ಬೆಂಗಳೂರು: ನಾರಾಯಣಪೂರ ಬಸವಸಾಗರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಏಪ್ರಿಲ್ 15 ರ ವರೆಗೆ ನೀರು ಹರಿಸಿ ನಾಲೆ ವ್ಯಾಪ್ತಿಯ ರೈತರ ಹಿತ ಕಾಪಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಯಾದಗಿರಿ ಜಿಲ್ಲೆಯ ನಾರಾಯಣಪೂರ ಬಸವಸಾಗರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ಹಿಂಗಾರು ಬೆಳೆ ಸಲಹಾ ಸಮಿತಿ ಮತ್ತು ಜಿಲ್ಲಾಡಳಿತ ತೆಗೆದುಕೊಳ್ಳುತ್ತಿರುವ ಅವೈಜ್ಞಾನಿಕ ತೀರ್ಮಾನಗಳಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ದಿ. 20-03-2025 ರಂದು ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಏಕಾಏಕಿ ಮಾರ್ಚ್ 25 ವರೆಗೆ ಅಂದರೆ ಮೊದಲು ನಿಗದಿಯಾದ ದಿನಾಂಕಕ್ಕಿಂತಲೂ 10 ದಿನ ಮೊದಲೇ ಬೆಳೆಗಳಿಗೆ ನೀರು ಹರಿಸುವುದನ್ನು ಬಂದ್ ಮಾಡುವ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದ್ದಾರೆ. ಈ ಮಧ್ಯೆ ರಾಜ್ಯದ ಅಧಿಕಾರಿಗಳು ತೆಲಂಗಾಣ ರಾಜ್ಯಕ್ಕೆ ರಾತ್ರೋರಾತ್ರಿ 10 ಟಿಎಂಸಿ ನೀರು ಹರಿಸಿದ್ದು, ರಾಜ್ಯದ ಕೃಷ್ಣಾ ನದಿಯ ಪಾತ್ರದ ರೈತರ ಪಾಲಿನ ನೀರನ್ನು ಹೊರರಾಜ್ಯಕ್ಕೆ ಹರಿಸಿ ಕನ್ನಡಿಗ ರೈತರ ಮೇಲೆ ಮರಣ ಶಾಸನ ಬರೆದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕಾಲುವೆ ವ್ಯಾಪ್ತಿಯ ರೈತರ ಬೆಳೆಗಳಾದ ಶೇಂಗಾ, ಸಜ್ಜಿ, ಸೂರ್ಯಪಾನ, ಭತ್ತ ಇತ್ಯಾದಿ ಬೆಳೆಗಳು ಕಟಾವಿಗೆ ಬರಲು ಇನ್ನೂ 20 ರಿಂದ 25 ದಿನಗಳು ಬೇಕಾಗುತ್ತವೆ. ಸಧ್ಯ ಎಲ್ಲಾ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಇನ್ನೂ 15-20 ದಿನಗಳ ನೀರಿನ ಅವಶ್ಯಕತೆ ಇರುತ್ತದೆ. ಏಪ್ರಿಲ್ ವರೆಗೆ ನೀರು ಸಿಗುತ್ತದೆ ಎಂಬ ಮೊದಲ ಐಸಿಸಿ ಸಭೆಯಲ್ಲಿ ಹೇಳಿದ್ದನ್ನು ನಂಬಿಕೊಂಡ ರೈತರು, ಈಗಾಗಲೇ ಪ್ರತಿ ಎಕರೆಗೆ 40 ರಿಂದ 45 ಸಾವಿರ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ ಮಾರ್ಚ್ 25 ರಂದೇ ನೀರು ಹರಿಸಿರುವುದನ್ನು ನಿಲ್ಲಿಸಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಈ ಅವೈಜ್ಞಾನಿಕ ನಿರ್ಣಯದಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗುತ್ತದೆ. ಕಂಗಾಲಾಗುವ ರೈತರು ಆತ್ಮಹತ್ಯೆಯ ದಾರಿ ಹಿಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಆದ್ದರಿಂದ ದಿ. 20-03-2025 ರ ಸಭೆಯ ನಿರ್ಣಯವನ್ನು ಪುನರ್ ಪರಿಶೀಲನೆ ಮಾಡಿ, ಬೆಳೆಗಳನ್ನು ಉಳಿಸಲು ಏ. 15 ರ ವರಗೆ ಕಾಲುವೆಗಳಿಗೆ ನೀರು ಹರಿಸಲೇಬೇಕು ಎಂದು ನರಾಯಣಗೌಡರು ಮನವಿ ಮಾಡಿಕೊಂಡಿದ್ದಾರೆ.
ಜಲಾಶಯದಲ್ಲಿ ಕೃಷಿಗಾಗಿಯೇ ಕಾಯ್ದಿರಿಸಿದ 6.60 ಟಿ.ಎಂ.ಸಿ. ನೀರು ಲಭ್ಯವಿದೆ. ಅಷ್ಟು ನೀರನ್ನು ಹರಿಸಿದರೆ ರೈತರ ಬೆಳೆಗಳು ಉಳಿಉಕೊಳ್ಳುತ್ತವೆ. ಆದರೆ ಅಧಿಕಾರಿಗಳು ಕೈಗಾರಿಕೆಗಳಿಗೆ ಮತ್ತು ಇನ್ನಿತರ ಹೊರ ರಾಜ್ಯಗಳಿಗೆ ನೀರು ಮಾರಿಕೊಳ್ಳುವ ಹಂತ ತಲುಪಿದ್ದು, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಕೃತಕ ಅಭಾವ ಸೃಷ್ಟಿ ಮಾಡಿರುತ್ತಾರೆ. ಜಲಸಂಪನ್ಮೂಲ ಸಚಿವರೊಂದಿಗೆ ತಾವು ಜಲಾಶಯಕ್ಕೆ ಖುದ್ದು ಭೇಟಿ ನೀಡಿ ವಾಸ್ತವ ಪರಸ್ಥಿತಿಯನ್ನು ಅರಿತು ಕಲ್ಯಾಣ ಕರ್ನಾಟಕದ ರೈತರ ನೆರವಿಗೆ ಧಾವಿಸಬೇಕೆಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡರು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.