ಬಿಜೆಪಿ ಥೇಟ್ ಈಗ ಒಡೆದ ಮನೆಯಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನಲಾದ ಪ್ರಧಾನಿ ನರೇಂದ್ರ ಮೋದಿಯೇ ಬಂದರೂ ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಮುಖಭಂಗ ನಿಶ್ಚಿತ ಎಂದು ಸ್ವತಃ ಬಿಜೆಪಿ- ಜೆಡಿಎಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ – ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಬಿಜೆಪಿಯೇನೋ ಮೂಡಾ ಹಗರಣವನ್ನು ಇಟ್ಟುಕೊಂಡು ಹಿಗ್ಗಾಮುಗ್ಗಾ ಎಳೆದಾಡುತ್ತಿದೆ. ಅದಕ್ಕೆ ಪೂರಕವಾಗಿ ವಿವಿಧ ತನಿಖಾ ಸಂಸ್ಥೆಗಳನ್ನು ಬಿಟ್ಟು ತನಿಖೆಯನ್ನೂ ಮಾಡಿಸುತ್ತಿದೆ. ಆದರೆ ಇದರ ಹಿಂದೆ ಬಿಜೆಪಿಯ ನಾಯಕತ್ವ ಸಮಸ್ಯೆ ಕೂಡ ಇದೆ ಎಂಬುದನ್ನು ಅಲ್ಲಗಳೆಯಲು ಬಿಜೆಪಿ ನಾಯಕರಿಗೇ ಸಾಧ್ಯವಿಲ್ಲ!
ಹೌದು, ಮೂಡಾ ಹಗರಣ ಬಯಲಿಗೆ ತಂದಿದ್ದು ಬಿಜೆಪಿ ನಾಯಕರು ಅಲ್ಲವೇ ಅಲ್ಲ. ಇದು ಹೊರ ಬಂದಿದ್ದೇ ಕಾಂಗ್ರೆಸ್ ನಾಯಕರಿಂದ ಹಾಗೂ ಸಿದ್ದರಾಮಯ್ಯನವರ ಸುತ್ತ ಇರುವ ಮೈಸೂರು ಭಾಗದ ಆಪ್ತರಿಂದ. ಆದರೆ ಬಳಸಿಕೊಂಡಿದ್ದು ಮಾತ್ರ ಬಿಜೆಪಿ. ಬಿಜೆಪಿಗೆ ಮೂಡಾ ಹಗರಣದಲ್ಲಿ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುವ ಉದ್ದೇಶಕ್ಕಿಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶೈನ್ ಆಗುವುದೇ ಮುಖ್ಯವಾಗಿದೆ. ಯಾಕೆಂದರೆ ಈ ಹಗರಣ ಪಕ್ಕಾ ಭ್ರಷ್ಟಾಚಾರ ಅಥವಾ ಸ್ವಜನ ಪಕ್ಷಪಾತ ಅಲ್ಲವೇ ಅಲ್ಲ ಎಂಬುದು ಬಿಜೆಪಿ ನಾಯಕರಿಗೂ ಚೆನ್ನಾಗಿ ಗೊತ್ತು. ಅದೇ ಕಾರಣಕ್ಕೆ ಬಿಜೆಪಿ ಈ ಹೋರಾಟವನ್ನು ಮುಂದೆ ಇಟ್ಟುಕೊಂಡು ಹಾರಾಟ ನಡೆಸಿರುವುದು; ಮೈಸೂರು ವರೆಗೆ ಪಾದಯಾತ್ರೆ ನಡೆಸಿರೋದು! ಇದೇ ವೇಳೆ ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ನಮಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿಕೆ ಕೊಟ್ಟರು. ಮತ್ತೊಬ್ಬ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಸವನಗೌಡ ಯತ್ನಾಳ್ ಬಿ.ವೈ.ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಹರಿ ಹಾಯ್ದು ಭ್ರಷ್ಟಾಚಾರದ ಕಂತೆ ಊದಿದರು! ಇಷ್ಟೆಲ್ಲಾ ಆದ ಮೇಲೂ ಮೂಡಾ ಹಗರಣದ ಅಸಲಿಯತ್ತೇನು? ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಕರುನಾಡಿನ ಜನ ದಡ್ಡರಲ್ಲ.
