ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್ ಮಾಡಿ ಅವರ ಬೆರಳ ತುದಿಗಳು ಬಹುತೇಕ ಸವೆದೇ ಹೋಗಿವೆ. ಆದರೆ ಸಂತೃಪ್ತಿ ಮತ್ತು ಮನಃಶ್ಶಾಂತಿ ಮಾತ್ರ ಇಲ್ಲವೆಂಬಷ್ಟು ನಗಣ್ಯ – ಪ್ರಸಾದ್ ನಾಯ್ಕ್, ದೆಹಲಿ
ಅರಿಸ್ಟಾಟಲ್ ನನಗೆ ಬಹಳ ಹಳೆಯ ಪರಿಚಯ.
ನನಗೇನು? ಪ್ರಾಥಮಿಕ ಹಂತದ ಶಾಲೆ ಅಥವಾ ಒಂದಿಷ್ಟು ಓದಿನ ರುಚಿಯಿದ್ದವರಿಗೂ ಆತ ಪರಿಚಿತನೇ. ಮನುಷ್ಯ ಓರ್ವ ಸಾಮಾಜಿಕ ಪ್ರಾಣಿ ಎಂದಿದ್ದನಂತೆ ಅರಿಸ್ಟಾಟಲ್. ಈ ಮಾತಿನ ಪ್ರಕಾರ ಮನುಷ್ಯರಾದ ನಾವೆಲ್ಲ ಒಂದು ಬಗೆಯ ಪ್ರಾಣಿಯಾದರೂ ಬೇರೆ ಪ್ರಾಣಿಗಳಿಗಿಂತ ಕೊಂಚ ಭಿನ್ನರು. ಲಕ್ಷಗಟ್ಟಲೆ ವರ್ಷಗಳ ವಿಕಾಸವಾದವು ನಮ್ಮ ಮೇಲೆ ಸಾಕಷ್ಟು ಧಾರಾಳ ದಯೆ ತೋರಿ ಮಾನವನು ಬೇರೆಲ್ಲಾ ಪ್ರಜಾತಿಗಳಿಗಿಂತ ಹೆಚ್ಚು ವಿಕಸಿತರಾಗುವಂತೆ ಮಾಡಿದೆ. ನಮಗಿದು ಒಂದರೆಕ್ಷಣ ವಿಶಿಷ್ಟವೆಂಬಂತೆ ಕಂಡರೂ, ಅದು ಪ್ರಕೃತಿಯ ಸೃಷ್ಟಿ-ಸ್ಥಿತಿ-ಲಯಗಳ ಚಕ್ರಕ್ಕೆ ಒಂದು ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ ಮಾನವನು ತಾನು ಉಳಿದ ಪ್ರಜಾತಿಗಳಿಗಿಂತ ವಿಶಿಷ್ಟ ಮತ್ತು ಉತ್ಕೃಷ್ಟವೆಂಬ ಕಿರೀಟವನ್ನು ತನಗೆ ತಾನೇ ನೀಡಿರುವುದರಲ್ಲಿ ಸಂದೇಹವಿಲ್ಲ.
