ಮುರುಘಾ ಶ್ರೀ ವಿರುದ್ಧದ ಸಾಮೂಹಿಕ ಅತ್ಯಾಚಾರ, ಅಟ್ರಾಸಿಟಿ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

Most read

ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅಟ್ರಾಸಿಟಿ ಸಾಮೂಹಿಕ ಅತ್ಯಾಚಾರ ಸೇರಿ ವಿವಿಧ ಸೆಕ್ಷನ್‌ಗಳ ಅಡಿ ಆರೋಪ ನಿಗದಿ ಮಾಡಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಜಾ ಮಾಡಿ ಆದೇಶ ಮಾಡಿದೆ.

2023ರ ಏಪ್ರಿಲ್‌ 13 ಮತ್ತು 20೦ರಂದು ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ತಮ್ಮ ವಿರುದ್ಧ ಆರೋಪ ನಿಗದಿ ಮಾಡಿರುವ ಆದೇಶಗಳನ್ನು ವಜಾ ಮಾಡುವಂತೆ ಕೋರಿ ಡಾ. ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

ಪ್ರಾಸಿಕ್ಯೂಷನ್ ಬಿಂಬಿಸಿದ್ದನ್ನು ಆಧರಿಸಿ ಆರೋಪ ನಿಗದಿ ಮಾಡುವಾಗ ವಿಶೇಷ ನ್ಯಾಯಾಲಯವು ಕೇವಲ ಅಂಚೆ ಕಚೇರಿಯಂತೆ ವರ್ತಿಸಬಾರದಿತ್ತು. ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ-1988ರ ಸೆಕ್ಷನ್‌ಗಳಾದ 3(ಎಫ್‌), 3(ಸಿ), 3(5) ಮತ್ತು 7 ಮುರುಘಾ ಮಠಕ್ಕೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್‌ನ ಸಮನ್ವಯ ಪೀಠ ಆದೇಶದಲ್ಲಿ ಹೇಳಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ–1989ರ ಸೆಕ್ಷನ್‌ಗಳಾದ 3(1)(ಡಬ್ಲ್ಯು)(i)(ii), 3(2)(v)(v-a) ಇಲ್ಲಿ ಅನ್ವಯಿಸುವುದಿಲ್ಲ. ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ಸೆಕ್ಷನ್‌ 75 ಅನ್ನು ತಪ್ಪಾಗಿ ಮುರುಘಾ ಶರಣರಿಗೆ ಅನ್ವಯಿಸಲಾಗಿದ್ದು, ಇದು ಪ್ರಕರಣದಲ್ಲಿ ಎರಡನೇ ಆರೋಪಿ ಬಸವಶ್ರೀಗೆ ಅನ್ವಯಿಸುತ್ತದೆ. ಮುರುಘಾ ಶ್ರೀ ವಿರುದ್ಧ ತಪ್ಪಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ವರದಿಯಾಗುವುದಕ್ಕೂ ಮುನ್ನ 3.5 ವರ್ಷಗಳ ಹಿಂದೆ ಸಾಕ್ಷ್ಯ ನಾಶಪಡಿಸಲಾಗಿದ್ದು, ಐಪಿಸಿ ಸೆಕ್ಷನ್‌ 201ರ ಅಡಿ ತಪ್ಪಾಗಿ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಆದರೆ, ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ 376(2)ಎನ್‌ ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ–2012ರ ಸೆಕ್ಷನ್‌ 4 ಮತ್ತು 6ರ ಅಡಿ ಆರೋಪ ಮುಂದುವರಿಯಲಿವೆ. ಹೊಸದಾಗಿ ಆರೋಪ ನಿಗದಿ ಮಾಡಿ, ಪ್ರಕ್ರಿಯೆ ಮುಂದುವರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಆರೋಪ ನಿಗದಿ ಎಂಬುದು ಸಮಗ್ರ ವರದಿಯಾಗಿದ್ದು, ಈ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಆರೋಪಿ ಮುರುಘಾ ಶರಣರ ವಿರುದ್ಧ ಮರು ಆರೋಪ ನಿಗದಿ ಮಾಡಬೇಕು.

2023ರ ನವೆಂಬರ್‌ 23ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯವು ಇಂದು ಪ್ರಕಟಿಸಿದ್ದು, ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

More articles

Latest article