ಬಿಜೆಪಿಗೆ ದೇಶದಾದ್ಯಂತ ಪ್ರತಿರೋಧ

Most read

ಹಿಂಸೆಯನ್ನು ನಾವು ಯಾವತ್ತೂ ಬೆಂಬಲಿಸಬಾರದು. ಅದನ್ನು ವಿರೋಧಿಸಲೇಬೇಕು. ಆದರೆ ಕೆಲವೊಮ್ಮೆ ಈ ಹಿಂಸೆಯ ಮೂಲವನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಜನ ಯಾಕೆ ಹಿಂಸೆಗಿಳಿಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳದಿದ್ದರೆ ಹಿಂಸೆಯನ್ನು ಮಟ್ಟ ಹಾಕುವುದು ಸಾಧ‍್ಯವಾಗುವುದಿಲ್ಲ.

ನಿನ್ನೆ  ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವರದಿ ನೋಡುತ್ತಿದ್ದೆ. ಬಹುಷಃ ಪಂಜಾಬ್ ಅಥವಾ ಹರ್ಯಾಣಾದ್ದಿರಬೇಕು. ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ. ಜನರು ಆತನ ಕಾರನ್ನು ಅಡ್ಡಗಟ್ಟಿ ಆತನ ಕಾರಿನ ಗಾಜುಗಳನ್ನು ಪುಡಿಗೈದರು. ಅಭ್ಯರ್ಥಿಯನ್ನು ರಕ್ಷಿಸಿ ದೂರ ಒಯ್ಯಲು ರಕ್ಷಣಾ ಸಿಬ್ಬಂದಿಗೆ ಸಾಕು ಬೇಕಾಯಿತು.

ಪಂಜಾಬ್ ಹರ್ಯಾಣಾದ (ಸೋನಿಪತ್, ಹಿಸಾರ್, ರೋಹಟಕ್, ಸಿರ್ಸಾ) ಅನೇಕ ಗ್ರಾಮಗಳಲ್ಲಿ ಬಿಜೆಪಿ ನಾಯಕರಿಗೆ ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತರಿಗೂ ಪ್ರವೇಶ ಇಲ್ಲ ಎಂಬ ಬ್ಯಾನರ್ ಹಾಕಲಾಗಿದೆ.

ಬಿಜೆಪಿ ನಾಯಕ, ಕೇಂದ್ರ ಮಂತ್ರಿ ಪುರುಷೋತ್ತಮ ರೂಪಾಲಾ ಎಂಬವರು ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಿಗೆ ಗುಜರಾತ್ (ಮುಖ್ಯವಾಗಿ ಸೌರಾಷ್ಟ್ರ ಭಾಗ) ಮತ್ತು ರಾಜಸ್ತಾನದ ರಜಪೂತ ಸಮುದಾಯ ಸಿಟ್ಟಿಗೆದ್ದಿದೆ. ಗುಜರಾತ್ ನಂತಹ ಗುಜರಾತ್ ನಲ್ಲಿಯೂ ರಜಪೂತರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ಘೋಷಿಸಿದ್ದಾರೆ. ರೂಪಾಲಾ ಅವರ ಪರವಾಗಿ ನೀಡಿದ ಕ್ಷಮಾ ಹೇಳಿಕೆಗಳು ಉಪಯೋಗಕ್ಕೆ ಬಂದಿಲ್ಲ. ರಾಜಸ್ತಾನದಲ್ಲಿಯೂ ‘ಯಾರಿಗೆ ಬೇಕಾದರೂ ಓಟು ನೀಡಿ, ಆದರೆ ಬಿಜೆಪಿಗೆ ನೀಡಬೇಡಿ’ ಎಂದು ರಜಪೂತ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರ, ಲಡಾಖ್, ದಿಲ್ಲಿ, ಬಿಹಾರ, ಮಹಾರಾಷ್ಟ್ರ, ಪೂರ್ವಾಂಚಲ, ದಕ್ಷಿಣ ಭಾರತ ಎಲ್ಲೆಡೆಯೂ ಬಿಜೆಪಿಯ ಪಾಲಿಗೆ ಪರಿಸ್ಥಿತಿ ಹೀಗೆಯೇ ಇದೆ.

ಯಾಕೆ ಜನ ಬಿಜೆಪಿ ವಿರುದ್ಧ ಹೀಗೆ ಸಿಟ್ಟಿಗೆದ್ದಿದ್ದಾರೆ?

ಯಾಕೆ ಜನ ಬಿಜೆಪಿ ವಿರುದ್ಧ ಹೀಗೆ ಸಿಟ್ಟಿಗೆದ್ದಿದ್ದಾರೆ ಎಂದು ವಿಶ್ಲೇಷಿಸ ಹೊರಟರೆ ಸಿಗುವ ಕಾರಣಗಳು ಅನೇಕ.

ಲಡಾಖ್ ನಲ್ಲಿ ಬೃಹತ್ ಪ್ರತಿಭಟನೆ

ಜಮ್ಮು ಕಾಶ್ಮೀರದ ಅನುಚ್ಛೇದ 370 ಅನ್ನು ಬಲಪ್ರಯೋಗದ ಮೂಲಕ ಕಿತ್ತು ಹಾಕಿದಾಗ ಅಲ್ಲಿಗೆ ರಾಜ್ಯ ಸ್ಥಾನಮಾನವನ್ನು ಬೇಗನೇ ಮರಳಿಸುವುದಾಗಿಯೂ, ಚುನಾವಣೆಗಳನ್ನು ನಡೆಸುವುದಾಗಿಯೂ ಭರವಸೆ ನೀಡಲಾಗಿತ್ತು. ಆದರೆ ಐದು ವರ್ಷದ ಬಳಿಕವೂ ಅಲ್ಲಿಗೆ ಸ್ಥಾನಮಾನ ನೀಡಿಲ್ಲ. ಅಸೆಂಬ್ಲಿ ಚುನಾವಣೆಯನ್ನೂ ನಡೆಸಿಲ್ಲ. ನಿಯಂತ್ರಣವೆಲ್ಲ ಕೇಂದ್ರ ಸರಕಾರದ ಬಳಿಯೇ ಇದೆ. ಇದರಿಂದಾಗಿ ಜಮ್ಮು ಕಾಶ್ಮೀರ ಹೇಗೋ, ಲಡಾಖ್ ಜನರೂ ಸಿಟ್ಟಿಗೆದ್ದಿದ್ದಾರೆ. ಸೋನಂ ವಾಂಗ್ ಚುಕ್ ನೇತೃತ್ವದಲ್ಲಿ ಅಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.

ಪಂಜಾಬ್, ಹರ್ಯಾಣಾ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಜನರು ತೀವ್ರವಾಗಿ ವಿರೋಧಿಸಲು ಕಾರಣ, ರೈತ ಹೋರಾಟವನ್ನು ಹಿಂಸಾತ್ಮಕವಾಗಿ ಸರಕಾರ ಹತ್ತಿಕ್ಕಿದ ರೀತಿ, ಬೆಳೆಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆ ಈಡೇರಿಸದ್ದು, ‘ಅಗ್ನಿವೀರ’ದಿಂದ ಯುವಕರು ಉದ್ಯೋಗಾವಕಾಶ ಕಳೆದುಕೊಂಡುದು.

ಪಂಜಾಬ್ ನಲ್ಲಿ ಈಗ ಆಪ್ ಸರಕಾರ ಇರುವುದರಿಂದ ಅಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದೆ. ಆಪ್ ನಾಯಕ ಕೇಜ್ರಿವಾಲ್ ಸಹಿತ ಅನೇಕರನ್ನು ಕೇಂದ್ರ ಸರಕಾರ ಜೈಲಿಗೆ ತಳ್ಳಿದ್ದು ಪಂಜಾಬ್ ನಲ್ಲಿ ಮಾತ್ರವಲ್ಲ, ದಿಲ್ಲಿಯಲ್ಲೂ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ. ದಿಲ್ಲಿಯಲ್ಲಿ ಏಳರಲ್ಲಿ ಏಳೂ ಸಂಸದ ಕ್ಷೇತ್ರವನ್ನು 2019 ರಲ್ಲಿ ಬಿಜೆಪಿ ಗೆದ್ದಿದ್ದು ಈ ಬಾರಿ ಅಲ್ಲಿ ಅದು ಅರ್ಧದಷ್ಟು ಸ್ಥಾನ ಗೆಲ್ಲುವುದೂ ಕಷ್ಟವಾಗಿದೆ (ಇಲ್ಲಿ ಆಪ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ).

ಈಶಾನ್ಯ ರಾಜ್ಯಗಳು

ಮಣಿಪುರ ಗಲಭೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ ಸರಕಾರ ವಿಫಲಗೊಂಡುದು ಮತ್ತು ಗಲಭೆ ಆರಂಭವಾಗಿ ವರ್ಷ ಕಳೆದ ಬಳಿಕವೂ ಒಂದೇ ಒಂದು ಬಾರಿ ಪ್ರಧಾನಿಗಳು ಅಲ್ಲಿಗೆ ಭೇಟಿ ನೀಡದ್ದು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬಗ್ಗೆ ಜನರು ಅಸಮಾಧಾನಗೊಳ್ಳುವಂತೆ ಮಾಡಿದೆ.

ಜಾರ್ಖಂಡ್ ನ ಜನಪ್ರಿಯ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ರನ್ನು ಜೈಲಿಗೆ ತಳ್ಳಿದ್ದು ಅಲ್ಲಿನ ಆದಿವಾಸಿಗಳನ್ನು ನೋಯಿಸಿದೆ. ಸರಕಾರಿ ಏಜನ್ಸಿಗಳ ಮೇಲಣ ಸಿಟ್ಟು ಅಲ್ಲಿ ಬಿಜೆಪಿಯ ವಿರುದ್ಧದ ಸಿಟ್ಟಾಗಿ ಪರಿವರ್ತಿತವಾಗಿದೆ.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರಕಾರದೊಂದಿಗೆ ಮಹಾರಾಷ್ಟ್ರದ ಜನರಿಗೆ ಭಾವನಾತ್ಮಕ ಸಂಬಂಧವಿತ್ತು. ಅಲ್ಲಿ ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್ ಅವರನ್ನು ಬಳಸಿಕೊಂಡು ಅಲ್ಲಿನ ಸರಕಾರವನ್ನು ಉರುಳಿಸಿದ್ದನ್ನು ಅಲ್ಲಿನ ಜನ ಕ್ಷಮಿಸಿಲ್ಲ. ಶಿಂಧೆ ಮತ್ತು ಅಜಿತ್ ಪವಾರ್ ರಿಂದ ಬಿಜೆಪಿಗೆ ಯಾವ ಲಾಭವೂ ಇಲ್ಲ. ಬದಲಾಗಿ ಅವರು ಚುನಾವಣೆಗೆ ಸಂಬಂಧಿಸಿದಂತೆ ಒಂದು ಹೊರೆಯೇ ಆಗಿದ್ದಾರೆ. ಕಳೆದ ಬಾರಿ 48 ರಲ್ಲಿ 23 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 18 ಗೆದ್ದರೆ ಹೆಚ್ಚು ಎಂದು ಸಮೀಕ್ಷೆಗಳು ಹೇಳಿವೆ. 2019 ರಲ್ಲಿ ಬಿಜೆಪಿಯೊಂದಿಗೆ ಶಿವಸೇನೆಯೂ ಇತ್ತು, ಈಗ ಅದು ಪ್ರತ್ಯೇಕ ಗೊಂಡಿದೆ; ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ.

ಜನರ ಪಾಲಿಗೆ ಚಿಂತೆಯ ವಿಷಯ- ನಿರುದ್ಯೋಗ

ಸಿ ಎಸ್ ಡಿ ಎಸ್ ಲೋಕನೀತಿ ಇತ್ತೀಚೆಗೆ ಮಾಡಿದ ಸಮೀಕ್ಷೆಯ ಪ್ರಕಾರ ಈ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ, ಮಂದಿರ ಇತ್ಯಾದಿ ಭಾವನಾತ್ಮಕ ವಿಚಾರಗಳು ಜನರಿಗೆ ಮುಖ್ಯವಾಗಿಲ್ಲ. ಅವರ ಮೊದಲ ಚಿಂತೆ ಉದ್ಯೋಗ, ಆಮೇಲಿನದ್ದು ಬೆಲೆ ಏರಿಕೆ. ಭ್ರಷ್ಟಾಚಾರಕ್ಕೆ ಅಭಿವೃದ್ಧಿಯ ನಂತರದ ನಾಲ್ಕನೆ ಸ್ಥಾನ.

ಮಹಾರಾಷ್ಟ್ರದ ಮತದಾರರು ‘ರಾಮನ ವಿಷಯ ಮುಗಿಯಿತಲ್ಲ, ಈಗ ಕಾಮ್ ನ (ಕೆಲಸ) ವಿಷಯ ಹೇಳಿ’ ಎಂದು ಬಿಜೆಪಿಗೆ ಸವಾಲು ಹಾಕುತ್ತಿದ್ದಾರೆ.

ಲೋಕ್ ಪೋಲ್ (Lok Poll) ಸಮೀಕ್ಷೆಗಳ ಪ್ರಕಾರ ಬಿಜೆಪಿ ಮೈತ್ರಿಯು ಅಸ್ಸಾಂ ನಲ್ಲಿ 8 ಸ್ಥಾನ ಗಳಿಸಲಿದೆ (ಕಾಂಗ್ರೆಸ್ 5), ಬಂಗಾಳದಲ್ಲಿ ಬಿಜೆಪಿ 13 (ಟಿಎಂಸಿ 28), ರಾಜಸ್ಥಾನದಲ್ಲಿ ಬಿಜೆಪಿ 19 (ಕಾಂಗ್ರೆಸ್ 6), ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟ 24 (ಇಂಡಿಯಾ ಮೈತ್ರಿಕೂಟ 26).

ಈ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನೋಡುವಾಗ ‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಬಿಡಿ, ಈ ಹಿಂದಿನ ಬಾರಿ ಗೆದ್ದ ಸೀಟುಗಳನ್ನೂ ಗೆಲ್ಲುವುದು ಬಿಜೆಪಿಗೆ ಕಷ್ಟವಾಗಲಿದೆ. ಗುಜರಾತ್, ಮಧ‍್ಯಪ್ರದೇಶ, ರಾಜಸ್ಥಾನ, ಹರ್ಯಾಣಾ, ದಿಲ್ಲಿ, ಉತ್ತರಪ್ರದೇಶದಲ್ಲಿ ಬಿಜೆಪಿ 2019 ರಲ್ಲಿ ಬಹುತೇಕ ನೂರಕ್ಕೆ ನೂರು ಸ್ಥಾನ ಗೆದ್ದಿತ್ತು. ಅಲ್ಲಿಯೇ ಪರಿಸ್ಥಿತಿ ಹೀಗಿದ್ದರೆ ಇನ್ನು ದಕ್ಷಿಣ ಭಾರತದ ಕತೆ, ಮತ್ತು ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡದ ರಾಜ್ಯಗಳಲ್ಲಿ ಬಿಜೆಪಿ ಪರಿಸ್ಥಿತಿ ಏನಾಗಬಹುದು.

ಜನರು ಈಗ ಲೆಕ್ಕ ಕೇಳುತ್ತಿದ್ದಾರೆ

ನೆನಪಿರಲಿ, ಮೋದಿ ಸರಕಾರ ಹತ್ತು ವರ್ಷಗಳ ಕಾಲ ದೇಶ ಆಳಿದೆ. ಭರವಸೆಗಳ ಕಾಲ ಮುಗಿಯಿತು. ಜನರು ಈಗ ಲೆಕ್ಕ ಕೇಳುತ್ತಿದ್ದಾರೆ. ಈ ಸರಕಾರ ಹೇಗೆ ಕೆಲಸ ಮಾಡಿದೆ ಎಂದು ಜನರು ಸ್ವತಃ ನೋಡಿದ್ದಾರೆ.

