ಮೂಡ ಅಕ್ರಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರೀಮತಿ ಹೆಸರು ಕೇಳಿ ಬರುತ್ತಿದೆ. ಬಿಜೆಪಿ-ಜೆಡಿಎಸ್ ನವರು ದಾಖಲೆಗಳಿಲ್ಲದೆ ಹಿಟ್ ಅಂಡ್ ರನ್ ಕೇಸ್ ಮಾಡುವುದು ಸರಿಯಲ್ಲ ದಾಖಲೆಗಳನ್ನು ಮಾಧ್ಯಮಗಳ ಮುಂದಿರಿಸಿ ಕಾಂಗ್ರೆಸ್ ಮುಖಂಡ ಎಂ ಲಕ್ಷ್ಮಣ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ನಿವೇಶನ ಹಂಚಿಕೆ ಗೋಲ್ ಮಾಲ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮಡದಿ ಪಾರ್ವತಿ ಅವರ ಹೆಸರನ್ನು ವಿಪಕ್ಷಗಳು ಎಳೆದು ತರುತ್ತಿವೆ. ಇದು ಸತ್ಯಕ್ಕೆ ದೂರವಾದದ್ದು. ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿರುವ ಅಕ್ರಮ ಇದು. ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ನಮ್ಮ ಸರ್ಕಾರ ಈಗ ಉನ್ನತಮಟ್ಟದ ತನಿಖಾ ತಂಡ ರಚಿಸಿದೆ ಎಂದು ಹೇಳಿದ್ದಾರೆ.
ಮೂಡಾ ಅಕ್ರಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶ್ರೀಮತಿ ಹೆಸರು ಕೇಳಿ ಬರುತ್ತಿದೆ. ಬಿಜೆಪಿ-ಜೆಡಿಎಸ್ ನವರು ದಾಖಲೆಗಳಿಲ್ಲದೆ ಹಿಟ್ ಅಂಡ್ ರನ್ ಕೇಸ್ ಮಾಡುವುದು ಸರಿಯಲ್ಲ. ಮಾತನಾಡುವ ಹಕ್ಕಿದೆ, ಆದರೆ ಸುಳ್ಳು ಆರೋಪ ಮಾಡುವುದಕ್ಕೆ ಹಕ್ಕಿಲ್ಲ. ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಮುಖ್ಯಮಂತ್ರಿಗಳ ಹೆಂಡತಿ ಪಾರ್ವತಿ ಅವರ ಮೇಲೆ ಆಪಾದನೆ ಮಾಡಿದ್ದಾರೆ. ದಾಖಲೆಗಳನ್ನು ನಾವು ನಿಮಗೆ ಕಳಿಸಿಕೊಡುತ್ತೇವೆ, ಅದನ್ನ ನೋಡಿ ಮಾತನಾಡಿ. ಸುಖ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಕೆಸರೆಯ ಸರ್ವೇ ನಂಬರ್ 464 ರಲ್ಲಿ 3.14 ಎಕರೆ ಸಿಎಂ ಸಿದ್ದರಾಮಯ್ಯ ಅವರ ಹೆಂಡತಿ ಪಾರ್ವತಮ್ಮ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಎನ್ನುವ ವ್ಯಕ್ತಿಗೆ ಸೇರಿದ್ದ ಜಮೀನಿತ್ತು. ಆ 3.14 ಗುಂಟೆ ಜಮೀನನ್ನು 1997ರಲ್ಲಿ ಮೂಡಾ ದೇವನೂರು ಮೂರನೇ ಹಂತದ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿದೆ. ತದನಂತರ ಅದನ್ನು ಕೈಬಿಡಿ ಎಂದು ಆದೇಶ ಮಾಡಿದೆ. ಡೀನೋಟಿಫೈ ಆದಮೇಲೆ ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿಗೆ 2005ರಲ್ಲಿ ರಿಜಿಸ್ಟರ್ ಆಗಿದೆ. ಇದಾದ ಮೇಲೆ ಅವರ ತಂಗಿ ಪಾರ್ವತಮ್ಮ ಅವರಿಗೆ 2020ರಲ್ಲಿ ದಾನಪತ್ರ ಮಾಡಿದ್ದಾರೆ.
ಇದಾದ ಮೇಲೆ ಮೂಡಾದವರು ಏಕಾಏಕಿ ಮೂರನೇ ಹಂತದ ಬಡಾವಣೆ ನಿರ್ಮಾಣ ಮಾಡಲು ಹೊರಟು ಸೈಟು ಹಂಚಿಕೆ ಮಾಡಿದ್ದಾರೆ. ಮೂಡಾದವರು ಸ್ವಯಂಪ್ರೇರಿತವಾಗಿ ಡೀನೋಟಿಫೈ ಮಾಡಿ ಮತ್ತೆ ಅಕ್ವೈರ್ ಮಾಡಿಕೊಂಡು ಬಡಾವಣೆ ಮಾಡಿದ್ದಾರೆ. ಇದರ ಬಗ್ಗೆ ಆಕ್ಷೇಪ ಮಾಡಿ ಮೂಡಾಗೆ ಪಾರ್ವತಮ್ಮ ಅವರು ಪತ್ರ ಬರೆದಿದ್ದಾರೆ. ಪಾರ್ವತಮ್ಮ ಅವರ ಜಮೀನು 1,48,104 ಚದರ ಅಡಿ ಇದೆ 50:50 ಅನುಪಾತದಡಿ ಇವರಿಗೆ 82 ಸಾವಿರ ಚದರ ಅಡಿ ಜಾಗ ಇವರಿಗೆ ಕೊಡಬೇಕಿತ್ತು. ಆದರೆ 38,284 ಸಾವಿರ ಚದರ ಅಡಿ ಜಾಗವನ್ನು ಮಾತ್ರ ವಿಜಯನಗರದಲ್ಲಿ ಕೊಟ್ಟಿದ್ದಾರೆ.
ಆಗ ಯಾವ ಸರ್ಕಾರ ಇತ್ತು? ಭೂಮಿ ಕಳೆದುಕೊಂಡ ಪಾರ್ವತಮ್ಮ ಅವರಿಗೆ ಬೇರೆಡೆ 50:50 ಅನುಪಾತದಡಿ ಜಾಗವನ್ನು ಸರ್ಕಾರವೇ ಕೊಟ್ಟಿದೆ. ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ.