ಇಂದು ಬುದ್ಧ ಪೂರ್ಣಿಮೆ
ನಿರಂಜನಾ ನದಿಯ ತೀರದಲ್ಲಿ ನಾವು ನಿಂತಿದ್ದೆವು. ಪರ್ವತರಾಜ್ಯ ಜಾರ್ಖಂಡ್‍ನಲ್ಲಿ ಹುಟ್ಟುವ ನದಿಯು ಬಿಹಾರಕ್ಕೆ ಬರುವ ವೇಳೆಗೆ ಕಲ್ಲುಬಂಡೆಗಳ ಬೆಟ್ಟಸಾಲುಗಳನ್ನೂ, ಕಣಿವೆಯನ್ನೂ ಹಿಂದೆ ಬಿಟ್ಟು ಮರಳಿನ ಬಯಲನ್ನು ಪ್ರವೇಶಿಸುತ್ತದೆ. ಕಣಿವೆಯಲ್ಲಿ ಭೋರೆಂದು ಹರಿದ ಹರಿವು ಮರಳ ಬಯಲಿನಲ್ಲಿ ನಿಧಾನ ಹರಿಯತೊಡಗುತ್ತದೆ. ಗಯೆಯಿಂದ ಹತ್ತು ಕಿಮೀ ಮುಂದೆ ಮೋಹನಾ ನದಿಯೊಡನೆ ಸೇರಿದ ಬಳಿಕ ಫಲ್ಗುಣಿ ಎನಿಸಿಕೊಳ್ಳುತ್ತದೆ. ಆದರೆ ಈಗ ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಕಣ್ಣಿಗೆ ರಾಚುವುದು ಮರಳು ತುಂಬಿದ ನೀರೊಣಗಿದ ನದಿ ಬಯಲು. ಇದೇ ಋತುವಿನಲ್ಲಿ ನದಿ ಅಂದು ಹರಿಯುತ್ತಿತ್ತು. ಶಾಕ್ಯಮುನಿ ಗೌತಮ ಅದನ್ನು ದಾಟಿದ್ದ. ಆದರೆ ನದಿ ಈಗ ಬತ್ತಿ ಹೋಗಿದೆ – ಡಾ. ಎಚ್ ಎಸ್ ಅನುಪಮಾ.
1
ಒಂದು ಕಲ್ಲನ್ನು ನೀರಿನೊಳಗೆ ಹಾಕಿದರೆ? ತಕ್ಷಣ ಶಂಕೆಯಿಲ್ಲದೆ ನೀರ ತಳ ಸೇರುತ್ತದೆ. ಆಳದ ಮೌನದಲ್ಲಿ ಹುದುಗಿ ನೆಲೆಯಾಗಿಬಿಡುತ್ತದೆ. ಅಲ್ಲಿ, ಓ ಅಲ್ಲಿ, ಅಂದು ಸಂಜೆ, ಬೋಧಗಯಾದ ಮಹಾಬೋಧಿ ವಿಹಾರದ ಸುತ್ತಲ ಆವರಣದಲ್ಲಿ ಕಣ್ಣುಮುಚ್ಚಿ ನಿಶ್ಚಲವಾಗಿ, ಮೌನವಾಗಿ ಕುಳಿತ ಭಿಕ್ಕುಗಳು ನೀರ ತಳದ ಕಲ್ಲಿನಂತೆ ಕಂಡುಬಂದರು. ಹೊರಗಣ ನೆರೆದ ಸಂತೆಗೆ ಒಳಗಣ ಮೌನವು ಕಸಿವಿಸಿ ಹುಟ್ಟಿಸದಿರಲಿ ಎಂಬಂತೆ ಆಗೀಗ ಕೇಳುವ ಹಕ್ಕಿಗಳ ಸದ್ದು. ಯಾವ ಬೋಧಿವೃಕ್ಷದಡಿ ಕುಳಿತು ಬುದ್ಧಗುರು ಲೋಕದರಿವ ಪಡೆದುಕೊಂಡನೋ, ಅದರ ಆಸುಪಾಸಿನಲ್ಲಿ ನೂರಾರು ಭಿಕ್ಕು ಭಿಕ್ಕುಣಿಯರು, ಉಪಾಸಕ ಉಪಾಸಿಕೆಯರು ಆಳ ಧ್ಯಾನದಲ್ಲಿದ್ದರು. ಸುತ್ತ ನೆರೆದಿರುವುದು, ನಡೆಯುತ್ತಿರುವುದು ಗಮನಕ್ಕೇ ಬರದಂತಹ ಮಗ್ನತೆ. ಭಾರೀ ಗೋಪುರದ ಕೆಳಗೆ ಮಹಾಬೋಧಿ ದೇವಾಲಯದ ಸುತ್ತ ಹಾಸಿರುವ ಮೌನದ ರತ್ನಗಂಬಳಿ ಮೇಲೆ ಹೆಜ್ಜೆ ಸಪ್ಪಳವಾಗದಂತೆ ನಾವು ನಡೆಯುತ್ತಿದ್ದೆವು.
ಬಣ್ಣಗಳೆಲ್ಲ ಬೀದಿಗೆ ಬಂದು ಓಲಾಡಿದ ದಿನ, ಚಳಿಯ ಹವೆಯಿನ್ನೂ ಪೂರ್ತಿ ನೀಗದ ಫಾಲ್ಗುಣದ ಮಾರ್ಚ್ ತಿಂಗಳಲ್ಲಿ ಬೋಧಗಯಾದಲ್ಲಿದ್ದೆವು. ಅದು ಶಾಕ್ಯಮುನಿ ಗೌತಮನು ಸಂಬೋಧಿಯನ್ನು ಪಡೆದು ಬುದ್ಧನಾದ ನೆಲ. ನಾವಿಳಿದುಕೊಂಡ ಹೋಟೆಲ್ ರೂಮಿನ ಕಿಟಕಿಯಿಂದ ಮಹಾಬೋಧಿ ವಿಹಾರದ ಚಿನ್ನದ ಕಳಶ ಹೊಳೆಹೊಳೆಯುತ್ತ ಕಾಣುತ್ತಿತ್ತು. ಧೀರೋದಾತ್ತವಾಗಿ ಮುಗಿಲೆಡೆಗೆ ಚಾಚಿ ನಿಂತ ಗೋಪುರ ಕರೆದ ಭಾಸವಾಗುತ್ತಿತ್ತು. ಬಂದವರೇ ಬುದ್ಧ ಬುದ್ಧನಾದ ತಾವಿನೆಡೆಗೆ ಹೊರಟಿದ್ದೆವು. ವಿವಿಧ ವರ್ಣ ಛಾಯೆಯ ಚೀವರ ಧರಿಸಿದ ಅನೇಕ ದೇಶಗಳ ಭಿಕ್ಕುಗಳು ಅಲ್ಲಿದ್ದರು. ಕೆಲವರು ವ್ಯಾಯಾಮದಂತಹ ದೀರ್ಘದಂಡ ನಮಸ್ಕಾರವನ್ನು ಗುಂಪಾಗಿ, ಸಾಲಾಗಿ ಮಾಡುತ್ತಿದ್ದರು. ಕೆಲವರು ಅನತಿ ದೂರದಲ್ಲಿ ಗುಂಪಾಗಿ ಕುಳಿತು ಹಕ್ಕಿಯುಲಿದಷ್ಟೇ ಮೆಲುವಾಗಿ ಏನನ್ನೋ ಪಠಿಸುತ್ತಿದ್ದರು. ಬೇರೆಬೇರೆ ದೇಶಗಳ ಜನರು ಒಂದೇ ಮರದಡಿ ಕುಳಿತು ಒಟ್ಟಿಗೇ ಧ್ಯಾನಿಸುವುದನ್ನು, ಒಟ್ಟಿಗೇ ನೆರೆದು ಪಠಿಸುವುದನ್ನು ಸಾಧ್ಯ ಮಾಡಿದ ಬುದ್ಧ ಎಲ್ಲ ಲೋಹಗಳ ಕರಗಿಸುವ ಕುಲುಮೆಯಂತೆ ಕಾಣಿಸಿದ.
