ಕಾಂಗ್ರೆಸ್‌ನ ಶಕ್ತಿಯಾಗಿರುವ ಅಹಿಂದ ಸಮುದಾಯದ ಮನೋಬಲವನ್ನು ನುಚ್ಚು ನೂರು ಮಾಡಿದ್ದೇ ಆದರೆ ರಾಜ್ಯವನ್ನು ಆಳಬಹುದೆಂದುಕೊಂಡು ಹೊರಟಿರುವ ಜಾತಿವಾದಿ-ಕೋಮುವಾದಿಗಳ ಮೈತ್ರಿಕೂಟ ಮುಂದು ಮಾಡಿರುವ ಮುಡಾ ಪ್ರಕರಣದ ಆಂತರ್ಯದಲ್ಲಿ ಕರ್ನಾಟಕದಲ್ಲಿ ಶೂದ್ರ ಶಕ್ತಿಯ ರಾಜಕೀಯ ಮುನ್ನಡೆಯನ್ನು ಹತ್ತಿಕ್ಕುವ ಮಹಾ ಪಿತೂರಿ ಅಡಗಿರುವುದು ಬಹಿರಂಗ ರಹಸ್ಯ- ರವಿಕುಮಾರ್ ಟೆಲೆಕ್ಸ್, ಪತ್ರಕರ್ತರು.
ದೇಶದಲ್ಲಿ ಶೂದ್ರ, ದಲಿತ ಮತ್ತು ಅಲ್ಪಸಂಖ್ಯಾತರ ಧ್ರುವೀಕರಣದ ರಾಜಕಾರಣವನ್ನು ಸಹಿಸಿಕೊಳ್ಳದ, ಅದನ್ನು ಎಲ್ಲಾ ಕಾಲದಲ್ಲೂ ಹತ್ತಿಕ್ಕಿದ ಮತ್ತು ಹತ್ತಿಕ್ಕುವ ಪ್ರಯತ್ನಗಳು ಮುಗಿಯವಂತೆ ಕಾಣುತ್ತಿಲ್ಲ. ಇದರಲ್ಲಿ ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣವನ್ನೆ ಅಂತರ್ಗತಗೊಳಿಸಿಕೊಂಡ ಶಕ್ತಿಗಳು-ವ್ಯಕ್ತಿಗಳು ಆಯಾ ಸಂದರ್ಭದಲ್ಲಿ ಮೇಲುಗೈ ಸಾಧಿಸುತ್ತಲೆ ಬಂದಿವೆ.
ಕರ್ನಾಟಕದಲ್ಲಿ ದುರ್ಬಲ ವರ್ಗಗಳ ರಾಜಕೀಯ ಬಲವನ್ನು ಗುರುತಿಸುವುದಾದರೆ ದೇವರಾಜ ಅರಸು ಕಾಲದಿಂದ ಆರಂಭಗೊಳ್ಳುತ್ತದೆ. 1970 ರ ದಶಕದಲ್ಲಿ ಜಾತಿವಾದಿ ರಾಜಕಾರಣವನ್ನು ಮೆಟ್ಟಿ ಬಹುಜನ ರಾಜಕಾರಣವನ್ನು ಯಶಸ್ವಿಯಾಗಿ ಮುನ್ನಡೆಸಿದವರು ದೇವರಾಜ ಅರಸು. ಅರಸು ಹಿಂದುಳಿದ, ಅತಿಹಿಂದುಳಿದ ಮತ್ತು ದಲಿತರಿಗೆ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ಶಕ್ತಿಯನ್ನು ತುಂಬಿದವರು, ಮೂಕಜನರಿಗೆ ಮಾತು ಕೊಟ್ಟವರು. ಆದರೆ ಕೊನೆಗೂ ಅವರನ್ನು ಜಾತಿ ರಾಜಕಾರಣ ಬಲಿ ತೆಗೆದುಕೊಂಡಿತು. 80 ರ ದಶಕದಿಂದೀಚೆಗೆ ರಾಜ್ಯದಲ್ಲಿ ಕೋಮುವಾದಿ ರಾಜಕಾರಣ ಬಲಗೊಂಡ ಪರಿಣಾಮ ಜಾತ್ಯತೀತ ಶಕ್ತಿಗಳು ಇದರ ವಿರುದ್ದ ಒಗ್ಗಟ್ಟಾಗಿ ಹೋರಾಡುವಲ್ಲಿ ವಿಫಲವಾಗಿ ಹೋದವಷ್ಟೆ ಅಲ್ಲ, ಚೂರು ಚೂರಾಗಿ ಸಿಡಿದು ಹೋಗಿವೆ.
