ಹೆಚ್ಚು ತಾಂತ್ರಿಕವಾಗಿಯೇ ನೋಡಿ ಹೇಳುವುದಿದ್ದರೆ, ಇದೇ ದಕ್ಷಿಣ ಕನ್ನಡ ಹಿನ್ನೆಲೆಯ ‘ಕಾಂತಾರ’ ಸಿನಿಮಾವು ಸಹಜ ಹಳ್ಳಿ ಬದುಕಿನ ಅತ್ಯಂತ ಸಂಯಮದ ‘ನೀಟ್ ಕ್ರಾಫ್ಟ್’. ಆದರೆ ಸು.ಫ್ರಂ ಸೋ. ಹಳ್ಳಿ ಬದುಕಿನ ಧಾವಂತ ಗಡಿಬಿಡಿಗಳೆಲ್ಲ ಸೇರಿ ವಿನ್ಯಾಸಗೊಂಡ ಆಕರ್ಷಕವಾದ ‘ಎರಚು ಬಣ್ಣದ ಕ್ರಾಫ್ಟ್!’ – ದಿನೇಶ್ ಕುಕ್ಕುಜಡ್ಕ, ವ್ಯಂಗ್ಯಚಿತ್ರಕಾರರು.
ಕಳೆದ ಹದಿನೈದು ದಿನಗಳಿಂದ ಸು. ಫ್ರಂ ಸೋ. ಕುರಿತು ಬಂದ ಬೇರೆಬೇರೆ ಅಭಿಪ್ರಾಯಗಳನ್ನು ಗಮನಿಸಿ ಗ್ರಹಿಸಿದ್ದೇನೆ ಮತ್ತು ಅತ್ಯಂತ ಜವಾಬ್ದಾರಿಯಿಂದ ಕೂಡಿದ ಕೆಲವಾರು ಸೂಕ್ಷ್ಮ ವಿವರಣೆಗಳನ್ನೂ ಆಳಕ್ಕಿಳಿದು ನೋಡಿದ್ದೇನೆ. ಎಲ್ಲದಕ್ಕೂ ಜಾಳಿ ಹಿಡಿದು, ಹೀರಿ ಒಳಗಿಳಿಸಿಕೊಂಡ ನಂತರವೂ ಈ ಗ್ರಹಿಕೆಯ ದಾರಿಯಲ್ಲಿ ಅಲ್ಲಲ್ಲಿ ಅಂಟಿಹೋದ ಸಣ್ಣಪುಟ್ಟ ವಿವರಗಳನ್ನು ಹಿಡಿದು ದಾಖಲಿಸುತ್ತಿದ್ದೇನೆ. ಚಿತ್ರದ ಕಥಾಹಂದರ, ಅಲ್ಲಿನ ಬೇರೆಬೇರೆ ಸನ್ನಿವೇಶಗಳು ನೀಡುವ ಸಾಮಾಜಿಕ ಸಂದೇಶ, ಸಂದರ್ಭೋಚಿತ ಹಾಸ್ಯ, ಪಾತ್ರಧಾರರ ಬದ್ಧತೆ, ನಟನೆ, ನೋಡುಗರ ಮೇಲೆ ಪರಿಣಾಮ… ಇವೆಲ್ಲದರ ಮಹಜರು ಈಗಾಗಲೇ ಆಗಿ ಹೋಗಿರುವುದರಿಂದ ಉದ್ದೇಶಪೂರ್ವಕ ಯೇ ಅವಷ್ಟನ್ನೂ ಬದಿಗಿಟ್ಟು ಸದ್ಯ ಬೇರೆಯೇ ವಿಷಯಗಳತ್ತ ಹೊರಳುತ್ತೇನೆ.
ಈ ಚಿತ್ರದ ಕುರಿತು ಬಂದ ಮೊದಲ ಬಹುಮುಖ್ಯ ಆಕ್ಷೇಪ ಅಥವಾ ವಿಮರ್ಶೆ ಅಂದರೆ ಕುಡಿತದ ದೃಶ್ಯಗಳು ಅಗತ್ಯಕ್ಕಿಂತ ಹೆಚ್ಚೇ ಇವೆ. ‘ಕುಟುಂಬ ಸಹಿತ ಕೂತು ನೋಡುವವರಿಗೆ ಮುಜುಗರವೆನಿಸುವುದು ಮತ್ತು ಸಣ್ಣ ಮಕ್ಕಳ ಮೇಲೆ ಅದು ಪರಿಣಾಮ ಬೀರಬಹುದು’ … ಎಂಬುದೆಲ್ಲ.
