ಮೈಸೂರು ದಸರಾ; ಕೋಮು ಬಣ್ಣ ಬಳಿಯಬೇಡಿ; ಬಿಜೆಪಿಗೆ ಪ್ರಗತಿಪರರ ಆಗ್ರಹ

Most read

ಮೈಸೂರು:ವಿಶ್ವಖ್ಯಾತಿ ಪಡೆದಿರುವ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ  ಬೂಕರ್‌ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ಕಾಕ್‌ ಅವರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ವಿರುದ್ಧ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿರುವಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರಗತಿಪರರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್‌ (ಜೆನ್ನಿ) ಮಾತನಾಡಿ, ಮೈಸೂರು ದಸರಾ ಸಂಘ ಪರಿವಾರದ ಅರಮನೆಯಲ್ಲ. ಅವರ ಕೇಂದ್ರ ಕಚೇರಿ ನಾಗುರದಲ್ಲಿ ಏನೆಲ್ಲಾ ಮಾಡಿದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಇಲ್ಲಿ ಸರಿಯಾಗಿ ಕನ್ನಡ ಮಾತನಾಡಲು ಬಾರದವರು, ಕನ್ನಡ, ಕನ್ನಡ ಸಂಸ್ಕೃತಿ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ವಿವಿಧ ನಾಯಕರು ಮಾತನಾಡಿ  ಬಾನು ಮುಷ್ತಾಕ್‌ ಹೆಸರಿನಲ್ಲಿ ರಾಜಕೀಯ ಬಿಜೆಪಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ದಸರಾ ನಾಡಹಬ್ಬ. ಸರ್ಕಾರ ನಡೆಸುವ ಹಬ್ಬ. ಈ ಸಾರ್ವಜನಿಕ ಆಚರಣೆಗೆ ಧರ್ಮದ ಕೆಸರು ಎರಚಿ ಕೇಸರೀಕರಣ ಮಾಡುವ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಕರನ್ನು ಬದಲಾಯಿಸಬಾರದು ಎಂದೂ ಒತ್ತಾಯಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್ ಅವರು ಸಾಧ್ಯವಿದ್ದರೆ ಬೆಟ್ಟ ಹತ್ತಲಿ ಎಂದು ಸವಾಲು ಹಾಕಿದ್ದಾರೆ. ಬೆಟ್ಟವನ್ನು ಇವರಿಗೆ ಯಾರು ಬರೆದುಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಮತ್ತೊಬ್ಬ ಮುಖಂಡ ಪ್ರತಾಪ ಸಿಂಹ ಅವರು ಬಾನು ಮುಷ್ತಾಕ್‌ ಅವರು  ಸೀರೆಯುಟ್ಟು, ಹಣೆಗೆ ಕುಂಕುಮ ಇಟ್ಟು ದಸರಾ ಉದ್ಘಾಟನಗೆ ಆಗಮಿಸಲಿ ಎಂದಿದ್ದಾರೆ. ಬಾನು ಅವರು ದಿನನಿತ್ಯ ಸೀರೆ ಉಡುವುದು ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಕಿಡಿ ಕಾರಿದರು.

ಬಿಜೆಪಿಯ ಕೊಳಕು ಮನಸ್ಸುಗಳು ಈ ಹಿಂದೆ ದಸರಾ ಉದ್ಘಾಟಿಸಿದ ನಿಸಾರ್ ಅಹಮದ್ ಅವರನ್ನೂ  ನಿಂದಿಸಿದ್ದವು. ಚಿನ್ನದ ಅಂಬಾರಿಯನ್ನು ಕಟ್ಟುವುದು ಮುಸಲ್ಮಾನ ಅಕ್ರಂ. ಆಗ ಉಂಟಾಗದ ಅಪಚಾರ  ಬಾನು ಅವರು ದಸರಾ ಉದ್ಘಾಟಿಸಿದರೆ ಉಂಟಾಗುತ್ತದೆಯೇ ಎಂದು ಕಿಡಿ ಕಾರಿದರು.

ಸಾಹಿತಿ ಕೆ.ಎಸ್. ಭಗವಾನ್, ಸವಿತಾ ಮಲ್ಲೇಶ್, ಜಗದೀಶ್ ಸೂರ್ಯ, ಬಸವಲಿಂಗಯ್ಯ, ನಾ.ದಿವಾಕರ್, ಕಾಳ ಚೆನ್ನೇಗೌಡ, ಅಹಿಂದ ಜವರಪ್ಪ, ರತಿರಾವ್, ಹೊಸಕೋಟೆ ಬಸವರಾಜ್‌, ಹೊರೆಯಾಲ ದೊರೆಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

More articles

Latest article