ಕರುನಾಡಿನ ಜನ ಬಹಳ ಬುದ್ಧಿವಂತರು, ಅದೇ ಕಾರಣಕ್ಕೆ ಬಿಜೆಪಿ ನಾಯಕರ ಡ್ರಾಮಾಗಳನ್ನು ನಂಬದೆ ಈ ಸಾರಿ ಕಾಂಗ್ರೆಸ್ ಕೈ ಹಿಡಿದರು. ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯ ಸಾರಾ ಸಗಟಾಗಿ ಕಾಂಗ್ರೆಸ್ ಗೆ ಜೈ ಅನ್ನಲು ಕಾರಣ ಬಿಜೆಪಿ ಮಾಡಿಕೊಂಡಿರುವ ಯಡವಟ್ಟು. ಕಳೆದ ಬಾರಿ ಮೀಸಲಾತಿ ಜಾರಿಗೊಳಿಸದೆ ಮೀಸಲಾತಿ ಜಾರಿಗೆ ತಂದೇ ಬಿಟ್ಟೆವು ಎಂದು ಹೇಳಿದ್ದರು. ಅದು ಸುಳ್ಳು ಎಂದು ಸಂಘಟನೆಗಳು ತಿರುಗಿಬಿದ್ದಾಗ ಸರ್ಕಾರದ ಆದೇಶ ಹೊರ ಬಿದ್ದಿತು. ಆದರೆ ಅದೇ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರ “ಮೀಸಲಾತಿ ಹೆಚ್ಚಳ ನಮ್ಮ ಮುಂದೆ ಇಲ್ಲವೇ ಇಲ್ಲ ” ಎಂದು ಲೋಕಸಭೆ ಸದನದಲ್ಲೇ ಉತ್ತರ ನೀಡಿ ಕೈ ತೊಳೆದುಕೊಂಡಿತು. ಇಷ್ಟಾದರೂ ದಲಿತರು ತಮ್ಮ ಕೈ ಹಿಡಿಯುತ್ತಾರೆ ಎಂದು ಬೊಬ್ಬೆ ಹೊಡೆದವರಿಗೆ ಜನ ಶ್ರೀರಾಮುಲು, ಗೋವಿಂದ ಕಾರಜೋಳ ಆದಿಯಾಗಿ ಸಾಲು ಸಾಲು ನಾಯಕರನ್ನು ಸಾರಾ ಸಗಟಾಗಿ ಮಲಗಿಸಿ ಉಂಡೆನಾಮ ತಿಕ್ಕಿದರು. ಇಷ್ಟಾದರೂ ಬಿಜೆಪಿ ನಾಯಕರು ಪುಂಗುವುದನ್ನು ಬಿಡದೆ “ಹೆಂಗ್ ಪುಂಗ್ಲಿ?” ಎಂದು ಪುಂಗುತ್ತಲೇ ಇದ್ದಾರೆ. ಈ ಮೂಡ ಹಗರಣದಲ್ಲಿ ಆಗಿದ್ದೂ ಇದೆ.
ಈಗ ಮೂಡಾ ಹಗರಣ ಎಂದು ಹೇಳಿ ಎಂದೂ ತನ್ನನ್ನು ಮಾಧ್ಯಮಗಳಿಗೆ ತೋರಿಸದ ಸಿದ್ದರಾಮಯ್ಯ ಪತ್ನಿಯನ್ನು ಎಳೆದಾಡುತ್ತಿದ್ದಾರೆ. ಕೊನೆಗೆ ತಲೆಕೆಟ್ಟು ಈ ಬಿಜೆಪಿ ನಾಯಕರ ಹುಚ್ಚಾಟ ಸಹಿಸದೆ ಆ ಮಹಾತಾಯಿ ತನ್ನ ತವರು ಮನೆಯಿಂದ ಕೊಟ್ಟ ಜಾಗವೇ ಇಲ್ಲ ಎಂದುಕೊಂಡು ಮೂಡಾಗೆ ವಾಪಸ್ ಬಿಟ್ಟು ಕೊಟ್ಟು ತಣ್ಣೀರು ಸುರಿದುಕೊಂಡರು. ಆದರೂ ಪಾಪ ಬಿಜೆಪಿ ನಾಯಕರು ಸುಮ್ಮನಿರದೆ ಕಿರುಚುತ್ತಿದ್ದಾರೆ.