ಈ ಇಡೀ ಚಿತ್ರವು ಯಾವ ಪರಿಸರದ ಹಸಿಹಸಿ ಜನಜೀವನದ ಸಾದೃಶ್ಯವೋ ಮತ್ತು ಅದೇ ಕಾರಣಕ್ಕಾಗಿ ದೊಡ್ಡದೊಂದು ಜನಸಮೂಹ ಈ ಚಿತ್ರವನ್ನು ಇಷ್ಟಪಟ್ಟು ನೋಡುತ್ತಿದೆಯೋ, ಅದೇ ಪರಿಸರದ ಆಚಾರ-ವಿಚಾರ- ಜೀವನ ಶೈಲಿ ‘ಅಲ್ಲಿರುವಂಥದೇ’ ಆಗಿರುವಾಗ ನೀವು ಅದನ್ನೆಲ್ಲ ಮುಚ್ಚಿಟ್ಟು ಹೇಗೆ ಚಿತ್ರ ತೆಗೆಯುತ್ತೀರಿ? ಅದೇ ಲವಲವಿಕೆ, ಅದೇ ಸಾಂಘಿಕ ಬದುಕು, ಅದೇ ಪುಕ್ಕಲುತನ, ಅದೇ ಮೂಢನಂಬಿಕೆ, ಅದದೇ ಐಲುಪೈಲು, ಅದದೇ ಮುಗ್ಧ ಶೈಲಿ, ಅದೇ ಕೂಡು ಸಂಭ್ರಮ….. ಇದ್ಯಾವುದೂ ಸುಳ್ಳಲ್ಲವಲ್ಲ! ಒಂದು ಇಲೈಟೆಡ್ ಜನ ವರ್ಗದ ಸಂಸ್ಕೃತಿ- ಆಚಾರ- ವಿಚಾರ ಶೈಲಿಗಳು ಬೇರೆ ಇರಬಹುದಪ್ಪ! ಹಾಗಂತ ನಮ್ಮದೇ ಭಾರತೀಯ ಸಮಾಜದ ಗ್ರಾಮೀಣ ಭಾಗವೊಂದರ ನೈಜ ಬದುಕಿನ ಕ್ರಮ ಇದುವೇ ಆಗಿರುವಾಗ ಅದನ್ನೂ ತೋರಿಸಬಾರದೆಂದರೆ ಹೇಗೆ? ದಕ್ಷಿಣ ಕನ್ನಡದ ಬಹುತೇಕ ಹಳ್ಳಿಗಳ ಸಿಗ್ನೇಚರ್ ಶೈಲಿ ಅದು! ಅಲ್ಲಿ ಕುಡಿತವೂ ಇದೆ. ಮೋಜು, ಮಸ್ತಿ, ಪುಕ್ಕಲುತನ, ಬೈದಾಟ, ಪ್ರೀತಿ, ಕಾಳಜಿ, ಹೊಂದಾಣಿಕೆ, ಒಂದಷ್ಟು ಆದರ್ಶ ಎಲ್ಲವೂ ಇದೆ. ಮೇಲ್ವರ್ಗದಲ್ಲಿ ಹುಟ್ಟಿ ಬೆಳೆದು ಒಂದು ನಿರ್ದಿಷ್ಟ ಮಾನಸಿಕತೆ ರೂಪಿಸಿಕೊಂಡವರಿಗೆ ಇವೆಲ್ಲ ಒಗ್ಗದಿರಬಹುದು. ಹಾಗಂತ ಒಂದು ‘ಕ್ರಾಫ್ಟ್’ ಅಂತ ಬಂದಾಗ “ಇವ್ಯಾವವೂ ಇಲ್ಲ. ಇರುವುದು ಶುದ್ಧಾಂಗಬದ್ಧ ಶುಚಿರ್ಭೂತ ಲೋಕ ಮಾತ್ರ” ಅಂತ ಹೇಗೆ ಇವನ್ನೆಲ್ಲ ಬದಿಗೊತ್ತುತ್ತೀರಿ?
