ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ದೂರುದಾರೊಬ್ಬರು ಹೈಕೋರ್ಟ್ ಗೆ ಕೇವಿಯಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿ ಹೊತ್ತಿನ್ನಲ್ಲಿ ಮುಡಾ ಬದಲಿ ನಿವೇಶನ ಹಂಚಿಕೆ ಬಗ್ಗೆ ದೂರು ಕೊಟ್ಟವರಲ್ಲಿ ಒಬ್ಬರಾಗಿರುವ ಪ್ರದೀಪ್ ಅವರು ಹೈಕೋರ್ಟ್ ಗೆ ಕೇವಿಯಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಮೂಲಕ, ಸಿಎಂ ಸಿದ್ದರಾಮಯ್ಯನವರು ಸಲ್ಲಿಸುವ ಮೇಲ್ಮನವಿಯನ್ನು ಪರಿಗಣಿಸದಂತೆ ಮಾಡಲಾಗಿರುವ ತಂತ್ರಗಾರಿಕೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ದೂರುದಾರರ ವಿಚಾರಣೆ ನಡೆಸದೇ ಸಿದ್ದರಾಮಯ್ಯನವರ ಮೇಲ್ಮನವಿಯನ್ನು ಪರಿಗಣಿಸುವಂತಿಲ್ಲ ಎಂದು ಕೇವಿಯಟ್ ನಲ್ಲಿ ಉಲ್ಲೇಖಿಸಲಾಗಿದೆ.
ಮುಡಾ ಬದಲಿ ನಿವೇಶನ ಹಂಚಿಕೆ ಕುರಿತು ಮೊದಲಿಗೆ ದೂರುದಾರರ ಕೇವಿಯಟ್ ಅರ್ಜಿಯನ್ನು ಪರಿಗಣಿಸಿದ ನಂತರವಷ್ಟೇ ಸಿದ್ದರಾಮಯ್ಯನವರ ಅರ್ಜಿಯನ್ನು ವಿಚಾರಣೆಗೊಳಪಡಿಸಬಹುದು. ಸಿದ್ದರಾಮಯ್ಯನವರ ಅರ್ಜಿಯನ್ನು ಸಲ್ಲಿಸಿದರು ನ್ಯಾಯಾಲಯ ತಕ್ಷಣವೇ ವಿಚಾರಣೆ ಕೈಗೆತ್ತುಕೊಳ್ಳುವುದಕ್ಕೆ ಒಪ್ಪದಿರುವುದೇ ಹೆಚ್ಚು ಎಂದು ಹೇಳಲಾಗುತ್ತಿದೆ.