ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಜವಾಹರಲಾಲ್ ನೆಹರೂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು.
KPCC ಕಚೇರಿಯಲ್ಲಿ ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿ ಮಾಡಲು ಮುಂದಾದರು. 17 ವರ್ಷಗಳ ದೀರ್ಘ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಭವಿಷ್ಯದ ಭಾರತವನ್ನು ಕಟ್ಟುವ ಕೆಲಸ ಮಾಡಿದರು. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎನ್ನುವ ಬದ್ಧತೆ ಉಳ್ಳವರಾಗಿದ್ದರು. ಆಗ ಮಾತ್ರ ವಿಶ್ವದ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆ ಹೊಂದಿದ್ದರು ಎಂದು ವಿವರಿಸಿದರು.
ನೆಹರೂ ಇತಿಹಾಸಕಾರರೂ ಆಗಿದ್ದರು. ದೇಶದ ಇತಿಹಾಸ ಗೊತ್ತಿದ್ದರಿಂದಲೇ ಅವರು ದೇಶದ ಭವಿಷ್ಯ ರೂಪಿಸಿದರು. ಅಂಬೇಡ್ಕರ್ ಅವರ ಮಾತಿನಂತೆ, ಇತಿಹಾಸ ಗೊತ್ತಿದ್ದವರು ಮಾತ್ರ ದೇಶದ ಭವಿಷ್ಯ ರೂಪಿಸಬಲ್ಲರು. ನೆಹರೂ ಈ ಕೆಲಸ ಮಾಡಿ ದೇಶವನ್ನು ಕಟ್ಟಿ ಬೆಳೆಸಿದರು ಎಂದು ಉದಾಹರಣೆಗಳ ಸಮೇತ ವಿವರಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅನಕ್ಷರತೆ, ಬಡತನ, ನಿರುದ್ಯೋಗ ವ್ಯಾಪಕವಾಗಿತ್ತು. ಆರ್ಥಿಕ ಚೈತನ್ಯ ಇರಲಿಲ್ಲ. ಹಳ್ಳಿಗಳು ಸಂಕಷ್ಟದಲ್ಲಿದ್ದವು. ಈ ಎಲ್ಲಕ್ಕೂ ಪರಿಹಾರವಾಗಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಜೀವನದುದ್ದಕ್ಕೂ ಶ್ರಮಿಸಿದರು. ದೇಶವನ್ನು ವೈಜ್ಞಾನಿಕ , ಆಧುನಿಕತೆ ಆಧಾರದಲ್ಲಿ ನಿರ್ಮಿಸುತ್ತಾ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ನಿರಂತರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು ಎಂದು ವಿವರಿಸಿದರು.
ಭಾರತವನ್ನು ಇಡೀ ವಿಶ್ವದಲ್ಲಿ ಅತಿದೊಡ್ಡ ಮತ್ತು ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಿದ್ದು ನೆಹರೂ.
ದೇಶದಲ್ಲಿರುವ ಬಹುತೇಕ ಅಣೆಕಟ್ಟುಗಳು ಆಗಿದ್ದು ನೆಹರೂ ಅವಧಿಯಲ್ಲಿ. ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುವ ನರೇಂದ್ರ ಮೋದಿ ಇವತ್ತಿನವರೆಗೂ ಒಂದೇ ಒಂದು ಅಣೆಕಟ್ಟನ್ನಾಗಲೀ, ಸಾರ್ವಜನಿಕ ಉದ್ದಿಮೆಯನ್ನಾಗಲೂ ಸ್ಥಾಪಿಸಲಿಲ್ಲ. ಇವರಿಗೆ ನೆಹರೂ ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ ಎಂದು ಪ್ರಶ್ನಿಸಿದರು.
ನೆಹರೂ ಮತ್ತು ಭಾರತೀಯರು ಬ್ರಿಟಿಷರ ವಿರುದ್ಧ ಹೋರಾಡುತ್ತಾ ಜೈಲು ವಾಸ ಅನುಭವಿಸುತ್ತಿದ್ದಾಗ ಆರ್ ಎಸ್ ಎಸ್ ಮತ್ತು ಸಂಘ ಪರಿವಾರ ಬ್ರಿಟೀಷರ ವಿರುದ್ಧ ನೆಪಕ್ಕೂ ಸೊಲ್ಲೆತ್ತಲಿಲ್ಲ. ಇವರು ಈಗ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇರುವ ನಮಗೆ ದೇಶಭಕ್ತಿಯ ಪಾಠ ಮಾಡುತ್ತಾ ನಗೆಪಾಟಲಿಗೀಡಾಗಿದ್ದಾರೆ ಎಂದರು.