ಇಷ್ಟಾದ ಮೇಲೆ ಬರುವ ಪ್ರಶ್ನೆ- ಕುಡಿತವು ಸಮಾಜದ ಮೇಲೆ ಬೀರುವ ಪರಿಣಾಮ ಕೆಟ್ಟದಲ್ಲವೋ ಇತ್ಯಾದಿ. ಅಂತಿಮವಾಗಿ ಇದೊಂದು ಕಲೆ. ಒಂದು ಕ್ಯಾನ್ವಾಸ್ ಮೇಲಿನ ಚಿತ್ರಗಳನ್ನು ತೋರಿಸುವುದಷ್ಟೇ ಕಲಾಕಾರನ ಕೆಲಸ. ಓಶೋ ಪುಸ್ತಕಗಳಲ್ಲಿ ಸೆಕ್ಸ್ ವಿಜೃಂಭಿಸುತ್ತಿದೆ ಎಂದರೆ ಏನನ್ನೋಣ? ಸಮಾಜವೆಂಬ ಕ್ಯಾನ್ವಾಸ್ ಒಳಗೊಂಡ ಚಿತ್ರಗಳನ್ನು ಇಲ್ಲಿನ ದಾಖಲಾತಿ ತೋರಿಸುತ್ತಿದೆ ಅಷ್ಟೆ. ಹೆಕ್ಕಿಕೊಳ್ಳಲು ಬೇಕಾದಷ್ಟು ಸಂದೇಶಗಳಿರುತ್ತವೆ ನೋಡುಗನಿಗೆ. ಯರ್ರಾಬಿರ್ರಿ ಬಿಸಾಕಿದ ಎಂಜಲು ತಟ್ಟೆಗಳ ನಡುವೆ ಅರೆ ನಗ್ನಾವಸ್ಥೆಯಲ್ಲಿ ನದರಿಲ್ಲದೆ ಬಿದ್ದು ಹೊರಳಾಡುವ ಬಾವನ ಚಿತ್ರ ಕುಡಿತದ ದುಷ್ಪರಿಣಾಮವನ್ನಲ್ಲದೆ ಇನ್ನೆಂಥ ಸತ್ಪರಿಣಾಮಗಳ ಜಾಹೀರಾತೇನು? ಒಂದು ಸಂದರ್ಭದಲ್ಲಿ ‘ಮೋಸ್ಟ್ ವಾಂಟೆಡ್’ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟ ಟಿಪ್‌ಟಾಪ್ ಪಂಚೆ ಶಾಲುಗಳ ಬಾವ, ಇದೊಂದು ದರಿದ್ರ ದೌರ್ಬಲ್ಯದಿಂದಾಗಿ ದೃಶ್ಯ ಮುಗಿಯುವುದರೊಳಗೆ ತಲುಪಿದ ದಾರುಣ ಸ್ಥಿತಿಯಾದರೂ ಎಂಥಾದ್ದು! ಇದೆಲ್ಲ ಹೆಕ್ಕಿಕೊಳ್ಳಬೇಕಾದ್ದು ದೂರುವವರ ಕರ್ತವ್ಯ ಕೂಡಾ ಹೌದು ತಾನೇ? ಕೃಷ್ಣನ ಬಾಲಲೀಲೆಗಳು ಮಾತ್ರ ಮಹಾಭಾರತ ಅಲ್ಲವಲ್ಲ? ದ್ರೌಪದಿಯ ವಸ್ತ್ರಾಪಹರಣವೂ ಮಹಾಭಾರತವೇ. ಕೀಚಕನ ಉಪದ್ವ್ಯಾಪಗಳೂ ಮಹಾಭಾರತವೇ. ಯಾದವರ ಹೊಡೆದಾಟಗಳೂ ಮಹಾಭಾರತವೇ. ಕೌರವನ ಮದಿರಾ ಕೂಟವೂ ಮಹಾಭಾರತವೇ. ಮಹಾಭಾರತದಲ್ಲಿಲ್ಲವಾದುದು ಆಧುನಿಕ ಭಾರತದಲ್ಲೂ ಇಲ್ಲ. ಅಷ್ಟೆ!
