ರಾಂಚಿ: ಜಾರ್ಖಂಡ್ ನ ರಾಜ್ಯಪಾಲರಾದ ಸಿ ಪಿ ರಾಧಾಕೃಷ್ಣನ್ ಅವರು ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೆನ್ ಅವರಿಗೆ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದಾರೆ.
ಜಾರ್ಖಂಡ್ ರಾಜಭವನದ ದರ್ಬಾರ್ ಹಾಲ್‌ನಲ್ಲಿ ಮಧ್ಯಾಹ್ನ 12.15ರ ಸುಮಾರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರಾಜಭವನ್ ಅಧಿಕಾರಿಗಳು ತಿಳಿಸಿದ್ದಾರೆ. ಚಂಪೈ ಸೊರೆನ್ ಅವರು ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ನಾಮನಿರ್ದೇಶನಗೊಂಡ ನಂತರ ಅವರು ಸರ್ಕಾರ ರಚನೆಗೆ ಅನುಮತಿ ನೀಡಲು ರಾಜ್ಯಪಾಲರನ್ನು ಒತ್ತಾಯಿಸಿದ್ದರು.
ಈ ಹಿಂದೆ ಇದ್ದ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬುಧವಾರ ರಾಜೀನಾಮೆ ಕೊಟ್ಟಿದ್ದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚಿದೆ.
ಜೆಎಂಎಂ ಪಕ್ಷದ ಚಂಪೈ ಸೊರೆನ್ ಅವರು ಸರ್ಕಾರದ ಬಹುಮತವನ್ನು ಸಾಬೀತುಪಡಿಸಲು 10 ದಿನಗಳ ಕಾಲಾವಕಾಶ ರಾಜ್ಯಪಾಲರು ನೀಡಿದ್ದಾರೆ ಎಂದು ರಾಜ್ಯ ಮೈತ್ರಿಕೂಟ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಠಾಕೂರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಈ ಹೇಳಿಕೆಯಿಂದ ಚಂಪೈ ಸೊರೆನ್ “ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ನಮ್ಮ ಮೈತ್ರಿ ತುಂಬಾ ಪ್ರಬಲವಾಗಿದೆ. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ” ಪ್ರತಿಕ್ರಿಯಿಸಿದ್ದಾರೆ.
ಭೂ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿದ್ದ ಹೇಮಂತ್ ಸೊರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ಜಾರಿ ನಿರ್ದೇಶನಾಲಯ ಬಂಧಿಸಿದೆ.