ಭಾರತ ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆಯ ಪಾಲು ಸಂದಾಯವಾಗುತ್ತಿಲ್ಲ ಎಂಬ ವಿಷಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕನ್ನಡ ಪರ ಕಾರ್ಯಕರ್ತರ ಟ್ವಿಟರ್ (ಎಕ್ಸ್) ಸ್ಪೇಸ್‌ನಲ್ಲಿ ಫೆಬ್ರವರಿ 14ರ ಸಂಜೆ 6 ಗಂಟೆಗೆ ನೇರ ಮಾತುಕತೆ ನಡೆಯಲಿದೆ.
ಈವರಗೆ ರಾಜ್ಯಕ್ಕೆ ಸುಮಾರು 1.87 ಲಕ್ಷ ಕೋಟಿ ರೂಪಾಯಿಗಳ ಅನ್ಯಾಯವಾಗಿದೆ. ಅಲ್ಲದೇ ಮುಂದೆಯು ಪ್ರತಿ ವರ್ಷ ಸುಮಾರು 60 ಸಾವಿರ ಕೋಟಿ ರೂಗಳಷ್ಟು ನಷ್ಟವಾಗಲಿದೆ. ಬರ ಪರಿಹಾರವೂ ಸಿಗದೇ ಕರ್ನಾಟಕದ ಜನತೆ ಕಷ್ಟದಲ್ಲಿ ಕಾಲ ದೂಡುವಂತಾಗಿದೆ. ಇಂತಹ ಸಂದರ್ಭದಲ್ಲಿ ನನ್ನ ತೆರಿಗೆ ನನ್ನ ಹಕ್ಕು ಎಂಬ ಹೋರಾಟ ರೂಪುಗೊಂಡಿದೆ ಎಂದು ಕನ್ನಡ ಪರ ಸಂಘಟನೆಗಳ ಶಿವಣ್ಣ ಗುಂಡಣ್ಣನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಕನ್ನಡ ನಾಡಿನ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರೊಂದಿಗೆ ಕನ್ನಡ ಪರ ಕಾರ್ಯಕರ್ತರು ಟ್ವಿಟರ್ (ಎಕ್ಸ್) ಸ್ಪೇಸ್‌ನಲ್ಲಿ ನೇರ ಮಾತುಕತೆಯನ್ನು ಹಮ್ಮಿಕೊಂಡಿದ್ದೇವೆ. ಫೆಬ್ರವರಿ 14ರ ಸಂಜೆ 6 ಗಂಟೆಗೆ ಸರಿಯಾಗಿ @karnatabala (ಕರ್ನಾಟ ಬಲ) ಟ್ವಿಟರ್ ಹ್ಯಾಂಡಲ್‌ನಲ್ಲಿ ಮಾತುಕತೆ ನಡೆಯಲಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯನವರ ಅಧಿಕೃತ ಫೇಸ್‌ಬುಕ್ ಪುಟ ಸೇರಿದಂತೆ ಹಲವು ಕನ್ನಡಪರ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಖಾತೆಗಳಲ್ಲಿ ಈ ಮಾತುಕತೆ ನೇರಪ್ರಸಾರವಾಗಲಿದೆ. ಕನ್ನಡ ಪರ ಕಾರ್ಯಕರ್ತರು ಎತ್ತುವ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರು ಉತ್ತರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.