ಬೆಲೆ ಏರಿಕೆ

ದೇಶ ಅಂತಾರಾಷ್ಟ್ರೀಯವಾಗಿ ಹೆಸರು ಮಾಡಿದೆ, ರಾಮಮಂದಿರ ಕಟ್ಟಲಾಗಿದೆ, ಸೆನ್ಸೆಕ್ಸ್ ಇಂಡೆಕ್ಸ್ ಮೇಲೆ ಹೋಗಿದೆ, ಆರ್ಥಿಕತೆ ಸುಧಾರಿಸಿದೆ ಎಂಬ ಬಣ್ಣದ ಹೇಳಿಕೆಗಳನ್ನು ಜನ ನಂಬುವುದಿಲ್ಲ. ಅವರು ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಸಾಮಗ್ರಿ ಖರೀದಿಸುವಾಗ ದೇಶದ ಆರ್ಥಿಕತೆಯ ಸ್ಥಿತಿಯನ್ನು ಸ್ವತಃ ಅನುಭವಿಸುತ್ತಾರೆ; ಅಳೆಯುತ್ತಾರೆ. ತಮ್ಮ ಮಕ್ಕಳಿಗೆ ಉದ್ಯೋಗ ಸಿಗದಾಗ, ಪ್ರತಿಯೊಂದಕ್ಕೂ ಜಿಎಸ್ ಟಿ ತೆರುವಾಗ ಸರಕಾರದಿಂದ ತಮಗೆ ಏನು ಲಾಭವಾಗಿದೆ ಎಂದು ಅವರು ವಿಶ್ಲೇಷಿಸುತ್ತಾರೆ. ತಮ್ಮ ಆದಾಯ ದುಪ್ಪಟ್ಟು ಮಾಡುವೆ ಎಂದ ಸರಕಾರ ತಮ್ಮ ಹೊರೆಯನ್ನು ಕಷ್ಟವನ್ನು ದುಪ್ಪಟ್ಟು ಮಾಡಿದ್ದನ್ನು ಪ್ರತಿಭಟಿಸಲೂ ಅವಕಾಶ ನೀಡದ್ದನ್ನು ನೆನಪಿಸುತ್ತಾ ರೈತರು ಸರಕಾರವನ್ನು ಅಳೆಯುತ್ತಾರೆ; ಶಪಿಸುತ್ತಾರೆ. ಭಾರೀ ಖರ್ಚು ಮಾಡಿ ಓದಿಯೂ ಉದ್ಯೋಗ ಸಿಗದಾಗ, ‘ಅಗ್ನಿವೀರ ಯೋಜನೆ’ಯು ಸೇನಾ ಉದ್ಯೋಗಕ್ಕೂ ಕತ್ತರಿ ಹಾಕಿದ್ದು ಅನುಭವಿಸುತ್ತಾ ಯುವಜನರು ಈ ಸರಕಾರದ ಸಾಧನೆಯನ್ನು ವಿಮರ್ಶಿಸುತ್ತಾರೆ.

ಸತ್ಯವನ್ನು ಬಹಳ ಕಾಲ ಬಚ್ಚಿಡುವುದು ಕಷ್ಟ. ಭಾವನಾತ್ಮಕ ವಿಷಯಗಳಿಗೆ ಶೆಲ್ಫ್ ಲೈಫ್ ಕಡಿಮೆ ಇರುತ್ತದೆ. ಇದರ ಪರಿಣಾಮವೇ ದೇಶದಾದ್ಯಂತ ಬಿಜೆಪಿಯು ಎದುರಿಸುತ್ತಿರುವ ಇಂದಿನ ತೀವ್ರ ವಿರೋಧ, ಪ್ರತಿರೋಧ.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

ಇದನ್ನೂ ಓದಿ- ಮೋದಿ ಆಡಳಿತದ ಒಂದು ಮಹಾ ಮೋಸದ ಕತೆ

More articles

Latest article