16ನೇ ಶತಮಾನದ ಭಕ್ತಿ ಚಳವಳಿಯ ಸಂದರ್ಭದಲ್ಲಿ ಮೂಡಿಬಂದ ದಾಸಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಕನಕದಾಸರ ಕೀರ್ತನೆಗಳನ್ನು ಅನ್ವೇಷಿಸುವುದು ಅತ್ಯಂತ ಕುತೂಹಲಕಾರಿಯಾಗಿದೆ. ಅಪ್ಪಟ ಜಾನಪದೀಯ ಹಾಗೂ ತಳಸಮುದಾಯದ ಹಿನ್ನೆಲೆಯಿಂದ ಬಂದ ಕನಕದಾಸರು ಈ ಪೌರಾಣಿಕ ಪ್ರತಿನಾಯಕರನ್ನು ಹೇಗೆ ಗ್ರಹಿಸಿದ್ದಾರೆ? ವ್ಯಾಸ-ವಾಲ್ಮೀಕಿಯರಂತಹ ‘ಮಾರ್ಗ’ (Classical) ಪರಂಪರೆಯ ಕವಿಗಳು ಸೃಷ್ಟಿಸಿದ ಆಗ್ರಹಪೂರ್ವಕ ನಿರೂಪಣೆಗೂ ಮತ್ತು ಸಾಮಾನ್ಯ ಜನರ ‘ದೇಸಿ’ (Folk) ಪರಂಪರೆಯಲ್ಲಿ ಈ ಪಾತ್ರಗಳಿಗಿರುವ ಅನುಕಂಪದ ಸ್ಥಾನಕ್ಕೂ ಇರುವ ಮುಖಾಮುಖಿಯಲ್ಲಿ ಕನಕದಾಸರು ಎಲ್ಲಿ ನಿಲ್ಲುತ್ತಾರೆ?- ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಭಾರತೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಪೌರಾಣಿಕ ಕಥನಗಳ ಖಳನಾಯಕರನ್ನು ಕೇವಲ ‘ದುಷ್ಟರು’, ‘ರಾಕ್ಷಸರು’ ಅಥವಾ ‘ಧರ್ಮವಿರೋಧಿಗಳು’ ಎಂಬ ಕಪ್ಪು-ಬಿಳುಪಿನ ಸರಳ ದ್ವಂದ್ವದ ಮೂಲಕ ನೋಡುವ ಕ್ರಮ ರೂಢಿಯಲ್ಲಿದೆ. ಆದರೆ, ಆಧುನಿಕ ಸಾಂಸ್ಕೃತಿಕ ಅಧ್ಯಯನದ (Cultural Studies) ಪ್ರವೇಶದೊಂದಿಗೆ ಈ ಪಾತ್ರಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಪುರಾಣಗಳಲ್ಲಿ ಕೃಷ್ಣ ಅಥವಾ ವಿಷ್ಣುವಿನ ವಿರೋಧಿಗಳಾಗಿ ನಿಲ್ಲುವ ಕಂಸ, ರಾವಣ, ಶಿಶುಪಾಲ, ಬಲಿ, ದುರ್ಯೋಧನ ಹಾಗೂ ಕರ್ಣನಂತಹ ಪಾತ್ರಗಳನ್ನು ಅಂದಿನ ಯಜಮಾನ (Hegemonic) ಸಂಸ್ಕೃತಿಯ ಏಕಸ್ವಾಮ್ಯವನ್ನು ಪ್ರಶ್ನಿಸಿದ ‘ಸಾಂಸ್ಕೃತಿಕ ಪ್ರತಿನಾಯಕರು’ (Cultural Anti-heroes) ಎಂಬ ನೆಲೆಯಲ್ಲಿಟ್ಟು ಮರು-ಓದಿಗೆ (Re-reading) ಒಳಪಡಿಸುವ ಜಿಜ್ಞಾಸೆ ಸಾಹಿತ್ಯ ವಿಮರ್ಶೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ, 16ನೇ ಶತಮಾನದ ಭಕ್ತಿ ಚಳವಳಿಯ ಸಂದರ್ಭದಲ್ಲಿ ಮೂಡಿಬಂದ ದಾಸಸಾಹಿತ್ಯವನ್ನು, ಅದರಲ್ಲೂ ವಿಶೇಷವಾಗಿ ಕನಕದಾಸರ ಕೀರ್ತನೆಗಳನ್ನು ಅನ್ವೇಷಿಸುವುದು ಅತ್ಯಂತ ಕುತೂಹಲಕಾರಿಯಾಗಿದೆ. ಅಪ್ಪಟ ಜಾನಪದೀಯ ಹಾಗೂ ತಳಸಮುದಾಯದ ಹಿನ್ನೆಲೆಯಿಂದ ಬಂದ ಕನಕದಾಸರು ಈ ಪೌರಾಣಿಕ ಪ್ರತಿನಾಯಕರನ್ನು ಹೇಗೆ ಗ್ರಹಿಸಿದ್ದಾರೆ? ವ್ಯಾಸ-ವಾಲ್ಮೀಕಿಯರಂತಹ ‘ಮಾರ್ಗ’ (Classical) ಪರಂಪರೆಯ ಕವಿಗಳು ಸೃಷ್ಟಿಸಿದ ಆಗ್ರಹಪೂರ್ವಕ ನಿರೂಪಣೆಗೂ ಮತ್ತು ಸಾಮಾನ್ಯ ಜನರ ‘ದೇಸಿ’ (Folk) ಪರಂಪರೆಯಲ್ಲಿ ಈ ಪಾತ್ರಗಳಿಗಿರುವ ಅನುಕಂಪದ ಸ್ಥಾನಕ್ಕೂ ಇರುವ ಮುಖಾಮುಖಿಯಲ್ಲಿ ಕನಕದಾಸರು ಎಲ್ಲಿ ನಿಲ್ಲುತ್ತಾರೆ?
