? ಡಿಕೆ ಶಿವಕುಮಾರ್ ಪ್ರಶ್ನೆ
ಬೆಂಗಳೂರು : ನಮ್ಮದು ಸ್ವಚ್ಛ ಆಡಳಿತದ ಸರ್ಕಾರ. ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿಅವರ ವಿರುದ್ಧ ನೇರ ಆರೋಪ ಮಾಡಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದ್ದಾರೆ. ಅಂದ ಮಾತ್ರಕ್ಕೆ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರ ಪ್ರಾಮಾಣಿಕತೆ ಬಗ್ಗೆ ನಮಗೆ ತಿಳಿದಿದೆ. ಗುತ್ತಿಗೆದಾರನ ಸಾವಿನ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದು ಹೇಳಿದರು.
ಗುತ್ತಿಗೆದಾರನ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತಿರುವ ರಾಜು ಎಂಬುವವರು ಸಿಎಂ, ನನ್ನ ಜತೆ ಮತ್ತು ಪ್ರಿಯಾಂಕ್ ಖರ್ಗೆ ಜತೆಯಲ್ಲಿ ಇರುವ ಫೋಟೋಗಳನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಬಿಡುಗಡೆ ಮಾಡಿದ್ದಾರೆ. ನಮ್ಮ ಮನೆಗೆ ಬಂದವರು ಮತ್ತು ಮದುವೆ ಕಾರ್ಯಕ್ರಮಗಳಿಗೆ ಹೋದಾಗ ಅನೇಕರು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ವಿಜಯೇಂದ್ರ, ಯಡಿಯೂರಪ್ಪ ಅವರು ಕ್ರಿಮಿನಲ್, ರೌಡಿಗಳು ಸೇರಿದಂತೆ ಯಾರೆಲ್ಲರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ದಾಖಲೆಗಳನ್ನು ನಾನು ಬಿಡುಗಡೆ ಮಾಡಲೇ? ಅವರಿಗೆ ಬೇಕು ಎಂದರೆ ನಾನು ಎಂದರೆ ಬಿಡುಗಡೆ ಮಾಡುತ್ತೇನೆ ಎಂದು ಅವರು ತಿರುಗೇಟು ನೀಡಿದರು.
ಒಂದು ವೇಳೆ ಆರೋಪಿಗಳು ನಮ್ಮ ಜತೆ ಮಾತುಕತೆ ಅಥವಾ ವ್ಯವಹಾರ ನಡೆದಿರುವುದಕ್ಕೆ ದಾಖಲೆ ಇದ್ದರೆ ಆರೋಪ ಮಾಡಲಿ. ನಾವು ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದು, ವಿರೋಧ ಪಕ್ಷದವರು ಸುಮ್ಮನೆ ಮಾತಾಡಬೇಕು ಎಂಬ ಕಾರಣಕ್ಕೆ ಮಾತನಾಡುತ್ತಾರೆ. ಮಾತಾಡಲಿ ಬಿಡಿ ಎಂದು ಹೇಳಿದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ಮುತ್ತಿಗೆ ಹಾಕುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಮುತ್ತಿಗೆ ಹಾಕಲಿ. ನನ್ನ ಸಹೋದರ ಸುರೇಶ್, ರಾಜರಾಜೇಶ್ವರಿ ನಗರದ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದ್ದಾರೆ. ಅವೆಲ್ಲವನ್ನೂ ಸೇರಿಸಿ ಸಿಬಿಐಗೆ ವಹಿಸೋಣ. ಬಿಜೆಪಿ ಸರ್ಕಾರ ಇದ್ದಾಗ ನನ್ನ ಪ್ರಕರಣವನ್ನು ಮಾತ್ರ ಸಿಬಿಐಗೆ ನೀಡಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಸಾವು, ಸೌಜನ್ಯ ಸಾವು, ಪರೇಶ್ ಮೆಸ್ತಾ ಪ್ರಕರಣ ಸೇರಿದಂತೆ ಸುಮಾರು 12 ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೆವು. ಬಿಜೆಪಿಯವರು ನನ್ನ ಪ್ರಕರಣದ ಜತೆ ಬಿಜೆಪಿ ಸಚಿವರ ಪ್ರಕರಣಗಳನ್ನು ಸಿಬಿಐಗೆ ನೀಡಬೇಕಿತ್ತು. ಯಾಕೆ ನೀಡಲಿಲ್ಲ ಎಂದು ಶಿವಕುಮಾರ್ ಪ್ರಶ್ನಿಸಿದರು.