇಲ್ಲದ ಧೂಳು ಹಾಗೂ ಸಿಲಿಕೇಟ್ ಕಣಗಳಿಂದ ಸಾಂದ್ರಗೊಂಡ ರೀತಿಯವು. ಹೆಚ್ಚಾಗಿ ಆಸ್ಟರಾಯಿಡ್ ಅಥವಾ ಕಿರುಗ್ರಹಗಳ ಚೂರುಗಳು ಇವು. ನಮ್ಮ ಸೌರವ್ಯೂಹದಷ್ಟೆ ಹಳೆಯವು.

ಹಾಡ್ಜಸ್‍ಗೆ ಗಾಯಮಾಡಿದ ಉಲ್ಕೆಕಲ್ಲು ಬೀಳುವ ಮೊದಲು ಅದು ಆಗಸದಲ್ಲಿ ಮೂಡಿಸಿದ ಬೆಂಕಿಗೆರೆಯನ್ನು ಸುತ್ತಮುತ್ತಲ ಮೂರು ರಾಜ್ಯಗಳ ಸಾವಿರಾರು ಮಂದಿ ಹಾಡುಹಗಲಲ್ಲೆ ಗಮನಿಸಿದ್ದರು. ಸಿಲಕಾಗದ ಪೊಲೀಸ್ ಇಲಾಖೆ ಉಲ್ಕೆಕಲ್ಲನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಫಾರ್ಮ್‍ಹೌಸ್ ಇದ್ದ ಜಮೀನಿನ ಜಮೀನುದಾರ ಬರ್ಟಿಗಯ್ ಉಲ್ಕೆಕಲ್ಲು ತನಗೆ ಸೇರಿದ್ದೆಂದು, ಅಲ್ಲ ಮನೆಯೊಳಗೆ ತಾನಿದ್ದಾಗ ಅದು ಬಿದ್ದು ತನ್ನನ್ನು ಗಾಯಗೊಳಿಸಿದ್ದರಿಂದ ಅದು ತನಗೆ ಸೇರಿದ್ದೆಂದು ಹಾಡ್ಜಸ್ ದಾವೆ ಹೂಡಿದರು. ಹಲವು ದಿನಗಳ ತಿಕ್ಕಾಟದ ನಂತರ ಇಬ್ಬರೂ ರಾಜಿಯಾಗಿ ಹಾಡ್ಜಸ್ ಗಯ್‍ಗೆ 500 ಡಾಲರ್ ಕೊಟ್ಟು ಉಲ್ಕೆಕಲ್ಲನ್ನು ಖರೀದಿಸಿದಳು. ಕಡೆಗೆ 1956ರಲ್ಲಿ ಅದನ್ನು ‘ಅಲಬಾಮ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿ’ಗೆ ದಾನ ಮಾಡಿಬಿಟ್ಟಳು. ಅದೇ ಉಲ್ಕೆಕಲ್ಲಿನ ಇನ್ನೊಂದು ದೊಡ್ಡ ಚೂರು ಹೊರಗೆ ಜೂಲಿಯಸ್ ಮೆಕಿನ್ನೆ ಎಂಬ ರೈತನಿಗೂ ಸಿಕ್ಕಿತ್ತು. ಸ್ಮಿತ್‍ಸೋನಿಯನ್ ಸಂಸ್ಥೆ ಆತನಿಂದ ಆ ಚೂರನ್ನು ಖರೀದಿಸಿ ತನ್ನ ಅಪರೂಪದ ಸಂಗ್ರಹಕ್ಕೆ ಸೇರಿಸಿತು. ಮೆಕಿನ್ನೆ ತನಗೆ ಸಿಕ್ಕ ರೊಕ್ಕದಲ್ಲಿ ಒಂದು ಮನೆ ಮತ್ತು ಕಾರನ್ನು ಖರೀದಿಸುವುದು ಸಾಧ್ಯವಾಯಿತು. ಅಗಸದಿಂದ ಬಿದ್ದ ಉಲ್ಕೆಕಲ್ಲು ಹಾಡ್ಜಸ್‍ಗೆ 500 ಡಾಲರ್ ಮತ್ತು ಚಿಕಿತ್ಸೆಯ ಲುಕ್ಸಾನು ತಂದರೆ, ಮೆಕಿನ್ನೆಗೆ ಕಾರು, ಮನೆಗಳ ಫಾಯಿದೆಯನ್ನೆ ತೆರೆದಿತ್ತು.