ಎರಡನೆಯ ಅಂಶ. ಯಾಕೆ ಈ ಚಿತ್ರ ಈ ಮಟ್ಟಿಗೆ ಇಷ್ಟವಾಯಿತು ಜನಕ್ಕೆ ಅಂತೊಂದು ಪ್ರಶ್ನೆ. ಕತೆಯೇ ಇಷ್ಟವಾಯ್ತು ಅನ್ನುವುದು ಸಾಮಾನ್ಯ ಎಲ್ಲರ ಗ್ರಹಿಕೆ. ಹಾಗೆ ನೋಡಿದರೆ ಇಲ್ಲಿ ಅತ್ಯಂತ ತೆಳುವಾದ, ತೀರಾ ಸಾಧಾರಣವೆನ್ನಿಸುವ ಕತೆಯ ಒಂದು ಎಳೆ ಇದೆಯಷ್ಟೆ. ಹೇಳಿಕೊಳ್ಳುವಂಥ ಸಸ್ಪೆನ್ಸು- ಥ್ರಿಲ್ಲರ್ ಎಂಥದೂ ಇಲ್ಲ. ಕೊಳಲ ಆಲಾಪದಂಥ ಒಂದು ನವಿರು ಪ್ರೇಮದ ಕತೆಯಷ್ಟೆ ನೋಡುಗರ ಎದೆಗಿಳಿದು ಎರಕವಾದದ್ದಾ? ಅಷ್ಟಕ್ಕೇ ಈ ಮಟ್ಟದ ಯಶಸ್ಸು!??…… ಬಹುಶಃ ಹಾಗಲ್ಲ ಅದು.
ನಾನೆನ್ನುತ್ತೇನೆ- ಇದು ಕತೆಗಿಂತಲೂ ಹೆಚ್ಚಾಗಿ ‘ಒಂದು ವಿಶಿಷ್ಟ ಪರಿಸರದ ಅತ್ಯಂತ ಸರಳವಾದ; ಅತ್ಯಂತ ಸಹಜವಾದ ಸುಂದರ ನಿರೂಪಣೆ’ ಎನ್ನುವ ಕಾರಣವೇ ಈ ಯಶಸ್ಸಿನ ಗುಟ್ಟು ಅಂತ!
ಊರಿಗೆ ಬರುವ ನಗರದ ಸ್ನೇಹಿತರು ನನ್ನಲ್ಲೂ ಹೇಳುವುದುಂಟು. “ಆಹಾ! ಎಂಥ ಸ್ವರ್ಗದಲ್ಲಿ ಬದುಕುತ್ತೀರಿ ನೀವುಗಳು!” ಅಂತ. ಇಲ್ಲಿನ ಕಾಡು, ಬೆಟ್ಟ, ನದಿ, ತೊರೆ, ತೋಟಗಳು, ಸ್ವಚ್ಛಂದ ಪರಿಸರಗಳೆಲ್ಲ ಪೇಟೆ ಮಂದಿಯ ಕನಸು. ಇವನ್ನೇ ಬಂಡವಾಳವಾಗಿರಿಸಿಕೊಂಡು ಆರ್ಥಿಕವಾಗಿ ಬೆಳೆದು ನಿಂತ ಚಿಕ್ಕಮಗಳೂರು, ಕೊಡಗು, ಹಾಸನದಂಥ ಮಲೆನಾಡಿನ ಸಂದರ್ಭಗಳಲ್ಲೂ ಇಷ್ಟೇ ಆಹ್ಲಾದತೆಯೇನೋ ಇದೆ. ಆದರೆ ವಿಷಾದವೂ ಇದೆ. ಅದು ಬೇರೆಯೇ ವಿವರ. ಸದ್ಯ ಇತ್ತ ಸರಿದು ಈ ಸಿನಿಮಾಕ್ಕಷ್ಟೇ ಸೀಮಿತಗೊಳಿಸಿ ಹೇಳುವುದಾದರೆ, ಇದೇ ಮಲೆನಾಡಿಗರಾದ ಪೂರ್ಣಚಂದ್ರ ತೇಜಸ್ವಿಯವರ ಕತೆಗಳೆಲ್ಲ ಹೇಗೆ ಗೆಲ್ಲುತ್ತಿದ್ದವು ಅನ್ನುವ ಪ್ರಶ್ನೆಗೂ ಬಹುತೇಕ ಇದೇ ಉತ್ತರವಾದೀತು. ಹೆಚ್ಚೂಕಮ್ಮಿ ತೇಜಸ್ವಿ ಕತೆಗಳನ್ನೇ ಹೋಲುವಂಥ ( ಹೋಲುವಂಥ ಮಾತ್ರ! ಸೇಮ್ ಟು ಸೇಮ್ ಅಲ್ಲ.) ಪಾತ್ರಗಳು-ವಿವರಗಳೆಲ್ಲ ಜೀವಂತ ಎದ್ದು ಬಂದು ಸುಂದರವಾದೊಂದು ಕ್ರಾಫ್ಟಿಂಗ್ ಆಗಿ ಸು.