ಹೀಗಿರುವ ಮಾನವನು ಸಾವನ್ನು ಗೆಲ್ಲುವುದಕ್ಕೆ ಹೊರಟು ವರ್ಷಗಳೇ ಕಳೆದಿವೆ. ಈ ಜಗತ್ತಿನ ಕೆಲವು ದೈತ್ಯ ಸಂಸ್ಥೆಗಳು ಸಾವು ಮತ್ತು ವಯಸ್ಸನ್ನು ಗೆಲ್ಲುವ ಮಹಾತ್ವಾಕಾಂಕ್ಷೆಯ ಯೋಜನೆಗಳ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಯೋಗಗಳನ್ನು ಮಾಡುತ್ತಿವೆ. ಈ ಸಂಶೋಧನೆಗಳಿಗೆ ಮಿಲಿಯನ್ ಗಟ್ಟಲೆ ಡಾಲರುಗಳನ್ನು ಕೂಡ ನೀರಿನಂತೆ ಸುರಿಯಲಾಗುತ್ತಿದೆ. ಸಾಮಾನ್ಯವಾಗಿ ಸರಾಸರಿ ಜೀವಿತಾವಧಿಗಿಂತ ಹೆಚ್ಚು ವರ್ಷಗಳ ಕಾಲ ಮತ್ತು ಸಂತೃಪ್ತರಾಗಿ ಬದುಕುವ ದೀರ್ಘಾಯುಷಿಗಳು ವಾಸವಾಗಿರುವ ಭೂಭಾಗವನ್ನು ಬ್ಲೂ-ಝೋನ್ ಎಂದು ಕರೆಯಲಾಗುತ್ತದೆ. ಜಪಾನಿನ ಒಕಿನಾವಾ ಮತ್ತು ಇಟಲಿಯಾ ಸಾರ್ಡೀನಿಯಾ ಪ್ರಾಂತ್ಯಗಳು ಈ ಕಾರಣದಿಂದಾಗಿಯೇ ಖ್ಯಾತಿಯನ್ನು ಗಳಿಸಿವೆ. ನಿಮ್ಮ ದೀರ್ಘಾಯುಷ್ಯದ ರಹಸ್ಯವೇನು ಎಂದು ಈ ಮಂದಿಯನ್ನು ಕೇಳಿದರೆ ಹಲವಾರು ಅಂಶಗಳನ್ನು ಇವರು ಪಟ್ಟಿ ಮಾಡಬಲ್ಲರು. ಆದರೆ ಇವೆಲ್ಲದರ ಒಟ್ಟು ಸಾರಾಂಶ ಮಾತ್ರ ಮೂರೇ: ಮಿತವಾದ ಊಟ, ಹಿತವಾದ ನಿದ್ದೆ ಮತ್ತು ಅರ್ಥಪೂರ್ಣ ಸಂಬಂಧಗಳು.
ಸಂಬಂಧಗಳೆಂದು ಹೇಳುವಾಗ ಬ್ಲೂ-ಝೋನಿನಲ್ಲಿರುವ ಈ ಶತಾಯುಷಿಗಳು ಹೇಳುವುದು ತಮ್ಮ ಕುಟುಂಬಸ್ಥರೊಂದಿಗೆ, ಹಿತೈಷಿಗಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಕಳೆಯುವ ಚಂದದ ಕ್ಷಣಗಳನ್ನು ಮತ್ತು ಅರ್ಥಪೂರ್ಣ ಮಾನವೀಯ ಸಂಬಂಧಗಳನ್ನು. ನಮ್ಮ ಹಿರಿಯರಿಗೆ ಹೋಲಿಸಿದರೆ ಮಾನವ ಇತಿಹಾಸದ ಬಹುದೊಡ್ಡ ಆವಿಷ್ಕಾರಗಳಲ್ಲೊಂದಾಗಿರುವ ಇಂಟರ್ನೆಟ್ ನನ್ನಂತಹ ಮಿಲೇನಿಯಲ್ (1980 – 1995 ರ ಮಧ್ಯೆ ಹುಟ್ಟಿದವರು) ಗಳ ಅವಧಿಯಲ್ಲಿ ಬಂದಿರುವುದರಿಂದ “ಇಂಟರ್ನೆಟ್ ಆಗಮನದ ಮೊದಲು” ಮತ್ತು “ಇಂಟರ್ನೆಟ್ ಆಗಮನದ ನಂತರ” ಎಂಬ ಎರಡು ಹಂತಗಳನ್ನು ಸ್ಥೂಲವಾಗಿ ವಿಭಾಗಿಸಬಹುದು. ಇನ್ನು ಸಂಬಂಧಗಳ ಬಗ್ಗೆ ಮಾತನಾಡುವಾಗ ಅಂತರ್ಜಾಲವನ್ನು ಹೆಸರಿಸುವುದು ಇಲ್ಲಿ ಯಾಕೆ ಮುಖ್ಯವಾಗುತ್ತದೆಂದರೆ, ಇಂದು ಸಂಬಂಧಗಳನ್ನು ರೂಪಿಸುವಲ್ಲಿ ಮತ್ತು ನಿಭಾಯಿಸುವಲ್ಲಿ ಇತರ ಸಂಗತಿಗಳಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು ಇಂಟರ್ನೆಟ್ ಕೂಡ ಪಡೆದಿದೆ.