ಅಬ್ಬಾ! ಗಾಢನಿದ್ದೆಯಿಂದ ನಮ್ಮನ್ನು ಎಬ್ಬಿಸಲು ಏನೆಲ್ಲಾ ಕಾರಣಗಳಿವೆ ನಾವಿರುವ ಈ ವಿಶ್ವದಲ್ಲಿ, ಅಲ್ಲವೆ?

2025ರ ಜೂನ್ 26ರಂದು ಅಮೆರಿಕಾದ ಜಾರ್ಜಿಯ ರಾಜ್ಯದ ಮೆಕ್ದೊನಾಹ್ ಎಂಬ ಕೌಂಟಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಮನೆಯ ಚಾವಣಿಯಲ್ಲಿ ಒಂದು ಕಂಡಿ ಮಾಡಿ ಬಿದ್ದ 23 ಗ್ರಾಮ್ ತೂಕದ ಉಲ್ಕೆಕಲ್ಲು ಇನ್ನೂ ಒಂದು ಕಾರಣಕ್ಕೆ ಅಪೂರ್ವ ದಾಖಲೆ ಬರೆದಿದೆ. ಅದು 456 ಕೋಟಿ ವರುಷಗಳಷ್ಟು ಹಿಂದಿನದು. ನಮ್ಮ ಭೂಮಿಗಿಂತ ಏನಿಲ್ಲವೆಂದರೂ 200 ಲಕ್ಷ ವರುಷಗಳಷ್ಟು ಹಳೆಯದು! ಭೂಮಿಯ ಮೇಲಿರುವ ಅತಿ ಹಳೆಯ ವಸ್ತು ಅಂತ ಏನಾದರೂ ಇದ್ದರೆ ಸಧ್ಯಕ್ಕೆ ಈ ಉಲ್ಕೆಕಲ್ಲೆ. ‘ಮೆಕ್ದೊನಾಹ್ ಉಲ್ಕೆಕಲ್ಲು’ ಎಂದು ಹೆಸರಾಗಿರುವ ಅದು ಮಂಗಳ ಗ್ರಹದಾಚೆ 500 ಕೋಟಿ ವರುಷಗಳ ಹಿಂದೆ ಇದ್ದ ಉಲ್ಕೆಯೊಂದರಿಂದ ಬೇರ್ಪಟ್ಟ ಮೂರಡಿ ಉದ್ದದ ತುಣುಕೊಂದರ ತುಣುಕು ಎಂದು ಜಾರ್ಜಿಯ ಯೂನಿವರ್ಸಿಟಿಯ ಜಿಯಾಲಜಿ ವಿಭಾಗದ ಸಂಶೋಧಕ ಸ್ಕಾಟ್ ಹ್ಯಾರಿಸ್ ಮಾಹಿತಿ ನೀಡಿದ್ದಾರೆ. ಮೆಕ್ದೊನಾಹ್ ತುಣುಕಿಗೆ ಜನ್ಮಕೊಟ್ಟ ಮೂಲ ತುಣುಕು ಭೂಮಿಯ ವಾತಾವರಣದಲ್ಲಿ ತಾಸಿಗೆ 47,000 ಕಿ.ಮೀ. ಒತ್ತರದಲ್ಲಿ ಚಲಿಸಿ ಬಂದಿತ್ತಂತೆ. ಇದು ಕೂಡ ಕಾಂಡ್ರೈಟ್ ಪಂಗಡಕ್ಕೆ ಸೇರಿದ ಕಲ್ಲು.

