ಬೆಂಗಳೂರು: ನಡ್ಡಾ, ಪ್ರಹ್ಲಾದ್ ಜೋಷಿ ಸೇರಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಕ್ಯೂ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ಕಾರ್ಯಕರ್ತರು, ಮುಖಂಡರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಅವರ ಭಾವನೆಗಳನ್ನು ಅರಿತುಕೊಂಡಿದ್ದೇನೆ. ಸ್ಥಳಿಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನೂ ಮೂರು ದಿನ ಸಮಯವಿದೆ. ಎಲ್ಲಾ ಬೆಳವಣಿಗೆ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಬೆಳಗ್ಗೆಯಿಂದ ಎಲ್ಲಾ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಸಾಲು ಸಾಲಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಸೇರಿದರೆ ಕೈ ಪಕ್ಷದ ಅನೇಕ ನಾಯಕರು ಸ್ವಾಗತ ಕೋರುತ್ತಿದ್ದಾರೆ. ಮೂರು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ನನ್ನ ಮುಂದೆ ಪ್ರಸ್ತಾವನೆ ಇಟ್ಟಿದ್ದರು. ಅವರಿಗೆ ಜೆಡಿಎಸ್ ಪಕ್ಷದಿಂದಲೇ ಬಿ ಫಾರಂ ಕೊಡಿ ಎಂದು ಅವರು ಕೇಳಿದ್ದರು. ಅವರ ಮಾತಿಗೆ ಗೌರವ ಕೊಡಲು ನಾವು ನಿರ್ಧಾರ ಮಾಡಿದ್ದೆವು. ಪಕ್ಷದ ವೇದಿಕೆಯಲ್ಲಿ ಕೂಡ ಈ ಬಗ್ಗೆ ಸಮಾಲೋಚನೆ ನಡೆಸಿದ್ದೆ ಎಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೊದಲು ಯಾವ ಪಕ್ಷದಿಂದಲಾದರೂ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಯೋಗೇಶ್ವರ್ ಹೇಳುತ್ತಿದ್ದರು. ಆಮೇಲೆ ವರಸೆ ಬದಲಿಸಿದರು. ಈಗ ಬಿಎಸ್ ಪಿಯಿಂದ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನೋಡಿದರೆ ಈಗಾಗಲೇ ಸ್ವಾಗತ ಕೋರಲಿಕ್ಕೆ ಕ್ಯೂ ನಿಂತುಕೊಂಡಿದ್ದಾರೆ. ಪ್ರಹ್ಲಾದ ಜೊಶಿ ಅವರು ಪೋನ್ ಕರೆ ಮಾಡಿ ಯೋಗೇಶ್ವರಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದರು. ಮತ್ತೆ ನಡ್ಡಾ ಅವರೂ ಕರೆ ಮಾಡಿ ಯೋಗೇಶ್ವರ್ ಜೆಡಿಎಸ್ ನಿಂದಲೇ ಅಭ್ಯರ್ಥಿಯಾಗಲಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರು ನೋಡಿದರೆ ಯೋಗೇಶ್ವರ್ ಅವರನ್ನು ಬರ ಮಾಡಿಕೊಳ್ಳಲು ಸಜ್ಜಾಗಿ ನಿಂತಿದ್ದಾರೆ. ನಾನು ಏನು ಮಾಡೋದು? ಎಂದು ಕುಮಾರಸ್ವಾಮಿ ಅವರು ಕೇಳಿದರು.