ಮಲೆನಾಡಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ: ಕೂಂಬಿಂಗ್‌ ಆರಂಭಿಸಿದ ಎಎನ್ಎಫ್; ಸ್ಥಳೀಯರಲ್ಲಿ ಆತಂಕ

Most read

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಸಮೀಪದ ಪ್ರದೇಶಗಳಿಗೆ ನಕ್ಸಲರು ಭೇಟಿ ನೀಡಿರುವ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕುಗಳಲ್ಲಿ ನಕ್ಸಲರು ಸಂಚರಿಸಿರುವ ಮಾಹಿತಿ ಆಧರಿಸಿ ಎರಡೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ. ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಕೂಡ ಶೃಂಗೇರಿಯಲ್ಲಿ ಬೀಡು ಬಿಟ್ಟಿದ್ದಾರೆ.
ದೇವಾಲೆಕೊಪ್ಪ, ಕಿಗ್ಗಾ, ಕೆರೆಕಟ್ಟೆಯಲ್ಲಿ ಎಎನ್ಎಎಫ್ ಕ್ಯಾಂಪ್‌ಗಳಿದ್ದು, ಮೂರು ಕಡೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ.

ಕೊಪ್ಪ ತಾಲ್ಲೂಕಿನ ಯಡಗುಂದ, ಮುಂಡಗಾರು, ಬುಕಡಿಬೈಲ್ ಮತ್ತು ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಸುತ್ತಮುತ್ತ ಹಳ್ಳಿಗಳಾದ ಶೀರ್ಲು, ಹಾದಿ, ಮಾತೊಳ್ಳಿ, ಉಡ್ತಾಳ್, ದ್ಯಾವಂಟ, ಕಡಕಲ್ ಮುಂತಾದೆಡೆ ಕಾರ್ಯಚರಣೆ ನಡೆಯುತ್ತಿದೆ. ಹೆದ್ದಾರಿಗಳಲ್ಲೂ ಚೆಕ್ ಪೋಸ್ಟ್‌ಗಳನ್ನು ಅಳವಡಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಹೊರನಾಡು-ಮೆಣಸಿನಹಾಡ್ಯ ರಸ್ತೆಯ ವಿಶ್ಲೇಶ್ವರಕಟ್ಟೆ, ಜಯಪುರ-ಶೃಂಗೇರಿ ನಡುವಿನ ಗಡಿಕಲ್ಲು, ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆರೆಕಟ್ಟೆ ಬಳಿ ಚೆಕ್ ಪೋಸ್ಟ್‌ ಅಳವಡಿಸಲಾಗಿದ್ದು ತೀವ್ರ ತಪಾಸಣೆ ನಡೆಯುತ್ತಿದೆ. ಭಾನುವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಎಎನ್ಎಫ್ ತಂಡ ಶಂಕಿತ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಇದರಿಂದ ಮಲೆನಾಡಿನಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಿದೆ.


ತಡ ರಾತ್ರಿಗಳಲ್ಲಿ ಆಗಮಿಸುವ ನಕ್ಸಲರು ಸ್ಥಳೀಯರನ್ನು ಭೇಟಿ ಮಾಡಿದ್ದಾರೆ ಎನ್ನುವುದು ಖಚಿತವಾಗಿದೆ. ಭೇಟಿ ಮಾಡಿರುವ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಲಾಗುತ್ತಿದೆ ಅವರು ನೀಡಿದ ಮಾಹಿತಿ ಆಧರಿಸಿಯೇ ಕೂಂಬಿಂಗ್ ನಡೆಯುತ್ತಿದೆ. ಈ ಮಧ್ಯೆ ನಾಡ ಬಂದೂಕೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.
ನಕ್ಸಲರು ಸಂಚರಿಸಿರುವ ಮಾಹಿತಿ ಆಧರಿಸಿ ಕೂಂಬಿಂಕ್ ಕಾರ್ಯಾಚರಣೆ ನಡೆಯುತ್ತಿದ್ದು, ಕೆಲವು ಶಸ್ತ್ರಾಸ್ತ್ರಗಳು ದೊರೆತಿವೆ. ಕೂಂಬಿಂಗ್‌ನಲ್ಲಿ ಇರುವ ತಂಡ ಕಾಡಿನಿಂದ ಮರಳಿ ಬಂದ ಬಳಿಕ ಹೆಚ್ಚಿನ ಮಾಹಿತಿ ದೊರಕಲಿದೆ ಎಂದು ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ದಶಕಗಳ ಹಿಂದೆ ನಕ್ಸಲರು ಮಲೆನಾಡಿನಲ್ಲಿ ಆತಂಕ ಸೃಷ್ಟಿಸಿದ್ದರು. ಕಟ್ಟುನಿಟ್ಟಿನ ಕ್ರಮಗಳಿಂದ ಹಲವು ವರ್ಷಗಳಿಂದ ತಣ್ಣಗಿದ್ದ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಕಾಣಿಸಿಕೊಂಡಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ.


ಸಾಕೇತ್ ರಾಜನ್ ಎನ್ಕೌಂಟರ್ ಬಳಿಕ ನಕ್ಸಲ್ ಚಟುವಟಿಕೆ ಕೊಂಚ ಕಡಿಮೆಯಾಗಿತ್ತು. 2007ರ ಏಪ್ರಿಲ್ 10ರಂದು ವಡೆಯರಮಠ ಗ್ರಾಮದ ಮನೆಯೊಂದರಲ್ಲಿ ಓರ್ವ ನಕ್ಸಲ್ ಸೇರಿ ಮೂವರ ಎನ್ಕೌಂಟರ್ ನಡೆದ ನಂತರ ನಕ್ಸಲ್ ಚಟುವಟಿಕೆ ಜಿಲ್ಲೆಯಲ್ಲಿ ಸಂಪೂರ್ಣ ಕಡಿಮೆಯಾಗಿತ್ತು. 14 ವರ್ಷಗಳ ಬಳಿಕ ಈಗ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದಾರೆ.

More articles

Latest article