                                       ***

1908ರಲ್ಲಿ ಸೈಬೀರಿಯಾದ ತುಂಗುಸ್ಕದಲ್ಲಿ ಉಲ್ಕೆಯೊಂದು 5-10 ಕಿ.ಮೀ ಎತ್ತರದ ಆಗಸದಲ್ಲೆ ಸಿಡಿದು ಅದರ ತಾಪದಲೆಗಳಿಗೆ 2,000 ಚದರ ಕಿ.ಮೀ. ವಿಸ್ತಾರದ ಪೈನ್ ಕಾಡು ಸುಟ್ಟು ಹೋಗಿದ್ದಲ್ಲದೆ ಮೂವರ ಸಾವಿಗೂ ಷರಾ ಬರೆದಿತ್ತು. ಇದರ ಸಿಡಿತ 15 ಲಕ್ಷ ಟನ್ ತೂಕದ ಟಿಎನ್‍ಟಿ ಸಿಡಿತಕ್ಕೆ ಸಮವಾಗಿತ್ತು. ಹಿರೊಶಿಮಾದ ಮೇಲೆ ಎಸೆದ ಅಣುಬಾಂಬಿಗಿಂತಲೂ ಸಾವಿರ ಪಟ್ಟು ಹೆಚ್ಚು ಪ್ರಬಲವಾಗಿತ್ತು. 1992ರಲ್ಲಿ ಉಗಾಂಡದ ಎಂಬೆಲೆಯಲ್ಲಿ ಬಿದ್ದ ಉಲ್ಕೆಕಲ್ಲಿನ ಹಲವು ತುಣುಕುಗಳಲ್ಲಿ ಒಂದು ಮರಕ್ಕೆ ಅಪ್ಪಳಿಸಿ ಅಲ್ಲಿಂದ ಪುಟಿದು ಕೆಳಗಿದ್ದ ಬಾಲಕನೊಬ್ಬನ ತಲೆಯ ಮೇಲೇ ಬಿದ್ದಿತ್ತು. ಸಧ್ಯ ಆ ಬಾಲಕನ ಜೀವಕ್ಕೇನೂ ಹಾನಿ ಆಗಲಿಲ್ಲ.

ಹೀಗೆ ಉಲ್ಕೆಗಳು ಮನುಷ್ಯರನ್ನು ನೇರ ತಟ್ಟಿದ ಉದಾಹರಣೆಗಳು ಕಡಿಮೆಯಿದ್ದರು ನಮ್ಮ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿವೆ.                                                                

ಟೋಬಿ ನಾಯಿಗೂ ಒಲಿದ ಉಲ್ಕೆ ಕಲ್ಲಿನ ಒಡನಾಟ

ಪ್ರತೀದಿನವೂ ಉಲ್ಕೆಗಳು ಭೂಮಿಯ ಕಡೆ ಬೀಳುತ್ತವೆ. ಬಹುಪಾಲು ನೆಲ ತಲುಪುವ ಮೊದಲೇ ವಾತಾವರಣದಲ್ಲಿರುವ ಗಾಳಿಯ ಅಣುಗಳ ಜೊತೆ ತಿಕ್ಕಾಡಿ ಪೂರ್ತಿ ಉರಿದು ಹೋಗುತ್ತವೆ. ತಲುಪಿದಂತಹವು ಗಟ್ಟಿ ಕಲ್ಲಾಗಿ ಉಳಿಯುತ್ತವೆ. ಭೂವಾತಾವರಣದಲ್ಲಿ ಉರಿಯುತ್ತ ಚಲಿಸುವಾಗ ಉಲ್ಕೆ (Meteorite) ಎಂದು ಕರೆಸಿಕೊಳ್ಳುವ ಈ ಆಗಸದ ಅತಿಥಿ ನೆಲಕ್ಕೆ ಬಿದ್ದು ಕಲ್ಲನ್ನು ಉಳಿಸಿದರೆ ಉಲ್ಕೆಕಲ್ಲು (Meteorite) ಎನಿಸಿಕೊಳ್ಳುತ್ತದೆ.

ಉಲ್ಕೆಗಳು ಎಲ್ಲಿಂದ ಬರುತ್ತವೆ?