ಬಿಜೆಪಿಗೆ ನಾಯಕತ್ವ ಕೊರತೆ:
ಅಸಲಿ ಸತ್ಯ ಏನು ಎಂದರೆ ಬಿಜೆಪಿಗೆ ರಾಜ್ಯ ಘಟಕದಲ್ಲಿ ನಾಯಕತ್ವ ಸಮಸ್ಯೆ ಕಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಮಕಾವಾಸ್ತೆ ದೆಹಲಿ ನಾಯಕರಾದರು! ಕೆ.ಎಸ್.ಈಶ್ವರಪ್ಪ ಮನೆ ಸೇರಿದರು. ಆಯನೂರು ಮಂಜುನಾಥ್, ಲಕ್ಷ್ಮಣ ಸವದಿ ಬಿಜೆಪಿಯೆಂಬ ಮನೆಯಲ್ಲಿ ಜಗಳ ಮಾಡಿ ಮನೆ ಬಿಟ್ಟರು. ಯತ್ನಾಳ್ ರನ್ನ ಬಿಜೆಪಿಯವರೇ ನಾಯಕನಲ್ಲ ಎಂದರು. ಶ್ರೀರಾಮುಲು ಎರಡೆರಡು ಬಾರಿ ಸೋತು ಸುಣ್ಣವಾದರು. ಬೊಮ್ಮಾಯಿ ಬಾಯಿ ಬಡಿದುಕೊಂಡು ದೆಹಲಿ ಚಲೋ ಶುರು ಮಾಡಿದರು. ಶೋಭಾ ಕರಂದ್ಲಾಜೆಗೆ ಬಿಜೆಪಿ ಕೆಲ ನಾಯಕರೇ ರಾಜ್ಯದ ಕಡೆ ತಲೆ ಹಾಕಬೇಡಿ ಎಂದರು. ಪ್ರಹ್ಲಾದ್ ಜೋಶಿಯನ್ನು ಬಿಜೆಪಿಗರೇ ಒಪ್ಪದಾದರು. ಇದೀಗ ಮತ್ತೆ ಮನೆ ಸೇರಿದ ಜನಾರ್ಧನ ರೆಡ್ಡಿಯನ್ನೂ ದೂರ ಇಟ್ಟರು. ಹೀಗೆ ಎಲ್ಲ ಘಟಾನುಘಟಿಗಳೆಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಗೆ ನಾಯಕರೇ ಇಲ್ಲ. ಚಲವಾದಿ ನಾರಾಯಣಸ್ವಾಮಿ, ರೇಣುಕಾಸ್ವಾಮಿ ಬಿಟ್ಟರೆ ಬಿಜೆಪಿಗೆ ಬೇರೆ ಗತಿ ಇಲ್ಲ. ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರಿಗೆ ಗತಿ ಇಲ್ಲ. ಉಳಿದವರಿಗೆ ಮತಿ ಇಲ್ಲ. ಇಷ್ಟಾದರೂ ಬಿಜೆಪಿ ರಾಜ್ಯಾಧ್ಯಕ್ಷರನ್ನೇ ಕಾರ್ಯಕರ್ತರೂ ನಾಯಕ ಎಂದು ಒಪ್ಪುತ್ತಿಲ್ಲ. ಇದು ಸದ್ಯದ ಬಿಜೆಪಿ ಪರಿಸ್ಥಿತಿಯಾಗಿದೆ.
ಶ್ರೀರಾಮುಲು v/s ಜನಾರ್ಧನ ರೆಡ್ಡಿ:
ಇನ್ನು, ಇಷ್ಟು ದಿನ ಶ್ರೀರಾಮುಲು ಮಾಸ್ ಲೀಡರ್ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರೇ ಶ್ರೀರಾಮುಲು ಅವರನ್ನು ಬಳ್ಳಾರಿಗೆ ಕಳುಹಿಸಿದರು. ಅತ್ತ ಜನಾರ್ಧನ ರೆಡ್ಡಿ ಜೈಲಿನಿಂದ ಬರುತ್ತಿದ್ದಂತೆ ಬಳ್ಳಾರಿ ಸ್ವಾಧೀನಕ್ಕೆ ಹಾತೊರೆಯುತ್ತಿದ್ದರು. ಹೀಗಾಗಿ ಸ್ನೇಹಿತರ ಮಧ್ಯದಲ್ಲೆ ಕೆಲವರು ಹುಳ ಬಿಟ್ಟು ಆಟ ಆಡಿದರು. ಈಗ ಅದೇ ಬಿಜೆಪಿಯಲ್ಲಿ ಬಳ್ಳಾರಿ ದಣಿಗಳಾದ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಸರಿ ಇಲ್ಲ ಎಂದು ಗುಸು ಗುಸು ಹಬ್ಬಿಸಿದರು!