ಫ್ರಂ ಸೋ.ದಲ್ಲಿ ಸಿನಿಮಾ ಆಗಿದೆ ಅಷ್ಟೆ. ಹೆಚ್ಚು ತಾಂತ್ರಿಕವಾಗಿಯೇ ನೋಡಿ ಹೇಳುವುದಿದ್ದರೆ, ಇದೇ ದಕ್ಷಿಣ ಕನ್ನಡ ಹಿನ್ನೆಲೆಯ ‘ಕಾಂತಾರ’ ಸಿನಿಮಾವು ಸಹಜ ಹಳ್ಳಿ ಬದುಕಿನ ಅತ್ಯಂತ ಸಂಯಮದ ‘ನೀಟ್ ಕ್ರಾಫ್ಟ್’. ಆದರೆ ಸು.ಫ್ರಂ ಸೋ. ಹಳ್ಳಿ ಬದುಕಿನ ಧಾವಂತ ಗಡಿಬಿಡಿಗಳೆಲ್ಲ ಸೇರಿ ವಿನ್ಯಾಸಗೊಂಡ ಆಕರ್ಷಕವಾದ ‘ಎರಚು ಬಣ್ಣದ ಕ್ರಾಫ್ಟ್!’
ದಕ್ಷಿಣ ಕನ್ನಡ ಎಂಬ ಭೂಭಾಗದ ಸಾಂಸ್ಕೃತಿಕ ಬದುಕು ಅಂದರೆ ನಮ್ಮ ಕಣ್ಣಿಗೆ ರಪ್ಪನೆ ರಾಚುವುದು ಇತ್ತೀಚಿನ ಹಾಳುಬಿದ್ದ ಕೋಮು ರಾಜಕಾರಣ. ಆದರೆ ಅದೆಲ್ಲಕ್ಕೂ ಮೂಲದಲ್ಲಿ ಆಳ ಹೊಕ್ಕು ನೋಡಿದವರಿಗೆ ಇಲ್ಲಿಯ ಜನರ ಎದೆಯಾಳದ ಪ್ರೀತಿ, ಸಂಬಂಧಗಳ ಹಸಿತನ, ಆಚರಣೆಗಳ ಹಿಂದಿರುವ ನವಿರು ಅಧ್ಯಾತ್ಮ, ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧದ ಬಂಡಾಯದ ಪಳೆಯುಳಿಕೆಯಂಥ ವಿಚಾರಗಳು, ಜಾತಿ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ವೈಚಾರಿಕ ಪಾತಳಿಯಲ್ಲಿ ಉದ್ಭವಿಸಿ ನೆಲೆನಿಂತ ದೈವಗಳು, ಸಂದುಹೋದ ಕಾಲದ ಅಥವಾ ತಲೆಮಾರಿನ ಕುರಿತ ಕೃತಜ್ಞತೆಯ ಆಚಾರಗಳು…. ಇವಿಷ್ಟೂ ನಿಜವಾದ ನೆಲಮೂಲದ ಸಂಗತಿಗಳೇ. ಹೀಗಿರುವಾಗ ಆಧುನಿಕ ಭರಾಟೆಗೆ ಸಿಲುಕಿ ನೆಮ್ಮದಿ ಕಳೆದುಕೊಂಡು ಅಂಡಲೆಯುವ ಮನುಷ್ಯನಿಗೆ ತಾನು ಕಳೆದುಕೊಂಡ ತನ್ನ ಬೇರುಗಳ ನೆನಪುಗಳು ಬಹಳ ಹೃದ್ಯವೆನಿಸುತ್ತವೆ. ಮಸಲತ್ತಿಲ್ಲದ ಬಹಿರ್ಮುಖತೆ ಹೆಚ್ಚು ಇಷ್ಟವಾಗುತ್ತದೆ. ದೇಶದ ಅಥವಾ ರಾಜ್ಯದ ಬೇರೆಡೆಯ ಪ್ರಾದೇಶಿಕ ಆಚಾರ ವಿಚಾರಗಳಿಗಿಂತ ಭಿನ್ನವಾದ ಸ್ವೋಪಜ್ಞವೂ ವೈಚಾರಿಕವೂ ಆದೊಂದು ಉಸಿರಿದೆ ಈ ನೆಲದ ಬದುಕಿಗೆ. ಅವೆಲ್ಲವೂ ಮತ್ತೆ ಹರಳುಗಟ್ಟಿದ ರೀತಿಯಲ್ಲಿ ಚಿತ್ರ ರೂಪವಾಗಿ, ಮನುಷ್ಯ ರೂಪಕಗಳಂತಾಗಿ ಸಾಂದ್ರಗೊಂಡ ವಿವರಗಳೇ ಇತ್ತೀಚಿನ ಕಾಂತಾರದಿಂದ ಹಿಡಿದು ಸು.ಫ್ರಂ.ಸೋ.ವರೆಗಿನ ಅಥವಾ ಇನ್ನೂ ಮುಂದುವರಿಯಲಿರುವ ಸರಣಿ ಸಿನಿಮಾಗಳ ಕೋರ್ ಪಾಯಿಂಟ್! ಇದನ್ನು ಗಮನಿಸಬೇಕು.