ಪರಿಕ್ರಮಣದ ಬಳಿಕ ಗರ್ಭಗುಡಿಯೊಳಗಣ ಮೂರ್ತಿಯೆದುರು ನಿಂತೆವು. `ಗಂಗಾ, ಯಮುನಾ, ಅಚಿರಾವತಿ, ಮಾಹಿ, ಸರಯೂ ಮುಂತಾದ ನದಿಗಳು ಸಮುದ್ರ ಸೇರಿದ ಮೇಲೆ ಗುರುತು ಕಳೆದುಕೊಳ್ಳುವ ಹಾಗೆ ಧಮ್ಮ ಮಾರ್ಗಕ್ಕೆ ಬಂದವರಿಗೆ ಭೇದದ ಗುರುತುಗಳಿಲ್ಲ. ಎಲ್ಲರೂ ಒಂದೇ’ ಎಂದವನೆದುರು; ಪ್ರಜ್ಞಾ, ಕರುಣಾ, ಮತ್ತು ಮೈತ್ರಿಗಳ ಮೂಲಕ ಸಮತೆಯ ಹಾದಿ ಹಿಡಿಯಿರಿ ಎಂದ ಬುದ್ಧ ಗುರುವಿನೆದುರು ನತಮಸ್ತಕರಾಗಿ ನಿಂತಿದ್ದೆವು. ಐದಡಿ ಎತ್ತರದ ಮೂರ್ತಿಯ ಅರೆನಿಮೀಲಿತ ನೇತ್ರ ಮತ್ತು ಮಂದಸ್ಮಿತಗಳು `ನಾನು’ ನೇಯ್ದುಕೊಂಡ ಹುಸಿ ದುಕೂಲವ ಕಳಚುತ್ತಿರುವಂತೆ, ಸುಳಿಯೊಂದರತ್ತ ಸೆಳೆದುಕೊಳ್ಳುತ್ತಿರುವಂತೆ ಭಾಸವಾಯಿತು.
`ಹಾಗೆಂದು ಸದಾ ಧ್ಯಾನಸ್ಥನಲ್ಲ ನಾನು’ ಎಂದ ಅವನು. ಸ್ವ ನಿಯಂತ್ರಣ, ಮಗ್ನತೆ ಮತ್ತು ಧೃಡತೆಯನ್ನು ಸಾಧಿಸಿದ ಕುರುಹಾಗಿ ಜ್ಞಾನೋದಯದ ಬಳಿಕ ಕಣ್ಣು ರೆಪ್ಪೆ ಮಿಟುಕಿಸದೆ ಒಂದು ವಾರ ಕಾಲ ಬೋಧಿವೃಕ್ಷ ನೋಡುತ್ತ ಅನಿಮೇಷಲೋಚನನಾದ. ಆ ತಾಣ ಗುರುತಿಸುವ ಸಲುವಾಗಿ ಸ್ವಲ್ಪ ಆಚೆ ಅನಿಮೇಷನ ಲೋಚನ ಮಂದಿರವಿದೆ. ದೇವಾಲಯದ ಸುತ್ತಲೂ ಸಾವಿರಾರು ಸಣ್ಣ, ದೊಡ್ಡ ಸ್ತೂಪಗಳೂ, ಬುದ್ಧ ಮೂರ್ತಿಗಳೂ ಇವೆ.