ಇದು ಬಿಜೆಪಿ ಕೇಂದ್ರ ನಾಯಕರಿಗೆ ವರವಾಯಿತೆ ಹೊರತು ರಾಜ್ಯ ನಾಯಕರಿಗೆ ಅಲ್ಲ. ಇಬ್ಬರ ಜಗಳ ಮೂರನೆಯವರಿಗೆ ಲಾಭ. ಹೀಗಾಗಿಯೇ ಸಂಡೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಅಭ್ಯರ್ಥಿ ಸಿಗದೆ ಬಂಗಾರು ಹನುಮಂತು ಎಂಬಾತನಿಗೆ ಬಿಜೆಪಿ ಏಕಾಏಕಿ ಟಿಕೆಟ್ ಕೊಡಿಸಿ ಇದು ಹೈಕಮಾಂಡ್ ನಿರ್ಧಾರ ಎಂಬ ಲೇಬಲ್ ಅಂಟಿಸಿ ಹೆಸರು ಹೊರ ದಬ್ಬಿತು. ಆದರೆ ಬಹುತೇಕ ಸಂಡೂರು ಹಾಗೂ ಸುತ್ತಮುತ್ತಲಿನ ಜನರಿಗೇ ಆ ಹನುಮಂತರಾಯ ಗೊತ್ತಿಲ್ಲ! ಆದರೂ ತುಕಾರಾಂ ಪತ್ನಿ ಎದುರು ಅನಿವಾರ್ಯವಾಗಿ ಹೋರಾಟ ನಡೆಸಬೇಕಾಗಿದೆ ಬಿಜೆಪಿ. ಯಾಕೆಂದರೆ ಅದು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ.
ಮೂಡಾ ಹಗರಣ ಹಿಡಿದು ಆಟ ಆಡಿದ ಕಾರಣಕ್ಕೆ ಬಿಜೆಪಿ ಉಪ ಚುನಾವಣೆಯಲ್ಲಿ ಸಂಡೂರಿನಲ್ಲಿ, ಚನ್ನಪಟ್ಟಣದಲ್ಲಿ, ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಮ್ಮತದ ಅಭಿಪ್ರಾಯ ಹಂಚಿಕೆ ಮಾಡಿಕೊಂಡು ಶಿಗ್ಗಾವಿಯಲ್ಲಿ ಬೊಮ್ಮಾಯಿ ಮಗನಿಗೆ, ಚನ್ನಪಟ್ಟಣದಲ್ಲಿ ದೇವೇಗೌಡರು ತಮ್ಮ ಮೊಮ್ಮಗನಿಗೆ ಟಿಕೆಟ್ ನೀಡಿದ್ದಾರೆ. ಇದರಿಂದಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು “ಅಂಬೋ…” ಎನ್ನುತ್ತಿದ್ದಾರೆ.
ಬಿಜೆಪಿಯ ಈ ದ್ವಂದ್ವ ನೀತಿಯಿಂದಾಗಿಯೇ ಚೆನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಮಲ ಪಾಳಯಕ್ಕೆ ಕೈಕೊಟ್ಟು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವಕ್ಕೇ ಕಿತ್ತಾಟ ನಡೆಯುತ್ತಿರುವಾಗ ಇನ್ನು ಸುಸೂತ್ರವಾಗಿ ಚುನಾವಣೆ ನಡೆಸುವುದು ಎಲ್ಲಿದ ? ಬಿಜೆಪಿ ಥೇಟ್ ಈಗ ಒಡೆದ ಮನೆಯಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನಲಾದ ಪ್ರಧಾನಿ ನರೇಂದ್ರ ಮೋದಿಯೇ ಬಂದರೂ ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಮುಖಭಂಗ ನಿಶ್ಚಿತ ಎಂದು ಸ್ವತಃ ಬಿಜೆಪಿ- ಜೆಡಿಎಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಕೊನೆ ಮಾತು:
ಮೂಡಾ ಹಗರಣ ಹಿಡಿದುಕೊಂಡು ಗುದ್ದಾಡಲು ಹೋದ ಬಿಜೆಪಿ ನಾಯಕರಿಗೆ ಸಿದ್ದು ಕೊಟ್ಟ ಅಭಿವೃದ್ಧಿಯ ಏಟು ಸುಧಾರಿಸಿಕೊಳ್ಳೋದು ಕಷ್ಟವಾಗಿದೆ.
ಹೋರಾಟಗಾರರು, ಸಾಹಿತಿ, ಹಿರಿಯ ಪತ್ರಕರ್ತರು.
ಇದನ್ನೂ ಓದಿ- ಕೋಟಿವಿದ್ಯೆ ತಂತ್ರಕ್ಕೆ ಯಾವುದದು ಛೂಮಂತ್ರ !