ಈ ಸಾಂಸ್ಕೃತಿಕ ಪ್ರತಿನಾಯಕರ ಕೃತ್ಯಗಳ ಹಿಂದೆ ಅಡಗಿರುವ ‘ಕೀಳರಿಮೆ’ (Inferiority Complex), ಅಧಿಕಾರ ಕಳೆದುಕೊಳ್ಳುವ ‘ಮೃತ್ಯುಭಯ’ ಅಥವಾ ಅಂದಿನ ರಾಜಕೀಯ ಷಡ್ಯಂತ್ರಗಳೇನು? ಮನುಷ್ಯನ ಅಥವಾ ಸಮಾಜದ ನಿಗ್ರಹಿತ (Repressed) ಆಸೆಗಳೇ ಈ ಪ್ರತಿನಾಯಕರ ಮೂಲಕ ಅಭಿವ್ಯಕ್ತಗೊಂಡಿವೆಯೇ? ಇವರನ್ನು ಕೇವಲ ಪಾಪಿಗಳೆನ್ನುವ ಬದಲು ‘ಮಾನಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಗಾಯಗೊಂಡ ಜೀವಿಗಳು’ (Traumatized individuals) ಎಂದು ನೋಡುವ ಸಾಧ್ಯತೆ ಕನಕದಾಸರ ಕಾವ್ಯದಲ್ಲಿದೆಯೇ? ಹಾಗೂ ಪ್ರೀತಿಗಿಂತಲೂ ದ್ವೇಷದಿಂದಲೇ ದೇವರನ್ನು ಸದಾ ಧ್ಯಾನಿಸುವ ‘ವಿರೋಧ ಭಕ್ತಿ’ಯ ತಾತ್ವಿಕತೆಯಲ್ಲಿ ಈ ಪಾತ್ರಗಳ ಅಸ್ತಿತ್ವಕ್ಕೆ ಇರುವ ಆಧ್ಯಾತ್ಮಿಕ ಮೌಲ್ಯವೇನು? – ಇವು ಈ ಅಧ್ಯಯನ ಎತ್ತುವ ಮೂಲಭೂತ ಪ್ರಶ್ನೆಗಳಾಗಿವೆ.
ಶೋಷಿತರ ಮತ್ತು ತಳವರ್ಗದ ಪರ ದನಿಯಾಗಬೇಕಿದ್ದ ಕನಕದಾಸರು, ಸಾಂಪ್ರದಾಯಿಕ ವೈಷ್ಣವ/ಮಾಧ್ವ ದೀಕ್ಷೆಯ ಸಾಂಸ್ಥಿಕ (Institutional) ಚೌಕಟ್ಟಿಗೆ ಒಳಪಟ್ಟ ನಂತರ, ಈ ಸಾಂಸ್ಕೃತಿಕ ಪ್ರತಿನಾಯಕರನ್ನು ಪುರಾಣದ ಮೂಲ ಆಶಯದಂತೆಯೇ ಕೇವಲ ವಧಾರ್ಹರು ಎಂದು ಚಿತ್ರಿಸಿ ತಮ್ಮ ಮೂಲ ನಿಲುವಿನೊಂದಿಗೆ ರಾಜಿ ಮಾಡಿಕೊಂಡಿದ್ದಾರೆಯೇ? ನಾಯಕ-ಪ್ರತಿನಾಯಕರನ್ನು ಚಿತ್ರಿಸುವಾಗ ಅವರ ಸ್ತ್ರೀವಾದಿ ಮತ್ತು ನೈತಿಕ ದೃಷ್ಟಿಕೋನಗಳೇನು? ಒಟ್ಟಾರೆಯಾಗಿ, ಈ ಪಾತ್ರಗಳ ನಿರೂಪಣೆಯಲ್ಲಿ ಕನಕದಾಸರ ಕಾವ್ಯದಲ್ಲಿ ಎದ್ದು ಕಾಣುವ ತಾತ್ವಿಕ ಮಿತಿಗಳು ಮತ್ತು ಆಂತರಿಕ ವೈರುಧ್ಯಗಳೇನು (Internal Contradictions) ಎಂಬುದನ್ನು ಯಾವುದೇ ವೈಭವೀಕರಣವಿಲ್ಲದೆ, ನಿಷ್ಠುರವಾಗಿ ಮತ್ತು ವಸ್ತುನಿಷ್ಠವಾಗಿ ವಿಶ್ಲೇಷಿಸುವುದು ಈ ಬರಹದ ಪ್ರಧಾನ ಆಶಯವಾಗಿದೆ.

ಭಾರತೀಯ ಪೌರಾಣಿಕ ಲೋಕದ ‘ಪ್ರತಿನಾಯಕ’ರನ್ನು ಸಾಂಸ್ಕೃತಿಕ ಅಧ್ಯಯನದ ಚೌಕಟ್ಟಿನಲ್ಲಿಟ್ಟು ನೋಡುವಾಗ, ಕನಕದಾಸರ ಕೀರ್ತನೆಗಳು ನಮಗೆ ಒಂದು ವಿಶಿಷ್ಟವಾದ ಹಾಗೂ ಸಂಕೀರ್ಣವಾದ ತಾತ್ವಿಕ ನೆಲೆಯನ್ನು ಒದಗಿಸುತ್ತವೆ. ಕಾಗಿನೆಲೆಯ ಆದಿಕೇಶವನ ಭಕ್ತರಾಗಿ, ಹರಿದಾಸ ಪರಂಪರೆಯ ಭಾಗವಾಗಿ ಅವರು ರಚಿಸಿದ ಕೃತಿಗಳಲ್ಲಿ ಅಸುರರು, ರಾಕ್ಷಸರು ಅಥವಾ ಧರ್ಮವಿರೋಧಿಗಳೆಂದು ಕರೆಸಿಕೊಳ್ಳುವ ಪಾತ್ರಗಳು ಕೇವಲ ಭಗವಂತನ ಮಹಿಮೆಯನ್ನು ಬೆಳಗುವ ನಿಮಿತ್ತ ಮಾತ್ರವಾಗಿ ಉಳಿದುಕೊಂಡಿದ್ದಾರೆಯೇ ಅಥವಾ ಅವರಲ್ಲಿ ತಳಸಮುದಾಯದ ಅಸ್ಮಿತೆಯೊಂದು ಅಡಗಿದೆಯೇ ಎಂಬುದು ಗಹನವಾದ ಚರ್ಚೆಗೆ ಆಸ್ಪದ ನೀಡುವ ವಿಷಯವಾಗಿದೆ.