ಕೋಮುವಾದದಿಂದ ಮತೀಯ ಧ್ರುವೀಕರಣ ರಾಜಕಾರಣವನ್ನು ಮುನ್ನೆಲೆಗೆ ತಂದ ಬಿಜೆಪಿ ಮತ್ತು ಬಿಜೆಪಿಗೆ ಮಾರ್ಗದರ್ಶಕವಾಗಿ ನಿಂತಿರುವ ಆರ್.ಎಸ್.ಎಸ್ ಇಡೀ ದೇಶದಲ್ಲಿ ಕೋಮುವಾದಿ ರಾಜಕಾರಣವನ್ನು ಅಧಿಕಾರದಲ್ಲಿ ನೆಲೆಕಾಣಿಸಲು ತನ್ನ ಕುತಂತ್ರವನ್ನು ಮುಂದುವರೆಸುತ್ತಲೆ ಇದೆ.
ಉತ್ತರ ಪ್ರದೇಶದಲ್ಲಿ ಕಾನ್ಸಿರಾಂ ಮತ್ತು ಮಾಯಾವತಿ ಅವರು ಅಂಬೇಡ್ಕರ್ ವಿಚಾರಧಾರೆಗಳ ಅಡಿಪಾಯದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹೆಸರಿನಲ್ಲಿ ಪರ‍್ಯಾಯ ಬಹುಜನ ರಾಜಕಾರಣವನ್ನು ಕಟ್ಟಿ ಬೆಳೆಸಿದವರು. ಹಿಂದೂತ್ವದ ರಾಜಕಾರಣವನ್ನು ನೆಲೆಗೊಳಿಸಲು ಮುಂದಾದ ಬಿಜೆಪಿಗೆ ಕಾನ್ಸಿರಾಂ, ಮಾಯಾವತಿ ದೊಡ್ಡ ಗೋಡೆಯೇ ಆಗಿದ್ದರು. 1980 ರ ದಶಕದಲ್ಲಿ ಬ್ರಾಹ್ಮಣರಿಂದ ಶೋಷಿತರಾದ ಎಲ್ಲರನ್ನೂ ಒಂದುಗೂಡಿಸುವಲ್ಲಿ ಯಶಸ್ಸು ಪಡೆದ ಬಹುಜನ ಸಮಾಜಪಕ್ಷ ಆರ್ ಎಸ್ ಎಸ್ ಗೆ ಮತ್ತು ಅದರ ರಾಜಕೀಯ ಸಂಸ್ಥೆ ಬಿಜೆಪಿಗೆ ದೊಡ್ಡ ಸವಾಲಾಗಿತ್ತು.
ಉತ್ತರ ಪ್ರದೇಶದಲ್ಲಿ ಶೂದ್ರ-ಅತಿಶೂದ್ರರ ಕ್ರಾಂತಿಯೆಂದೆ ಕರೆಯಲ್ಪಟ್ಟ ಬಿಎಸ್ಪಿಯ ವಿರೋಚಿತ ಗೆಲುವನ್ನು ಟೀಕಿಸುತ್ತಾ ಆರ್.ಎಸ್.ಎಸ್ ನ ಮುಖವಾಣಿ ’ದಿ ಆರ್ಗನೈಸರ್’ ನಲ್ಲಿ (1994. ಮೇ 1) ಇಂದು ಈ ರಾಜ್ಯಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ತುಂಬುವ ಮತ್ತು ಶೂದ್ರ ಕ್ರಾಂತಿಯನ್ನು ದಮನ ಮಾಡುವ ಪಕ್ಷಗಳ ಅವಶ್ಯಕತೆಯಿದೆ ಎಂಬ ಮಾತುಗಳು ಬರೆಯಲ್ಪಡುತ್ತವೆ. ಇದರರ್ಥ ಈ ದೇಶದಲ್ಲಿ ಶೂದ್ರರು, ಅತಿಶೂದ್ರರ ಸಂಘಟಿತ ರಾಜಕೀಯ ಗೆಲುವನ್ನು ಯಾವ ಕಾಲಕ್ಕೂ ಬಿಜೆಪಿ ಮತ್ತು ಆರ್.ಎಸ್.ಎಸ್ ಸಹಿಸಿಕೊಳ್ಳುವುದಿಲ್ಲ ಎನ್ನುವ ನಿಲುವನ್ನು ಬಹಿರಂಗವಾಗಿ ಅದು ಸ್ಪಷ್ಟಪಡಿಸಿತ್ತು.
