ಬೆಂಗಳೂರು: ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮದಲ್ಲಿ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಹೈಕೋರ್ಟ್ನಲ್ಲಿ ಇಂದು ಆರಂಭವಾಯಿತು. ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ನೀಡಿ 2025ರ ಜನವರಿ 25ಕ್ಕೆ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ನಾಲ್ಕನೇ ಆರೋಪಿ ಭೂ ಮಾಲೀಕ ದೇವರಾಜು ಪರ ವಕೀಲ ದುಷ್ಯಂತ್ ದವೆ ವಾದ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರಣೆಗೂ ಈ ಕೇಸ್ ಗೂ ಸಂಬಂಧವಿಲ್ಲ. 80 ವರ್ಷದ ದೇವರಾಜು ಅವರ ವಿರುದ್ಧ ಯಾವುದೇ ಆರೋಪ ಇಲ್ಲ. ಆದರೂ, ನಮ್ಮ ಕಕ್ಷಿದಾರ ದೇವರಾಜ್ ಗೆ ತೊಂದರೆ ಆಗುತ್ತಿದೆ. ಆದ್ದರಿಂದ ದೇವರಾಜು ಅವರಿಗೆ ಕಾನೂನಿನ ರಕ್ಷಣೆ ನೀಡಬೇಕು. ದೇವರಾಜು ವಿರುದ್ಧ ರಾಜ್ಯಪಾಲರ ಆದೇಶದಲ್ಲಿ ಉಲ್ಲೇಖ ಇಲ್ಲಎಂದರು. 2004ರಲ್ಲಿ ಜಮೀನು ಮಾರಾಟ ಮಾಡಿದ್ದಾರೆ. 2024ರಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗುತ್ತದೆ ಎಂದು ದೇವರಾಜ್ ಅವರಿಗೆ ತಿಳಿದಿರಲಿಲ್ಲ. ವಂಚನೆ ಆರೋಪದಡಿ ದೇವರಾಜ್ ವಿರುದ್ದ ತನಿಖೆಗೆ ಆದೇಶಿಸಲಾಗಿದೆ. 80ನೇ ಇಳಿ ವಯಸ್ಸಿನಲ್ಲಿ ದೇವರಾಜ್ ರಾಜಕೀಯ ದಾಳಿಗೆ ಸಿಲುಕಿದ್ದಾರೆ ಎಂದು ವಾದಿಸಿದರು.
ದೇವರಾಜು ಜಮೀನು ಮಾಲೀಕ ಎನ್ನಲು ಕಂದಾಯ ದಾಖಲೆಗಳಿವೆ. ಜಮೀನು ಡಿನೋಟಿಫಿಕೇಷನ್ ಆದಾಗ ಜಮೀನಿನ ಮೌಲ್ಯ ರೂ. 3ಲಕ್ಷ. ಈಗ 56 ಕೋಟಿ ಆಗಿದೆ ಎಂದು ಹೈಕೋರ್ಟ್ ಆದೇಶದಲ್ಲಿದೆ. ರೈತರು ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದಾಗ ಸರ್ಕಾರ ಪರಿಗಣಿಸುತ್ತದೆ. 1998ರಲ್ಲಿ ಏನಾಯಿತು ಎಂಬುದನ್ನು 2024ರಲ್ಲಿ ತೀರ್ಮಾನಿಸಲಾಗುವುದಿಲ್ಲ. ಮುಡಾ ಈ ಭೂಮಿ ವಶಕ್ಕೆ ಪಡೆಯುವಾಗ ದೇವರಾಜ್ ಹೆಸರಲ್ಲಿಯೇ ಇತ್ತು. ನಂತರ ದೇವರಾಜ್ ಈ ಜಮೀನು ಮಾರಾಟ ಮಾಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಆರಂಭಿಸಿ ಏಕಸದಸ್ಯ ಪೀಠದ ತಪ್ಪುಗಳನ್ನು ವಾದಿಸಬೇಕಿದೆ. 17A ಅನುಮತಿ ನೀಡಿರೋದು ತಪ್ಪಾಗಿದೆ. 17A ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿದೆ. ಆದ್ರೆ ಇದನ್ನೇ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ರಾಜ್ಯಪಾಲರು ಸಚಿವ ಸಂಪುಟ ಸಲಹೆ ಅನುಸಾರ ನಡೆಯಬೇಕು. ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲಎಂದರು.