ಬೆಂಗಳೂರು: ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಿಕ್ಕಟ್ಟನ್ನು ಎದುರಿಸಲು ಎಲ್ಲ ವಲಯದ ಪ್ರಮುಖರೊಂದಿಗೆ ಚರ್ಚಿಸಿ, ಕಾರ್ಯಸಾಧುವಾದ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದ್ದ ಕಲಾವಿದರ ಸಂಘ ಹೋಮ, ಶಾಂತಿಯ ಮೊರೆಹೋಗಿದೆ.
ಆ. 14ರಂದು ಕನ್ನಡ ಚಿತ್ರರಂಗ ಉಳಿವಿಗಾಗಿ ಕಲಾವಿದರ ಸಂಘ ಬೆಳಿಗ್ಗೆ ಎಂಟಕ್ಕೆ ಸಂಕಲ್ಪ ಕೈಗೊಳ್ಳಲಿದ್ದು, ನಂತರ ಒಂದಾದ ಮೇಲೊಂದರಂತೆ ಮೂರು ಹೋಮಗಳು ನಡೆಯಲಿವೆ. ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಸರ್ಪ ಶಾಂತಿ ನಡೆಯಲಿದ್ದು, ಮಧ್ಯಾಹ್ನ ಊಟ ಏರ್ಪಾಡು ಮಾಡಲಾಗಿದೆಯಂತೆ.
ಹೋಮ ಕಾರ್ಯಕ್ರಮಗಳಲ್ಲಿ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ ಎಂದು ಕಲಾವಿದರ ಸಂಘ ಹೇಳಿಕೊಂಡಿದೆ. ಹೋಮಗಳ ಪೈಕಿ ಸಾಧಾರಣವಾಗಿ ಮೃತ್ಯುಂಜಯ ಹೋಮವನ್ನು ವ್ಯಕ್ತಿಗಳ ಸಾವು ಘಟಿಸದಂತೆ ನಡೆಸಲಾಗುತ್ತಿದೆ.
ಈ ಪೂಜೆ ಮಾಡಿಸುತ್ತಿರುವುದು ಈಗ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್‍ಗಾಗಿ ಎಂಬ ಮಾತಿದೆ. ಇದು ಸುಳ್ಳು ಎಂದ ರಾಕ್‍ಲೈನ್ ವೆಂಕಟೇಶ್, ‘ಈ ಪೂಜೆ ಮಾಡಿಸುತ್ತಿರುವುದು ದರ್ಶನ್‍ಗಾಗಿ ಅಲ್ಲ. ಅವರಿಗಾಗಿ ಮಾಡಬೇಕಿದ್ದರೆ, ನಾನು ವೈಯಕ್ತಿಕವಾಗಿ ನನ್ನ ಮನೆಯಲ್ಲೋ, ಅವರ ಮನೆಯಲ್ಲೋ ಮಾಡುತ್ತಿದ್ದೆ. ಇದು ಸಂಘದಿಂದ ನಡೆಯುತ್ತಿರುವ ಪೂಜೆ ಮತ್ತು ಚಿತ್ರರಂಗದಿಂದ ಒಳತಿಗಾಗಿ ಮಾಡುತ್ತಿರುವ ಪೂಜೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ನಂತರವೇ ಇಂಥದ್ದೊಂದು ಯೋಚನೆ ಇತ್ತು. ಕೋವಿಡ್ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳಾದವು. ಕಾರಣಾಂತರಗಳಿಂದ ಆಗಲಿಲ್ಲ. ಹಿರಿಯ ನಟ ದೊಡ್ಡಣ್ಣ ಒಂದು ತಿಂಗಳ ಮುಂಚೆ ಯಾಕೆ ಒಂದು ಪೂಜೆ ಮಾಡಿಸಬಾರದು ಎಂದು ಹೇಳಿದರು. 14ರಂದು ದಿನ ಚೆನ್ನಾಗಿರುವುದರಿಂದ ಅಂದು ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ. ಇದಕ್ಕೆ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇವೆ ಎಂದು ರಾಕ್ ಲೈನ್ ಹೇಳಿಕೊಂಡಿದ್ದಾರೆ.
ಕೋವಿಡ್ ನಂತರದಲ್ಲಿ ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರೇಕ್ಷಕರು ಸಿನಿಮಾ ಥಿಯೇಟರ್ ಗಳಿಗೆ ಮೊದಲಿನಂತೆ ಬರುತ್ತಿಲ್ಲ. ಸಾಲುಸಾಲಾಗಿ ಸಿನಿಮಾಗಳು ನೆಲಕಚ್ಚುತ್ತಿದ್ದು, ನಿರ್ಮಾಪಕರುಗಳು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳು, ತೆಲುಗು ಮತ್ತು ಇತರ ಚಿತ್ರರಂಗದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ತಮ್ಮದೇ ಆದ ಪರಿಹಾರಗಳನ್ನು ರೂಪಿಸಿಕೊಳ್ಳುತ್ತಿವೆ. ಯಾರಿಗೂ ನಷ್ಟವಾಗದಂತೆ, ಎಲ್ಲರಿಗೂ ಹೊಣೆಗಾರಿಕೆ ಇರುವಂಥ ಸೂತ್ರಗಳನ್ನು ಹೆಣೆಯಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕಲಾವಿದರ ಸಂಘ ಹೋಮಕ್ಕೆ ಮೊರೆ ಹೋಗಿರುವುದು ನಗೆಪಾಟಲಿಗೆ ಈಡಾಗಿದೆ.
ಕಲಾವಿದರ ಸಂಘ ಮೊದಲಿನಿಂದಲೂ ಹಿರಿಯ ಚಿತ್ರನಟ ದೊಡ್ಡಣ್ಣ ಮತ್ತು ಕಲಾವಿದರೂ ಆಗಿರುವ ರಾಕ್ ಲೈನ್ ವೆಂಕಟೇಶ್ ಹಿಡಿತದಲ್ಲೇ ಇದೆ. ಕಲಾವಿದರ ಸಂಘವನ್ನು ಈ ಕಾಲಕ್ಕೆ ಸರಿಹೊಂದುವಂತೆ ಕ್ರಿಯಾಶೀಲಗೊಳಿಸುವ ಯಾವ ಆಲೋಚನೆಯೂ ಇವರಿಬ್ಬರಿಗೆ ಇದ್ದಂತಿಲ್ಲ. ಈಗ ಕನ್ನಡ ಚಿತ್ರರಂಗದ ಉಳಿವಿಗಾಗಿ ಹೋಮಗಳ ಮೊರೆ ಹೋಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.