ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆಯನ್ನು ನಡೆಸಲಿದೆ. ಮೊದಲು ನೈತಿಕ ಬೆಂಬಲವೂ ಕೊಡುವುದಿಲ್ಲ ಎಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈಗ ಪಾದಯಾತ್ರೆಯನ್ನು ಉದ್ಘಾಟಿಸಿದ್ದಾರೆ. ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಪಾದಯಾತ್ರೆ ಚಾಲನೆ ಸಿಕ್ಕಿದೆ.
ಪಾದಯಾತ್ರೆ ಕುರಿತು ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿ ಅಧಿಕಾರ ಹಿಡಿದಿದೆ. ಆದರೆ ಅಹಿಂದ ವರ್ಗಕ್ಕೆ ದ್ರೋಹ ಬಗೆದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ತುಳಿತಕ್ಕೆ ಒಳಗಾದ ವರ್ಗಕ್ಕೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮೂಡಾ, ವಾಲ್ಮೀಕಿ ಹಗರಣ, SCPTSP ಹಣ ದುರ್ಬಳಕೆ ಸೇರಿದಂತೆ ಹಲವು ವಿಚಾರ ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಈ ವೇಳೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವರಾದ ವಿ ಸೋಮಣ್ಣ, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಜಿಟಿ ದೇವೇಗೌಡ, ಡಿವಿ ಸದಾನಂದ ಗೌಡ, ನಿಖಿಲ್ ಕುಮಾರಸ್ವಾಮಿ, ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಚಲುವರಾಯಸ್ವಾಮಿ ಟೀಕೆ
ಕುಮಾರಸ್ವಾಮಿ ಪಾದಯಾತ್ರೆಗೆ ಬೆಂಬಲ ಕೊಡುವುದು ಅವರಿಗೆ ಗೊತ್ತಿರುವ ವಿಚಾರ ಮತ್ತು ಅವರ ನಿರ್ಧಾರ. ಆರಂಭದಲ್ಲಿ ಬೆಂಬಲ ಕೊಡುವುದಿಲ್ಲ ಎಂದಿದ್ದರು. ಈಗ ಬೆಂಬಲ ನೀಡುತ್ತಿದ್ದಾರೆ, ಅಧಿಕಾರದಿಂದ ತೆಗಿತೀವಿ ಅಂದರೆ ಬೆಂಬಲ ಕೊಡಬೇಕಲ್ಲವೇ ಎಂದು ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.