ಕನಕದಾಸರ ‘ರಾಮಧಾನ್ಯ ಚರಿತ್ರೆ’ಯಲ್ಲಿ ರಾಗಿಯ ಪರವಾಗಿ ವಾದಿಸುತ್ತಾ, ಬ್ರಾಹ್ಮಣಶಾಹಿ ಶ್ರೇಣೀಕೃತ ವ್ಯವಸ್ಥೆಯನ್ನು ವ್ಯಂಗ್ಯವಾಗಿ ಎದುರಿಸಿದ ಕವಿಯೊಬ್ಬ, ಪೌರಾಣಿಕ ಕಥಾನಕಗಳಲ್ಲಿ ಮಾತ್ರ ಏಕಪಕ್ಷೀಯವಾಗಿ ದೈವಿಕ ನಿಲುವನ್ನು ಏಕೆ ಬೆಂಬಲಿಸುತ್ತಾನೆ ಎಂಬುದು ಆಲೋಚಿಸಬೇಕಾದ ಅಂಶ. ಕೀರ್ತನೆಯೊಂದರಲ್ಲಿ “ದಾನವಾಂತಕ ಸಕಲ ದಿವಿಜ ಮುನಿವಂದ್ಯ… ಭುವನವನು ಪಾಲಿಸುವವನೆ” ಎಂದು ಕೊಂಡಾಡುವಾಗ, ಅಲ್ಲಿನ ಸಂಹಾರದ ಕ್ರಿಯೆಯು ವಿಮರ್ಶೆಗೆ ಒಳಪಡುವುದಿಲ್ಲ. ಇಲ್ಲಿ ಕನಕದಾಸರು ಪುರಾಣದ ಮೂಲ ಆಶಯವನ್ನೇ ಅಚಲವಾಗಿ ನಂಬಿದ ಸಾಂಸ್ಥಿಕ ಭಕ್ತನಾಗಿ ಗೋಚರಿಸುತ್ತಾರೆ. ದಾಸಕೂಟದ ಸೈದ್ಧಾಂತಿಕ ಚೌಕಟ್ಟಿನೊಳಗೆ, ವಾಮನನು ಬಲಿಯನ್ನು ಪಾತಾಳಕ್ಕೆ ತುಳಿದದ್ದು ಭಗವಂತನ ಲೀಲೆ ಅಥವಾ ನ್ಯಾಯದ ನೆಲೆಗಟ್ಟಿನಲ್ಲಿ ನಡೆದ ಘಟನೆಯೇ ಹೊರತು, ಅದೊಂದು ಮೂಲನಿವಾಸಿ ರಾಜನ ಅಧಿಕಾರಹರಣವಾಗಲೀ, ಸಾಂಸ್ಕೃತಿಕ ದಮನವಾಗಲೀ ಆಗಿ ದಾಸರಿಗೆ ಕಾಣುವುದಿಲ್ಲ. ‘‘ನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆ” ಎಂದು ಅವರು ಹಾಡುವಾಗ, ಆ ಕೃತ್ಯದಲ್ಲಿ ಬಲಿ ಚಕ್ರವರ್ತಿಯು ತನ್ನ ನಾಡು-ಪ್ರಾಣವನ್ನು ಕಳೆದುಕೊಂಡ ಭೌತಿಕ ದುರಂತವು, ವಿಷ್ಣುವಿನ ಮಹಿಮೆಯನ್ನು ಸಾರುವ ‘ವ್ಯಾಜಸ್ತುತಿ’ಯ ಕಾವ್ಯತಂತ್ರದ ಅಡಿಯಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ. ಯಜಮಾನ ಸಂಸ್ಕೃತಿಯು ಹೆಣೆದ ಕಥಾನಕವನ್ನು ಒಡೆಯುವ ಯಾವ ಪರ್ಯಾಯ ಸಂಕಥನವೂ (Alternative Narrative) ಇಲ್ಲಿ ದಾಸರ ಕಾವ್ಯದಲ್ಲಿ ಮೂಡಿಬರುವುದಿಲ್ಲ.
