ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ನಡೆಯುವ 3 ಕ್ಷೇತ್ರಗಳಲ್ಲೂ ಬಿಜೆಪಿ-ಎನ್‍ಡಿಎ ಅಭ್ಯರ್ಥಿಗಳ ಗೆಲುವು ಖಚಿತ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಈಗಾಗಲೇ 3 ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ವಾತಾವರಣ ದಿನೇದಿನೇ ಬಿಜೆಪಿ ಪರವಾಗಿ ಬದಲಾಗುತ್ತಿದೆ. ಮುಖ್ಯಮಂತ್ರಿ ಇನ್ನೂ 2 ದಿನ ಇಲ್ಲೇ ಠಿಕಾಣಿ ಹೂಡಿದ್ದನ್ನು ನೋಡಿದಾಗ ಅವರಿಗೆ ಸೋಲಿನ ಆತಂಕ ಮೂಡಿದಂತಿದೆ. 3 ಕ್ಷೇತ್ರಗಳಲ್ಲಿ ಬಿಜೆಪಿ- ಎನ್‍ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.
ಇವತ್ತು ಸಂಜೆವರೆಗೆ ಇಲ್ಲಿದ್ದು ಶಿಗ್ಗಾಂವಿ ಕಡೆ ಪ್ರವಾಸ ಮಾಡುವುದಾಗಿ ಅವರು ತಿಳಿಸಿದರು. ಸಂಡೂರಿನಲ್ಲಿ ಹಿನ್ನಡೆ ಆಗುವುದು ಮನವರಿಕೆ ಆದುದರಿಂದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ಇಲ್ಲಿ ಬೀಡು ಬಿಟ್ಟಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕೋವಿಡ್ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲೇ ಕೆಲಸಗಳು ಆಗಿವೆ. ಎಲ್ಲವನ್ನೂ ಕೆದಕುವ ದುರುದ್ದೇಶದಿಂದ ಕಾಂಗ್ರೆಸ್ ಸರಕಾರವು ಕೆಲಸ ಮಾಡುತ್ತಿದೆ. ಅದರಿಂದ ಅವರಿಗೆ ಏನೂ ಲಾಭ ಆಗುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ನಾವು ಯಾವುದೇ ತಪ್ಪು ಮಾಡಿಲ್ಲ, ಪ್ರಾಮಾಣಿಕವಾಗಿ ನಮ್ಮ ಕೆಲಸ ಮಾಡಿದ್ದೇವೆ ಎಂದು ನುಡಿದರು.

                                    