ಶೂದ್ರರೂ, ಅತಿಶೂದ್ರರ ಸಂಘಟಿತ ರಾಜಕಾರಣದಿಂದಲೆ ಉತ್ತರ ಪ್ರದೇಶದಲ್ಲಿ ಕೋಮುವಾದಿ ಬಿಜೆಪಿಗೆ ನೆಲೆ ಸಿಗದಂತೆ ಕಾಡಿದ್ದ ಮಾಯಾವತಿ ಕಾಲಾನಂತರದಲ್ಲಿ ಇದೇ ಕೋಮುವಾದಿ ಬಿಜೆಪಿಯ ಜೊತೆಗೆ ಅಧಿಕಾರ ಮೈತ್ರಿ ಮಾಡಿಕೊಂಡದ್ದು ದೊಡ್ಡ ವೈರುಧ್ಯ. ಇದರ ಪರಿಣಾಮ ಉತ್ತರ ಪ್ರದೇಶದಲ್ಲಿ ಬಹುಜನ ರಾಜಕಾರಣ ಮತ್ತು ಬಹುಜನ ನಾಯಕತ್ವವನ್ನು ಬಿಜೆಪಿ ಮುಗಿಸಿ ಹಾಕಿತು. ಇಂದು ಉತ್ತರ ಪ್ರದೇಶದಲ್ಲಿ ಆರ್.ಎಸ್.ಎಸ್ ಬಯಸಿದಂತೆ ಆಗಿದೆ. ಬಹುಜನ ರಾಜಕಾರಣದ ಧ್ವಜದಡಿಯಲ್ಲಿದ್ದ ದಲಿತರು, ಹಿಂದುಳಿದವರು, ಶೋಷಿತರು ಹಿಂದೂತ್ವದ ಕಾಲಾಳುಗಳಾಗಿ ಬಲಿಪೀಠಕ್ಕೆ ಮೀಸಲಿರಿಸಲ್ಪಟ್ಟಿದ್ದಾರೆ.
ಇನ್ನೂ ಕರ್ನಾಟಕದ ಮಟ್ಟಿಗೆ ಮೊದಲಿನಿಂದಲೂ ನೆಲೆಗೊಂಡಿರುವ ಬಲಾಢ್ಯ ಜಾತಿಗಳ ’ಜಾತಿವಾದಿ ರಾಜಕಾರಣ’ಕ್ಕೆ ಈಗ ’ಕೋಮುವಾದಿ ರಾಜಕಾರಣ’ವೂ ಕೈಜೋಡಿಸಿರುವುದು ಜಾತಿವಾದ- ಕೋಮುವಾದದ ವಿಷಕಾರುವ ವಿಷಸರ್ಪಕ್ಕೆ ಸಹಸ್ರತಲೆಗಳು, ನಾಲಿಗೆಗಳು ಮೂಡಿದಂತಾಗಿದೆ.
ಕರ್ನಾಟಕದ ರಾಜಕಾರಣವನ್ನು ಅವಲೋಕಿಸುವಾಗ ಅಧಿಕಾರ ಚುಕ್ಕಾಣಿ ಎಲ್ಲಾ ಕಾಲಕ್ಕೂ ಬಲಾಢ್ಯಜಾತಿಗಳ ಕೈವಶವಾಗಿರುವುದನ್ನು ಕಾಣಬಹುದು. ಬಲಾಢ್ಯ ಜಾತಿಗಳ ಹೊರತಾಗಿ ಅಧಿಕಾರಕ್ಕೆ ಬಂದ ಹಿಂದುಳಿದ ಜಾತಿಗಳು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ಸು ಕಾಣದೆ ಷಡ್ಯಂತ್ರಗಳಿಗೆ ಬಲಿಯಾದ ಇತಿಹಾಸ ಪುಟಗಳು ಇವೆ.
35 ವರ್ಷಗಳ ಹಿಂದೆ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ ಕಾಂಗ್ರೇಸ್ ಪಕ್ಷ ಲಿಂಗಾಯಿತ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ತಲೆಮಾರುಗಳಿಗೂ ದಾಟಿಸುತ್ತಲೆ ಬಂದಿರುವ ಬಲಾಢ್ಯ ಲಿಂಗಾಯಿತ ಸಮುದಾಯ ತನ್ನ ಹಿಡಿತವನ್ನು, ರಾಜಕೀಯ ಪ್ರಾತಿನಿಧ್ಯವನ್ನು ಪಕ್ಷಾತೀತವಾಗಿ ಕಾಯ್ದುಕೊಂಡಿದೆ. ಈ ಸಮಾಜದ ಜಾತಿವ್ಯವಸ್ಥೆ ವೀರೇಂದ್ರ ಪಾಟೀಲರಿಗಿಂತಲೂ ಸಮರ್ಥವಾಗಿ ಈ ರಾಜ್ಯದ ಬಡವರ, ದುರ್ಬಲ, ಅನಾಥ ಜನಜಾತಿಗಳ ಪರವಾಗಿ ಅಂತಃಕರಣ ಮತ್ತು ಇಚ್ಛಾಶಕ್ತಿಯಿಂದ ದುಡಿದ ದೇವರಾಜಅರಸು ಅವರಿಗಾದ ರಾಜಕೀಯ ಅನ್ಯಾಯವನ್ನು ಮಾತ್ರ ಮುನ್ನೆಲೆಯಲ್ಲಿ ಚರ್ಚಿಸುವುದಿಲ್ಲ.
ಈ ನಾಡಿನ ಎಲ್ಲಾ ಜಾತಿಯ ಬಡವರು, ಹಿಂದುಳಿದವರು, ಅಂಚಿನ ಜಾತಿಗಳ ಒಳಿತಿಗಾಗಿ ರಾಜಕೀಯ ಇಚ್ಛಾಶಕ್ತಿ ತೋರಿದ ಅತಿಹಿಂದುಳಿದ ವರ್ಗದ ಅರಸು ಅವರಿಗಾಗಿದ್ದು ಕೇವಲ ರಾಜಕೀಯ ಅನ್ಯಾಯವಷ್ಟೆ ಅಲ್ಲ, ಅವರ ವಿರುದ್ದ ನಡೆದದ್ದು ಜಾತಿ ಆಧಾರಿತ ಅಸಹನೆ ರಾಜಕಾರಣ ಮತ್ತು ಕುತಂತ್ರ ಎನ್ನುವುದನ್ನು ಮರೆಯಲಾಗದು. ಅರಸು ವಿರುದ್ಧ ಹೆಣೆದ ಬಲಾಢ್ಯ ಜಾತಿಗಳ ಹುನ್ನಾರಕ್ಕೆ ಹಿಂದುಳಿದ, ದಲಿತ ಜಾತಿಗಳ ನಾಯಕರುಗಳು ಕೈ ಜೋಡಿಸಿದ್ದು, ಅರಸು ಅವರಿಂದ ಸ್ವಾಭಿಮಾನದಿಂದ ತಲೆ ಎತ್ತಿದ ದುರ್ಬಲ ಜಾತಿಗಳು ಕೃತಜ್ಞತಾ ಪೂರ್ವಕವಾಗಿಯಾದರೂ ಅರಸು ಪರ ಅವತ್ತು ನಿಲ್ಲಲಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.
ಹೀಗೆ ಮುಂದುವರೆದು ಎಸ್ .ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್ ಅವರುಗಳನ್ನು ಬಲಿ ತೆಗೆದುಕೊಂಡಿದ್ದರ ಹಿಂದೆಯೂ ಜಾತಿ ರಾಜಕಾರಣದ ನಿಚ್ಚಳ ನೆರಳಿದೆ. 2006 ರಿಂದ ಇತ್ತೀಚೆಗಿನ ವರೆಗೂ ಕರ್ನಾಟಕದಲ್ಲಿ ಜಾತಿವಾದ ಮತ್ತು ಕೋಮುವಾದ ಪರಸ್ಪರ ಹೊಂದಾಣಿಕೆ ಮಾಡಿಕೊಂಡ ಬೆಳವಣಿಗೆಗಳು ಹೊಸ ರಾಜಕೀಯ ಮತ್ತು ಸಾಮಾಜಿಕ ಬಿಕ್ಕಟ್ಟಿನ ಹುಟ್ಟಿಗೆ ಕಾರಣವಾಗಿವೆ.
