ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ಸೆಸ್ಕ್ ವತಿಯಿಂದ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಬಾನಂಗಳದಲ್ಲಿ ಚಿತ್ತಾರ ಮೂಡಿಸಿ ಕಣ್ಮನ ಸೆಳೆಯಿತು. ಇದೇ ಮೊದಲ ಬಾರಿಗೆ ಆಯೋಜಿಸಿರುವ ಡ್ರೋನ್ ಪ್ರದರ್ಶನ ದಸರಾ ಉತ್ಸವದ ಕಳೆ ಹೆಚ್ಚಿಸಿದೆ.
ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜ್ಯೋತಿ ಬೆಳಗುವ ಮೂಲಕ ಡ್ರೋನ್ ಪ್ರದರ್ಶನಕ್ಕೆ ಚಾಲನೆ ನೀಡಿದರು.
1500 ಡ್ರೋನ್ ಗಳು ಏಕಕಾಲದಲ್ಲಿ ಆಗಸಕ್ಕೆ ಹಾರಿ ಬೆಳಕಿನ ಕಲಾಕೃತಿಗಳನ್ನು ಮೂಡಿಸಿದವು. ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳು ಚಿತ್ತಾಕರ್ಷಕ ವಾಗಿದ್ದವು.
ಡ್ರೋನ್ ಪ್ರದರ್ಶನದ ಆಕರ್ಷಣೆ ಕಣ್ತುಂಬಿಕೊಳ್ಳಲು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಬಾಟ್ ಲ್ಯಾಬ್ ಡೈನಮಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಈ ಡ್ರೋನ್ ಪ್ರದರ್ಶನ ನಡೆಯಿತು.
ರಾಜೇಶ್ ಕೃಷ್ಣನ್ ಹಾಡಿನ ಮೋಡಿ:
ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಮ್ಮ ಸುಮಧುರ ಕಂಠದಿಂದಲೇ ಕನ್ನಡಿಗರ ಮನಗೆದ್ದಿರುವ ರಾಜೇಶ್ ಕೃಷ್ಣನ್, “ಉಸಿರೇ ಉಸಿರೇ, ಜೊತೆಯಲಿ ಜೊತೆ ಜೊತೆಯಲಿ, ಯಾರೋ ಕಣ್ಣಲ್ಲಿ ಕಣ್ಣನಿಟ್ಟು, ಕುಚಿಕ್ಕು ಕುಚ್ಚಿಕು, ಕೂರಕ್ ಕುಕ್ಕರಹಳ್ಳಿಕೆರೆ ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ನರೇಂದ್ರ ಸ್ವಾಮಿ, ಶಾಸಕರು ಹಾಗೂ ಸೆಸ್ಕ್ ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೈಯದ್ ಇಕ್ಬಾಲ್, ಉಪಾಧ್ಯಕ್ಷರಾದ ಸುಹೇಲ್ ಬೇಗ್, ಕಾಂತರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.