2
ಆ ಹರಿವಿಗೆ ನೇರಂಜಾರ ಅಥವಾ ಲೀಲಾಜನ ಅಥವಾ ನೀಲಾಂಜನ ಅಥವಾ ನಿರಂಜನಾ ಎಂಬ ಹೆಸರು. ಇದೇ ನೇರಂಜಾರ ತೀರದಲ್ಲಿ ಸಿದ್ಧಾರ್ಥ ಗೌತಮನು ಮೂರು ವಸ್ತುಗಳನ್ನು ನೋಡಿದನು: ಒಂದು ನೀರಿನಲ್ಲಿ ತೇಲುತ್ತಿದ್ದ ಹಸಿ ಮರದ ದಿಮ್ಮಿ. ಮತ್ತೊಂದು ದಂಡೆಯಲ್ಲಿ ಬಿದ್ದಿದ್ದ ಹಸಿ ಮರದ ದಿಮ್ಮಿ. ಮಗದೊಂದು ಅಡವಿಯಲ್ಲಿ ಒಣ ಕೊರಡಿನಂತೆ ಬಿದ್ದ ಮರದ ದಿಮ್ಮಿ. ಬುದ್ಧನಿಗೆನಿಸುತ್ತದೆ: `ಸಂಸಾರಿಗರ ಸ್ಥಿತಿ ನದಿಯಲ್ಲಿ ತೇಲುತ್ತಿರುವ ಹಸಿ ದಿಮ್ಮಿಯಂತಹುದು. ಜ್ಞಾನವುಂಟಾದರೂ ಅರಿವಿನ ಬೆಂಕಿ ಹೊತ್ತಲಾರದಷ್ಟು ಮುಳುಗಿ ಒದ್ದೆಯಾಗಿರುವಂತಹುದು. ನದಿದಂಡೆಯಲ್ಲಿ ಬಿದ್ದುಕೊಂಡ ದಿಮ್ಮಿಯೂ ನದಿಯನ್ನು ತೊರೆದರೂ ಹಸಿತನವ ಬಿಟ್ಟುಕೊಡಲಾರದ ಕಾರಣ ಉರಿಯಲಾರದು. ಹುಸಿ ಆಚರಣೆಗಳ ಬೆನ್ನು ಹಿಡಿದ ಆಶ್ರಮವಾಸಿ ಋಷಿಮುನಿಗಳಂತೆ ಅದು. ಆದರೆ ಎಲ್ಲ ಬಂಧಗಳಿಂದ ಕಳಚಿಕೊಂಡು ಅಡವಿಯಲ್ಲಿ ಬಿದ್ದಿರುವ ಒಣಗಿದ ಕೊರಡು ಮಾತ್ರ ಹೊತ್ತಲು, ಉರಿಯಲು ಸಿದ್ಧವಾಗಿರುವುದು. ನಾನು ಅದರಂತೆ ಆಗಬೇಕು’.
ಎರಡೂವರೆ ಸಾವಿರ ವರ್ಷಗಳ ಕೆಳಗೆ ಇದೇ ನದಿ ದಡದ ಆಸುಪಾಸಿನಲ್ಲಿ ಆರು ವರ್ಷಗಳ ಕಾಲ ಲೋಕಸತ್ಯವನ್ನರಸುತ್ತ ಶಾಕ್ಯ ಯುವಕ ಸಿದ್ಧಾರ್ಥ ಅಲೆದಾಡಿದನು. ಸಾಕ್ಷಾತ್ಕಾರ ಹೊಂದುವ ಹಲವು ಮಾರ್ಗಗಳನ್ನು ಹೊಕ್ಕು ಬಂದನು. ಇದರ ತಟದ ಉರುವೆಲ ಎಂಬ ಗ್ರಾಮದಲ್ಲಿ ಅತಿ ಕಠೋರ ತಪಸ್ಸಿನಿಂದ, ಉಪವಾಸದಿಂದ ಎಲುಬು ಚಕ್ಕಳದಂತಾಗಿದ್ದ ಶಾಕ್ಯ ಮುನಿಗೆ ನಂದ ಬಾಲೆ ಸುಜಾತ ಘನಪಾಯಸ ನೀಡಿದಳು. ಇಲ್ಲಿಯೇ ಸಾಲವೃಕ್ಷದಡಿ ಕುಳಿತು ಘನಪಾಯಸವನ್ನು ತುತ್ತುಗಳಾಗಿ ಸೇವಿಸಿ ಜ್ಞಾನೋದಯ ಪಡೆದೇ ಸಿದ್ಧವೆಂದು ಶಪಥ ತೊಟ್ಟು ನೇರಂಜಾರ ಹೊಳೆಯನ್ನವ ದಾಟಿದ್ದು. ಇದೇ ನದಿ ದಡದ ಬೋಧಿವೃಕ್ಷದಡಿಯಲ್ಲೇ ಜ್ಞಾನೋದಯ ಪಡೆದು ಬುದ್ಧನಾದದ್ದು. ಇದೇ ದಡದ ಉರುವೆಲ, ಗಯೆ, ನದಿ ಎಂಬ ಜಟಿಲ ಕಶ್ಯಪ ಸೋದರರ ಭೇಟಿಯಾಗಿ, ಚರ್ಚೆ ವಾಗ್ವಾದ ನಡೆಸಿ ಅವರನ್ನು ಅನುಯಾಯಿಗಳನ್ನಾಗಿ ಪಡೆದದ್ದು.