ಇನ್ನು ಮಾನವ ಸಹಜ ಅವಶ್ಯಕತೆಯಾದ ಇವೇ ಸಂಬಂಧಗಳ ತಳಹದಿಯನ್ನು ಬಳಸಿಕೊಂಡು ಅಂತರ್ಜಾಲವು ಮಿಲಿಯನ್ ಗಟ್ಟಲೆ ಡಾಲರು ಮೌಲ್ಯದ ಮಾರುಕಟ್ಟೆಗೂ ಜನ್ಮ ನೀಡಿದೆ. ಡೇಟಿಂಗ್ ಮತ್ತು ಮ್ಯಾಟ್ರಿಮಾನಿಯಲ್ ಜಾಲತಾಣಗಳು ಇವುಗಳಿಗೊಂದು ಒಳ್ಳೆಯ ಉದಾಹರಣೆ. ಇನ್ನು ಇವೆರಡನ್ನು ಹೊರತುಪಡಿಸಿ ಹೊಸ ಸಂಬಂಧಗಳನ್ನು ರೂಪಿಸಿ ಕೊಳ್ಳುವುದಾದರೆ ಇಂದು ನೂರಾರು ಆನ್ಲೈನ್ ವೇದಿಕೆಗಳಿವೆ. ಹಲವು ಬಗೆಯ ಆಪ್ ಗಳಿವೆ. ಹಿಂದೆ ಪಶ್ಚಿಮದ ದೇಶಗಳಲ್ಲಷ್ಟೇ ಸೀಮಿತವಾಗಿದ್ದ ಬ್ಲೈಂಡ್ ಡೇಟ್ ಪರಿಕಲ್ಪನೆಗಳು ಭಾರತದ ಬಹುತೇಕ ಮೆಟ್ರೋ ಸಿಟಿಗಳಲ್ಲಿ ಈಗಾಗಲೇ ಸಾಂಸ್ಥಿಕ ರೂಪವನ್ನು ಪಡೆದುಕೊಂಡು ಸಕ್ರಿಯವಾಗಿವೆ. ಸಾಮಾಜಿಕ ನೆಲೆಯಲ್ಲಿ ಇವುಗಳ ಪ್ರಸ್ತುತತೆಯು ಚರ್ಚಾಸ್ಪದ ಅಂಶವಾಗಿದ್ದರೂ, ಕಳೆದ ಒಂದೂವರೆ ದಶಕದಲ್ಲಿ ಈ ಬಗೆಯ ಸಂಗತಿಗಳಿಗೊಂದು ವಿಪರೀತ ವೇಗ ಸಿಕ್ಕಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹಾಗೆ ನೋಡಿದರೆ ಇಷ್ಟೆಲ್ಲಾ ಅವಕಾಶಗಳಿದ್ದಾಗ ಮಿಲೇನಿಯಲ್ಸ್ (1980 – 1995 ರ ಮಧ್ಯೆ ಹುಟ್ಟಿದವರು) ಮತ್ತು ಜನರೇಷನ್ ಝೀ / ಜೆನ್-ಝೀ (1996 – 2000 ದ ಆರಂಭಿಕ ವರ್ಷಗಳಲ್ಲಿ ಹುಟ್ಟಿದವರು) ಮಂದಿಗೆ ಒಂದೊಳ್ಳೆಯ ಸಾಮಾಜಿಕ ಜೀವನವು ನಸೀಬಾಗಬೇಕಿತ್ತು. ಆದರೆ ಅದು ಹಾಗಿಲ್ಲ ಎಂಬುದು ನಮಗೆ ತಿಳಿದಿದೆ. ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್ ಮಾಡಿ ಅವರ ಬೆರಳ ತುದಿಗಳು ಬಹುತೇಕ ಸವೆದೇಹೋಗಿವೆ. ಆದರೆ ಸಂತೃಪ್ತಿ ಮತ್ತು ಮನಃಶ್ಶಾಂತಿ ಮಾತ್ರ ಇಲ್ಲವೆಂಬಷ್ಟು ನಗಣ್ಯ.