ಭೂಮಿಯ ಮೇಲೇ ಇರುವ ನಮಗೆ ಅವು ನಮ್ಮ ಬರಿಗಣ್ಣಿಗೆ ಕಾಣಿಸುವಷ್ಟು ಹರಹಿನ ಆಗಸದಿಂದ ಬರುತ್ತವೆ ಎಂದು ಅನಿಸುತ್ತದೆ. ನಿಜಕ್ಕೂ ಅವು ಭೂವಾತಾವರಣದ ಹೊರ ಆಗಸದಿಂದ ಬರುತ್ತವೆ. ಇನ್ನೂ ಬಿಡಿಸಿ ಹೇಳುವುದಾದರೆ ಭೂಮಿಯ ಗುರುತ್ವಬಲದ ಮಿತಿಯಾಚೆಯಿಂದ ಬರುತ್ತವೆ. ತಮ್ಮಷ್ಟಕ್ಕೆ ಚಲಿಸಿಕೊಂಡಿರುವ ಅವು ಒಂದೊಮ್ಮೆ ಭೂಮಿಯ ಗುರುತ್ವಬಲದ ಹಿಡಿತಕ್ಕೆ ಸಿಕ್ಕಿಬಿದ್ದರೆ ಭೂಮಿಯ ಕಡೆ ಬೀಳತೊಡಗುತ್ತವೆ. ಅಲ್ಲಿಗೆ ಅವುಗಳ ಇರುವಿಕೆ ಕೊನೆಗೊಂಡಂತೆ. ಉಲ್ಕೆಗಳು ಭೂಮಿಗೇ ಬೀಳಬೇಕೆಂದಿಲ್ಲ, ಯಾವುದೇ ಗ್ರಹ ಅಥವಾ ಉಪಗ್ರಹದ ಗುರುತ್ವ ಸೆಳೆತಕ್ಕೆ ಸಿಲುಕಿ ಅವುಗಳ ಮೇಲೂ ಅಪ್ಪಳಿಸಬಹುದು. ನಮ್ಮ ಚಂದ್ರನ ಮೇಲುಮೈ ಉಲ್ಕೆಗಳು ಬಿದ್ದು ಬಿದ್ದು ಲೆಕ್ಕವಿಲ್ಲದಷ್ಟು ಕುಳಿಗಳಿಂದ ತುಂಬಿಹೋಗಿದೆ. ಚಂದ್ರನಿಗೆ ವಾತಾವರಣವಿಲ್ಲ. ಇದ್ದಿದ್ದರೆ ಬಹಳಷ್ಟು ಉಲ್ಕೆಗಳು ಚಂದ್ರನ ಆಗಸದಲ್ಲೆ ಉರಿದುಹೋಗಿ ಬಿಡುತ್ತಿದ್ದವು. ಹೀಗಾಗಿ ಚಂದ್ರನ ಗುರುತ್ವಬಲಕ್ಕೆ ಸಿಕ್ಕುವ ಪ್ರತೀ ಉಲ್ಕೆಯೂ ಚಂದ್ರನ ನೆಲ ತಲುಪಿಯೇ ತಲುಪುತ್ತದೆ.

ಉಲ್ಕೆಗಳ ಮೂಲ ಎಲ್ಲಿದೆ?

