ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ.
ನಮ್ಮ ಸಂಬಂಧಿಯೊಬ್ಬನನ್ನು ಜತೆಗೂಡಿಸಿಕೊಂಡು ಜಿ.ಟಿ. ದಿನೇಶ್‌ಕುಮಾರ್ ಮತ್ತು ಮುಡಾ ಅಧಿಕಾರಿಗಳು 50 ಕೋಟಿ ರೂ. ಬೆಲೆ ಬಾಳುವ 5 ಎಕರೆ 14ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡು ನಮಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಉಡುಪಿ ಮೂಲದ ವೃದ್ಧ ದಂಪತಿ ಮತ್ತು ಅವರ ಪುತ್ರ ರಾಜ್ಯಪಾಲರು, ಜಿಲ್ಲಾಧಿಕಾರಿಗಳು ಮತ್ತು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ವೃದ್ಧ ದಂಪತಿ ಸುಬ್ರಹ್ಮಣ್ಯ, ದೇವಕಿ ಮತ್ತು ಅವರ ಪುತ್ರ ವಿಕ್ಕಿ ಈ ಆರೋಪ ಮಾಡಿದ್ದಾರೆ.
1986 ರಲ್ಲಿ ಮೈಸೂರು ತಾಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದ ಸರ್ವೆ ನಂ. 118 ರಲ್ಲಿ 5 ಎಕರೆ 14 ಗುಂಟೆ ಜಮೀನನ್ನು ಖರೀದಿ ಮಾಡಲಾಗಿತ್ತು. ಇದು ದೇವಕಿ ಅವರ ಹೆಸರಲ್ಲಿ ಕ್ರಯವಾಗಿ ಖಾತೆಯಾಗುತ್ತದೆ. ನಂತರ ಈ ಭೂಮಿ ಸುಬ್ರಹ್ಮಣ್ಯ ಅವರ ಹೆಸರಿಗೂ ಜಂಟಿ ಖಾತೆಯಾಗುತ್ತದೆ. ಇದಾದ ಬಳಿಕ 1991ರಲ್ಲಿ ಮುಡಾ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಿದ್ದು, ಈ ವೇಳೆ ಇದನ್ನು ತಿಳಿದ ನನ್ನ ಸೋದರ ಪೊನ್ನಪ್ಪ ನಕಲಿ ಜಿಪಿಎ ಸೃಷ್ಟಿಸಿಕೊಂಡು, ತಾನೇ ಜಮೀನು ಹಕ್ಕುದಾರ ಎಂದು ಬಿಂಬಿಸಿ ಮುಡಾ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಆತ ನೀಡಿದ ನಕಲಿ ಜಿಪಿಎ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜಮೀನು ಜಂಟಿ ಖಾತೆಯಲ್ಲಿದ್ದರೂ ಮುಡಾ ಅಧಿಕಾರಿಗಳು ಪರಿಶೀಲನೆ ಮಾಡದೇ ಪೊನ್ನಪ್ಪ ಅವರಿಗೆ ಪರಿಹಾರ ನೀಡಿದ್ದಾರೆ.
ಬಳಿಕ ಈ ವಿಚಾರ ತಿಳಿದು 2023 ರಲ್ಲಿ ಮುಡಾ ಆಯುಕ್ತರಾಗಿ ದಿನೇಶ್‌ಕುಮಾರ್ ಅವರಿಗೆ ದೂರು ನೀಡಲಾಯಿತು. ಆದರೆ, ಈ ದೂರನ್ನು ಪರಿಗಣಿಸದೇ ಅವರು 2023 ಜೂನ್‌ನಲ್ಲಿ ನಮ್ಮ ಜಮೀನಿನಲ್ಲಿ ರಸ್ತೆಯನ್ನು ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಿ ಅಕ್ರಮ ವೇಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದರು.