ಹೊಸ ವರ್ಷಾಚರಣೆ; ಲಾಡ್ಜ್, ಮತ್ತು ರೆಸ್ಟೋರೆಂಟ್ ಪರಿಶೀಲನೆ; ಅಪಾರ ಪ್ರಮಾಣದ ಡ್ರಗ್ಸ್‌ ಜಪ್ತಿ

Most read

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಲಾಡ್ಜ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಎಚ್ಚರ ವಹಿಸಿದ್ದಾರೆ ಮತ್ತು ಡ್ರಗ್ಸ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ 380 ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ, ಆರೋಪಿಗಳ ಮನೆಯಲ್ಲಿ ತಪಾಸಣೆ ಮಾಡಲಾಗಿದೆ. 1630 ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ರೌಡಿಗಳನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ. ಎಂಒಬಿ (ಅಪರಾಧ ಹಿನ್ನಲೆಯುಳ್ಳವರು) ಅನ್ನೂ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವೀಸಾ ಅವಧಿ ಮುಗಿದರೂ ಕೆಲವರು ನಗರದಲ್ಲೇ ವಾಸವಾಗಿರುವ ವಿದೇಶಿ ಪ್ರಜೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 29 ಮಂದಿ ವಿದೇಶಿಗರನ್ನು ಎಫ್ಆರ್‌ಆರ್‌ಓ (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ಮುಂದೆ ಹಾಜರು ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಮಾದಕ ವಸ್ತು ಸಾಗಟ ಜಾಲಗಳ ಪತ್ತೆ ಹಚ್ಚಿ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಹೊಸ ವರ್ಷಾಚರಣೆಗೆ ಟನ್‌ ಗಟ್ಟಲೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ ಆರೋಪಿಗಳಿಂದ 3.25 ಕೋಟಿ ರೂ. ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ರೂ. 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಇವರು ಹೊಸ ವರ್ಷ ಆಚರಣೆಗೆ ಮಾರಾಟ ಮಾಡಲು ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದರು. ದಾಳಿ ವೇಳೆ, 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಜಪ್ತಿ ಮಾಡಲಾಗಿದೆ ಎಂದು ವಿವರ ನೀಡಿದರು.

More articles

Latest article