ಪೌರಾಣಿಕ ವೈರಿಗಳನ್ನು ಕೇವಲ ಕೃಷ್ಣನ ಮಹಿಮೆಯ ‘ವಿರೋಧ ಧ್ರುವ’ಗಳಾಗಿ ಚಿತ್ರಿಸುವ ದಾಸರ ಈ ಧೋರಣೆಯು, ತಳಸಮುದಾಯದ ಬಂಡುಕೋರ ಪ್ರಜ್ಞೆಯನ್ನು ಧಾರ್ಮಿಕ ಚೌಕಟ್ಟಿನೊಳಗೆ ಮರೆಮಾಚುವ ಅಥವಾ ತಟಸ್ಥಗೊಳಿಸುವ ಒಂದು ಬಗೆಯ ಸಾಂಸ್ಕೃತಿಕ ತಂತ್ರವಾಗಿದೆ ಎನ್ನಬಹುದು. “ಪ್ರಾಚೀನ ಕರ್ಮವಿದು ಬಿಡಲರಿಯದು” ಎಂದು ಅವರು ಪ್ರತಿಪಾದಿಸುವಾಗ, ರಾವಣ, ಕಂಸ, ಹಿರಣ್ಯಕಶಿಪುವಿನಂತಹ ಪಾತ್ರಗಳು ತಮ್ಮ ಕರ್ಮಫಲದಿಂದಲೇ ನಾಶವಾದವು ಎಂಬ ನಿರ್ಧಾರಕ್ಕೆ ಬರುತ್ತಾರೆ. ಅಂದರೆ, ಅಂದಿನ ಯಜಮಾನ ಸಂಸ್ಕೃತಿಯು ಹೆಣೆದ ಪಾಪ-ಪುಣ್ಯದ ಸಿದ್ಧಾಂತವನ್ನು ಒಪ್ಪಿಕೊಳ್ಳುವ ಮೂಲಕ, ಈ ಪ್ರತಿನಾಯಕರು ವ್ಯವಸ್ಥೆಗೆ ಬಲಿಯಾದವರು ಎಂಬ ಐತಿಹಾಸಿಕ ವಾಸ್ತವವನ್ನು ದಾಸರು ಕಡೆಗಣಿಸುತ್ತಾರೆ. ಇಲ್ಲಿಯ ಪ್ರತಿನಾಯಕರು ವಾಸ್ತವದಲ್ಲಿ ಸಮಾಜದ ಕ್ರೌರ್ಯವನ್ನು ಅಥವಾ ರಾಜಕೀಯ ಷಡ್ಯಂತ್ರಗಳನ್ನು ಪ್ರತಿನಿಧಿಸುವ ಪಾತ್ರಗಳಾಗಿದ್ದರೂ, ದಾಸರ ದೃಷ್ಟಿಯಲ್ಲಿ ಅವರು ಕೇವಲ ಹರಿಯ ನಾಮಸ್ಮರಣೆಯನ್ನು ದ್ವೇಷಿಸಿದ ಅಸುರರಷ್ಟೆ.
‘‘ಶಿವನ ಉಪಟಳಕಳುಕಿ ಗೋಕುಲ ಶಿವನ ಕರದಲಿ ಪೊತ್ತೆ” ಎಂದು ಗೋವರ್ಧನ ಗಿರಿಯನ್ನು ಹೊತ್ತ ಕೃಷ್ಣನನ್ನು ಸ್ತುತಿಸುವಾಗ, ದಾಸರು ದೇವತೆಗಳ ಇಕ್ಕಟ್ಟಿನಿಂದ ಬಡಬಗ್ಗರನ್ನು ರಕ್ಷಿಸುವ ಕೃಷ್ಣನ ಲೀಲೆಯನ್ನು ವರ್ಣಿಸುತ್ತಾರೆಯೇ ಹೊರತು, ಆ ಲೀಲೆಯು ಪ್ರಕೃತಿಯ ಆರಾಧಕರಾದ ಮೂಲನಿವಾಸಿಗಳ ಸಂಸ್ಕೃತಿಯ ಮೇಲೆ ನಡೆಸಿದ ಒಂದು ಬಗೆಯ ಸಾಂಸ್ಕೃತಿಕ ಆಕ್ರಮಣವಾಗಿದ್ದಿರಬಹುದೇ ಎಂಬ ಬಗ್ಗೆ ಯಾವುದೇ ಸಂಶಯ ವ್ಯಕ್ತಪಡಿಸುವುದಿಲ್ಲ.
ಈ ದೃಷ್ಟಿಯಿಂದ ನೋಡಿದಾಗ, ಕನಕದಾಸರ ಕಾವ್ಯವು ಒಂದು ಅನಿವಾರ್ಯ ಸಂಘರ್ಷದ ತಾಣವಾಗಿದೆ. ಅವರ ಕಾವ್ಯತಂತ್ರವಾದ ‘ನಿಂದಾಸ್ತುತಿ’ಯು, ಮೇಲ್ನೋಟಕ್ಕೆ ದೈವವನ್ನು ದೂರುವಂತೆ ಕಂಡರೂ, ಆಳದಲ್ಲಿ ದೈವದ ಸರ್ವೋಚ್ಚತೆಯನ್ನು, ಅದರಲ್ಲಿಯೂ ಸ್ಥಾಪಿತ ಧಾರ್ಮಿಕ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಮಾಡುತ್ತದೆ. ಇಲ್ಲಿನ ಸಾಂಸ್ಕೃತಿಕ ಪ್ರತಿನಾಯಕರು ತಮ್ಮ ಅಸ್ತಿತ್ವದ ಹಕ್ಕುಗಳನ್ನು ಕಳೆದುಕೊಂಡು, ದೈವಿಕ ಆಟದ ಒಂದು ದಾಳವಾಗಿ ಮಾತ್ರ ಉಳಿದುಕೊಳ್ಳುತ್ತಾರೆ. ದಾಸರು ತಳಸಮುದಾಯದವನಾಗಿದ್ದರೂ, ಅವರ ಕಾವ್ಯದಲ್ಲಿ ಮೂಡುವ ಈ ಪೌರಾಣಿಕ ಪಾತ್ರಗಳು ಶೋಷಿತರ ಪ್ರತೀಕಗಳಾಗಿ ರೂಪುಗೊಳ್ಳುವಲ್ಲಿ ವಿಫಲವಾಗಿವೆ. ಬದಲು, ಅವರು ಯಜಮಾನ ಸಂಸ್ಕೃತಿಯ ಕಥಾನಕವನ್ನು (Grand Narrative) ಪುನರುಚ್ಚರಿಸುವ ಸಾಧನಗಳಾಗಿ ಬಳಕೆಯಾಗಿವೆ. ಕನಕದಾಸರ ಈ ನಿಲುವಿನಲ್ಲಿ ಅಂದಿನ ಹರಿದಾಸ ಪರಂಪರೆಯು ತಳಸಮುದಾಯದ ದನಿಯನ್ನೂ ತನ್ನ ಮತೀಯ ಚೌಕಟ್ಟಿನಲ್ಲಿ ಹೇಗೆ ಅಳವಡಿಸಿಕೊಂಡಿತ್ತು ಅಥವಾ ನುಂಗಿಹಾಕಿತ್ತು ಎಂಬ ಕಟುಸತ್ಯ ಅಡಗಿದೆ. ಹೀಗಾಗಿ, ಕನಕದಾಸರ ಕೀರ್ತನೆಗಳಲ್ಲಿನ ಈ ಸಾಂಸ್ಕೃತಿಕ ಪ್ರತಿನಾಯಕರು ಅಸ್ಮಿತೆಯ ಸಂಕೇತಗಳಾಗಿ ಮೂಡಿಬರುವ ಬದಲು, ಸ್ಥಾಪಿತ ಧರ್ಮದ ಸರ್ವಾಧಿಕಾರದ ಸಾಕ್ಷಿಗಳಾಗಿ ಉಳಿದುಕೊಳ್ಳುತ್ತಾರೆ.