2004 ರಲ್ಲಿ ಸೆಕ್ಯೂಲರ್ ಸಿದ್ಧಾಂತದಡಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿಕೊಂಡಿದ್ದರೂ 2006 ರ ಹೊತ್ತಿಗೆ ಮೈತ್ರಿ ಕಡಿದು ಕೋಮುವಾದಿ ಬಿಜೆಪಿ ಜೊತೆಗೆ ಕೈಜೋಡಿಸಿಕೊಂಡ ಜೆಡಿಎಸ್‌ನ ಸೈದ್ಧಾಂತಿಕ ದಿವಾಳಿತನ ಜಗಜ್ಜಾಹೀರಾಯಿತು. ಅವತ್ತಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅತಿಹಿಂದುಳಿದ ಜಾತಿಯ ಧರ್ಮಸಿಂಗ್ ಅವರನ್ನು ಪದಚ್ಯುತಿಗೊಳಿಸಿದ ಜೆಡಿಎಸ್‌ನ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿಯಾದರೆ, ಬಿಜೆಪಿಯ ಲಿಂಗಾಯಿತ ಸಮುದಾಯದ ಬಿ.ಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಒಕ್ಕಲಿಗ ಸಮುದಾಯಕ್ಕೆ ಹಿರಿಮೆಯಂತೆ ಬಣ್ಣಿನೆಗೊಳಗಾದರೆ, ಯಡಿಯೂರಪ್ಪ ಅವರು ಅಧಿಕಾರ ಗದ್ದುಗೆ ಏರಿದ್ದು ಲಿಂಗಾಯಿತ ಸಮುದಾಯಕ್ಕೆ ವೀರೇಂದ್ರ ಪಾಟೀಲರಿಗಾದ ಅನ್ಯಾಯಕ್ಕೆ ಭಾಗಶಃ ನ್ಯಾಯ ಸಿಕ್ಕ ತೃಪ್ತಿ ತಂದಿತ್ತು. ಅಹಿಂದ ವರ್ಗಗಳ ಮಾತಿರಲಿ, ತಮ್ಮದೇ ಜಾತ್ಯಸ್ಥರ ಸಂಖ್ಯಾಬಲವೂ ಇಲ್ಲದ ಧರ್ಮಸಿಂಗ್ ಸಾಮಾಜಿಕವಾಗಿ ಅನಾಥರಾಗಿ ನೇಪಥ್ಯಕ್ಕೆ ಸರಿದಿದ್ದರು. ಅಗಲೂ ಅಹಿಂದ ಸಮುದಾಯ ಸ್ವಾಭಿಮಾನಿ ರಾಜಕಾರಣದಿಂದ ದೂರ ನಿಂತು ನೋಡುತ್ತಿತ್ತು.
ಹಾಗಂತ ’ಕೋಮುವಾದಿ ರಾಜಕಾರಣ’ ಕರ್ನಾಟಕದಲ್ಲಿ ಬಲಾಢ್ಯ ಜಾತಿಗಳೆನಿಸಿಕೊಂಡ ಶೂದ್ರರನ್ನು ಅಧಿಕಾರದಲ್ಲಿರಲು ಬಿಟ್ಟಿಲ್ಲ ಎನ್ನುವುದಕ್ಕೆ ಯಡಿಯೂರಪ್ಪ ಅವರನ್ನು ಅಕಾಲಿಕವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೇ ಸ್ಪಷ್ಟ ನಿದರ್ಶನ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ಯಡಿಯೂರಪ್ಪ ಅವರ ವಿರುದ್ಧ ಅನಂತಕುಮಾರ್, ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ. ಸೇರಿದಂತೆ ಸಂಘಪರಿವಾರ ನಡೆಸಿದ ಸಂಚು ಗುಟ್ಟಾಗಿ ಉಳಿದಿಲ್ಲ. ರೈತಪರ ಹೋರಾಟಗಳಿಂದ ಬೆಳೆದು ಬಂದ ಅಬ್ರಾಹ್ಮಣರಾದ ಯಡಿಯೂರಪ್ಪನವರು ಕೋಮುವಾದವನ್ನು ಅವರಂತೆ ಅನುಸರಿಸಲು ಸಿದ್ಧರಿಲ್ಲದ ಕಾರಣವೇ ಆರ್.ಎಸ್.ಎಸ್ ಕೆಂಗಣ್ಣಿಗೆ ಗುರಿಯಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಇಲ್ಲಿ ಕೋಮುವಾದ ಮೇಲುಗೈ ಸಾಧಿಸಿರುವುದನ್ನು ಗುರುತಿಸಬಹುದು.
