ಮುಡಾ ಹಗರಣ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ಸಾಮಾಜಿಕ ಕಾರ್ಯಕರ್ತ ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಪತ್ರ ಬರೆದಿದ್ದು ಕೃಷ್ಣ ಅವರು ಲೋಕಾಯುಕ್ತ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಮುಡಾ ಹಗರಣ ಕುರಿತು ತನಿಖೆ ನಡೆಸಲು ನ್ಯಾಯಾಲಯವೇ ಮೈಸೂರು ಲೋಕಾಯುಕ್ತ ಎಸ್ ಪಿ ಅವರಿಗೆ ನಿರ್ದೇಶನ ನೀಡಿದ್ದು ಅದರಂತೆ ತನಿಖೆ ನಡೆಯುತ್ತಿದೆ. ಆದರೆ ಈ ಪ್ರಕರಣ ಕುರಿತು ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಅವರು ಪ್ರತಿದಿನ ಲೋಕಾಯುಕ್ತ ಕಚೇರಿ ಮುಂದೆ ಮಾಧ್ಯಮ ಗೋಷ್ಟಿ ನಡೆಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ.ಪಾರ್ವತಿಯವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಜೊತೆಗೆ ಲೋಕಾಯುಕ್ತ.ಎಸ್.ಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧವೂ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.
ಮುಖ್ಯಮಂತ್ರಿಗಳು ದಾಖಲೆಗಳನ್ನು ತಿರುಚಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದೂ ಆರೋಪಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಲ್ಲಿ
ಜನಸಾಮಾನ್ಯರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಹೇಳಿದ್ದಾರೆ.
ಇದಲ್ಲದೆ ಲೋಕಾಯುಕ್ತ ಎಸ್ ಪಿರವರು ಇದೇ ರೀತಿ ತನಿಖೆ ನಡೆಸಬೇಕು, ಇಲ್ಲದಿದ್ದರೆ ಇವರ ವಿರುದ್ಧವೂ ರಾಜ್ಯಪಾಲರಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಲೋಕಾಯುಕ್ತ ಕಛೇರಿಯಲ್ಲಿ CCTV ಇರುವುದಿಲ್ಲ ಮತ್ತು ಲೋಕಾಯುಕ್ತ ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಮೂಲಕ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಕೃಷ್ಣ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ .ಮುಖಂಡರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಗುಮಾನಿ ಜನಸಾಮಾನ್ಯರಲ್ಲಿ ಉಂಟಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೀಲ್ ಹಾಕಿ ಕಡತಗಳ ಜೊತೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿರುತ್ತದೆ.
ಆದ್ದರಿಂದ ಕೃಷ್ಣ ಅವರ ವಿರುದ್ಧ ಕೂಡಲೇ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಮುಡಾ ಹಗರಣ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ಇವರನ್ನು ಬಂಧಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಸ್ನೇಹಮಯಿ ಕೃಷ್ಣರವರ ವಿರುದ್ಧ ಈಗಾಗಲೇ ಮೈಸೂರು ನಗರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬ್ಲಾಕ್ ಮೈಲ್, ವಸೂಲಿ, ಕೊಲೆ ಬೆದರಿಕೆ ಕುರಿತು ಸುಮಾರು 40 FIR ಗಳು ದಾಖಲಾಗಿವೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.