ಭಾರತೀಯ ಸಾಹಿತ್ಯ ಮೀಮಾಂಸೆಯಲ್ಲಿ ‘ಮಾರ್ಗ’ (Classical) ಮತ್ತು ‘ದೇಸಿ’ (Folk) ಪರಂಪರೆಗಳ ನಡುವೆ ಅನಾದಿ ಕಾಲದಿಂದಲೂ ಒಂದು ತಾತ್ವಿಕ ತಿಕ್ಕಾಟವಿದೆ. ಶಿಷ್ಟ ಕಾವ್ಯಗಳು ನಾಯಕನನ್ನು ಅತಿಮಾನುಷನನ್ನಾಗಿಯೂ (Super-human), ಪ್ರತಿನಾಯಕನನ್ನು ಕರಾಳ ರಾಕ್ಷಸನನ್ನಾಗಿಯೂ ಚಿತ್ರಿಸುತ್ತವೆ. ಆದರೆ ಜಾನಪದ ಪರಂಪರೆಯು ಪ್ರತಿನಾಯಕರನ್ನು ಸಂಪೂರ್ಣ ಕಪ್ಪು ಬಣ್ಣದಲ್ಲಿ ನೋಡದೆ, ಅವರಲ್ಲಿರುವ ಮಾನವೀಯ ಮಿತಿಗಳು, ಭಕ್ತಿ, ಜ್ಞಾನ ಹಾಗೂ ದುರಂತಗಳನ್ನು ಅಪ್ಪಿಕೊಂಡು ಅವರನ್ನು ಬೂದು ಬಣ್ಣದಲ್ಲಿ (Grey shade) ಮರು-ಸೃಷ್ಟಿಸುತ್ತದೆ. ಈ ಹಿನ್ನೆಲೆಯಲ್ಲಿ ಕನಕದಾಸರ ಕಾವ್ಯವನ್ನು ವಿಶ್ಲೇಷಿಸಿದಾಗ, ಅವರ ಸಾಹಿತ್ಯದಲ್ಲಿ ‘ಆಕೃತಿ’ (Form/ಭಾಷೆ) ಮತ್ತು ‘ಆಶಯ’ದ (Content/ತಾತ್ವಿಕತೆ) ನಡುವೆ ನಡೆಯುವ ತೀವ್ರವಾದ ಸಂಘರ್ಷವೊಂದು ಗೋಚರಿಸುತ್ತದೆ. ಕನಕದಾಸರು ಭಾಷೆಯ ಮಟ್ಟಿಗೆ ಅಪ್ಪಟ ಜಾನಪದೀಯತೆಯನ್ನು ವಿಪುಲವಾಗಿ ಬಳಸುತ್ತಾರೆ; ಆದರೆ ಆಶಯದ ಮಟ್ಟಿಗೆ ಅವರು ಯಜಮಾನ ಸಂಸ್ಕೃತಿಯ ‘ಮಾರ್ಗ’ ಪರಂಪರೆಗೇ ಶರಣಾಗುತ್ತಾರೆ.
ರಾವಣನ ಚಿತ್ರಣವೇ ಇದಕ್ಕೆ ಅತ್ಯುತ್ತಮ ನಿದರ್ಶನ. ಡೊಳ್ಳಿನ ಹಾಡಿನ ಧಾಟಿಯಲ್ಲಿ, “ಛಂಗನೆ ಲಂಕೆಗೆ ಪೋಗಿ ನಮರಂಗ ಹೆಂಗಸುಗಳ್ಳನ ಕೊಂದಾನ್ಮ್ಯಾ” ಎಂದು ದಾಸರು ಹಾಡುತ್ತಾರೆ. ಭಾಷಿಕ ನೆಲೆಯಲ್ಲಿ ಇದೊಂದು ಅದ್ಭುತ ಕ್ರಾಂತಿ. ವೇದ-ಪುರಾಣಗಳ ಘನಗಂಭೀರ ಶಬ್ದಕೋಶದಲ್ಲಿ ಬಂಧಿಯಾಗಿದ್ದ ರಾವಣನನ್ನು ‘ಹೆಂಗಸುಗಳ್ಳ’ ಎಂಬ ಅಪ್ಪಟ ಹಳ್ಳಿ-ಗೌಡರ ಬೈಗುಳದ ಮೂಲಕ ಸಾಮಾನ್ಯ ಜನರ ಆಡುಭಾಷೆಯ ಅಂಗಣಕ್ಕೆ ತಂದು ನಿಲ್ಲಿಸಿದ್ದು ಭಾಷೆಯ ಪ್ರಜಾಪ್ರಭುತ್ವೀಕರಣವೇ (Democratization of language) ಸರಿ. ಆದರೆ, ತಾತ್ವಿಕ ನೆಲೆಯಲ್ಲಿ ನೋಡಿದಾಗ ಇದೊಂದು ಏಕಾಯಾಮಿ (One-dimensional) ಮತ್ತು ಕುಗ್ಗಿಸುವ (Reductionist) ಪ್ರಕ್ರಿಯೆಯಾಗಿದೆ. ಜಾನಪದರು ರಾವಣನನ್ನು ಮಹಾಶಿವಭಕ್ತ, ಅಗಾಧ ಜ್ಞಾನಿ, ಮತ್ತು ತನ್ನ ತಂಗಿಯ (ಶೂರ್ಪನಖಿ) ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಹೊರಟ ಸ್ವಾಭಿಮಾನಿ ಅಣ್ಣನನ್ನಾಗಿ ನೋಡುತ್ತಾರೆ. ಆದರೆ ಕನಕದಾಸರು ರಾವಣನ ಈ ಎಲ್ಲ ಸಾಂಸ್ಕೃತಿಕ ಮತ್ತು ರಾಜಕೀಯ ಘನತೆಗಳನ್ನು ಕಡೆಗಣಿಸಿ, ಪುರಾಣಗಳು ಚಿತ್ರಿಸಿದಂತೆಯೇ ಕೇವಲ ಒಬ್ಬ ‘ಕಾಮುಕ’ನನ್ನಾಗಿ ಚಿತ್ರಿಸುವ ಮುಖೇನ ಸೀಮಿತಗೊಳಿಸುತ್ತಾರೆ. ರಾವಣನಿಗೆ ಅಂಟಿಸಲಾದ ‘ರಾಕ್ಷಸ’ ಎಂಬ ಹಣೆಪಟ್ಟಿಯ ಹಿಂದೆ ಇರುವ ಸಾಂಸ್ಕೃತಿಕ ಪೂರ್ವಾಗ್ರಹವನ್ನು ಪ್ರಶ್ನಿಸುವುದಿಲ್ಲ.
ಕನಕದಾಸರ ಕೀರ್ತನೆಗಳಲ್ಲಿ ‘ಕಳವು’ ಎಂಬ ಕ್ರಿಯೆಯು ಕೃಷ್ಣನ ಪಾಲಿಗೆ ಒಂದು ‘ಲೀಲೆ’ ಅಥವಾ ಭಕ್ತಿಯ ಪರಾಕಾಷ್ಠೆ. “ಬೆಣ್ಣೆ ಕದ್ದನ” ಅಥವಾ “ಕಳ್ಳತನವ ಮಾಡುವುದು” ಎಂಬ ಸಾಲುಗಳಲ್ಲಿ ಕೃಷ್ಣನ ಕಳವು ದೈವಿಕ ಆಟವಾಗಿ ಬಿಂಬಿತವಾಗುತ್ತದೆ. ಇಲ್ಲಿ ಕಳವು ಕೇವಲ ವಸ್ತುವಿನ ಅಪಹರಣವಲ್ಲ; ಅದು ಭಕ್ತನ ಮನಸ್ಸನ್ನು ತನ್ನತ್ತ ಸೆಳೆದುಕೊಳ್ಳುವ ದೈವಿಕ ಸೆಳೆತ. ಆದರೆ, ಇದೇ ದಾಸರು ಅಸುರ ಪಾತ್ರಗಳ ಕಳವು ಅಥವಾ ವಂಚನೆಯನ್ನು ನೋಡುವಾಗ ಅದನ್ನು ‘ವೈರಿಗಳ ದುರ್ಬುದ್ಧಿ’ ಎಂದು ಕರೆದು ಹೀಯಾಳಿಸುತ್ತಾರೆ. ಉದಾಹರಣೆಗೆ, ವೇದಗಳನ್ನು ಕದ್ದ ಸೋಮಕನನ್ನಾಗಲೀ, ಭೂಮಿಯನ್ನು ಪಾತಾಳಕ್ಕೆ ಕದ್ದೊಯ್ದ ಹಿರಣ್ಯಾಕ್ಷನನ್ನಾಗಲೀ ದಾಸರು ಕೇವಲ ‘ಕಳ್ಳರು’ (ವೇದ ಚೋರ, ಭೂಮಿ ಕಳ್ಳ) ಎಂದು ಕರೆಯುತ್ತಾರೆ. ಇಲ್ಲಿ ವಿಷ್ಣುವಿನ ಕಳ್ಳತನ ‘ಲೀಲೆ’ಯಾದರೆ, ಅಸುರನ ಕಳ್ಳತನ ‘ಪಾಪ’ ಅಥವಾ ‘ಅಪರಾಧ’ವಾಗುತ್ತದೆ.