ನಾವು ಭಾರತೀಯರು ಯಾವುದೇ ಆನ್ಲೈನ್ ವೇದಿಕೆಯನ್ನು ಡೇಟಿಂಗ್ ವೇದಿಕೆಯಾಗಿ ಪರಿವರ್ತಿಸಬಲ್ಲವರು ಎಂದು ನಾನು ತಮಾಷೆಯಾಗಿ ಹೇಳುತ್ತಿರುತ್ತೇನೆ. ಇತ್ತೀಚಿನ ಯುವಜನರಿಗೆ, ಅದರಲ್ಲೂ ಜೆನ್-ಝೀ ಮಂದಿಗೆ ಹೊಸ ವ್ಯಕ್ತಿಗಳನ್ನು ಮುಖತಃ ಭೇಟಿ ಮಾಡಿ ಒಡನಾಡುವುದಕ್ಕಿಂತ, ಅವರೊಂದಿಗೆ ವರ್ಚುವಲ್ ರೂಪದಲ್ಲಿ ವ್ಯವಹರಿಸುವುದೇ ಇಷ್ಟವಂತೆ. ನೈಜ ಒಡನಾಟಗಳಲ್ಲಿ ಎದುರಾಗುವ ಸವಾಲುಗಳಿಂದ ಈ ವರ್ಗದ ಮಂದಿ ಪಲಾಯನ ಮಾಡುವುದೇ ಇದರ ಹಿಂದಿನ ಕಾರಣವೆಂಬುದು ಒಂದು ಜನಪ್ರಿಯ ವಾದ. ಅಚ್ಚರಿಯೆಂದರೆ ಈ ವರ್ಗದ ಬಹಳಷ್ಟು ಮಂದಿ ಇದನ್ನು ಒಪ್ಪುತ್ತಾರೆ ಕೂಡ. ಹೀಗಾಗಿ ವ್ಯವಸ್ಥಿತವಾದ ಕೆಲ ಸಿದ್ಧಮಾದರಿಯ ಹೆಜ್ಜೆಗಳೊಂದಿಗೆ ತಮ್ಮ ಬಗೆಗಿನ ಕೃತಕ ಡಿಜಿಟಲ್ ಇಮೇಜನ್ನು ಇತರರಿಗಾಗಿ ಕಟ್ಟಿಕೊಡುವುದರಲ್ಲೇ ಅವರು ತೃಪ್ತರು.