ತಮ್ಮ ತಾಳಕ್ಕೆ ಕುಣಿಯದ ಜಾರ್ಖಂಡ್‌ನ ಆದಿವಾಸಿ ಮುಖ್ಯಮಂತ್ರಿ ಹೇಮಂತ್ ಸೂರೆನ್, ದೆಹಲಿ ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ನೂಕಲಾಯಿತು. ಅಧಿಕಾರ ಮತ್ತು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಮನಸ್ಸೋ ಇಚ್ಛೆ ದುರ್ಬಳಕೆ ಮಾಡಿಕೊಂಡೇ ಸೈದ್ಧಾಂತಿಕ ಎದುರಾಳಿಗಳನ್ನು ಹಣಿಯುವ ಹೊಸ ಮಾದರಿಯ ರಾಜಕಾರಣವನ್ನು ನೆಲೆಗೊಳಿಸುವ ಪ್ರಯತ್ನ ಇಂದು ನಡೆಯ ತೊಡಗಿದೆ. ಇದರ ಮುಂದುವರೆದ ಭಾಗವೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಪ್ರಕರಣ.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಮತೀಯ ರಾಜಕಾರಣಕ್ಕೆ ಪ್ರಬಲ ತಡೆಗೋಡೆಯಾಗಿ ನಿಂತಿರುವುದು ಕಾಂಗ್ರೆಸ್ ಪಕ್ಷ. ಅದರಲ್ಲೂ ಸಿದ್ದರಾಮಯ್ಯ ಬಿಜೆಪಿಯ ಕೋಮುವಾದಕ್ಕೆ, ಜೆಡಿಎಸ್‌ನ ಜಾತಿವಾದಕ್ಕೆ ಸೈದ್ಧಾಂತಿಕವಾಗಿ ಠಕ್ಕರ್ ಕೊಡುವ ಟಗರ್ ನಂತಿರುವುದಂತೂ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟಕ್ಕೆ ಅರಗಿಸಿಕೊಳ್ಳುವುದು ಅಸಾಧ್ಯವೆನ್ನುವಂತಾಗಿದೆ. 2013 ರಲ್ಲಿ ಮುಖ್ಯಮಂತ್ರಿಯಾದ್ದ ಸಿದ್ದರಾಮಯ್ಯ ಅವರು ಜಾತಿವಾದ, ಕೋಮುವಾದದ ವಿರುದ್ಧ ರಾಜೀರಹಿತ ಹೋರಾಟವನ್ನು ಹೂಡಿದರು. ಅಹಿಂದ ಸಮುದಾಯಗಳ ಕಲ್ಯಾಣಕ್ಕಾಗಿ ಅನೇಕ ಭಾಗ್ಯಗಳ ರೂಪದ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಹಸಿದವರ, ಅಸಹಾಯಕರ ಬದುಕಿಗೆ ಆಸರೆಗಳನ್ನು ಒದಗಿಸಿದರು. ಅರಸು ಮಾದರಿಯನ್ನು ನೆನೆದುಕೊಳ್ಳುವಂತಾಯಿತು.
ಇದೇ ಸಿದ್ದರಾಮಯ್ಯನವರು 2023 ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಪಕ್ಷದ ಬಲದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಬಹುಜನ ರಾಜಕಾರಣಕ್ಕೆ ಅಡಿಪಾಯ ಹಾಕಿದಂತೆಯೇ ಆಯಿತು. ಇದು ಕೋಮುವಾದಿಗಳಿಗೆ ಮತ್ತು ಜಾತಿವಾದಿಗಳ ತೀವ್ರ ಅಸಹನೆಗೆ ಕಾರಣವಾಯಿತು. ಎಷ್ಟರ ಮಟ್ಟಿಗೆಂದರೆ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಉತ್ಸಾಹದಲ್ಲಿದ್ದ ಜೆಡಿಎಸ್ ನೆಲಕಚ್ಚಿದ್ದು, ಸಿದ್ದರಾಮಯ್ಯ ಅವರನ್ನು ಹಣಿಯಲೆಂದೆ ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿಯ ಜೊತೆಗೆ ಸಖ್ಯಕ್ಕೆ ಜಾರಿ ಬಿಟ್ಟಿತು. ವರ್ತಮಾನದಲ್ಲಿ ಸಿದ್ದರಾಮಯ್ಯ ಅವರನ್ನು ನಿವಾರಿಸಿಕೊಳ್ಳದೆ ಕಾಂಗ್ರೇಸ್ ಪಕ್ಷವನ್ನು ಎದುರಿಸಲಾಗದು ಎಂಬ ತೀರ್ಮಾನಕ್ಕೆ ಬಂದಿರುವ ಮೈತ್ರಿ ಕೂಟ ಮುಡಾ ಪ್ರಕರಣದ ಅಸ್ತ್ರ ಪ್ರಯೋಗಿಸಿದೆ.
ಮುಡಾದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಶ್ರೀಮತಿ ಪಾರ್ವತಿ ಅವರು ತಮ್ಮ ಜಮೀನು ವಶಪಡಿಸಿ ಕೊಂಡಿದ್ದಕ್ಕೆ ಪರ್ಯಾಯವಾಗಿ 14 ನಿವೇಶನಗಳನ್ನು ಪಡೆದಿರುವ ಪ್ರಕರಣವನ್ನು ಒಂದು ದೊಡ್ಡ ’ಹಗರಣ’ ವನ್ನಾಗಿಸಲಾಗಿದ್ದು, ಇದರ ಪರಿಣಾಮ ಸಿದ್ದರಾಮಯ್ಯ ನವರು ಕಾನೂನು ಸಂಕಷ್ಟವನ್ನು ಎದುರಿಸಬೇಕಾದ ಸಂದರ್ಭ ಬಂದೊದಗಿದೆ. ಈ ಪ್ರಕರಣ ಒಂದು ಹಗರಣವೇ ಎಂದಾದರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ಸಿದ್ದರಾಮಯ್ಯವರು ಒಳಗಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ನೆಲದ ಕಾನೂನಿಗೆ ಯಾರೂ ಅತೀತರಲ್ಲ. ಅದರೆ ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಯಾವ ಪಾತ್ರವೂ ಕಂಡು ಬರದಿರುವಾಗಲೂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದರ ಹಿಂದೆ ಬಿಜೆಪಿ ಕಂಡುಕೊಂಡಿರುವ ಸಂವಿಧಾನ ಬುಡಮೇಲು ರಾಜಕಾರಣದ ಹೊಸ ಮಾದರಿಯೇ ಅಡಗಿದೆ.
ಸಂಘಪರಿವಾರದ ಮುಖವಾಣಿ ಆರ್ಗನೈಸರ್ ಪ್ರತಿಪಾದಿಸಿದಂತೆ ಇಂದು ಈ ರಾಜ್ಯಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ತುಂಬುವ ಮತ್ತು ಶೂದ್ರ ಕ್ರಾಂತಿಯನ್ನು ದಮನ ಮಾಡುವ ಪಕ್ಷಗಳ ಅವಶ್ಯಕತೆಯಿದೆ ಎಂಬ ಬಹುಜನ ವಿರೋಧಿ ನಿಲುವು ಈ ಹೊತ್ತಿನ ಕರ್ನಾಟಕದ ಸಿದ್ದರಾಮಯ್ಯ ಅವರನ್ನು ಹತ್ತಿಕ್ಕುವವರೆಗೂ ಬಂದಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮೇಲಿನ ಆರೋಪಗಳ ಆಚೆಗೂ ಇದ್ದೇ ಇರುವ ಸಾಮಾಜಿಕ ಅಸಹನೆ, ಜಾತಿಯ ಅಸೂಯೆ, ಸೈದ್ಧಾಂತಿಕ ದ್ವೇಷವನ್ನು ಗುರುತಿಸಿಕೊಳ್ಳುವುದು ಮತ್ತು ಸಂವಿಧಾನ ಬುಡಮೇಲು ರಾಜಕೀಯ ಮಾದರಿಯ ವಿರುದ್ಧ ಹೋರಾಡುವುದು ಪ್ರಜ್ಞಾವಂತ ಬಹುಜನ ಸಮಾಜದ ಹೊಣೆಗಾರಿಕೆ.
ಎನ್.ರವಿಕುಮಾರ್ ಟೆಲೆಕ್ಸ್
ಪತ್ರಕರ್ತರು.
ಇದನ್ನೂ ಓದಿ- ನ್ಯಾಯಾಂಗದಲ್ಲಿ ಮನುವಾದಿಗಳು; ಸಂವಿಧಾನದ ಆಶಯಗಳೇ ಹಾಳು