2028ರಲ್ಲಿ ನಾನು ಕೂಡ ಮುಖ್ಯಮಂತ್ರಿ ಆಗುತ್ತೇನೆ. ಚುನಾವಣೆ ನೋಡಿಕೊಂಡು ಹಕ್ಕು ಮಂಡಿಸುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, “2028ರಲ್ಲಿ ನಾನು ಕೂಡ ಮುಖ್ಯಮಂತ್ರಿ ಆಗುತ್ತೇನೆ. ಆಗಿನ ಚುನಾವಣೆ ಫಲಿತಾಂಶದ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಚಲಾವಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈಗ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದುಹೋಗಿರುವ ವಿಷಯ. ಸಿಎಂ ಬದಲಾವಣೆ ವಿಚಾರವು ಹೈಕಮಾಂಡ್ ತೀರ್ಮಾನವಾಗಿದೆ. ಡಿಸಿಎಂಗಳ ವಿಚಾರವೂ ಚುನಾವಣೆಗೆ ಮೊದಲು ಕೇಳಿಬಂದಿತ್ತು. ಈಗ ಮಾಡಬೇಕಾ, ಬೇಡವಾ ಎಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರದ ಬಗ್ಗೆ ಸಮುದಾಯಗಳ ಸ್ವಾಮೀಜಿಗಳು ನಾಯಕರ ಹೆಸರನ್ನು ಸೂಚಿಸಿ, ಇವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರು, ಸಚಿವರು ಕೂಡ ಪರ ವಿರೋಧ ಲಾಬಿ ಮಾಡುತ್ತಿದ್ದಾರೆ.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಕೆಲ ದಿನಗಳ ಹಿಂದೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆಯೇ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಎಂದು ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಿದ್ದರು. ಇದಾದ ಬೆನ್ನಲ್ಲೇ ಸಿಎಂ ಕುರ್ಚಿಗೆ ಲಾಬಿ ಆರಂಭವಾಗಿದೆ.