ಉಲ್ಕೆಗಳ ದೊಡ್ಡ ಮೂಲ ಮಂಗಳ ಮತ್ತು ಗುರು ಗ್ರಹಗಳ ನಡುವಿರುವ ಸಣ್ಣದೊಡ್ಡ ಆಸ್ಟರಾಯಿಡ್‍ಗಳ ಪಟ್ಟಿಯಾಗಿದೆ. ಆಸ್ಟರಾಯಿಡ್‍ಗಳು ಸೌರವ್ಯೂಹ ಹುಟ್ಟಿದಾಗಲೆ ಹುಟ್ಟಿದಂತಹವು. ಎಲ್ಲವೂ ಸೇರಿ ದೊಡ್ಡ ಗ್ರಹಗಳಾಗುವಲ್ಲಿ ವಿಫಲಗೊಂಡಂತಹವು. ಒಮ್ಮೊಮ್ಮೆ ಯಾವುದಾದರೂ ಹೊರಗಿನ ಕಾರಣಕ್ಕೆ ಅವು ತಮ್ಮ ಕಕ್ಷೆಯಿಂದ ಆಚೀಚೆ ಸರಿದು ಸೌರವ್ಯೂಹದ ದೊಡ್ಡ ಗ್ರಹಗಳ ಗುರುತ್ವ ಬಲಕ್ಕೆ ಸಿಕ್ಕಿ ಉಲ್ಕೆಗಳಾಗಿ ಬಿಡುತ್ತವೆ. ಕೆಲವೊಮ್ಮೆ ಆಸ್ಟರಾಯಿಡ್‍ಗಳ ನಡುವೆಯೆ ಡಿಕ್ಕಿ ಸಂಭವಿಸಿ ಚೂರುಗಳು ಸಿಡಿಯುವುದುಂಟು. ಆ ಚೂರುಗಳು ಡಿಕ್ಕಿಯ ವೇಳೆ ತಾವು ಪಡೆದ ಒತ್ತರಕ್ಕೆ ಅನುಗುಣವಾಗಿ ಪಟ್ಟಿಯಿಂದ ದೂರ ಸಿಡಿದು ಉಲ್ಕೆಗಳಾಗುವುದೂ ಉಂಟು. 460 ಕೋಟಿ ವರುಷಗಳ ಹಿಂದೆ ಸೌರವ್ಯೂಹದ ಗ್ರಹಗಳು ಹಾಗೂ ಅವುಗಳ ಉಪಗ್ರಹಗಳು ಒಂದಕ್ಕೊಂದು ಡಿಕ್ಕಿ ಹೊಡೆದು, ಉಜ್ಜಿ ರೂಪುಗೊಳ್ಳುವಾಗ ಆಸ್ಟರಾಯಿಡ್‍ಗಳ ಪಟ್ಟಿಯ ಭಾಗವಾಗದೆ ಬೇರ್ಪಟ್ಟ ಲಕ್ಷಾಂತರ ದೊಡ್ಡ ಕಲ್ಲುಗಳು ಮತ್ತು ಲೋಹದ ತುಣುಕುಗಳು ಕಿತ್ತೆದ್ದು ಹೊರ ಹಾರಿ ದಿಕ್ಕಾಪಾಲಾಗಿ ಚಲಿಸುತ್ತ ಉಲ್ಕೆಗಳಾಗಿ ಬೀಳುತ್ತವೆ. ರೂಥ್ ಹ್ಯಾಮಿಲ್ಟನ್ ಅವರ ದಿಂಬಿನ ಮೇಲೆ ಬಿದ್ದ ಉಲ್ಕೆಕಲ್ಲು ಬಂದದ್ದು ಈ ಬಗೆಯ ಉಲ್ಕೆಯಿಂದ. ಚಂದ್ರನ ಮೇಲುಮೈ ಮೇಲೆ ಬಲುದೊಡ್ಡ ಗಾತ್ರದ ಉಲ್ಕೆಕಲ್ಲುಗಳು ಬಿದ್ದ ಹೊಡೆತಕ್ಕೆ ಚಂದ್ರನ ನೆಲದ ಕಲ್ಲುಮಣ್ಣಿನ ತುಣುಕುಗಳೇ ಕಿತ್ತುಹೋಗಿ ಚಂದ್ರನ ಗುರುತ್ವಬಲದಿಂದ ತಪ್ಪಿಸಿಕೊಳ್ಳುವಷ್ಟು ದೂರ ಹೊರ ಆಗಸಕ್ಕೆ ಚಿಮ್ಮಿ ಎರಡನೆ ಹಂತದ ಉಲ್ಕೆಗಳಾಗಿ ಬೇರೆಡೆ ಹೋಗಿ ಬೀಳುವುದುಂಟು. ಮತ್ತೆ ಕೆಲವು ಉಲ್ಕೆಗಳಿಗೆ ಧೂಮಕೇತುಗಳು ಜನ್ಮ ಕೊಡುವುದೂ ಉಂಟು.