ಇಷ್ಟಾದ ಮೇಲೂ ಹೇಳಲೇಬೇಕಾದ ಮೂರನೆಯ ಅಂಶವೊಂದಿದೆ. ಈ ‘ತುಳುನಾಡಿನ ಕನ್ನಡ’ ಅಂದರೆ ಗಾಂಧಿನಗರದ ಸಿನಿಮಾ ಮಂದಿಗೆ ಅದೊಂದು ಲೇವಡಿಯ ವಸ್ತುವಾಗಿದ್ದ ದಿನಗಳು ತೀರಾ ಮೊನ್ನೆ ಮೊನ್ನೆ ಯವರೆಗೂ ಇತ್ತು ಅಥವಾ ಈಗಲೂ ಇದೆ! ಅತ್ಯಂತ ಗಲೀಜು ಗಲೀಜಾಗಿ “ಯಂತಾ-ದು- ಮಾ- ರಾ-ಯರೇ…” ಅಂತ ವರಲುತ್ತ ವ್ಯಂಗ್ಯ ಲೇವಡಿಗೊಳಗಾಗುತ್ತಿತ್ತು ದಕ್ಷಿಣಕನ್ನಡದ ಗ್ರಾಂಥಿಕ ಕನ್ನಡ ಭಾಷೆ ಸಿನಿಮಾಗಳಲ್ಲಿ. ಅಂಥದೊಂದು ತಪ್ಪು ಬಿಂಬಿಸುವಿಕೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದು ಒಂದು ಮೊಟ್ಟೆಯ ಕತೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ ಹಾಗೂ ಈ ಸೀರೀಸ್‌ನ ಶೆಟ್ಟಿ ಗ್ರೂಪ್ ಸಿನಿಮಾಗಳು. ಇವತ್ತಿಗದು ಎಂಥಾ ಎದೆಯ ಭಾಷೆಯೆನಿಸಿದೆಯೆಂದರೆ, “ಅನಿಸುತಿದೆ ಯಾಕೋ ಏನೋ ” ಹಾಡಿನ ನಂತರ ಕನ್ನಡ ಚಿತ್ರ ಸಾಹಿತ್ಯದಲ್ಲಿ ಮೂಡಿದ ಆಳ ಛಾಪು ಇತ್ತಲ್ಲ, ಆ ಬಗೆಯ ಪರಿಣಾಮವದು! ಒಂದು ಏಕತಾನ ಶೈಲಿಯನ್ನು ಒಡೆದು ರೂಪಿಸಲ್ಪಟ್ಟ ಎದೆಯ ಭಾಷೆಯ ಬಗೆ ಅದು! ಇದೇ ಸಿನಿಮಾಗಳ ಕಲಾವಿದರು ಬೆಂಗಳೂರಿನ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕೂತು ಬೆಂಗಳೂರು ಕನ್ನಡದಲ್ಲಿ ಸಂದರ್ಶನ ನೀಡುತ್ತಿದ್ದರೆ, “ಅರೆ! ಇವರೇನಾ ಅದು?” ಅನ್ನಿಸಿಬಿಡುವಷ್ಟು ಅವರ ಸಿನಿಮಾಗಳಲ್ಲಿ ಭಾಷೆಯ ಉದ್ದೇಶಪೂರ್ವಕ ಅಳವಡಿಕೆ ಅರಿವಾದೀತು! ಈ ಮಹತ್ತರ ಕೊಡುಗೆಗಾಗಿ ತುಳುಮೂಲದ ಈ ಸಿನಿಮಾ ತಂಡಗಳನ್ನು ಅಭಿನಂದಿಸಬೇಕು.