ಮೋದಿಗೆ ಸೋಲು ಖಚಿತವಾಗಿದೆ
ಪ್ರಧಾನಿ ಮೋದಿಯವರಿಗೆ ಬಿಜೆಪಿ, ಎನ್ ಡಿ ಎ ಸೋಲು ಖಚಿತವಾಗಿ ಗೊತ್ತಾಗಿದೆ. ಹತಾಶರಾಗಿ ವಿಚಿತ್ರ ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ದೇವರೇ ನನ್ನನ್ನು ಕಳುಹಿಸಿದ್ದು ಎಂದು ಮಾತಾಡುತ್ತಿದ್ದಾರೆ. ಅವರ ಸೋಲು ಮೋದಿಯವರನ್ನು ಈ ಮಟ್ಟಕ್ಕೆ ಮಾಡಿಟ್ಟಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೇಶವನ್ನು ಮಾರ್ಪಡಿಸಲು ಬಿಜೆಪಿ ಮತ್ತು ಮೋದಿ ಯತ್ನಿಸುತ್ತಿದ್ದು ಇದಕ್ಕೆ ಭಾರತೀಯರು ಅವಕಾಶ ಕೊಡುವುದಿಲ್ಲ ಎಂದರು.
ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನದ ಆಶಯಗಳಲ್ಲಿ ದೇಶವನ್ನು ಮುನ್ನಡೆಸುವುದು ಕಾಂಗ್ರೆಸ್ ಪಕ್ಷ ಮಾತ್ರ. ನೆಹರೂ, ಇಂದಿರಾಗಾಂಧಿ ಅವಧಿಯಲ್ಲಿ ಭೂ ಸುಧಾರಣೆ ಮಾಡಿದರು. ಕೈಗಾರಿಕೆಗಳನ್ನು ಸ್ಥಾಪಿಸಿದರು. ಈಗ ಬಿಜೆಪಿ ಇದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದೆ. ರೈತರಿಂದ ಭೂಮಿ ಕಿತ್ತುಕೊಳ್ಳುವುದು , ದೇಶದ ಕೈಗಾರಿಕೆಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಬಿಜೆಪಿಯ ಸಾಧನೆಯಾಗಿದೆ ಎಂದರು.
ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಭಾರತ ಬಹುತ್ವದ ದೇಶ. ಈ ಬಹುತ್ವದ ದೇಶವನ್ನು ನಾಶ ಮಾಡಿ ಬಿಜೆಪಿ ಮೂಗಿನ ನೇರದ ಹಿಂದೂ ದೇಶ ಮಾಡುವುದು ಅಸಾಧ್ಯ. ಈ ದೇಶ ಪ್ರತಿಯೊಬ್ಬ ಭಾರತೀಯರಿಗೆ ಸೇರಿದ್ದು ಎಂದರು.
ತಮ್ಮನ್ನು ತೀವ್ರವಾಗಿ ಟೀಕಿಸುತ್ತಿದ್ದ ಲೋಹಿಯಾ ಅವರ ಮಾತನ್ನು ಪಾರ್ಲಿಮೆಂಟಿನಲ್ಲಿ ಕುಳಿತು ನೆಹರೂ ಆಲಿಸುತ್ತಿದ್ದರು. ಸ್ಪಂದಿಸುತ್ತಿದ್ದರು. ಇದು ನೆಹರೂ ರೂಢಿಸಿಕೊಂಡಿದ್ದ ರಾಜಕೀಯ ಮೌಲ್ಯ ಎಂದರು.
28 ಗೆಲ್ಲುತ್ತೀವಿ ಎನ್ನುತ್ತಿದ್ದ ಬಿಜೆಪಿಗೆ ಈಗ ಸತ್ಯ ಗೊತ್ತಾಗಿದೆ
ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಲೋಕಸಭೆಯಲ್ಲಿ ಕಾಂಗ್ರೆಸ್ 15-20 ಸ್ಥಾನ ಗೆದ್ದೇ ಗೆಲ್ಲುತ್ತದೆ. 28 ಕ್ಕೆ 28 ಗೆಲ್ಲುತ್ತೀವಿ ಎನ್ನುತ್ತಿದ್ದ ಬಿಜೆಪಿ ಬಾಯಿ ಬಂದಾಗಿದೆ. ಇಡೀ ದೇಶದಲ್ಲಿ ಬಿಜೆಪಿ ತಿರಸ್ಕೃತಗೊಂಡಿದೆ ಎಂದರು.
ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.