ದಾಸರ ದೃಷ್ಟಿಯಲ್ಲಿ ಕೃಷ್ಣನ ಕಳವು ‘ಅಧಿಕಾರಯುತ ಕಳವು’. ಅವನು ಜಗತ್ತಿನ ಒಡೆಯನಾದ್ದರಿಂದ ಅವನು ಏನು ಮಾಡಿದರೂ ಅದು ಧರ್ಮವೇ ಆಗುತ್ತದೆ. ಆದರೆ, ಅಸುರರು ಅಥವಾ ಪ್ರತಿನಾಯಕರು ಮಾಡುವ ಕಳವು ‘ಅಧಿಕಾರಹೀನರ ದುಸ್ಸಾಹಸ’. ಅವರು ತಮಗೆ ಸೇರದ್ದು ಅಥವಾ ದೇವರು ಕೊಟ್ಟದ್ದನ್ನು ಅತಿಕ್ರಮಿಸಿದ್ದರಿಂದ ಅವರು ‘ಕಳ್ಳರು’. ಹೀಗೆ ದಾಸ ಸಾಹಿತ್ಯವು ಪರೋಕ್ಷವಾಗಿ ಯಜಮಾನ ಸಂಸ್ಕೃತಿಯ ಅಧಿಕಾರ ಕೇಂದ್ರವನ್ನು ಬಲಪಡಿಸುತ್ತಾ, ಪ್ರತಿನಾಯಕರ ಸಾಂಸ್ಕೃತಿಕ ಘನತೆಯನ್ನು ಸಾಧಾರಣ ಅಪರಾಧಕ್ಕೆ ಇಳಿಸುತ್ತದೆ.
ಕನಕದಾಸರ ಕೀರ್ತನೆಗಳಲ್ಲಿ ಅಸುರ ಪಾತ್ರಗಳು ಅಜ್ಞಾನದ ಪ್ರತೀಕಗಳಾಗಿ ಬರುತ್ತವೆ. ಉದಾಹರಣೆಗೆ, ರಾವಣನು ಸೀತೆಯನ್ನು ಅಪಹರಿಸುವುದು ಕೇವಲ ಲೌಕಿಕ ಕಳವು ಮಾತ್ರವಲ್ಲ, ಅದು ‘ಮಾಯೆ’ ಅಥವಾ ‘ಅಜ್ಞಾನ’ದ ಸಂಕೇತ. ಆದರೆ ಕೃಷ್ಣನು ಗೋಪಿಯರ ವಸ್ತ್ರಾಪಹರಣ ಮಾಡುವುದು ಅಥವಾ ಬೆಣ್ಣೆ ಕದಿಯುವುದು ‘ಜ್ಞಾನದ ಕಳವು’. ಕೃಷ್ಣ ಗೋಪಿಯರ ವಸ್ತ್ರವನ್ನು ಕದಿಯುವ ಮೂಲಕ ಅವರನ್ನು ಅಹಂಕಾರದಿಂದ ಮುಕ್ತರನ್ನಾಗಿ ಮಾಡುತ್ತಾನೆ ಎಂಬುದು ಭಕ್ತಿ ಪರಂಪರೆಯ ಸಮರ್ಥನೆ. ಈ ಸಮರ್ಥನೆಯು ಅಸುರರ ಕ್ರಿಯೆಗಳಿಗೆ ಲಭಿಸುವುದಿಲ್ಲ.
ಈ ದ್ವಿಮುಖ ಧೋರಣೆಯು, ಕನಕದಾಸರು ಸಾಂಪ್ರದಾಯಿಕ ಪೌರಾಣಿಕ ನಿರೂಪಣೆಯನ್ನು ತಮ್ಮ ದಾಸ ಮನಸ್ಥಿತಿಗೆ (Devotional consciousness) ಹೊಂದಿಸಿಕೊಳ್ಳಲು ಪಟ್ಟಿರುವ ಶ್ರಮದ ಫಲ. ದಾಸರು ಜಾನಪದೀಯ ಕಥನಗಳನ್ನು ಆಶ್ರಯಿಸುವಾಗ ಆ ಪಾತ್ರಗಳಿಗೆ ಒಂದು ಬಗೆಯ ಸಾಂಸ್ಕೃತಿಕ ಸಹಾನುಭೂತಿ ತೋರುತ್ತಾರಾದರೂ, ತಾತ್ವಿಕ ತೀರ್ಮಾನಕ್ಕೆ ಬರುವಾಗ ಹರಿ-ಸರ್ವೋತ್ತಮತ್ವದ ಹಳದಿ ಕನ್ನಡಕದ ಮೂಲಕವೇ ಎಲ್ಲವನ್ನೂ ನೋಡಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಹೀಗೆ ಕನಕದಾಸರು ಇಲ್ಲಿ ದೈವಿಕ ಮಹಿಮೆಯನ್ನು ಸ್ಥಾಪಿಸಲು ‘ದೇಸಿ’ ಭಾಷೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡರೂ, ಅವರು ರಕ್ಷಿಸುತ್ತಿರುವುದು ಮಾತ್ರ ‘ಮಾರ್ಗ’ ಪರಂಪರೆಯ ಯಜಮಾನ ನಿರೂಪಣೆಯನ್ನೇ (Hegemonic narrative) ಆಗಿದೆ.
ಆದರೆ, ಇದೇ ಕನಕದಾಸರು ಕರ್ಣನ ವಿಚಾರಕ್ಕೆ ಬಂದಾಗ ತೀರಾ ಭಿನ್ನವಾಗಿ ಸ್ಪಂದಿಸುತ್ತಾರೆ. ಇಲ್ಲಿ ಅವರ ಒಳಗಿನ ದಾಸ (ಸಾಂಪ್ರದಾಯಿಕ) ಪ್ರಜ್ಞೆಗಿಂತ, ಜಾನಪದೀಯ ಶೋಷಿತ ಪ್ರಜ್ಞೆ ಎಚ್ಚರಗೊಳ್ಳುತ್ತದೆ. ಪ್ರಸಿದ್ಧ ನಿಂದಾಸ್ತುತಿಯಲ್ಲಿ “ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ” ಎನ್ನುವಾಗ ಕನಕದಾಸರ ತಾತ್ವಿಕ ಪ್ರಬುದ್ಧತೆ ಉತ್ತುಂಗಕ್ಕೇರುತ್ತದೆ. ಕುರುಕ್ಷೇತ್ರದ ಭೌತಿಕ ಯುದ್ಧ ಆರಂಭವಾಗುವ ಮುನ್ನವೇ, ಕೃಷ್ಣನು ಕರ್ಣನ ಜನ್ಮರಹಸ್ಯವನ್ನು (ಅವನು ಕುಂತಿಯ ಮಗನೆಂಬುದನ್ನು) ಬಿಚ್ಚಿಟ್ಟು ಅವನನ್ನು ಮಾನಸಿಕವಾಗಿ ಹತ್ಯೆ ಮಾಡಿದ ರಾಜಕೀಯ ಕುತಂತ್ರವನ್ನು(Diplomatic cruelty) ದಾಸರು ಇಲ್ಲಿ ಅತ್ಯಂತ ಸೂಕ್ಷ್ಮವಾಗಿ ಪ್ರಶ್ನಿಸುತ್ತಾರೆ.
