ಮೈಸೂರು:ಮುಡಾ ಪ್ರಕರಣದಲ್ಲಿ ಮುಡಾದ ಹಿಂದಿನ ಆಯುಕ್ತ ಟಿ ಜೆ ಉದೇಶ್ ಇಂದು ಲೋಕಾಯುಕ್ತ ಎಸ್ ಪಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಆಟೋದಲ್ಲಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ ನಟೇಶ್ ಚಿತ್ರೀಕರಣಕ್ಕೆ ಮುಂದಾದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೆಂಡ ಕಾರಿದರು.
ನಿಮಗೆ ಕಾಮನ್ ಸೆನ್ಸ್ ಇದೆಯಾ? ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ? ನನ್ನ ವೀಡಿಯೋ ಏಕೆ ತೆಗೆಯುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಮಾಧ್ಯಮಗಳ ಕಣ್ತಪ್ಪಿಸಿಕೊಂಡು ಹೋಗಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಇವರ ವಿಚಾರಣೆಗೆ ಕೆಲವು ದಿನಗಳ ಹಿಂದೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಅನುಮತಿ ನೀಡಿದ್ದರು. ಅಂದಿನ ಆಯುಕ್ತ ನಟೇಶ್ ಅವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಿದ್ದರು. ಈ ಹಿನ್ನಲೆಯಲ್ಲಿ ನಟೇಶ್ ಅವರ ಇಂದಿನ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.
ನಾಳೆ ನ. 20 ರಂದು ವಿಚಾರಣೆಗೆ ಹಾಜರಾಗುವಂತೆ ಮುಡಾ ಪ್ರಕರಣದ A-4 ದೇವರಾಜು ಅವರಿಗೆ ಲೋಕಾಯುಕ್ತ ಎಸ್ ಪಿ ನೋಟಿಸ್ ಜಾರಿ ಮಾಡಿದ್ದಾರೆ. ದೇವರಾಜು ಅವರು ಸರ್ವೇ ನಂಬರ್ 464ರ ಜಮೀನು ಮಾಲೀಕರಾಗಿದ್ದರು. ಈ ಹಿಂದೆಯೂ ದೇವರಾಜು ಅವರ ವಿಚಾರಣೆ ಮಾಡಲಾಗಿತ್ತು.ಇದೀಗ ಮತ್ತೊಮ್ಮೆ ಎರಡನೇ ಬಾರಿ ದೇವರಾಜು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಮುಡಾ ಹಿಂದಿನ ಆಯುಕ್ತ ಕಾಂತರಾಜು ಹಾಗೂ ಮುಡಾದ ಮಾಜಿ ಅಧ್ಯಕ್ಷ ಡಿ ಧೃವಕುಮಾರ್ಗೂ ನೋಟಿಸ್ ಜಾರಿ ಮಾಡಲಾಗಿದೆ. ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಲು ಆದೇಶ ಮಾಡಿದಾಗ ಧೃವಕುಮಾರ್ ಮುಡಾ ಅಧ್ಯಕ್ಷರಾಗಿದ್ದರು.