ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಇಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಲೋಕಾಯುಕ್ತ ತನಿಖೆಯನ್ನು ಬಿಜೆಪಿ ಪ್ರಶ್ನೆ ಮಾಡುವುದು ಸರಿ ಅಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ಪರಮೇಶ್ವರ್ ಪ್ರತಿಕ್ರಿಯಿಸಿ ಮುಡಾ ಪ್ರಕರಣವನ್ನು ಸಿಬಿಐಗೆ ಕೊಡುವ ವಿಷಯದಲ್ಲಿ ಹೈಕೋರ್ಟ್ ಆದೇಶ ಮಾಡಿದೆ. ಸಿಬಿಐಗೆ ಕೊಡುವ ಅಗತ್ಯ ಇಲ್ಲ. ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಎರಡು ಏಜೆನ್ಸಿಗಳು ಒಂದೇ ವಿಷಯದಲ್ಲಿ ತನಿಖೆ ಮಾಡೋದು ಕಾನೂನಿಗೆ ವಿರುದ್ದ ಎಂದು ಹೈಕೋರ್ಟ್ ಹೇಳಿದೆ. ಲೋಕಾಯುಕ್ತ ತನಿಖೆ ನಡೆಸಿಯೇ ಕ್ಲೀನ್ ಚಿಟ್ ಕೊಟ್ಟಿದೆ ಎಂದರು.
ಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಂಡ ಸಚಿವ ಚಲುವರಾಯಸ್ವಾಮಿ ಮುಡಾ ಅಕ್ರಮ ನಡೆದಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕ್ರಮ ಆಗುವುದಿದ್ದರೆ ಬಿಜೆಪಿಯವರ ಮೇಲೆ ಆಗಬೇಕು ಎಂದರು. ಮುಡಾ ಕೇಸ್ನಲ್ಲಿ ಸತ್ಯ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ನಿವೇಶನ ಹಂಚಿಕೆಯಲ್ಲಿ ಸಿಎಂ ಯಾವುದೇ ಪ್ರಭಾವ ಬೀರಿಲ್ಲ. ಯಾವುದೇ ಲೆಟರ್ ಬರೆದಿರಲಿಲ್ಲ. ಬದಲಿ ನಿವೇಶನ ಎಲ್ಲರಿಗೂ ಕೊಡಲಾಗುತ್ತದೆ. ಅದರಂತೆ ಸಿಎಂ ಪತ್ನಿಗೂ ಕೊಟ್ಟಿದ್ದಾರೆ. ಲೋಕಾಯುಕ್ತ ಹೈಕೋರ್ಟ್ ಗೆ ವರದಿ ಕೊಟ್ಟಿದೆ. ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡಲು ಸಾಧ್ಯ? ಬಿಜೆಪಿಯವರು ಮಂಡು ಬಿದ್ದಿದ್ದಾರೆ ಎಂದು ಹೇಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.