ಅಂತಹ ನಿರಂಜನಾ ನದಿಯ ತೀರದಲ್ಲಿ ನಾವು ನಿಂತಿದ್ದೆವು. ಪರ್ವತರಾಜ್ಯ ಜಾರ್ಖಂಡ್‍ನಲ್ಲಿ ಹುಟ್ಟುವ ನದಿಯು ಬಿಹಾರಕ್ಕೆ ಬರುವ ವೇಳೆಗೆ ಕಲ್ಲುಬಂಡೆಗಳ ಬೆಟ್ಟಸಾಲುಗಳನ್ನೂ, ಕಣಿವೆಯನ್ನೂ ಹಿಂದೆ ಬಿಟ್ಟು ಮರಳಿನ ಬಯಲನ್ನು ಪ್ರವೇಶಿಸುತ್ತದೆ. ಕಣಿವೆಯಲ್ಲಿ ಭೋರೆಂದು ಹರಿದ ಹರಿವು ಮರಳ ಬಯಲಿನಲ್ಲಿ ನಿಧಾನ ಹರಿಯತೊಡಗುತ್ತದೆ. ಗಯೆಯಿಂದ ಹತ್ತು ಕಿಮೀ ಮುಂದೆ ಮೋಹನಾ ನದಿಯೊಡನೆ ಸೇರಿದ ಬಳಿಕ ಫಲ್ಗುಣಿ ಎನಿಸಿಕೊಳ್ಳುತ್ತದೆ. ಆದರೆ ಈಗ ಎಲ್ಲಿಂದ ಎಲ್ಲಿಯವರೆಗೆ ನೋಡಿದರೂ ಕಣ್ಣಿಗೆ ರಾಚುವುದು ಮರಳು ತುಂಬಿದ ನೀರೊಣಗಿದ ನದಿ ಬಯಲು. ಕಡುಬಿಸಿಲು ಸೂಸುವ ಇದೇ ಋತುವಿನಲ್ಲಿ ನದಿ ಅಂದು ಹರಿಯುತ್ತಿತ್ತು. ಶಾಕ್ಯಮುನಿ ಗೌತಮ ಅದನ್ನು ದಾಟಿದ್ದ. ಆದರೆ ನದಿ ಈಗ ಬತ್ತಿ ಹೋಗಿದೆ. ಅಂದಲ್ಲಿ ನಮಗೆ ಸಿಕ್ಕ ಸಾರಥಿ `ಮೂಲನಿವಾಸಿ’ ವಿನಯ್ ಪ್ರಕಾರ ನದಿ ತುಂಬಿ ಹರಿದಿದ್ದನ್ನು ಅವರು ಜೀವಮಾನದಲ್ಲಿ ಒಂದೋ ಎರಡೋ ಸಲ ನೋಡಿದ್ದಾರೆ ಅಷ್ಟೇ!
ಏರತೊಡಗಿದ ಬಿಸಿಲು. ಕಣ್ಣೆದುರು ರಣರಣ ಎನ್ನುವ ಒಣಗಿದ ನದಿ ಬಯಲು. ನೋಡುವ ಎಂದು ಕಾಲಿಟ್ಟರೆ ಮುಳ್ಳುಜಡ್ಡು ಚುಚ್ಚಿ ಸ್ವಾಗತಿಸುತ್ತಿದೆ. ನದಿಯ ಬಯಲನ್ನೇ ನುಂಗಿ ಭಾರೀ ಆಕರ್ಷಕ ಹೆಸರುಗಳ ರೆಸಾರ್ಟು, ಹೋಟೆಲುಗಳು ದಂಡೆಯ ಆಚೀಚೆ ತಲೆಯೆತ್ತಿವೆ. ಊರ ಕಸ, ಕಲ್ಮಶವನ್ನೆಲ್ಲ ಒಣಗಿದ ನದಿಯೊಡಲಿಗೆ ತಂದು ತುಂಬಲಾಗುತ್ತಿದೆ.
ನೀರ ತಳದ ಸವೆದ ಬಿಳಿಗಲ್ಲುಗಳು ಮೌನ ಧ್ಯಾನದಲ್ಲಿ ಮುಳುಗಿದ ಬುದ್ಧ ಮಾರ್ಗಿಗಳಂತೆ ಕಂಡವು. ಒಣಗಿದ ಹರಿವಿನ, ಬಿರು ಬಿಸಿಲಿನ, ಅರಿವಿನ ನೂರೊಂದು ಕತೆ ಹೇಳುತ್ತಲಿದ್ದವು.