ಹಾಗೆ ನೋಡಿದರೆ ಯಕ್ಷಗಾನದಂಥ ಢಾಳು ಅಭಿವ್ಯಕ್ತಿಯನ್ನೇ ಉಸಿರಾಡುವ ಈ ಮಂದಿ ವೃತ್ತಿಪರ ತುಳು ಹಾಸ್ಯ ನಾಟಕಗಳ ಮೂಲದಿಂದಲೇ ರೂಪು ತಳೆದು ಬಂದವರು. ಹಾಗೆ ಬಂದವರ ಅಭಿನಯ ಶೈಲಿಯಲ್ಲಿ ನವಿರಾದ ಸೂಕ್ಷ್ಮ ಭಾವಾಭಿವ್ಯಕ್ತಿಗಿಂತಲೂ ಹೆಚ್ಚಿನ ಬಾಹ್ಯ ಅಬ್ಬರದ ಶೈಲಿಯಿರಬೇಕಿತ್ತು. ಬಹುಶಃ ಈ ದೌರ್ಬಲ್ಯವನ್ನು ನೀಗಿಸಿಕೊಳ್ಳಲಿಕ್ಕೆ ಕೈಯಳತೆಯಲ್ಲೇ ಇರುವ ಪಕ್ಕದ ರಾಜ್ಯದ ಮಲಯಾಳಂ ಸಿನಿಮಾಗಳು ಸಹಕರಿಸಿದ್ದಿರಲೂಬಹುದು ಎಂಬುದು ನನ್ನದೊಂದು ಊಹೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ್ಯಾರೂ ಅಭಿನಯಿಸುವುದಿಲ್ಲ. ಪಾತ್ರಾಂತರಗೊಂಡು ಬದುಕಿಬಿಡುತ್ತಾರೆ! ಅಷ್ಟೆ ಸಾಕಲ್ಲವಾ!
ಇಷ್ಟು ಹೇಳಿದ ಮೇಲೂ ಡಿಸ್ಟಿಂಕ್ಷನ್ ಹುಡುಗನ ತಪ್ಪು ಉತ್ತರಗಳ ಮೇಲೆ ಗಮನಹರಿಸಿದ ಹಾಗೆ ಕೊರತೆಗಳನ್ನೂ ನೋಡಲೇಬೇಕು. ಚಿತ್ರದುದ್ದಕ್ಕೂ ಪ್ರೇತಭಯದ ಕಾರಣಕ್ಕಾಗಿ ಅತಿಯೆನ್ನಿಸುವಷ್ಟು ಹೆದರಿಕೊಳ್ಳುವ, ಎದ್ದು ಬಿದ್ದು ಓಡುವ ಸಂಗತಿಗಳು ಅಲ್ಲಲ್ಲಿ ವಿಪರೀತವೋ, ಮೆಲೋಡ್ರಾಮವೋ ಅನ್ನಿಸಿಬಿಡುವಷ್ಟು ಜೋಡಣೆಯಾಗಿ ಬಿಟ್ಟಿವೆ. ಬಾಲ್ಯದಿಂದಲೂ ಹಳ್ಳಿ ಪರಿಸರದಲ್ಲೇ ಬೆಳೆದ ನಮ್ಮಂಥವರಿಗೆ ಈ ಭೂತದ ಕತೆಗಳು, ಪ್ರೇತದ ಕತೆಗಳು, ಇವೆಲ್ಲ ಬದುಕಿನ ಭಾಗವೇ ಎಂಬಷ್ಟು ಹಾಸುಹೊಕ್ಕು. ಅತಿಯಾಗಿ ಭಯಭೀತರಾಗುವ ಸನ್ನಿವೇಶಗಳು ಸಿನಿಮಾದಲ್ಲಿ ತೋರಿಸಿದಷ್ಟು ವಿಪರೀತದ ಮಟ್ಟಕ್ಕೆ ಯಾರಲ್ಲೂ ಇಲ್ಲ. ಇದ್ದರೂ ಒಂದು ದೊಡ್ಡ ಗುಂಪು