ಒಬ್ಬ ಶೂರನನ್ನು ಶಸ್ತ್ರದಿಂದ ಕೊಲ್ಲುವುದಕ್ಕಿಂತ, ಅವನ ಅಸ್ಮಿತೆಯನ್ನು(Identity), ನಿಷ್ಠೆಯನ್ನು ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಂಡು ಕೊಲ್ಲುವುದು ಬಹುದೊಡ್ಡ ಹಿಂಸೆ. ತಾವೇ ಖುದ್ದಾಗಿ ಜಾತಿ ಪದ್ಧತಿಯ ಕೀಳರಿಮೆಯ ಆಘಾತಗಳನ್ನು ಉಂಡಿದ್ದ ಕನಕದಾಸರಿಗೆ, ತನ್ನ ಹುಟ್ಟಿನ ಕಾರಣಕ್ಕಾಗಿಯೇ ಜೀವಮಾನವಿಡೀ ಅವಮಾನಿತನಾದ ಕರ್ಣನ ದುರಂತದ ಜೊತೆ ಸಹಜವಾದ ಮತ್ತು ಗಾಢವಾದ ಅನುಸಂಧಾನ ಏರ್ಪಡುತ್ತದೆ. ಹಾಗಾಗಿಯೇ, ಅವರು ಕೃಷ್ಣನ ಈ ನಡೆಯನ್ನು ಕೇವಲ ‘ಲೀಲೆ’ ಎಂದು ವೈಭವೀಕರಿಸದೆ, ಅದೊಂದು ನಿಷ್ಠುರ ‘ರಾಜಕೀಯ ಕೊಲೆ’ ಎಂಬಂತೆ ವಿಷಾದದಿಂದ ಧ್ವನಿಸುತ್ತಾರೆ.
ಕನಕದಾಸರ ಕಾವ್ಯವು ದೇಸಿ ಮತ್ತು ಮಾರ್ಗ ಪರಂಪರೆಗಳ ನಡುವಿನ ತ್ರಿಶಂಕು ಸ್ಥಿತಿಯಲ್ಲಿದೆ. ರಾವಣನಂತಹ ಪಾತ್ರಗಳನ್ನು ವ್ಯಂಗ್ಯವಾಡುವಾಗ ಅವರು ಸಂಪೂರ್ಣವಾಗಿ ಯಜಮಾನ ಸಂಸ್ಕೃತಿಯ ತಾತ್ವಿಕತೆಗೆ ಒಗ್ಗಿಕೊಳ್ಳುತ್ತಾರೆ. ಆದರೆ ಕರ್ಣನಂತಹ ಪಾತ್ರದ ಮಾನಸಿಕ ತಲ್ಲಣಗಳನ್ನು ಚಿತ್ರಿಸುವಾಗ, ಅಧಿಕಾರಶಾಹಿಯ ಷಡ್ಯಂತ್ರಗಳನ್ನು ಬಯಲಿಗೆಳೆದು ಪರ್ಯಾಯ ಸಾಂಸ್ಕೃತಿಕ ದನಿಯಾಗಿ (Subaltern voice) ರೂಪುಗೊಳ್ಳುತ್ತಾರೆ. ಇದು ಕೇವಲ ಕನಕದಾಸರ ವೈಯಕ್ತಿಕ ಮಿತಿಯಲ್ಲ; ಬದಲಿಗೆ ಇಡೀ ಭಕ್ತಿ ಚಳವಳಿಯು rಸಾಂಸ್ಥಿಕಗೊಂಡಾಗ (Institutionalized) ಎದುರಿಸಬೇಕಾದ ಅನಿವಾರ್ಯ ರಾಜಿಯ ಸಂಕೇತವಾಗಿದೆ. ಅಂದರೆ ಕನಕದಾಸರ ಈ ನಿಲುವಿನಲ್ಲಿ ಅಂದಿನ ಹರಿದಾಸ ಪರಂಪರೆಯು ತಳಸಮುದಾಯದ ದನಿಯನ್ನೂ ತನ್ನ ಮತೀಯ ಚೌಕಟ್ಟಿನಲ್ಲಿ ಹೇಗೆ ಅಳವಡಿಸಿಕೊಂಡಿತ್ತು ಅಥವಾ ನುಂಗಿಹಾಕಿತ್ತು ಎಂಬ ಕಟುಸತ್ಯ ಅಡಗಿದೆ.
(ಮುಂದಿನ ಅಂಕಣದಲ್ಲಿ ಮುಂದುರೆಯುತ್ತದೆ…)
ಇದನ್ನೂ ಓದಿ- ‘ಆಧೇ ಅಧೂರೇ’- ಅನುವಾದಿತ ನಾಟಕದ ಆಪ್ತ ಓದು
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಇವರು ಪಡೆದಿದ್ದಾರೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


