ಮುಟ್ಟಿಸಿಕೊಂಡವರ ಬಗೆಗೆ

Most read

ಅಸ್ಪೃಶ್ಯತೆಯ ಸಮಾಜವನ್ನು ದಿಟ್ಟತನದಿಂದ ಎದುರಿಸಿ ಸಮ ಸಮಾಜದ ಮಾದರಿ ನಡೆ ದಾಖಲಿಸಿದ ಜನಾನುರಾಗಿ ನೇತ್ರತಜ್ಞ ಡಾ. ಬಿ ಎಂ ತಿಪ್ಪೇಸ್ವಾಮಿಯವರು .ಅವರ ಬದುಕಿನ ಕುರಿತು ಖ್ಯಾತ ಕತೆಗಾರರು ಮತ್ತು ಲೇಖಕರಾದ ಬಿ ಟಿ ಜಾಹ್ನವಿಯವರು ಸಂಪಾದಿಸಿದ  ‘ ಮುಟ್ಟಿಸಿಕೊಂಡವರು’  ಪುಸ್ತಕವು ನಾಳೆ ( 27ಮೇ, 2025) ಸಂಜೆ 5 ಗಂಟೆಗೆ ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಪುಸ್ತಕದ ಸಂಪಾದಕರ ಮಾತು ಇಲ್ಲಿದೆ.

ಪುಸ್ತಕ ಬಿಡುಗಡೆ : ʼಮುಟ್ಟಿಸಿಕೊಂಡವರುʼ


ಕಡುಬಡತನದ, ಸಾಮಾಜಿಕ ಕೆಳಸ್ತರದ, ಒಂದು ಗ್ರಾಮೀಣ ಕುಟುಂಬದಲ್ಲಿ ಜನಿಸಿದ ನನ್ನ ಅಪ್ಪಾಜಿ ಡಾ.ಬಿ.ಎಂ.ತಿಪ್ಪೇಸ್ವಾಮಿಯವರು ಖ್ಯಾತ ಕಣ್ಣಿನ ತಜ್ಞರು, ಅಪಾರ ದೂರದರ್ಶಿತ್ವ ಇದ್ದ ರಾಜಕಾರಣಿ, ಸರಳ ಸಜ್ಜನರಾದ ಇವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಚಿರಸ್ಮರಣೀಯ ಸೇವೆಯನ್ನು ಸಲ್ಲಿಸಿದವರು. ಸರಳ, ಸಜ್ಜನಿಕೆ, ದಿಟ್ಟ ನಿಲುವು, ಇಚ್ಛಾಶಕ್ತಿ, ಸಾಮಾಜಿಕ ತಿರಸ್ಕರಣಕ್ಕೊಳಗಾಗಿ ನೊಂದು ಬೆಂದವರ ಬಗ್ಗೆ ಅಪಾರ ಅನುಕಂಪ, ತಾವು ನಂಬಿದ ಮೌಲ್ಯಗಳಿಗಾಗಿ ಸತತ ಪರಿಶ್ರಮ, ಅಗ್ಗದ ಜನಪ್ರಿಯತೆಯ ಬಗೆಗೆ ಅನಾದರ.. ಈ ಗುಣಗಳು ಅವರ ಸಂಪರ್ಕಕ್ಕೆ ಬಂದ ಎಲ್ಲ ವರ್ಗಗಳ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದೆ. ಗ್ರಾಮಾಂತರ ಪ್ರದೇಶದ ಸಾಮಾಜಿಕವಾಗಿ ಆರ್ಥಿಕವಾಗಿ ಕೆಳಸ್ತರದಲ್ಲಿದ್ದ ವಿದ್ಯಾರ್ಥಿಗಳಿಗಾಗಿ ಅವರು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳು, ಶಾಲೆಗಳು ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿಮಾಡಿಕೊಟ್ಟಿವೆ. ಅವರ ಒಡನಾಡಿಗಳು, ಮಿತ್ರರು ಹಾಗೂ ನಾಡಿನ ಸಾಮಾಜಿಕ ಚಿಂತಕರು ಅವರ ನೆನಪಿಗಾಗಿ ಒಂದು ಕೃತಿಯನ್ನು ಪ್ರಕಟಿಸಬೇಕೆಂದು ಬಹುಕಾಲದಿಂದ ಹಂಬಲಿಸುತ್ತಿದ್ದರು. ಎಲ್ಲರ ಹಂಬಲ ಕೈಗೂಡಿ ನಾವು ನೆನಪಿನ ಪುಸ್ತಕ ಹೊರತರುವ ಕಾರ್ಯಕ್ಕೆ ಕೈಹಾಕಿದೆವು. ನಾವು ಅಂದ್ರೆ ನಾನು ಮತ್ತು ನಮ್ಮ ನಾಡಿನ ಖ್ಯಾತ ವೈಚಾರಿಕ ಲೇಖಕರಾಗಿದ್ದ ದಿವಂಗತ ಬಿ.ವಿ.ವೀರಭದ್ರಪ್ಪನವರು. ಅಪ್ಪಾಜಿಗೆ ಬಲು ಆಪ್ತರಾಗಿದ್ದವರು ಅವರು. ಅಂತೆಯೇ 1998ರಲ್ಲಿ ಮುಟ್ಟಿಸಿಕೊಂಡವರು ಪುಸ್ತಕ ಹೊರಬಂತು. ದಾವಣಗೆರೆಯ ಬಾಪೂಜಿ ಆಡಿಟೋರಿಯಂನಲ್ಲಿ ದೇವನೂರು ಮಹಾದೇವ ಅವರು ಪುಸ್ತಕ ಬಿಡುಗಡೆಯನ್ನೂ ಮಾಡಿದ್ದರು. ಇದೀಗ ಮರುಮುದ್ರಣಕ್ಕೆ ಅಣಿಯಾಗಿದೆ.

ಈ ನೆನಪಿನ ಪುಸ್ತಕ ಕೇವಲ ಒಂದು ಜೀವನ ಚರಿತ್ರೆಯಷ್ಟೇ ಆಗಿರುವುದರ ಬದಲು ಅದು ಅಪ್ಪಾಜಿ ಡಾ. ತಿಪ್ಪೇಸ್ಟಾಮಿಯವರು ಯಾವ ಹಿನ್ನೆಲೆಯಿಂದ ಬಂದರೋ ಆ ವರ್ಗದ ಜನರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಪರಿಚಯವನ್ನೂ ಕುರಿತ ಲೇಖನಗಳು ಈ ಕೃತಿಯಲ್ಲಿ ಇರುವುದು ಔಚಿತ್ಯಪೂರ್ಣವಾಗಬಹುದು ಎನಿಸಿತು. ಈ ದಿಕ್ಕಿನಲ್ಲಿ ದಲಿತ ಹಾಗೂ ಬಂಡಾಯ ಚಿಂತಕರನ್ನು ಸಂಪರ್ಕಿಸಿದಾಗ ಅವರಿಂದ ಪ್ರೋತ್ಸಾಹಕರ ಪ್ರತಿಕ್ರಿಯೆ ದೊರಕಿತ್ತು. ಹಾಗೆಯೇ ಅಪ್ಪಾಜಿಯ ಕೆಲವು ನಿಕಟವರ್ತಿಗಳನ್ನು ಸಂಪರ್ಕಿಸಿದಾಗ ಅವರು ಡಾಕ್ಟರೊಂದಿಗೆ ತಾವು ಹೊಂದಿದ ಸ್ನೇಹ ಸಂಬಂಧಗಳ ಹಿನ್ನೆಲೆಯಲ್ಲಿ ಅಪೂರ್ವ ಮಾಹಿತಿಯನ್ನು ನೀಡುವ ಲೇಖನಗಳನ್ನು ಕಳುಹಿಸಿ ಸಹಕರಿಸಿದ್ದಾರೆ. ದಲಿತ ಬಂಡಾಯ ವೈಚಾರಿಕ ಲೇಖನಗಳನ್ನು ಕೋರಿ ಅನೇಕರಿಗೆ ಪತ್ರ ಬರೆದಿದ್ದೆವು. ಕೆಲವರು ಲೇಖನಗಳನ್ನು ಬರೆದು ಕಳುಹಿಸಿದರು. ಮತ್ತೆ ಕೆಲವರು ಈಗಾಗಲೇ ತಾವು ಬರೆದು ಪ್ರಕಟವಾಗಿರುವ ಲೇಖನಗಳನ್ನೇ ಬಳಸಿಕೊಳ್ಳಲು ಹೇಳಿದರು ಮತ್ತು ಅನುಮತಿ ಕೊಟ್ಟರು. ಈ ಮರುಮುದ್ರಣದಲ್ಲಿ ಅಪ್ಪಾಜಿಯನ್ನು ನನ್ನ ದೃಷ್ಟಿಯಿಂದ, ನನಗಿರುವ ಮಾಹಿತಿಯ ಮಿತಿಯಲ್ಲಿ ಇಚ್ಚಾಶಕ್ತಿಯ ನಿರೂಪ ಲೇಖನದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ. ಪ್ರೊಫೆಸರ್ ಬಿ.ವಿ.ವೀರಭದ್ರಪ್ಪನವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಮಾರ್ಗದರ್ಶನ ಈಗಲೂ ಜೀವಂತವಿದ್ದು ನನ್ನ ಕೈಹಿಡಿದು ಮುನ್ನಡೆಸುತ್ತಿದೆ. ಅಂತೆಯೇ ನಾವು ಅಂದು ಅಂದುಕೊಂಡಂತೆ ಅಪ್ಪಾಜಿ ಡಾ.ತಿಪ್ಪೇಸ್ಟಾಮಿಯವರ ಜೀವನ ಚಿತ್ರಣವನ್ನು ಮತ್ತು ಅವರ ಆ ಜನಾಂಗದ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಪರಿಚಯವನ್ನು ಹೊತ್ತ ಅವರ ನೆನಪಿನ ಪುಸ್ತಕ ಈಗ ನಿಮ್ಮೆದುರಿಗಿದೆ.

ಸಂಪಾದಕರು

ಬಿ.ಟಿ.ಜಾಹ್ನವಿ

ಇದನ್ನೂ ಓದಿ- ಬಾನ ದೀಪ ಕನ್ನಡದ ಅಂಗಳಕ್ಕೆ ವಿಶ್ವದ ಬೆಳಕನ್ನು ತಂದು ಸುರಿದಾಗ

More articles

Latest article