ಇದರಿಂದಾಗಿ ತಾವು ಹಲವು ಜನರೊಂದಿಗೆ ಸತತ ಸಂಪರ್ಕದಲ್ಲಿದ್ದರೂ ನೈಜ ಒಡನಾಟಗಳ ಅಸಲಿ ಅನುಭೂತಿಯು ಅವರಿಗೆ ಸಿಗುತ್ತಲೇ ಇಲ್ಲ. ಜೊತೆಗೇ ಒಬ್ಬಂಟಿನವೆಂಬ ಅವರ ತಳವಿಲ್ಲದ ಮಡಕೆಯೂ ಈಗ ತುಂಬುತ್ತಿಲ್ಲ. ಹೊಸ ಭೇಟಿಗಳಲ್ಲಿ ಆಗುವ ಸಾಮಾನ್ಯ ಎಡವಟ್ಟುಗಳು, ಚಿಕ್ಕಪುಟ್ಟ ಫಜೀತಿಗಳು, ಅದರಿಂದಾಗುವ ಕಲಿಕೆ, ಹೆಚ್ಚುವ ಜೀವನಾನುಭವ… ಇವೆಲ್ಲದಕ್ಕೆ ಬೆನ್ನು ಹಾಕಿ ಜೆನ್-ಝೀ ಪೀಳಿಗೆಯು ಓಡುತ್ತಿದೆ ಎನ್ನುವ ಮಾತಿದೆ. ಒಡನಾಟಗಳ ವಿಷಯದಲ್ಲಿ ಪುಟ್ಟ ಸೋಲುಗಳೂ ಇವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ದೊಡ್ಡದಾಗಿ ಕಾಣುತ್ತಿವೆ. ಸಂಬಂಧಗಳು ಕೈಯಳತೆಯ ದೂರದಲ್ಲಿರುವಂತೆ ಕಂಡರೂ, ಕೈಗೆ ಸಿಗದ ಓಯಸಿಸ್ ನಂತೆ ಸತಾಯಿಸುತ್ತವೆ. ಇಂದು ಉದ್ದೇಶಪೂರ್ವಕವಾಗಿ ಅನಾಮಿಕರಾಗಿಯೇ ಉಳಿದಿರುವ, ನಕಲಿ ಆನ್ಲೈನ್ ಖಾತೆಗಳಲ್ಲಿ ಆರ್ಭಟಿಸುವ ಸಾವಿರಾರು ಮಂದಿ ತಮ್ಮೆಲ್ಲ ಶಕ್ತಿಯನ್ನು ಟ್ರೋಲಿಂಗ್ ನಂತಹ ಅನವಶ್ಯಕ ಚಟುವಟಿಕೆಗಳಲ್ಲಿ ವ್ಯಯಿಸುತ್ತಿರುವುದು ಗಮನಾರ್ಹ ಅಂಶ.
ಅಸಲಿಗೆ ನಮ್ಮ ಪೀಳಿಗೆಯ ಇಂತಹ ಸೂಕ್ಷ್ಮ ದೌರ್ಬಲ್ಯಗಳು ಕೋಟ್ಯಂತರ ಡಾಲರ್ ಮೌಲ್ಯದ ಹಗರಣಗಳಿಗೆ ಒಳ್ಳೆಯ ವೇದಿಕೆಯನ್ನು ಸಿದ್ಧಪಡಿಸಿವೆ. ಅಮೆರಿಕಾ ಮೂಲದ ಫ್ರಾಂಕ್ ಅಬಗ್ನೇಲ್ ಅರವತ್ತು-ಎಪ್ಪತ್ತರ ದಶಕದಲ್ಲಿ ಚಾಣಾಕ್ಷ ಕಾನ್ ಮ್ಯಾನ್ ಆಗಿದ್ದವನು. ವೈದ್ಯ, ವಕೀಲ, ಪೈಲಟ್… ಹೀಗೆ ಹಲವು ರೂಪಗಳನ್ನು ಧರಿಸುತ್ತಿದ್ದ ಫ್ರಾಂಕ್ ಅನಾಯಾಸವಾಗಿ ಅಮೆರಿಕಾದ್ಯಂತ ಓಡಾಡುತ್ತಾ ಜನಸಾಮಾನ್ಯರನ್ನೂ, ಅಧಿಕಾರಿಗಳನ್ನೂ, ಪೋಲೀಸ್ ಇಲಾಖೆಯನ್ನೂ ಯಾಮಾರಿಸಿದ್ದ. ಇಪ್ಪತ್ತರ ಹರೆಯದಲ್ಲೇ ಕೋಟ್ಯಂತರ ರೂಪಾಯಿಗಳನ್ನು ಅಡ್ಡದಾರಿಯಿಂದ ಗಳಿಸಿ ಅಮೆರಿಕನ್ ಪೊಲೀಸರಿಗೆ ತಲೆನೋವಾಗಿದ್ದ. ಸದ್ಯ ದೈತ್ಯ ಕನ್ಸಲ್ಟೆನ್ಸಿ ಸಂಸ್ಥೆಯೊಂದರ ಮಾಲೀಕರಾಗಿರುವ ಅವರಿಗೆ ತಮ್ಮ ಭಾಷಣದ ಕೊನೆಯಲ್ಲಿ ಪ್ರಶ್ನೆಯೊಂದನ್ನು ಹೀಗೆ ಕೇಳಲಾಗಿತ್ತು: “ನಿಮ್ಮ ಅಂದಿನ ಸಾಹಸಗಳು ಇಂದಿನ ಇಂಟರ್ನೆಟ್ ಯುಗದಲ್ಲಿ ನಡೆಯುತ್ತವೆ ಎಂದು ನಿಮಗೆ ಅನ್ನಿಸುತ್ತದೆಯೇ?”
“ಸಂದೇಹವೇ ಇಲ್ಲ! ಅವೆಲ್ಲವುಗಳನ್ನು ನನ್ನ ಕಾಲಕ್ಕಿಂತ ಅದೆಷ್ಟೋ ಚೆನ್ನಾಗಿ ಮತ್ತು ಸುಲಭವಾಗಿ ಈಗ ಮಾಡಬಲ್ಲೆ ಎಂದು ನನಗನ್ನಿಸುತ್ತಿದೆ”, ಎಂದಿದ್ದರು ಫ್ರಾಂಕ್ ಅಬಗ್ನೇಲ್.
ಫ್ರಾಂಕ್ ಮಾತಿನಲ್ಲಿರುವ ಸತ್ಯವು ಅದೆಷ್ಟೆಂಬುದು ಕಾಲಕಾಲಕ್ಕೆ ಸಾಬೀತಾಗುತ್ತಲೇ ಇದೆ. ನಮ್ಮ ದೇಶದಲ್ಲಿ ಕೇವಲ ಡೇಟಿಂಗ್ ಹಗರಣಗಳನ್ನಷ್ಟೇ ಗಮನಿಸಿದರೂ ವರ್ಷದಿಂದ ವರ್ಷಕ್ಕೆ ಅದರ ಪ್ರಮಾಣಗಳು ಹೆಚ್ಚಿವೆ. ದೇಶದಾದ್ಯಂತ ಕೋಟ್ಯಂತರ ರೂಪಾಯಿಗಳಷ್ಟು ನಷ್ಟವಾಗಿದೆ. ಜೀವ ಕಳೆದುಕೊಂಡವರ ಸಂಖ್ಯೆಯಂತೂ ದೇವರಿಗಷ್ಟೇ ಪ್ರೀತಿ. ಇನ್ನು ಈ ಅಂಕಿಅಂಶಗಳೆಲ್ಲವೂ ದಾಖಲಾದ ಪ್ರಕರಣಗಳದ್ದಷ್ಟೇ ಎಂಬುದು ಗಮನಾರ್ಹ ಸಂಗತಿ. ಏಕೆಂದರೆ ವಿಕ್ಟಿಮ್ ಶೇಮಿಂಗ್ ಸಂಸ್ಕೃತಿಯು ನಮ್ಮಲ್ಲಿನ್ನೂ ಜೀವಂತವಾಗಿರುವುದರಿಂದ ಈ ಬಗೆಯ ಬಹಳಷ್ಟು ಪ್ರಕರಣಗಳು ಅಧಿಕೃತವಾಗಿ ದಾಖಲಾಗುವುದೇ ಇಲ್ಲ. ದುಡ್ಡು ಹೇಗೂ ಕಳೆದುಕೊಂಡಿದ್ದಾಯಿತು, ಸಮಾಜದಲ್ಲಿ ಒಂದಿಷ್ಟು ಮಾನವಾದರೂ ಉಳಿಯಲಿ ಎಂಬ ಮನಸ್ಥಿತಿ ಇಲ್ಲಿಯದ್ದು. ಹೀಗೆ ಹೊಸ ಸಂಬಂಧವೊಂದರ ತಲಾಶೆಯಲ್ಲಿ ಹೊರಡುವ ಪಯಣವೊಂದು ಈ ಬಗೆಯ ಭ್ರಮನಿರಸನದಲ್ಲಿ ಕೊನೆಯಾಗುವುದು ವಿಪರ್ಯಾಸವಷ್ಟೇ ಅಲ್ಲ. ಭಯಾನಕ ಕೂಡ!