3
ಬುದ್ಧ ಜ್ಞಾನೋದಯ ಪಡೆದ ತಾಣದಲ್ಲಿ ನೆಲೆಯಾದ ಎಲ್ಲರೂ ಅರಿವುಗೊಳ್ಳುವರೆಂದು ಹೇಳಲಾಗದು. ಮಹಾಬೋಧಿಯ ಬಳಿ ಒಣಗಿ ಉದುರಿದ ಅರಳಿ ಎಲೆಯ ಕೈಯಲ್ಲಿ ಹಿಡಿದು ಕಣ್ಣಲ್ಲೇ ಸನ್ನೆ ಮಾಡಿ ಕರೆವ ವ್ಯಾಪಾರಿಗಳಿದ್ದರು. ಪುಟ್ಟ ಎಲೆತಟ್ಟೆಯಲ್ಲಿ ಹೂವಿಟ್ಟು ಶಾಕ್ಯಮುನಿಗೆ ಕೊಂಡು ಹೋಗಿ ಎಂದು ಒತ್ತಾಯಿಸುವವರಿದ್ದರು. ಯಾವುದು ಅವನಲ್ಲವೋ ಅದೇ ಅವನೆಂದು ಸಾರುವ ಗೈಡುಗಳಿದ್ದರು. ಅವನನ್ನರಿಯದೆ ಎತ್ತೆತ್ತಲೋ ಹೆಜ್ಜೆಯಿಟ್ಟು ತಾವು ಅನುಯಾಯಿಯೆಂದುಕೊಂಡವರ ಸಂಕುಲವೂ ಅಲ್ಲಿತ್ತು. ಬುದ್ಧನ ಬಳಿಯೇ ಜಗನ್ನಾಥನೂ ಗುಡಿ ಕಟ್ಟಿಸಿಕೊಂಡು ಕುಳಿತಿದ್ದ.
ಬದಲಾಗದ ಯಾವುದೂ ಲೋಕದಲ್ಲಿ ಇಲ್ಲ ಎಂದವನಲ್ಲವೇ ಅವ? ಈ ಎರಡೂವರೆ ಸಾವಿರ ವರ್ಷಗಳಲ್ಲಿ ಬುದ್ಧ ದಾಟಿದ ನದಿಯ ಜಾಡಿನಲ್ಲಿ ಅದೆಷ್ಟೋ ನೀರು ಬಂದು ಹೋಗಿದೆ. ಒಳಿತಿನೆಡೆಗೆ ಹರಿವನ್ನು ತಿರುಗಿಸುವುದೂ, ಸುಮ್ಮನಿರುವುದೂ ನಮ್ಮ ಕೈಯಲ್ಲೇ ಇದೆ.
ಬುದ್ಧನೊಡನೆ ನಡೆಯುವುದು ಎಂದರೆ ಏಕಕಾಲಕ್ಕೆ ಭೂತ ಮತ್ತು ವರ್ತಮಾನಗಳಲ್ಲಿ ಬದುಕುತ್ತ ಭವಿಷ್ಯದೆಡೆಗೆ ನಡೆಯುವುದು. ಬುದ್ಧ ಗುರುವಿನೊಡನೆ ಸಂವಾದಿಸುವುದು ಎಂದರೆ `ಸ್ವ’ ಅರಿವನ್ನೂ, ಲೋಕದರಿವನ್ನೂ ಒಟ್ಟೊಟ್ಟಿಗೆ ಪಡೆದುಕೊಳ್ಳುವುದು.
ಹರಸು ಭಂತೇ.
ಡಾ. ಎಚ್. ಎಸ್. ಅನುಪಮಾ
ವೈದ್ಯೆ, ಸಾಹಿತಿ, ಹೋರಾಟಗಾರ್ತಿ.
ಇದನ್ನೂ ಓದಿ- ಬುದ್ಧ ಪೂರ್ಣಿಮೆ ವಿಶೇಷ |ಬುದ್ಧನೂರಿನ ಮಾತು