ಮುಡಾ ಪ್ರಕರಣ: ಸಿಎಂ ವಿಚಾರಣೆ ಆರಂಭ; ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುತ್ತಿರುವ ಲೋಕಾಯುಕ್ತ ಪೊಲೀಸರು

Most read

ಮೈಸೂರು: ಮೈಸೂರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರಣೆ ಆರಂಭವಾಗಿದೆ. ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ಎಸ್ ಪಿ ಉದೇಶ್ ಅವರ ನೇತೃತ್ವದ ತಂಡ ಮುಖ್ಯಮಂತ್ರಿಗಳ ವಿಚಾರಣೆ ಆರಂಭಿಸಿದೆ.


ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳು 10.10 ಕ್ಕೆ ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ವಿಚಾರಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ತನಿಖಾಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಯಾವುದೇ ಅಂಜಿಕೆ ಇಲ್ಲದೆ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿದ್ದಾರೆ. ಆಗ ಅಧಿಕಾರಿಗಳು ಎಲ್ಲರಂತೆ ನಿಮ್ಮ ವಿಚಾರಣೆ ಮಾಡುತ್ತೇವೆ ಸರ್ ಎಂದು ಉತ್ತರಿಸಿದ್ದಾರೆ. ನೀವು ಯಾವ ಪ್ರಶ್ನೆ ಬೇಕಾದರೂ ಕೇಳಿ. ನನಗೆ ಗೊತ್ತಿರುವ ವಿಷಯವನ್ನು ನಾನು ಹೇಳುತ್ತೇನೆ. ಕಾನೂನಿನಲ್ಲಿ ಅವಕಾಶ ಇದ್ದರೆ ಕಾಫಿ ತರಿಸಿ. ಇಲ್ಲದಿದ್ದರೆ ಬೇಡ ಎಂದೂ ಹೇಳಿದ್ದಾರೆ.


ಮುಖ್ಯಮಂತ್ರಿಗಳು ಖಾಸಗಿ ಕಾರಿನಲ್ಲಿ ಇಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟರು. ಇವರ ಜತೆಯಲ್ಲಿ ಕಾನೂನು ಸಲಹೆಗಾರ ಪೊನ್ನಣ್ಣ, ಹೆಚ್ಚುವರಿ ಕಾರ್ಯದರ್ಶಿ ಎಲ್ ಕೆ ಅತೀಕ್ ಅಹಮ್ಮದ್, ಸಚಿವ ಕೆ.ವೆಂಕಟೇಶ್ ಮೊದಲಾದವರು ಇದ್ದರು.


ಅಂದಾಜು 2 ಗಂಟೆ ವಿಚಾರಣೆ ನಡೆಯಬಹುದು ಎಂದು ತಿಳಿದು ಬಂದಿದೆ. ಲೋಕಾಯುಕ್ತ ಈಗಾಗಲೇ ಸಿದ್ದರಾಮಯ್ಯ ಅವರ ಪತ್ನಿ ಪತ್ನಿ ಪಾರ್ವತಿ, ಎ-3 ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂ ಮಾಲೀಕ ಎ-4 ದೇವರಾಜು ಅವರ ವಿಚಾರಣೆಯನ್ನು ಮುಗಿಸಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ-1 ಆರೋಪಿಯಾಗಿದ್ದಾರೆ.

More articles

Latest article