ಖ್ಯಾತ ಹಾಸ್ಯ ಕಲಾವಿದ ಮತ್ತು ಕವಿ ಝಾಕಿರ್ ಖಾನ್ ಸಂದರ್ಶನವೊಂದರಲ್ಲಿ ಮಾತಾಡುತ್ತಾ ತಮ್ಮ ಮನೆಯಲ್ಲಿ ಕುಟುಂಬದ ಹಿತೈಷಿಗಳು-ಗೆಳೆಯರು-ಆಪ್ತರು ನಿಯಮಿತವಾಗಿ ಸೇರುವ, ಜೊತೆಯಾಗಿ ಭೋಜನ-ಸಂಗೀತವನ್ನು ಸವಿಯುವ, ಕವಿತೆಗಳನ್ನು ಓದುವ ಚಂದದ ಪರಿಪಾಠವನ್ನು ಹೇಗೆ ಮುಂದುವರಿಸಿಕೊಂಡು ಬರಲಾಗಿದೆ ಎಂಬುದನ್ನು ಹೇಳುತ್ತಿದ್ದರು. ಮನೆಯ ಖಾಸಗಿ ವಲಯದಲ್ಲಿ ನಡೆಯುವ ಈ ಸುಂದರ ಸಂಜೆಗಳಲ್ಲಿ ಕ್ಯಾಮೆರಾಗಳಿಗೆ ಪ್ರವೇಶವಿಲ್ಲವಂತೆ! ಅದೆಂಥಾ ತಲೆಹೋಗುವಷ್ಟು ಕೆಲಸಗಳಿದ್ದರೂ ಅಪರೂಪಕ್ಕೊಮ್ಮೆ ಆಪ್ತರೊಂದಿಗೆ ಮಾತು, ನಗು, ಒಡನಾಟ, ಸಂಬಂಧಗಳಿದ್ದರೇನೇ ಈ ಬದುಕಿಗೊಂದು ಸಾರ್ಥಕತೆ ಎಂಬ ಅಭಿಪ್ರಾಯ ಅವರದ್ದು. ಉಳಿದ ಸೆಲೆಬ್ರಿಟಿಗಳಂತೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯರಾಗಿಲ್ಲದಿದ್ದರೂ ಝಾಕಿರ್ ಖಾನ್ “ಸೋಷಿಯಲ್” ಆಗಿರುವುದು ಹೀಗಂತೆ.
ನೈಜ ಒಡನಾಟಗಳ ಈ ಸಂತಸವನ್ನು ಜಗತ್ತಿನ ಯಾವುದೇ ಡಿಜಿಟಲ್ ಆಪ್ ಗಳಿಂದ ನಿರೀಕ್ಷಿಸುವುದು ಕಷ್ಟ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ-http://“ಹಕ್ಕಿಗಳ ಕೈಕುಲುಕಿದವನು” https://kannadaplanet.com/metrol-life-14/