ಸೇರಿದ ಜಾಗದಲ್ಲಿ ಒಬ್ಬೊಬ್ಬರೂ ಅಭಿಮನ್ಯು ಕುಮಾರರೇ ಆಗಿರುತ್ತಾರೆಯೇ ಹೊರತು ಎದ್ದುಬಿದ್ದು ಧರೆಹತ್ತಿ ಓಡುವಂಥ ಸೀನೆಲ್ಲ ಇರಲಾರದು. ಇದನ್ನು ನೋಡುಗನ ತರ್ಕಬುದ್ಧಿ ಒಪ್ಪಿಕೊಳ್ಳುವಷ್ಟರಮಟ್ಟಿಗೆ ಹದವಾಗಿ ಪೋಣಿಸಬಹುದಿತ್ತು. ಬಹುಶಃ ನಗೆಯುಕ್ಕಿಸುವ ಸನ್ನಿವೇಶಕ್ಕಾಗಿ ನಿರ್ದೇಶಕರಿಗೆ ಅದು ಅನಿವಾರ್ಯವಾಗಿ ಕಂಡಿರಬಹುದು. ಈ ಕೊರತೆಯನ್ನೂ ನೀಗಿಸಿಕೊಂಡು ಹಾಸ್ಯವುಕ್ಕಿಸುವ ಸವಾಲಿದೆಯಲ್ಲ, ಅದು ನಿರ್ದೇಶಕನ ಮುಂದೆ ನಿಂತಾಗ ಆತ ಅದನ್ನು ಗೆಲ್ಲಬೇಕು ಎಂಬುದಷ್ಟೇ ಈ ವಿವರಗಳ ಹಿಂದಿನ ಆಶಯ. ಇರುವ ಮಾಹಿತಿಯ ಪ್ರಕಾರ ಈ ನಿರ್ದೇಶಕರ ಚೊಚ್ಚಲ ಸಿನಿಮಾ ಇದು. ಮುಂದಿನ ದಿನಗಳಲ್ಲಿ ಇಂಥ ಸೂಕ್ಷ್ಮಗಳನ್ನು ದಾಟಬಲ್ಲರು ಅವರು ಎನಿಸುತ್ತದೆ.
ಯಾವುದೇ ಕಲೆ ಅದು ಸಾರ್ವತ್ರಿಕಗೊಂಡ ನಂತರ ಅದು ಕಲಾವಿದನೊಬ್ಬನ ಸ್ವತ್ತಲ್ಲ. ಅದು ಜನರ ಸೊತ್ತಾಗುತ್ತದೆ. ಈ ಜನರು ಯಾವ್ಯಾವ ಕಾರಣಗಳಿಗಾಗಿ ಕೃತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಪೂರ್ವಭಾವಿಯಾಗಿ ತಿಳಿಯುವುದೇ ಕಲಾಕಾರನಿಗಿರುವ ಸವಾಲು. ಒಂದು ಮೊಟ್ಟೆಯ ಕತೆಯ ನಂತರ ಕಾಂತಾರವೂ ಒಳಗೊಂಡಂತೆ ದ.ಕ. ಮೂಲದ ಸಿನಿಮಾ ಮಂದಿ ಆ ಗ್ರಹಿಕೆಯಲ್ಲಿ ಬಹುತೇಕ ಗೆದ್ದಂತಿದೆ. ಅದಕ್ಕಾಗಿ ಅವರನ್ನು ಅಭಿನಂದಿಸೋಣ.
ದಿನೇಶ್ ಕುಕ್ಕುಜಡ್ಕ
ವ್ಯಂಗ್ಯ ಚಿತ್ರಕಾರರು, ಬರಹಗಾರರು.
ಇದನ್ನೂ ಓದಿ- ಸಿನೆಮಾ | ಸು ಫ್ರಮ್ ಸೊ : ಸುಲೋಚನಾ ಫ್ರಮ್ ಸೋಮೇಶ್ವರ