ಉಲ್ಕೆಗೂ ಗಾಳಿಗೂ ಆಗಿಬರುವುದಿಲ್ಲ

ಪ್ರತೀ ತಿಂಗಳು ಸರಾಸರಿ 41 ಉಲ್ಕೆಗಳು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತವೆ. ನೆಲ ತಲುಪುವುದು ಮಾತ್ರ ಸಾವಿರ ಕೋಟಿಯಲ್ಲಿ ಒಂದು ಉಲ್ಕೆ ಅಷ್ಟೆ! ಅಕಸ್ಮಾತ್ ಎಲ್ಲ ಉಲ್ಕೆಗಳು ನೆಲಕ್ಕಪ್ಪಳಿಸುವಂತಿದ್ದರೆ…ಅಬ್ಬಾ! ಸಧ್ಯ, ವಾತಾವರಣಕ್ಕೆ ಥ್ಯಾಂಕ್ಸ್ ಹೇಳೋಣ. ಒಮ್ಮೊಮ್ಮೆ ವಾತಾವರಣದ ಜೊತೆಗಿನ ತಿಕ್ಕಾಟದಲ್ಲಿ ಉಲ್ಕೆಯೊಂದು ಹಲವು ತುಣುಕುಗಳಾಗಿ ಒಡೆದು ಹಲವು ಬೆಂಕಿಗೆರೆಗಳನ್ನು ಮೂಡಿಸುತ್ತ ಬೀಳುತ್ತದೆ. ಹೀಗೆ ಬೀಳುವುದನ್ನು ‘ಉಲ್ಕೆಯ ಮಳೆ’ ಎನ್ನುತ್ತಾರೆ.

ಜನರ ಸಾಮಾನ್ಯ ಆಡುನುಡಿಯಲ್ಲಿ ‘ಬೀಳುವ ನಕ್ಷತ್ರ’ ಎಂಬ ವಿವರಣೆ ಪಡೆದಿರುವ ಉಲ್ಕೆಗಳ ಅಧ್ಯಯನ ಖಗೋಳ ವಿಜ್ಞಾನದ ಸ್ವಾರಸ್ಯಕರ ವಿಷಯಗಳಲ್ಲೊಂದು. ನನಗೂ ಒಮ್ಮೆಯಾದರೂ ಬಿಸಿಬಿಸಿ ಉಲ್ಕೆಕಲ್ಲು ನನ್ನೆದುರು ಬೀಳುವಂತಹ ಗಳಿಗೆಗೆ ಮುಖಾಮುಖಿಯಾಗಬೇಕು ಎಂಬ ಮಹತ್ತರ ಆಸೆಯಿದೆ. ಆದರೆ ಆ ಉಲ್ಕೆಕಲ್ಲು ನನ್ನನ್ನು ಗಾಯಗೊಳಿಸಬಾರದು ಇಲ್ಲವೆ ಜೀವಕ್ಕೆ ಕುತ್ತು ತರಬಾರದು. ಹೇಗೆ ‘ಹಾಡ್ಜಸ್ ಉಲ್ಕೆಕಲ್ಲು’ ಹೆಸರು ಮಾಡಿದೆಯೊ ಹಾಗೆ ‘ರವಿ ಉಲ್ಕೆಕಲ್ಲು’ ಎಂಬ ದಾಖಲೆ ಸೃಷ್ಟಿಯಾಗುವುದಾದರೆ ಬೇಡವೆನ್ನಲೆ?. ನಗು ಬಂತೇ?                  ***

(ಮೂಲಬರಹ ಮುಗಿದ ತಾರೀಕು 13.05.2023, ಹೆಚ್ಚುವರಿ ಮಾಹಿತಿ ಪಡೆದ ತಾರೀಕು 30.08.2025). ಆಗಸ್ಟ್ 2023ರ ಬಾಲವಿಜ್ಞಾನದಲ್ಲಿ ಪ್ರಕಟಿತ.

ಕೆ.ಎಸ್.ರವಿಕುಮಾರ್

ವಿಜ್ಞಾನ ಲೇಖಕರು

ಭಾರತೀಯ ಜೀವ ವಿಮಾ ನಿಗಮ,

ಮೊ : 99646 04297 / 89510 55154

More articles

Latest article