ನಾರಾಯಣಗೌಡರಿಂದ ರಕ್ತಪತ್ರ ಚಳವಳಿಗೆ ಚಾಲನೆ: ಬಜೆಟ್ ಅಧಿವೇಶನಕ್ಕೆ ವಿದ್ಯಾರ್ಥಿಗಳು, ಪೋಷಕರಿಂದ ವಿಧಾನಸೌಧ ಮುತ್ತಿಗೆಯ ಎಚ್ಚರಿಕೆ

Most read

384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕೆಪಿಎಸ್ ಸಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ 70,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಇಂದು ಮುಖ್ಯಮಂತ್ರಿಗಳಿಗೆ ತಮ್ಮ ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಕ್ತಪತ್ರ ಚಳವಳಿಗೆ ಚಾಲನೆ ನೀಡಿದರು.

‘ಮಾನ್ಯ ಮುಖ್ಯಮಂತ್ರಿಗಳೇ, ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅನ್ಯಾಯಕ್ಕೊಳಗಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ’ ಎಂದು ತಮ್ಮ‌ ರಕ್ತದಲ್ಲಿ ಬರೆಯುವ ಮೂಲಕ ಆಂದೋಲನವನ್ನು ಆರಂಭಿಸಿದರು. ನಂತರ ಅಸಂಖ್ಯಾತ ವಿದ್ಯಾರ್ಥಿಗಳು, ಕರವೇ ಮುಖಂಡರು ತಮ್ಮ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಆಂದೋಲನವನ್ನು ಮುಂದುವರೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಯಣಗೌಡ, ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಕರವೇ ಕಾರ್ಯಕರ್ತರು ಬರೆಯಲಿದ್ದಾರೆ. ಈ ರಕ್ತಪತ್ರಗಳನ್ನು ನೋಡಿಯಾದರೂ‌ ಮುಖ್ಯಮಂತ್ರಿಗಳ ಮನಸು ಕರಗಿ ನ್ಯಾಯ ಒದಗಿಸುವರೆಂಬ ನಂಬಿಕೆ ನಮ್ಮದು ಎಂದರು.

ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಸಂಬಂಧಪಟ್ಟವರನ್ನು ಕರೆಸಿ ಮಾತನಾಡಿ ಪರಿಹಾರ ರೂಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ನೀಡಿದ ಭರವಸೆ ಹುಸಿಯಾಗಿದೆ. ಅವರನ್ನು ತಡೆಯುತ್ತಿರುವ, ದಾರಿ ತಪ್ಪಿಸುತ್ತಿರುವ ಶಕ್ತಿಗಳಾದರೂ ಯಾವುವು? ಎಂದು ಪ್ರಶ್ನಿಸಿದರು.

ಮಾರ್ಚ್ 3ರಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಪರೀಕ್ಷೆ ಬರೆದ ಕನ್ನಡ ಮಾಧ್ಯಮದ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಬೆಂಗಳೂರಿಗೆ ಬರುತ್ತಿದ್ದಾರೆ. ಅವರೆಲ್ಲರೂ ವಿಧಾನಸೌಧಕ್ಕೆ ಬರುತ್ತಾರೆ. ಅವರನ್ನು ಹೇಗೆ ತಡೆಯುತ್ತೀರಿ? ನ್ಯಾಯ ದೊರೆಯದಿದ್ದರೆ ವಿಷ ಕುಡಿದು ಸಾಯುವುದಾಗಿ ಅವರು ಹೇಳುತ್ತಿದ್ದಾರೆ. ಏನಾದರೂ ಅನಾಹುತ ನಡೆದರೆ ಅದು ಸಿದ್ಧರಾಮಯ್ಯನವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿಯಾಗಲಿದೆ. ಹೀಗಾಗಲು ಅವರು ಅವಕಾಶ ಮಾಡಿಕೊಡಬಾರದು ಎಂದು ಅವರು ಒತ್ತಾಯಿಸಿದರು.

ಕೆಪಿಎಸ್ ಸಿ ಪರೀಕ್ಷೆ ಬರೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಗಟ್ಟಿಯಾಗಿ ನಿಂತಿದೆ. ಏನೇ ಬಂದರೂ ನಾವು ಹಿಂದೆ ಸರಿಯುವುದಿಲ್ಲ. ಕೆಪಿಎಸ್ ಸಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರವೇ ಮುಖಂಡರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಇಂಥ ನೂರು ಪ್ರಕರಣ ದಾಖಲಿಸಿದರೂ ನಾವು ಜಗ್ಗುವುದಿಲ್ಲ. ಕನ್ನಡದ ಮಕ್ಕಳಿಗೆ ನ್ಯಾಯ ದೊರೆಯಲೇಬೇಕು ಎಂದು ಅವರು ಗುಡುಗಿದರು.

More articles

Latest article