ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸುತ್ತಿರುವುದು ಐದು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಮುಖವಾದದ್ದು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರ. ಮೈಸೂರಿನಲ್ಲಿ ಹಾಲೀ ಸಂಸದ ಪ್ರತಾಪ್ ಸಿಂಹ ಈ ಬಾರಿಯೂ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಬಿಜೆಪಿ ಹೈಕಮಾಂಡ್ ಅವರಿಗೆ ಶಾಕ್ ನೀಡಿ, ಮೈಸೂರು ರಾಜವಂಸಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಮಣೆಯಾಕಿದೆ.
ಇದುವರೆಗೆ ಸ್ಪರ್ಧಿಸುವ ವಿಚಾರದಲ್ಲಿ ಯದುವೀರ್ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ ಆದರೆ ಬಿಜೆಪಿ ಟಿಕೆಟ್ ನೀಡಲು ಉತ್ಸುಕವಾಗಿತ್ತು. ಯದುವೀರ್ ಅವರನ್ನು ದೆಹಲಿಯ ನಾಯಕರು ತೆರೆಮೆರೆಯಲ್ಲಿ ಸಂಪರ್ಕಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ತಮಗೆ ಟಿಕೆಟ್ ಕೈತಪ್ಪುವ ಸೂಚನೇ ಮೊದಲೇ ಸಿಕ್ಕಿದ್ದರಿಂದಲೇ ಪ್ರತಾಪ್ ಸಿಂಹ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರಿಯರಾಗಿದ್ದರು. ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಹೈಕಮಾಂಡ್‌ವರೆಗೂ ತಲುಪಿಸಿದ್ದರು. ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ಸಿಗಲ್ಲ ಎನ್ನುವುದು ಖಚಿತವಾದ ಬಳಿಕ ಫೇಸ್‌ಬುಕ್ ಲೈವ್ ಬಂದು ಭಾವುಕರಾಗಿ ಮಾತನಾಡಿದ್ದರು.
ಮೈಸೂರು ಸಂಸ್ಥಾನದ ರಾಜಮನೆತನದ ಕುಡಿಯೊಂದು ಪ್ರಜಾಪ್ರಭುತ್ವದ ಚುನಾವಣೆ ಎದುರಿಸಲು ಸಜ್ಜಾಗಿದೆ. ಯದುವೀರ್ ಅವರು ಮೈಸೂರಿನಲ್ಲಿ ಚಿರಪರಿಚಿತರಾಗಿದ್ದರೂ ಮೈಸೂರಿನ ಮೂಲ ಸಮಸ್ಯೆಗಳ ಬಗ್ಗೆ ಅರಿವು ಕಡಿಮೆ ಹಾಗೂ ಜನರೊಂದಿಗೆ ಬೆರೆತಿರುವುದು ಎಲ್ಲಿಯೂ ಕಾಣಸಿಗದು. ಈಗ ಲೋಕಸಭಾ ಟಿಕೆಟ್ ಸಿಕ್ಕಿದ್ದು ಅರಮನೆಯಿಂದ ಇಳಿದು ಮೈಸೂರು ರಸ್ತೆಗಳಲ್ಲಿ ಓಡಾಡಿ ಸಮಸ್ಯೆಗಳ ಬಗ್ಗೆ ತಿಳಿಯುತ್ತಾರ ಕಾದು ನೋಡಬೇಕಿದೆ.